Site icon Vistara News

MLC Election: ಮೇಲ್ಮನೆ ಚುನಾವಣೆ ಮತದಾನ ಆರಂಭ, 6 ಕ್ಷೇತ್ರಗಳಲ್ಲಿ 78 ಸ್ಪರ್ಧಿಗಳ ಹಣಾಹಣಿ

mlc election raghupathi bhat

ಬೆಂಗಳೂರು: ಇಂದು ವಿಧಾನ ಪರಿಷತ್ತಿನ (vidhana parishath, Legislative council) ಆರು ಸ್ಥಾನಗಳಿಗೆ ಮತದಾನ (MLC Election) ನಡೆಯುತ್ತಿದೆ. 3 ಪದವೀಧರ ಕ್ಷೇತ್ರ (graduate constituency), 3 ಶಿಕ್ಷಕರ ಕ್ಷೇತ್ರಗಳ (teachers constituency) ಮತದಾನ (voting) ನಡೆಯಲಿದ್ದು ಒಟ್ಟು 78 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಈಶಾನ್ಯ ಪದವೀಧರ, ಬೆಂಗಳೂರು ಪದವೀಧರ, ನೈರುತ್ಯ ಪದವೀಧರ ಮತ್ತು ಅಗ್ನೇಯ ಶಿಕ್ಷಕರ, ನೈಋತ್ಯ ಶಿಕ್ಷಕರ, ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿದೆ.

ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಜೂನ್ 6ಕ್ಕೆ ಇದರ ಫಲಿತಾಂಶ ಹೊರ ಬೀಳಲಿದೆ. ಈ ಆರು ಕ್ಷೇತ್ರಗಳಲ್ಲಿ ಓರ್ವ ಮಹಿಳೆ ಸೇರಿ ಒಟ್ಟು 78 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಪ್ರಮುಖವಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ, ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ. ಧನಂಜಯ ಸರ್ಜಿ, ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ಸ್ಪರ್ಧೆಯಲ್ಲಿದ್ದಾರೆ.

ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆ.ಕೆ.ಮಂಜುನಾಥ್, ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ. ರಘುಪತಿ ಭಟ್, ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ವಿವೇಕಾನಂದ, ಅಗ್ನೇಯ ಶಿಕ್ಷಕರ ಕ್ಷೇತ್ರದಿಂದ ರುಪ್ಸಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸೇರಿ ಒಟ್ಟು 78 ಅಭ್ಯರ್ಥಿಗಳು ತಮ್ಮ ಗೆಲುವಿಗೆ ಸೆಣಸಲಿದ್ದಾರೆ.

ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 19 ಅಭ್ಯರ್ಥಿಗಳು ಕಣದಲ್ಲಿದ್ದು, ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 15 ಮಂದಿ ಸ್ಪರ್ಧಿಸುತ್ತಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಎಂಟು ಅಭ್ಯರ್ಥಿಗಳು ಪೈಪೋಟಿಗಳಿದಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳ ನಡುವೆ ಗೆಲುವಿಗೆ ಪೈಪೋಟಿ ನಡೆಯುತ್ತಿದೆ.

ಪದವೀಧರ ಕ್ಷೇತ್ರದಲ್ಲಿ 2,01,632 ಪುರುಷರು, 161,907 ಮಹಿಳೆಯರು ಹಾಗೂ 34 ಇತರರು ಸೇರಿ ಒಟ್ಟು 3,63,573 ಮತದಾರರು ಇದ್ದಾರೆ. ಶಿಕ್ಷಕರ ಕ್ಷೇತ್ರದಲ್ಲಿ 38,305 ಪುರುಷರು, 31,954 ಮಹಿಳೆಯರು ಹಾಗೂ ಒಬ್ಬರು ಇತರರು ಸೇರಿ ಒಟ್ಟು 70,260 ಮತದಾರರಿದ್ದಾರೆ. ಶಿಕ್ಷಕರ ಕ್ಷೇತ್ರದಲ್ಲಿ 151 ಸಾಮಾನ್ಯ ಮತಗಟ್ಟೆ ಮತ್ತು 19 ಉಪ ಮತಗಟ್ಟೆ ಸೇರಿ ಒಟ್ಟು 170 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪದವೀಧರ ಕ್ಷೇತ್ರದಲ್ಲಿ 307 ಸಾಮಾನ್ಯ ಮತಗಟ್ಟೆ ಮತ್ತು 154 ಉಪ ಮತಗಟ್ಟೆ ಸೇರಿ ಒಟ್ಟು 461 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನೈರುತ್ಯ ಶಿಕ್ಷಕರ ಕ್ಷೇತ್ರ ಹೊರತುಪಡಿಸಿ ಇನ್ನುಳಿದ ಕ್ಷೇತ್ರಗಳಲ್ಲಿ ಬಲಗೈ ತೋರುಬೆರಳಿಗೆ ಶಾಯಿ ಹಾಕಲಾಗುತ್ತದೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಲಗೈ ಮಧ್ಯದ ಬೆರಳಿಗೆ ಶಾಯಿ ಹಾಕಲಾಗುತ್ತದೆ.

ಆರು ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಅಬ್ಬರದ ಬಹಿರಂಗ ಪ್ರಚಾರ ಶನಿವಾರ ಸಂಜೆ ಅಂತ್ಯವಾಗಿದ್ದು, ಭಾನುವಾರ ಸಂಜೆ ಆರು ಗಂಟೆಯವರೆಗೆ ಅಭ್ಯರ್ಥಿಗಳು ಮತದಾರರ ಮನೆ ಮನೆ ತೆರಳಿ ಮತಯಾಚನೆ ಮಾಡಿದರು. ಇಂದು ಎಲ್ಲಾ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಇದನ್ನೂ ಓದಿ: MLC Election: ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆಯ ಮತದಾನಕ್ಕೆ ಸಿದ್ಧತೆ: ಡಿಸಿ ಎಂ.ಎಸ್. ದಿವಾಕರ್‌

Exit mobile version