Site icon Vistara News

M‌ine Lift Collapse: ತಾಮ್ರದ ಗಣಿಯೊಳಗೆ ಲಿಫ್ಟ್‌ ಕುಸಿದು 14 ಮಂದಿ ಪಾತಾಳದಲ್ಲಿ ಟ್ರ್ಯಾಪ್

copper mine lift collapse

ಜೈಪುರ: ರಾಜಸ್ಥಾನದ ನೀಮ್ ಕಾ ಥಾನಾ ಜಿಲ್ಲೆಯ ಕೋಲಿಹಾನ್ ತಾಮ್ರದ ಗಣಿಯಲ್ಲಿ (copper mine) ಲಿಫ್ಟ್ ಕುಸಿದು (M‌ine Lift Collapse) 14 ಮಂದಿ ಸಿಕ್ಕಿಬಿದ್ದಿದ್ದಾರೆ. ಇವರು ಪಿಎಸ್‌ಯು ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನ (Hindustan copper Ltd) 14 ಅಧಿಕಾರಿಗಳು ಹಾಗೂ ವಿಜಿಲೆನ್ಸ್ ತಂಡದ ಸದಸ್ಯರಾಗಿದ್ದಾರೆ. ಮಂಗಳವಾರ ರಾತ್ರಿ ರಕ್ಷಣಾ ಕಾರ್ಯಾಚರಣೆ (rescue Operation) ಆರಂಭವಾಗಿದ್ದು, ಘಟನೆಯಲ್ಲಿ (Mine tragedy) ಕೆಲ ಅಧಿಕಾರಿಗಳು ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಸ್ಥಳಕ್ಕೆ ರಕ್ಷಣಾ ತಂಡ ತಲುಪಿದೆ ಎಂದು ನೀಮ್ ಕಾ ಥಾನಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ನಾಯಕ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಇಲ್ಲಿಯವರೆಗೆ, ಗಣಿ ಲಿಫ್ಟ್ ಕುಸಿತದಿಂದ ಯಾವುದೇ ಸಾವುಗಳು ವರದಿಯಾಗಿಲ್ಲ.

ಜಿಲ್ಲೆಯ ಕೋಲಿಹಾನ್ ಗಣಿಯಲ್ಲಿ ಸಿಬ್ಬಂದಿಯನ್ನು ಸಾಗಿಸಲು ಬಳಸಲಾಗುವ ಲಂಬವಾದ ಶಾಫ್ಟ್ ಕುಸಿದಿದೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಶಾಫ್ಟ್ ಕುಸಿದಿದ್ದು, ಸ್ವಲ್ಪ ಸಮಯದ ನಂತರ ಆಂಬ್ಯುಲೆನ್ಸ್ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ತುರ್ತು ಪರಿಸ್ಥಿತಿಗೆ ಸಿದ್ಧವಾಗಿವೆ. ಹಿಂದೂಸ್ತಾನ್ ಕಾಪರ್‌ ಅಧಿಕಾರಿಗಳು ನೂರಾರು ಮೀಟರ್ ಆಳದಲ್ಲಿ ಸಿಲುಕಿಕೊಂಡಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಘಟನೆ ವರದಿಯಾದ ಕೂಡಲೇ ಬಿಜೆಪಿ ಶಾಸಕ ಧರ್ಮಪಾಲ್ ಗುರ್ಜರ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. “ರಕ್ಷಣಾ ತಂಡವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. 6-7 ಆಂಬ್ಯುಲೆನ್ಸ್‌ಗಳು ಸಿದ್ಧವಾಗಿವೆ. ಇಡೀ ಆಡಳಿತ ಅಲರ್ಟ್ ಆಗಿದೆ. ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ. ಖಂಡಿತವಾಗಿಯೂ ಎಲ್ಲರೂ ಸುರಕ್ಷಿತವಾಗಿ ಹೊರಬರುತ್ತಾರೆ” ಎಂದು ಧರ್ಮಪಾಲ್ ಗುರ್ಜರ್ ಹೇಳಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಸರ್ಕಾರಿ ಸ್ವಾಮ್ಯದ ಈ ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ವಿಜಿಲೆನ್ಸ್ ತಂಡವು ಪರಿಶೀಲನೆಗಾಗಿ ಗಣಿ ಒಳಗೆ ಹೋದಾಗ ಈ ಘಟನೆ ಸಂಭವಿಸಿದೆ. ಅವರು ಮೇಲಕ್ಕೆ ಬರಲು ಮುಂದಾದಾಗ, ಶಾಫ್ಟ್ ಅಥವಾ ʼಪಂಜರ’ದ ಹಗ್ಗ ಮುರಿದು ಸುಮಾರು 14 ಜನರು ಕೆಳಗೆ ಸಿಲುಕಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಲಿಫ್ಟ್ ಅನ್ನು ಹಸ್ತಚಾಲಿತವಾಗಿ ಚಲಿಸಲು ಮತ್ತು ಸಿಕ್ಕಿಬಿದ್ದ ಸಿಬ್ಬಂದಿಯನ್ನು ಹೊರತೆಗೆಯಲು ಪ್ರಯತ್ನಿಸಲಾಗುತ್ತಿದೆ.

ಇದನ್ನೂ ಓದಿ: Job Alert: ಹಟ್ಟಿ ಚಿನ್ನದ ಗಣಿ ಕಂಪೆನಿಯಲ್ಲಿದೆ ಸುವರ್ಣಾವಕಾಶ; 168 ಹುದ್ದೆಗಳಿಗೆ ಐಟಿಐ, ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿ

Exit mobile version