Site icon Vistara News

ವಿಸ್ತಾರ ಸಂಪಾದಕೀಯ | ಮದರಸಾ ಚಟುವಟಿಕೆಗಳ ಮೇಲೆ ನಿಗಾ ಅಗತ್ಯ

ದೇಶಾದ್ಯಂತ ಸರ್ಕಾರಿ ಅನುದಾನಿತ ಮದರಸಾಗಳಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪ್ರವೇಶ ನೀಡುತ್ತಿರುವ ಕುರಿತು ವಿಸ್ತೃತ ತನಿಖೆ ನಡೆಸಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್‌ಸಿಪಿಸಿಆರ್)‌ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಮದರಸಾಗಳನ್ನು ಗುರುತಿಸಬೇಕು. ಹಾಗೆಯೇ, ಮುಸ್ಲಿಮೇತರ ಮಕ್ಕಳಿಗೂ ಮದರಸಾಗಳಿಗೆ ಪ್ರವೇಶ ನೀಡುತ್ತಿರುವುದರ ಕುರಿತು ವಿಸ್ತೃತವಾದ ತನಿಖೆ ನಡೆಸಬೇಕು. ಮುಸ್ಲಿಮೇತರ ಮಕ್ಕಳನ್ನು ಗುರುತಿಸಿ, ಅವರನ್ನು ಪುನಃ ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಮದರಸಾಗಳಿಗೆ ಸಂಬಂಧಿಸಿ ಇದೊಂದೇ ಆಕ್ಷೇಪವಲ್ಲ, ಇತರ ಹಲವು ಆರೋಪಗಳೂ ಇವೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯಡಿ ಬರುವ ಅಲ್ಪಸಂಖ್ಯಾತ ಶಿಕ್ಷಣ ರಾಷ್ಟ್ರೀಯ ನಿಗಾ ಸಮಿತಿ (ಎನ್‌ಎಂಸಿಎಂಇ) 2018ರಲ್ಲಿ ಒಂದು ಸೂಚನೆ ಹೊರಡಿಸಿತ್ತು. ದೇಶದಲ್ಲಿರುವ ಮದರಸಾಗಳಲ್ಲಿ ಶೇ.80 ನೋಂದಣಿಯಲ್ಲದೆ ಕಾರ್ಯಾಚರಿಸುತ್ತಿದ್ದು, ಕೂಡಲೇ ನೋಂದಾಯಿಸಿಕೊಳ್ಳಬೇಕು ಎಂದು ಹೇಳಿತ್ತು. ಮದರಸಾಗಳಲ್ಲಿ ಏನನ್ನು ಕಲಿಸಲಾಗುತ್ತಿದೆ ಎಂಬುದರ ಬಗ್ಗೆ ಸಮಗ್ರ ಕಲ್ಪನೆ ಒದಗಿಸುವ, ಅದರ ಮೇಲೆ ಗಮನ ಇಡುವ ಉದ್ದೇಶದಿಂದ ಕೇಂದ್ರ ಮದರಸಾ ಮಂಡಳಿ 1932ರಲ್ಲಿಯೇ ರಚನೆಯಾಗಿದೆ. ಆದರೆ ಅದು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದಕ್ಕೆ ದಾಖಲೆಯಿಲ್ಲ. ಎಲ್ಲ ಮದರಸಾಗಳೂ ಇದರಡಿ ನೋಂದಾಯಿಸಿಕೊಳ್ಳಬೇಕು. ಮಂಡಳಿಯ ಪರಿಷ್ಕೃತ ನಿಯಮಾವಳಿಯ ಪ್ರಕಾರ ನೂತನ ಶಿಕ್ಷಣ ನೀತಿಯನ್ನೂ ಇಲ್ಲಿ ಅಳವಡಿಸಿಕೊಳ್ಳುವ ಆಶಯವನ್ನು ಘೋಷಿಸಲಾಗಿದೆ. ಆದರೆ ನೋಂದಾಯಿತ ಮದರಸಾಗಳಲ್ಲಿ ಏನನ್ನು ಕಲಿಸಲಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದ ಮೇಲೆ, ನೋಂದಣಿಯಾಗದ ಮದರಸಾಗಳಲ್ಲಿ ಆಗುತ್ತಿರುವ ಕಲಿಕೆ ಆಧುನಿಕ ಕಲಿಕಾ ಪದ್ಧತಿಗೆ ಪೂರಕವಾಗಿದೆಯೇ ಎಂಬುದನ್ನು ಖಚತಪಡಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಾದರೂ ಹೇಗೆ?

