Site icon Vistara News

Muda Case : ಪಿಸಿಆರ್​ ಏನೆಂದು ಗೊತ್ತಿಲ್ಲದವರು ಸಿದ್ದರಾಮಯ್ಯ ಪರ ಅರ್ಜಿ ಸಲ್ಲಿಸಿದ್ದೀರಾ? ಸಿಎಂ ಪರ ಅರ್ಜಿ ಸಲ್ಲಿಸಿದವರಿಗೆ ಕೋರ್ಟ್ ತರಾಟೆ

MUDA SCAM

ಬೆಂಗಳೂರು: ಮುಡಾ ಪ್ರಕರಣಕ್ಕೆ (Muda Case) ಸಂಬಂಧಿಸಿದಂತೆ ಸಿಎಂ ವಿರುದ್ಧದ ಖಾಸಗಿ ಆರ್ಜಿ ಸ್ವೀಕರಿಸಬಾರದು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಂಡಿದೆ. ಪ್ರಾಸಿಕ್ಯೂಷನ್ ಅನುಮತಿ ಇಲ್ಲದೆ ಈ ಪ್ರಕರಣವನ್ನು ಸ್ವೀಕರಿಸಬಾರದು ಎಂದು ಆಲಂ ಪಾಷಾ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರಾದ ಸಂತೋಷ್​ ಗಜಾನನ ಭಟ್ ಅವರು ವಜಾ ಮಾಡಲು ಅರ್ಹ ಎಂದು ಅಭಿಪ್ರಾಯಪಟ್ಟರು.

ಅರ್ಜಿಯನ್ನು ಕೈಗೆತ್ತಿಕೊಂಡ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಯಾವ ಕಾನೂನಿನ ಅಡಿಯಲ್ಲಿ ನೀವು ಈ ಅರ್ಜಿ ಸಲ್ಲಿಸಿದ್ದೀರಾ ಎಂದು ಅರ್ಜಿದಾರ ಆಲಂ ಪಾಷಾ ಅವರಿಗೆ ಪ್ರಶ್ನಿಸಿದರು. ಈ ವೇಳೆ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಡಿ ಎಂದು ಉತ್ತರಿಸಿದರು. ಈ ವೇಳೆ ನ್ಯಾಯಾಧೀಶರು, ನೀವು ದೂರು ದಾಖಲಿಸಿಕೊಳ್ಳುವುದಕ್ಕೆ ಅನುಮತಿ ಕೇಳುತ್ತಿಲ್ಲ. ಬದಲಾಗಿ ಕಾನೂನು ಪ್ರಕ್ರಿಯೆಗಳನ್ನು ತಡೆಯುವಂತೆ ಕೋರುತ್ತಿದ್ದೀರಿ. ಹೀಗಾಗಿ ಈ ಅರ್ಜಿ ವಜಾ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಈ ಪ್ರಕರಣದಲ್ಲಿ ಖಾಸಗಿ ದೂರು ಸಲ್ಲಿಸಿದ್ದ ಮೈಸೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ವಕೀಲರಾದ ಲಕ್ಷ್ಮೀ ಅಯ್ಯಂಗಾರ್​ ಅವರು, ಆಲಂ ಪಾಷಾ ಅವರ ಅರ್ಜಿಗೆ ತಕರಾರರು ಎತ್ತಿದರು. ಈ ಸಂದರ್ಭದಲ್ಲಿ ಸಂಬಂಧವೇ ಇಲ್ಲದ ವ್ಯಕ್ತಿಯ ವಾದ ಆಲಿಸಬಾರದು ಎಂದು ಕೋರಿದರು. ಅವರು ಕೋರ್ಟ್​ ಸಮಯವನ್ನು ಹಾಳುಗೆಡವುತ್ತಿರುವ ಕಾರಣ ಅವರಿಗೆ ದಂಡ ವಿಧಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Bengaluru Police: ಸಿಟಿ ಸಿವಿಲ್‌ ಕೋರ್ಟ್‌ನಿಂದ ಕೊಲೆ ಆರೋಪಿ ಎಸ್ಕೇಪ್‌! ಸಿನಿಮಾ ಸ್ಟೈಲ್‌ನಲ್ಲಿ ಚೇಸ್‌ ಮಾಡಿದ ಖಾಕಿ

