ನವದೆಹಲಿ: ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ (Narendra Modi) ಅವರು ಮೊದಲ ಸಚಿವ ಸಂಪುಟ ಸಭೆ ನಡೆಸಿದ್ದು, ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ದೇಶದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸಿಕೊಡುವ ಮಹತ್ವದ ತೀರ್ಮಾನವನ್ನು ಮೊದಲ ಸಂಪುಟ ಸಭೆಯಲ್ಲಿ (Modi 3.0 Cabinet) ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ (Pradhan Mantri Awas Yojana-PMAY) ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿಯೇ ಸಂಪುಟ ಸಭೆ ನಡೆದಿದ್ದು, 30 ಸಂಪುಟ ದರ್ಜೆ ಸಚಿವರು, ಐವರು ಸ್ವತಂತ್ರ ಖಾತೆ ನಿರ್ವಹಣೆ ಹಾಗೂ 31 ರಾಜ್ಯ ಖಾತೆ ಸಚಿವರು ಪಾಲ್ಗೊಂಡಿದ್ದರು. ಮೊದಲ ಸಂಪುಟ ಸಭೆಯಲ್ಲಿಯೇ ಬಡವರಿಗೆ ಅನುಕೂಲವಾಗುವ ದಿಸೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದಕ್ಕೆ ಎಲ್ಲ ಸಚಿವರು ಸಹಮತ ಸೂಚಿಸಿದರು. ಇದರೊಂದಿಗೆ ಮೊದಲ ಸಂಪುಟ ಸಭೆಯಲ್ಲಿಯೇ ಬಡವರಿಗೆ ಅನುಕೂಲವಾಗುವ ತೀರ್ಮಾನ ತೆಗೆದುಕೊಂಡಂತಾಗಿದೆ.
#WATCH | PM Narendra Modi chairs his first Union Cabinet meeting at the start of his third term pic.twitter.com/u85hiGanO5
— ANI (@ANI) June 10, 2024
ಏನಿದು ಯೋಜನೆ? ಹೇಗೆ ಅನುಕೂಲ?
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಡವರು ಸ್ವಂತ ಮನೆ ಕನಸನ್ನು ನನಸು ಮಾಡುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆ ಜಾರಿಗೆ ತಂದಿದೆ. ಯೋಜನೆ ಅಡಿಯಲ್ಲಿ ಫಲಾನುಭವಿಗಳು ಬಯಲು ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳಲು 1.20 ಲಕ್ಷ ರೂ. ನೀಡಲಾಗುತ್ತದೆ. ಇನ್ನು ಗುಡ್ಡಗಾಡು ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳಲು 1.30 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಸುಮಾರು 4.21 ಕೋಟಿ ಮನೆಗಳನ್ನು ನಿರ್ಮಿಸಿಕೊಟ್ಟಿದೆ.
ಭಾನುವಾರ ಸಂಜೆ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ‘ಪಿಎಂ ಕಿಸಾನ್ ನಿಧಿ’ ಬಿಡುಗಡೆಯ ಕಡತಕ್ಕೆ ಸಹಿ ಹಾಕಿದರು. ಇದು ಅವರು ಮೂರನೇ ಅವಧಿಯಲ್ಲಿ ಸಹಿ ಹಾಕಿದ ಮೊದಲ ಫೈಲ್. ಪಿಎಂ ಕಿಸಾನ್ ನಿಧಿಯ 17 ನೇ ಕಂತಿನ ಬಿಡುಗಡೆಗೆ ಅಧಿಕಾರ ನೀಡುವ ಕಡತಕ್ಕೆ ಅವರು ಸಹಿ ಹಾಕಿದರು. ಇದು 9.3 ಕೋಟಿ ರೈತರಿಗೆ ಪ್ರಯೋಜನ ನೀಡುವ ಸುಮಾರು 20,000 ಕೋಟಿ ರೂ. ಬಿಡುಗಡೆಯಾಗಲಿದೆ.
ಇದನ್ನೂ ಓದಿ: Tshering Tobgay: ಮೋದಿ ನನ್ನ ಗುರು, ದೊಡ್ಡಣ್ಣ; ಭೂತಾನ್ ಪ್ರಧಾನಿ ತ್ಶೆರಿಂಗ್ ತೋಬ್ಗೆ ಬಹುಪರಾಕ್!