ಮುಂಬೈ: ಐಷಾರಾಮಿ ಹೋಟೆಲ್ ನಿರ್ಮಿಸಲು ಸಾರ್ವಜನಿಕ ಭೂಮಿಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಜಾರಿ ನಿರ್ದೇಶನಾಲಯದಿಂದ (Enforcement Directorate) ತನಿಖೆ ಎದುರಿಸುತ್ತಿರುವ (Shiv Sena) ಶಿವಸೇನೆ (ಉದ್ಧವ್ ಠಾಕ್ರೆ ಬಣ) ಶಾಸಕ ರವೀಂದ್ರ ವೈಕರ್ (Ravindra Waikar) ಭಾನುವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿಕೊಂಡಿದ್ದಾರೆ.
ಮುಂಬೈನ ಜೋಗೇಶ್ವರಿ ಪ್ರದೇಶದ ಶಾಸಕ ವೈಕರ್ ಅವರು ಉದ್ಧವ್ ಠಾಕ್ರೆಯ ಅತ್ಯಾಪ್ತರಾಗಿದ್ದರು. ಅಲ್ಲದೆ, ಒಂದು ದಿನದ ಹಿಂದೆ ನಡೆದ ಮುಂಬೈ ವಾಯುವ್ಯ ಸಂಸದೀಯ ಕ್ಷೇತ್ರದ ಶಿವಸೇನೆ (ಯುಬಿಟಿ) ಸಭೆಯಲ್ಲಿ ಅವರು ಪಾಲ್ಗೊಂಡಿದ್ದರು. ಹೀಗಾಗಿ ಠಾಕ್ರೆ ಬಣಕ್ಕೆ ಆಘಾತವಾಗಿದೆ. ಮಲಬಾರ್ ಹಿಲ್ನಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ವರ್ಷಾ’ದಲ್ಲಿ ವೈಕರ್, ಶಿಂಧೆ ನೇತೃತ್ವದ ಗುಂಪನ್ನು ಸೇರಿಕೊಂಡಿದ್ದಾರೆ.
ವೈಕರ್ ಅವರು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ನ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ. ನಾಲ್ಕು ಬಾರಿ ಕಾರ್ಪೊರೇಟರ್ ಮತ್ತು ಜೋಗೇಶ್ವರಿಯಿಂದ ನಾಲ್ಕು ಬಾರಿ ಶಾಸಕರಾಗಿದ್ದಾರೆ.
ಕ್ರೀಡೆ ಮತ್ತು ಮನರಂಜನಾ ಉದ್ದೇಶಗಳಿಗಾಗಿ ಮೀಸಲಾಗಿರುವ ಜೋಗೇಶ್ವರಿ-ವಿಖ್ರೋಲಿ ಲಿಂಕ್ ರಸ್ತೆಯ ಪ್ಲಾಟ್ನಲ್ಲಿ ಐಷಾರಾಮಿ ಹೋಟೆಲ್ ನಿರ್ಮಿಸಲು 2021 ರ ಜನವರಿ ಮತ್ತು ಜುಲೈ ನಡುವೆ ಬಿಎಂಸಿಯಲ್ಲಿ ಅವ್ಯವಹಾರ ಮಾಡಿದ್ದರು. ಮೋಸದಿಂದ ಅನುಮತಿ ಗಿಟ್ಟಿಸಿದ ಆರೋಪದ ಮೇಲೆ ದಾಖಲಾದ ಪ್ರಕರಣದಲ್ಲಿ ಅವರ ವಿರುದ್ಧ ಇಡಿ ತನಿಖೆ ನಡೆಸುತ್ತಿದೆ.
ಎಫ್ಐಆರ್ ಪ್ರಕಾರ, ಈ ಜಾಗವನ್ನು ಶ್ರೀ ವೈಕರ್ ಮತ್ತು ಇತರರಿಗೆ ಸಾರ್ವಜನಿಕ ಬಳಕೆಗಾಗಿ ಮಂಜೂರು ಮಾಡಲಾಗಿದೆ. ಅವರು ಅದನ್ನು ವಾಣಿಜ್ಯ ಉದ್ದೇಶಗಳಿಗಾಗಿ ಮಾರಾಟ ಮಾಡಿ ಹಲವಾರು ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಿಎಂ ಬಣಕ್ಕೆ ಸೇರಿದ ನಂತರ ಮಾತನಾಡಿದ ವೈಕರ್, ತಾನು 50 ವರ್ಷಗಳಿಂದ ಶಿವಸೇನೆಯಲ್ಲಿ ಕೆಲಸ ಮಾಡಿದ್ದೇನೆ ಮತ್ತು ರಸ್ತೆಗಳು ಮತ್ತು ನೀರು ಸರಬರಾಜು ಅಗತ್ಯವಿರುವ ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಅನೇಕ ಕಾಮಗಾರಿಗಳು ಸ್ಥಗಿತಗೊಂಡಿರುವ ತನ್ನ ಕ್ಷೇತ್ರದ ಅಭಿವೃದ್ಧಿಗೆ ಪಕ್ಷಾಂತರ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
“ಶಿಂಧೆ ಅವರು ಅಭಿವೃದ್ಧಿ ಕಾರ್ಯಗಳ ಬಗ್ಗೆ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೆ, ನಾನು ನನ್ನ ಜನರನ್ನು ಎದುರಿಸಲು ಸಾಧ್ಯವಿಲ್ಲ” ಎಂದು ವೈಕರ್ ಹೇಳಿದರು. ದಿವಂಗತ ಬಾಳ್ ಠಾಕ್ರೆ ಅವರ ಆದರ್ಶಗಳಿಂದ ಪ್ರೇರಿತರಾಗಿ ವೈಕರ್ ಶಿವಸೇನೆಗೆ ಸೇರಿಕೊಂಡಿದ್ದಾರೆ ಎಂಬುದಾಗಿ ಏಕನಾಥ ಶಿಂಧೆ ಹೇಳಿದ್ದಾರೆ.