ಧಾರವಾಡ: ಮಾವಿಗೆ ʼಹಣ್ಣುಗಳ ರಾಜʼ ಎನ್ನುವುದು ಸುಮ್ಮನೇ ಅಲ್ಲ. ಇದು ಯಾವತ್ತೂ ದುಬಾರಿಯೇ. ಆದರೆ ಧಾರವಾಡದಲ್ಲಿ (Dharwad news) ನಡೆಯುತ್ತಿರುವ ಮಾವು ಮೇಳದಲ್ಲಿ, ವಿಶ್ವದಲ್ಲಿಯೇ ಅತಿ ದುಬಾರಿಯಾದ ಮಾವಿನ ಹಣ್ಣು ಕಂಡುಬಂತು. ಜನ ಇದನ್ನು ನೋಡಿ (Miyazaki Mango) ನಿಬ್ಬೆರಗಾದರು.
ಧಾರವಾಡ ಮಾವಿನ ಮೇಳದಲ್ಲಿ 2.7 ಲಕ್ಷ ರೂ. ಮೌಲ್ಯದ ಮಾವು ಎಲ್ಲರ ಗಮನ ಸೆಳೆಯಿತು. ವಿಶ್ವದ ಮಾವಿನ ತಳಿಗಳಲ್ಲಿಯೇ ಅತೀ ದುಬಾರಿಯಾದ ಮೀಯಾಝಾಕಿ ತಳಿಯ ಮಾವು (Miyazaki Mango) ಅನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಧಾರವಾಡದ ಪ್ರಮೋದ ಗಾಂವ್ಕರ್ ಎಂಬವರು ತಮ್ಮ ತೋಟದಲ್ಲಿ ಈ ಮಾವನ್ನು ಬೆಳೆದಿದ್ದಾರೆ.
ಧಾರವಾಡದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಮಾವಿನ ಮೇಳದಲ್ಲಿ ಜಪಾನ್ ಮೂಲದ ಈ ವಿಶೇಷ ಮಾವಿನ ತಳಿ ನೋಡಿ ಜನ ಚಕಿತರಾದರು. ಮೀಯಾಝಾಕಿ ಹಣ್ಣಿನ ಪ್ರತಿ ಕೆಜಿಗೆ ಸುಮಾರು 2.7 ಲಕ್ಷ ರೂಪಾಯಿ ಬೆಲೆ ಇದೆ. ಕೇವಲ ಒಂದೇ ಒಂದು ಹಣ್ಣಿಗೆ ಸುಮಾರು 10 ಸಾವಿರ ರೂಪಾಯಿ ಬೆಲೆಬಾಳುತ್ತದೆ. ಈ ಮಾವನ್ನು ನೋಡಲೆಂದೇ ಮೇಳಕ್ಕೆ ವಿದ್ಯಾರ್ಥಿಗಳು, ಸಾರ್ವಜನಿಕರು ಆಗಮಿಸುತ್ತಿದ್ದಾರೆ.
ಮೀಯಾಝಾಕಿ ಪ್ರಭೇದವು ಮೂಲತಃ ಜಪಾನಿನ ತಳಿಯಾಗಿದೆ. ಅದರ ವಿಶಿಷ್ಟ ಸುವಾಸನೆ ಮತ್ತು ಔಷಧೀಯ ಮೌಲ್ಯಕ್ಕಾಗಿ ಇದು ವಿದೇಶಗಳಲ್ಲಿ ಭಾರಿ ಬೇಡಿಕೆಯನ್ನು ಹೊಂದಿದೆ. ಇವು ಚೆನ್ನಾಗಿ ಹಣ್ಣಾದಾಗ ಗಾಢ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಜಪಾನಿಯರ ಪ್ರಕಾರ, ವಿಶ್ವದ ಅತ್ಯಂತ ದುಬಾರಿ ಮಾವಿನ ಮೂಲ ಹೆಸರು “ತೈಯೊ ನೋ ತಮಾಗೊ” (Taiyo no Tamago) ಅಥವಾ ಸೂರ್ಯನ ಮೊಟ್ಟೆ (Egg of the Sun).