ಈ ವೇಳೆ ನ್ಯಾಯಾಧೀಶರು ಪಿಸಿಆರ್​ (PROTECTION OF CIVIL RIGHTS ) ಅಂದೇ ಏನು ಎಂದು ಅರ್ಜಿದಾರ ಆಲಂ ಪಾಷಾ ಅವರಿಗೆ ಕೇಳಿದರು. ಅವರು ಅದಕ್ಕೆ ಪಬ್ಲಿಕ್ ಕಂಟ್ರೊಲ್ ರೂಮ್ ಎಂದು ಉತ್ತರಿಸಿದರು. ಅವರ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ಪಿಸಿಆರ್​ ಅಂದರೆ ಏನು ಅಂಥ ಗೊತ್ತಿಲ್ಲದೇ ದೂರು ಸಲ್ಲಿಸಿದ್ದೀರಾ ಎಂದು ಪ್ರಶ್ನಿಸಿದರು. ಅಲ್ಲದೆ, ನ್ಯಾಯಾಲಯಕ್ಕೆ ಬಂದು ತಮಾಷೆ ಮಾಡುತ್ತೀರಾ? ಈ ಪ್ರಕರಣದಲ್ಲಿ ನೀವು ಸಂತ್ರಸ್ತರಾ ಅಥವಾ ದೂರುದಾರರಾ ಎಂದು ತರಾಟೆಗೆ ತೆಗೆದುಕೊಂಡರು.

ಏನಿದು ಕೋರ್ಟ್​ ಪ್ರಕರಣ?

ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ದುರ್ಬಳಕೆ ಮಾಡಿ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳನ್ನು ತಮ್ಮ ಪತ್ನಿಯ ಹೆಸರಿಗೆ ಪಡೆದುಕೊಂಡಿರುವ ಆರೋಪ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವುದಕ್ಕೆ ಸೂಚನೆ ನೀಡಬೇಕು ಎಂದು ಕೋರಿ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮೈಸೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವರು ಖಾಸಗಿ ದೂರು ಸಲ್ಲಿಸಿದ್ದರು. ಅದರ ವಿಚಾರಣೆ ನಡೆಯುತ್ತಿರುವ ನಡುವೆಯೇ ಬೆಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಟಿ.ಜೆ. ಅಬ್ರಾಹಂ ಮತ್ತೊಂದು ದೂರು ಸಲ್ಲಿಸಿದ್ದರು.

ಮೂಲ ಜಮೀನಿಗೆ ಮಾಲೀಕರೇ ಇಲ್ಲ. ಆ ಜಮೀನು ಸಿದ್ದರಾಮಯ್ಯ ಸಂಬಂಧಿಕರ ಹೆಸರಿಗೆ ಬಂದಿದೆ. ಅಲ್ಲಿಂದ ಸಿದ್ದರಾಮಯ್ಯ ಪತ್ನಿ ಹೆಸರಿಗೆ ಉಡುಗೊರೆಯಾಗಿ ಬಂದಿದ್ದು, ಅಂತಹ ಜಮೀನಿಗೆ ಬದಲಿ ನಿವೇಶನ ಪಡೆದುಕೊಳ್ಳಲಾಗಿದೆ. ಇಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮುಡಾದಲ್ಲಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅಕ್ರಮವಾಗಿ 14 ನಿವೇಶನಗಳನ್ನು ಪಡೆದಿದ್ದಾರೆ ಎಂಬ ಆರೋಪ ಸಂಬಂಧ ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.

Exit mobile version