ಬೆಂಗಳೂರು: ಜೂನ್ 13ರಂದು ವಿಧಾನ ಪರಿಷತ್ ಚುನಾವಣೆ (MLC Election) ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ 7 ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಅವಿರೋಧ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಯತೀಂದ್ರ ಅವರ ಉಮೇದುವಾರಿಕೆಯನ್ನು ನವದೆಹಲಿಯಲ್ಲಿ ಗುರುವಾರ ಕಾಂಗ್ರೆಸ್ ಹೈಕಮಾಂಡ್ ಅನುಮೋದಿಸಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೆಹಲಿ ಭೇಟಿ ವೇಳೆ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಹೈಕಮಾಂಡ್ ನಾಯಕರ ಬಳಿ ಚರ್ಚೆ ನಡೆಸಿದ್ದು, ಈ ವೇಳೆ ಯತೀಂದ್ರ ಸಿದ್ದರಾಮಯ್ಯ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇನ್ನು ಉಳಿದ 6 ಕ್ಷೇತ್ರಗಳಿಗೆ ಪೈಪೋಟಿ ಹೆಚ್ಚಾಗಿದ್ದು, ಈ ಸ್ಥಾನಗಳಲ್ಲಿ ಮೈಸೂರು ಭಾಗದ ಪುಷ್ಪ ಅಮರನಾಥ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಈ ಬಾರಿ 7 ಸ್ಥಾನಗಳಿಗೆ 65 ಮಂದಿ ಆಕಾಂಕ್ಷಿಗಳ ಶಾರ್ಟ್ ಲಿಸ್ಟ್ ಸಿದ್ಧಪಡಿಸಲಾಗಿದ್ದು, ಇದರಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ತಮ್ಮ ಕ್ಷೇತ್ರ ಬಿಟ್ಟುಕೊಟ್ಟ ಯತೀಂದ್ರಗೆ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಮಾನ ನೀಡುವುದಾಗಿ ಕಾಂಗ್ರೆಸ್ ಹೈಕಮಾಂಡ್ ಈ ಹಿಂದೆ ಹೇಳಿತ್ತು. ಅದರಂತೆ ಯತೀಂದ್ರ ಅವರಿಗೆ ಟಿಕೆಟ್ ಪಟ್ಟ ಎನ್ನಲಾಗಿದೆ.
ಈ ಬಗ್ಗೆ ಗುರುವಾರ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್, ದೆಹಲಿಗೆ ಹೋಗಿ ಪಟ್ಟಿ ನೀಡಿ ಬಂದಿದ್ದೇವೆ. 11 ಸ್ಥಾನಕ್ಕೆ 300 ಆಕಾಂಕ್ಷಿಗಳು ಇದ್ದರು. ನಾವು 65 ಮಂದಿಯ ಶಾರ್ಟ್ ಲಿಸ್ಟ್ ನೀಡಿದ್ದೇವೆ. ಯತೀಂದ್ರ ಅವರದ್ದು ಮೊದಲೇ ಕಮಿಟ್ ಮೆಂಟ್ ಇದೆ. ಹಾಗಾಗಿ ಅವರಿಗೆ ಟಿಕೆಟ್ ನೀಡುವುದಕ್ಕೆ ಹೈಕಮಾಂಡ್ ಕೂಡ ಸಮ್ಮತಿ ನೀಡಿದೆ. ಇವರ ಜತೆಗೆ ವಿಧಾನಸಭಾ ಟಿಕೆಟ್ ತ್ಯಾಗ ಮಾಡಿದ ಹಿರಿಯರು, ಸೋತವರು ಇದ್ದಾರೆ ಎಂದು ತಿಳಿಸಿದ್ದರು.
ಇದನ್ನೂ ಓದಿ | Valmiki Corporation Scam: ಸಚಿವ ನಾಗೇಂದ್ರ ತಲೆದಂಡ ಫಿಕ್ಸ್; ರಾಜೀನಾಮೆ ಕೊಡಲು ಸಿಎಂ ಸೂಚನೆ
ಅಕಾಂಕ್ಷಿಗಳಲ್ಲಿ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಬಯಲು ಸೀಮೆ ಸೇರಿ ಎಲ್ಲಾ ಭಾಗದವರಿದ್ದಾರೆ. 21 ಮಂದಿ ಕರಾವಳಿ ಭಾಗದಲ್ಲಿ, 11 ಮಂದಿ ಮೈಸೂರು ಭಾಗದ ಆಕಾಂಕ್ಷಿಗಳು ಇದ್ದಾರೆ ಎಂದು ಡಿಸಿಎಂ ತಿಳಿಸಿದ್ದರು. ಪರಿಷತ್ ಚುನಾವಣೆಯಲ್ಲಿ 11 ಕ್ಷೇತ್ರಗಳ ಪೈಕಿ ವಿಧಾನಸಭೆಯಲ್ಲಿನ ಸಂಖ್ಯಾಬಲ ಆಧಾರದಲ್ಲಿ ಪಕ್ಷಕ್ಕೆ ಗೆಲ್ಲುವ ಅವಕಾಶವಿರುವ 7 ಅಭ್ಯರ್ಥಿಗಳನ್ನು ಫೈನಲ್ ಮಾಡಲು ಕಸರತ್ತು ನಡೆದಿದೆ ಎಂದು ಡಿಕೆಶಿ ಹೇಳಿದ್ದರು.