ಇದಕ್ಕೆ ಹೆಸರಾಂತ ಜಪಾನಿನ ವಿಜ್ಞಾನಿ ಯಮಶಿತಾ ಮೀಯಾಝಾಕಿ ಅವರ ಹೆಸರನ್ನು ಇಡಲಾಗಿದೆ. ಇದರ ಅಭಿವೃದ್ಧಿ ಮತ್ತು ಕೃಷಿಗೆ ಅವರು ಗಮನಾರ್ಹವಾಗಿ ಕೊಡುಗೆ ನೀಡಿದ್ದರು. ಮೀಯಾಝಾಕಿ ಪ್ರಿಫೆಕ್ಚರ್‌ನಲ್ಲಿ ಇದರ ಕೃಷಿ ಮಾಡಲಾಗುತ್ತಿದೆ. ಹೀಗಾಗಿ ಜಗತ್ತು ಈ ರುಚಿಕರವಾದ ಮಾವಿನಹಣ್ಣುಗಳನ್ನು “ಮೀಯಾಝಾಕಿ” ಎಂದು ಕರೆಯಲು ಪ್ರಾರಂಭಿಸಿತು.
70 ರ ದಶಕದ ಕೊನೆಯಲ್ಲಿ ಮತ್ತು 80 ರ ದಶಕದ ಆರಂಭದಲ್ಲಿ ಈ ಮಿಯಾಜಾಕಿ ಮಾವಿನ ಉತ್ಪಾದನೆಯು ಮಿಯಾಜಾಕಿಯಲ್ಲಿ ಆರಂಭಿಸಲಾಯಿತು. ಈ ನಗರದ ಬೆಚ್ಚನೆಯ ವಾತಾವರಣ, ಅದರ ದೀರ್ಘಾವಧಿಯ ಸೂರ್ಯನ ಬೆಳಕು ಮತ್ತು ಹೇರಳವಾದ ಮಳೆಯಿಂದಾಗಿ ರೈತರು ಮಾವು ಕೃಷಿಗೆ ಆಕರ್ಷಣೆಗೊಳ್ಳಲು ಕಾರಣವಾಯಿತು. ಏಪ್ರಿಲ್ ಮತ್ತು ಆಗಸ್ಟ್ ನಡುವೆ ಈ ಮಾವಿನ ಸುಗ್ಗಿ ನಡೆಯುತ್ತದೆ.
ಇತ್ತೀಚೆಗೆ ಭಾರತದಲ್ಲೂ ಕೆಲವರು ಕೃಷಿಕರು ಇದನ್ನು ಬೆಳೆಯಲು ಯತ್ನಿಸುತ್ತಿದ್ದಾರೆ. ಆದರೆ ಇದು ಅತ್ಯಂತ ದುಬಾರಿಯಾದ ಆರೈಕೆ, ಒಳಸುರಿಗಳ ಪೂರೈಕೆಯನ್ನು ಬೇಡುತ್ತದೆ. ಈ ಮಾವಿನಹಣ್ಣುಗಳು ವ್ಯಾಪಕ ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ. ಬೀಟಾ-ಕ್ಯಾರೋಟಿನ್ ಮತ್ತು ಫೋಲಿಕ್ ಆಮ್ಲವನ್ನು ಒಳಗೊಂಡಿವೆ. ಇದು ಕಣ್ಣಿನ ಆರೋಗ್ಯಕ್ಕೆ ಹೆಚ್ಚು ಉಪಯೋಗಕಾರಿಯಾಗಿದೆ. ದೃಷ್ಟಿ ಹೀನತೆಯನ್ನು ತಪ್ಪಿಸುವಲ್ಲಿ ಈ ಮಾವು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತಿದೆ. ಮಿಯಾಜಾಕಿ ಮಾವನ್ನು ಭಾರತ, ಬಾಂಗ್ಲಾದೇಶ, ಥಾಯ್ಲೆಂಡ್ ಮತ್ತು ಫಿಲಿಪ್ಪಿನ್ಸ್ ರಾಷ್ಟ್ರಗಳಲ್ಲಿ ಕೆಲವೆಡೆ ಬೆಳೆಯಲಾಗುತ್ತದೆ. ಭಾರತದಲ್ಲಿ ಪಶ್ಚಿಮ ಬಂಗಾಳ ಮಾತ್ರವಲ್ಲದೇ, ಮಧ್ಯಪ್ರದೇಶದ ಜಬಲ್ಪುರ ನಗರದಲ್ಲಿ ಬೆಳೆಯಲಾಗಿದೆ ಎಂದು ಮಾಧ್ಯಮಗಳ ವರದಿಗಳು ಹೇಳುತ್ತವೆ.
ಇದನ್ನೂ ಓದಿ: Mango Season: ಮಾರುಕಟ್ಟೆಗೆ ಬಂತು ಉತ್ತರ ಕನ್ನಡದ ಪ್ರಸಿದ್ಧ ಕರಿಈಶಾಡು ಮಾವು; ಡಜನ್‌ಗೆ 700 ರೂ.!