ಬೆಂಗಳೂರು: ತಾಯಿಯಾದವಳು ತನ್ನ ಮಗುವಿಗಾಗಿ ಪ್ರಾಣವನ್ನೇ ಒತ್ತೆ ಇಡುತ್ತಾಳೆ ಎಂಬ ಮಾತನ್ನು ಆಗಾಗ ಕೇಳಿರುತ್ತೇವೆ. ತಾಯಿ ಮಗುವಿನ ಬಾಂಧವ್ಯವೇ ಅಂಥಹದ್ದು. ತಾಯಿ-ಮಗುವಿನ ಪ್ರೀತಿಯ (Sydney Stabbing) ಕುರಿತ ಘಟನೆಯೊಂದು ಸಿಡ್ನಿ ಮಾಲ್ ನಲ್ಲಿ ನಡೆದಿದೆ. ಚಾಕು ಇರಿತದಿಂದ ತಾಯಿಯೊಬ್ಬಳು ಮಾರಣಾಂತಿಕವಾಗಿ ಗಾಯಗೊಂಡಿದ್ದು, ಆ ವೇಳೆ ತನ್ನ ಗಾಯಗೊಂಡ 9 ತಿಂಗಳ ನವಜಾತ ಶಿಶುವಿನ ಜೀವ ಉಳಿಸುವ ಸಲುವಾಗಿ ಅಪರಿಚಿತರಿಗೆ ನೀಡಿದ ಘಟನೆ ಸಿಡ್ನಿ ಮಾಲ್ ನಲ್ಲಿ ನಡೆದಿದೆ.
ಏಪ್ರಿಲ್ 13ರಂದು ಮಾನಸಿಕ ಅಸ್ವಸ್ಥನಾಗಿದ್ದ 40 ವರ್ಷದ ವ್ಯಕ್ತಿಯೊಬ್ಬ ಚಾಕು ಹಿಡಿದು ಶಾಪಿಂಗ್ ಸೆಂಟರ್ ಗೆ ನುಗ್ಗಿ 6 ಮಂದಿಯನ್ನು ಕೊಂದು, 12 ಮಂದಿಯನ್ನು ಗಂಭೀರವಾಗಿ ಗಾಯಗೊಳಿಸಿದ್ದ. ಈ ವೇಳೆ ಪೊಲೀಸರು ಆತನನ್ನು ಬಂಧಿಸಲು ಪ್ರಯತ್ನಿಸಿದಾಗ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಕೊನೆಗೆ ಪೊಲೀಸರ ಗುಂಡಿಗೆ ಬಲಿಯಾಗಿದ್ದ.
ಅಪರಿಚಿತರ ಕೈಗೆ ಮಗುವನ್ನು ಒಪ್ಪಿಸಿದ ತಾಯಿ!
ದಾಳಿ ವೇಳೆ 38 ವರ್ಷದ ತಾಯಿ ಆಶ್ಲೀಗುಡ್ ತನ್ನ 9 ತಿಂಗಳ ಮಗಳ ಜೊತೆಗೆ ಶಾಪಿಂಗ್ ಸೆಂಟರ್ ಗೆ ಬಂದಿದ್ದು, ತಾಯಿ ಮಗಳು ಇಬ್ಬರೂ ದಾಳಿಕೋರನ ಚಾಕು ಇರಿತಕ್ಕೆ ಒಳಗಾಗಿದ್ದಾರೆ. ಆ ವೇಳೆ ತಾಯಿ ತನ್ನ ಮಗುವಿನ ಜೀವ ಉಳಿಸಲು ಮಗುವನ್ನು ಅಪರಿಚಿತರ ಕೈಗೆ ನೀಡಿದ್ದಾಳೆ. ಜೀವ ಹೋಗುತ್ತಿರುವ ಒದ್ದಾಟದಲ್ಲಿಯೂ ತಾಯಿ ತನ್ನ ಕರುಳಿನ ಕುಡಿಯ ಜೀವ ಉಳಿಸಲು ಅದನ್ನು ಯಾರೋ ಅಪರಿಚಿತರ ಕೈಗೆ ನೀಡುವ ದೃಶ್ಯ ಜನರ ಮನಕಲಕುವಂತಿದೆ.
Terror attack and stabbings in a mall in Sydney, Australiapic.twitter.com/St4cYL9bjG
— Keh Ke Peheno (@coolfunnytshirt) April 13, 2024
ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ತಾಯಿ ನಿಧನಳಾಗಿದ್ದಾಳೆ. ಆ ಮೂಲಕ ಸಾವಿನ ಸಂಖ್ಯೆ 6ಕ್ಕೆ ಏರಿದೆ. ಇನ್ನು ಮಗುವಿನ ಸ್ಥಿತಿ ಗಂಭೀರವಾಗಿದ್ದು, ಶಸ್ತ್ರಚಿಕಿತ್ಸೆಯ ನಂತರ ಮಗು ಚೇತರಿಸಿಕೊಳ್ಳುತ್ತಿದೆ ಎನ್ನಲಾಗಿದೆ. ಈ ಸಮಯದಲ್ಲಿ ಮಗುವನ್ನು ರಕ್ಷಿಸಿದ ಅಪರಿಚಿತರಿಗೆ ಸಂತ್ರಸ್ತೆಯ ಕುಟುಂಬದವರು ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Ambedkar Jayanti 2024: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕುರಿತ ಕುತೂಹಲಕರ 30 ಸಂಗತಿಗಳು
ಅಭಿನಂದಿಸಿದ ಪ್ರಧಾನಿ
ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ಪ್ರಸಾರವಾದ ಸಣ್ಣ ವಿಡಿಯೋದಲ್ಲಿ ಬಿಳಿ ಶರ್ಟ್ ಧರಿಸಿದ ಯುವಕನೊಬ್ಬ ಎಸ್ಕಲೇಟರ್ ನಲ್ಲಿ ದಾಳಿ ಕೋರನನ್ನು ತಡೆಯುತ್ತಿರುವುದು ಕಂಡುಬಂದಿದೆ. ಹಿಂಸಾಚಾರದ ಮಧ್ಯ ಭಯಭೀತರಾದ ಜನರಿಗೆ ಸ್ಟೋರ್ ಕೀಪರ್ ಗಳು ಆಶ್ರಯ ನೀಡಿದ್ದಾರೆ. ದಾಳಿಯ ನಡುವೆ ಸಾಮಾನ್ಯ ಆಸ್ಟ್ರೇಲಿಯನ್ನರು ಪ್ರದರ್ಶಿಸಿದ ಧೈರ್ಯವನ್ನು ಕಂಡು ಪ್ರಧಾನಿ ಆಂಥೋನಿ ಅಲ್ಬನೀಸ್ ಶ್ಲಾಘಿಸಿದ್ದಾರೆ. ಅಲ್ಲದೇ ತನ್ನ ಪ್ರಾಣವನ್ನು ಲೆಕ್ಕಿಸದೇ ಜನರ ಜೀವವನ್ನು ಉಳಿಸಲು ದಾಳಿಕೋರನನ್ನು ಗುಂಡಿಕ್ಕಿ ಕೊಂದ ನ್ಯೂ ಸೌತ್ ವೇಲ್ಸ್ ಪೊಲೀಸ್ ನ ಮಹಿಳಾ ಅಧಿಕಾರಿಯನ್ನು ಪ್ರಧಾನಿಯವರು ಅಭಿನಂದಿಸಿದ್ದಾರೆ.