ಮಕ್ಕಳು ಯಾವುದೇ ಭೇದ-ಭಾವ, ಪಕ್ಷಪಾತ ಅಥವಾ ಪೂರ್ವಗ್ರಹವಿಲ್ಲದ ಶಿಕ್ಷಣ ಪಡೆಯಬೇಕು ಎಂಬುದು ಸಂವಿಧಾನದ ಆಶಯ. ಮಕ್ಕಳು ಔಪಚಾರಿಕ ಶಿಕ್ಷಣ ಪಡೆಯಬೇಕು ಎಂಬುದು ಶೈಕ್ಷಣಿಕ ಹಕ್ಕು ಕಾಯ್ದೆ (2009)ಯ ಉದ್ದೇಶ. ಕಡ್ಡಾಯ ಉಚಿತ ಶಿಕ್ಷಣ ಕಾಯಿದೆಯೂ ಇದೆ. ಮದರಸಾಗಳಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿರುವುದು ಈ ಉದ್ದೇಶಗಳಿಗೆ ವಿರುದ್ಧ. ಮದರಸಾಗಳು ಧಾರ್ಮಿಕ ಶಿಕ್ಷಣ ನೀಡುವ ಸಂಸ್ಥೆಗಳಾಗಿವೆ. ಹಾಗಾಗಿ, ಮುಸ್ಲಿಮೇತರ ಮಕ್ಕಳನ್ನು ಮದರಸಾಗಳಿಗೆ ಸೇರಿಸದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಎನ್‌ಸಿಪಿಸಿಆರ್‌ ತಿಳಿಸಿದೆ. ಅನಧಿಕೃತ ಮದರಸಾಗಳನ್ನು ಗುರುತಿಸಿ 30 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಕೂಡ ಆದೇಶದಲ್ಲಿ ತಿಳಿಸಲಾಗಿದೆ. ದೇಶದಲ್ಲಿ ಮುಸ್ಲಿಂ ಮಕ್ಕಳ ಶಿಕ್ಷಣದ ಬಗ್ಗೆ ಕಾನೂನು ನಿರೂಪಕರಿಗೂ ಸಮಾಧಾನವಿಲ್ಲ. ಯಾಕೆಂದರೆ ಅನೇಕ ಸಮೀಕ್ಷೆಗಳು ತಿಳಿಸುವ ಹಾಗೆ, ಎಸ್‌ಎಸ್‌ಎಲ್‌ಸಿ ನಂತರ ಹೆಚ್ಚಿನ ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣ ತೊರೆಯುತ್ತಿದ್ದಾರೆ. ಮೆಡಿಕಲ್‌, ಎಂಜಿನಿಯರಿಂಗ್‌ನಂಥ ಉನ್ನತ ಶಿಕ್ಷಣಕ್ಕೆ ಹೋಗುವ ಯುವಕ/ಯುವತಿಯರ ಪ್ರಮಾಣ ಅತ್ಯಲ್ಪ. ಪ್ರಾಥಮಿಕ ಶಾಲೆಯಲ್ಲಿರುವ ಮುಸ್ಲಿಂ ಮಕ್ಕಳು ಮದರಸಾಗಳಿಗೆ ಕಲಿಕೆಗೆ ಹೋಗುವುದು ಕಡ್ಡಾಯ ಎಂಬ ಸ್ಥಿತಿ ಇದೆ. ಮತೀಯ ಶಿಕ್ಷಣ ಹೆಚ್ಚಿನ ಬಾರಿ ಆಧುನಿಕ ಶಿಕ್ಷಣವನ್ನು ಮೂಲೆಗುಂಪು ಮಾಡಲು ಕಾರಣವಾಗುತ್ತದೆ.

ಹೀಗಾಗಿ ಮದರಸಾ ಶಿಕ್ಷಣ ಪರಿಕಲ್ಪನೆಯೇ ಒಂದು ರೀತಿಯಲ್ಲಿ ಪ್ರಶ್ನಾರ್ಹ. ಅಲ್ಲಿರುವ ಮಕ್ಕಳಿಗೆ ಆಧುನಿಕ ಶಿಕ್ಷಣ ಕೊಡಬೇಕು ಎಂಬ ಚರ್ಚೆ ನಡೆಯುತ್ತಿದೆ. ಇಂಥ ಸನ್ನಿವೇಶದಲ್ಲಿ, ಮುಸ್ಲಿಮೇತರ ಮಕ್ಕಳನ್ನೂ ಮದರಸಾಗೆ ಸೇರಿಸಿ ಅವರಿಗೆ ಇಸ್ಲಾಂ ಆಧರಿತ ಪಾಠ ನಡೆಸುತ್ತಿರುವ ಸಂಗತಿ ಆತಂಕಕಾರಿ. ಇದಕ್ಕೆ ಕಾರಣವೇನು? ಇವರು ಸ್ವಯಿಚ್ಛೆಯಿಂದ ಹೋದವರೋ, ಅಥವಾ ಆಮಿಷ ಒಡ್ಡಿ ಮದರಸಾಗೆ ಸೇರಿಸಲಾಗಿತ್ತೆ ಎಂಬ ಬಗ್ಗೆಯೂ ತನಿಖೆ ನಡೆಸಬೇಕಿದೆ. ಮದರಸಾಗಳನ್ನು ಆಧುನಿಕರಣಗೊಳಿಸಬೇಕಿದೆ. ಮುಸ್ಲಿಂ ಮಕ್ಕಳೂ ಆಧುನಿಕ ಶಿಕ್ಷಣ ಪಡೆಯುವಂತಾಗಬೇಕು. ಮುಸ್ಲಿಂ ಮಕ್ಕಳು ಮುಖ್ಯ ವಾಹಿನಿಯಿಂದ ಬೇರ್ಪಡದಂತೆ ಎಚ್ಚರ ವಹಿಸಬೇಕು. ಆಧುನಿಕತೆ- ಕೌಶಲಗಳೇ ಶಿಕ್ಷಣದ ಮಾನದಂಡವಾಗಬೇಕು. ಅದು ಮದರಸ- ಮತೀಯ ಶಿಕ್ಷಣದಿಂದ ಸಾಧ್ಯವಾಗುವ ಮಾತಲ್ಲ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಸೋಲು, ಗೆಲುವಿನಲ್ಲೂ ಬಿಜೆಪಿ, ಕಾಂಗ್ರೆಸ್‌ಗಿದೆ ಪಾಠ

Exit mobile version