ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ (MLC Election) ನಾಮಪತ್ರ ಸಲ್ಲಿಸಿದ್ದ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಜೂನ್ 13ರಂದು ಮತದಾನ ನಿಗದಿಯಾಗಿತ್ತು. ಆದರೆ, 11 ಅಭ್ಯರ್ಥಿಗಳು ಹೊರತುಪಡಿಸಿ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಘೋಷಿಸಲಾಗಿದೆ. ಕಾಂಗ್ರೆಸ್‌ನ 7, ಬಿಜೆಪಿಯ 3 ಹಾಗೂ ಜೆಡಿಎಸ್‌ನ ಒಬ್ಬರು ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದಾರೆ.
ವಿಧಾನ ಪರಿಷತ್ ನೂತನ ಸದಸ್ಯರ ಪಟ್ಟಿ (ಒಟ್ಟು 11)
ಕಾಂಗ್ರೆಸ್ ಸದಸ್ಯರು–7
1.ಐವಾನ್ ಡಿಸೋಜ
2.ಕೆ.ಗೋವಿಂದರಾಜ್
3.ಜಗದೇವ ಗುತ್ತೇದಾರ್
4.ಬಲ್ಕೀಸ್ ಬಾನು
5.ಎನ್.ಎಸ್.ಭೋಸರಾಜು
6.ಡಾ.ಯತೀಂದ್ರ ಸಿದ್ದರಾಮಯ್ಯ,
7. ಎ. ವಸಂತ್ ಕುಮಾರ್
ಬಿಜೆಪಿ ಸದಸ್ಯರು-3
1.ಸಿ.ಟಿ.ರವಿ
2.ಎನ್.ರವಿಕುಮಾರ್
3.ಮಾರುತಿರಾವ್ ಮುಳೆ
ಜೆಡಿಎಸ್ ಸದಸ್ಯರು-1
1.ಟಿ.ಎನ್. ಜವರಾಯಿ ಗೌಡ
ಈ ಬಗ್ಗೆ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಸುತ್ತೋಲೆ ಹೊರಡಿಸಿದ್ದಾರೆ. ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನಪರಿಷತ್ತಿಗೆ 11 ಸದಸ್ಯರನ್ನು ಆಯ್ಕೆ ಮಾಡಲು ಜೂನ್ 13ರಂದು ದ್ವೈವಾರ್ಷಿಕ ಚುನಾವಣೆ ನಿಗದಿಯಾಗಿತ್ತು. ಅದರಂತೆ ಜೂನ್ 3ರಂದು ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಒಟ್ಟು 12 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದರು. ನಾಮಪತ್ರಗಳ ಪರಿಶೀಲನೆಯ ಸಂದರ್ಭದಲ್ಲಿ ಆಸಿಫ್ ಪಾಷಾ ಆರ್.ಎಮ್. ಎಂಬುವವರ ನಾಮಪತ್ರವು ಸೂಚಕರಿಲ್ಲದ ಕಾರಣ ತಿರಸ್ಕೃತಗೊಂಡಿದ್ದು, ಉಳಿದ 11 ಜನ ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರಗೊಂಡಿದ್ದವು.
ಇದನ್ನೂ ಓದಿ | HD Kumaraswamy: ಎಚ್‌ಡಿ ಕುಮಾರಸ್ವಾಮಿ ಕೇಳಿದ ಕೃಷಿ ಖಾತೆ ಮೇಲೇ ನಿತೀಶ್ ಕಣ್ಣು; ಯಾರಿಗೆ ಒಲಿಯತ್ತೆ ಇಲಾಖೆ?
ಜೂನ್ 6 ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿತ್ತು, ಯಾರು ನಾಮಪತ್ರ ಹಿಂಪಡೆದಿದಿಲ್ಲ. ಹೀಗಾಗಿ ಭರ್ತಿ ಮಾಡಬೇಕಾದ 11 ಸ್ಥಾನಗಳಿಗೆ 11 ಜನ ಅಭ್ಯರ್ಥಿಗಳು ಮಾತ್ರ ಅಂತಿಮವಾಗಿ ಕಣದಲ್ಲಿದ್ದರು. ಹೀಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಐವಾನ್ ಡಿಸೋಜಾ, ಕೆ. ಗೋವಿಂದರಾಜ್, ಜಗದೇವ ಗುತ್ತೇದಾರ್, ಬಲ್ಕೀಸ್ ಬಾನು, ಯತೀಂದ್ರ ಎಸ್. ಎ. ವಸಂತ ಕುಮಾರ, ಭಾರತೀಯ ಜನತಾ ಪಾರ್ಟಿಯ ಮಾರುತಿರಾವ್ ಮುಳೆ , ಸಿ.ಟಿ. ರವಿ,ರವಿಕುಮಾರ. ಎನ್ ಹಾಗೂ ಜನತಾದಳ(ಜಾ) ಪಕ್ಷದ ಟಿ.ಎನ್. ಜವರಾಯಿ ಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆಂದು ಘೋಷಿಸಿದ್ದಾರೆ.