Site icon Vistara News

Muhammad Yunus: ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಮೊಹಮ್ಮದ್‌ ಯೂನಸ್‌ ಪದಗ್ರಹಣ!

Muhammad Yunus

ಢಾಕಾ: ಮೀಸಲಾತಿ ವಿವಾದದ ಹಿನ್ನೆಲೆಯಲ್ಲಿ ಶೇಖ್‌ ಹಸೀನಾ (Sheikh Hasina) ವಿರುದ್ಧ ಬಾಂಗ್ಲಾದೇಶದಲ್ಲಿ ನಿರಂತರ (Bangladesh Unrest) ಪ್ರತಿಭಟನೆ, ಹಿಂಸಾಚಾರದ ಬಳಿಕ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಶೇಖ್‌ ಹಸೀನಾ ದೇಶ ತೊರೆದ ಬೆನ್ನಲ್ಲೇ, ನೊಬೆಲ್‌ ಶಾಂತಿ ಪುರಸ್ಕೃತ ಮೊಹಮ್ಮದ್‌ ಯೂನಸ್‌ (Muhammad Yunus ) ಅವರು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ಯಾರಿಸ್‌ನಿಂದ ಗುರುವಾರ (ಆಗಸ್ಟ್‌ 8) ಢಾಕಾಗೆ ಆಗಮಿಸಿದ ಅವರು ಸರ್ಕಾರದ ಹಂಗಾಮಿ ಮುಖ್ಯಸ್ಥರಾಗಿ ಪ್ರಮಾಣವಚನ ಸ್ವೀಕರಿಸಿದರು.

ಮೊಹಮ್ಮದ್‌ ಯೂನಸ್‌ ಅವರೊಂದಿಗೆ 15 ಸಲಹೆಗಾರರು ಕೂಡ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಬಾಂಗ್ಲಾದೇಶದಲ್ಲಿ ಹೊಸದಾಗಿ ಚುನಾವಣೆ ನಡೆದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಮೊಹಮ್ಮದ್‌ ಯೂನಸ್‌ ಅವರೇ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರಿಗೆ ಬಾಂಗ್ಲಾದೇಶ ನ್ಯಾಷನಲ್‌ ಪಾರ್ಟಿ (BNP) ಬೆಂಬಲವಿದೆ. ಇದರೊಂದಿಗೆ ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾ ಅವರ ಆಡಳಿತ ಅಂತ್ಯವಾಗಿ, ಮೊಹಮ್ಮದ್‌ ಯೂನಸ್‌ ಅವರ ಆಡಳಿತ ಜಾರಿಗೆ ಬಂದಿದೆ. ಶೇಖ್‌ ಹಸೀನಾ ಅವರು 15 ವರ್ಷ ಪ್ರಧಾನಿಯಾಗಿದ್ದರು. ಸದ್ಯ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.

ಮಹಮ್ಮದ್ ಯೂನಸ್ ಹಿನ್ನೆಲೆ ಏನು?

83 ವರ್ಷದ ಮುಹಮ್ಮದ್ ಯೂನಸ್ ಅವರು ಶೇಖ್‌ ಹಸೀನಾ ಅವರ ಪ್ರಮುಖ ಟೀಕಾಕಾರರು ಮತ್ತು ರಾಜಕೀಯ ವಿರೋಧಿಯೂ ಆಗಿದ್ದಾರೆ. ಅರ್ಥಶಾಸ್ತ್ರಜ್ಞರು ಆಗಿರುವ ಯೂನಸ್ 2006ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಡ ವ್ಯಕ್ತಿಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಮೈಕ್ರೋಕ್ರೆಡಿಟ್‌ನೊಂದಿಗೆ ಅವರ ಅದ್ಭುತ ಕೆಲಸಕ್ಕಾಗಿ ನೊಬೆಲ್ ಸಮಿತಿಯು ಯೂನಸ್ ಮತ್ತು ಅವರ ಗ್ರಾಮೀಣ ಬ್ಯಾಂಕ್ ಅನ್ನು ಗುರುತಿಸಿದೆ. ತಳಮಟ್ಟದಿಂದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಅವರ ಕಾರ್ಯವನ್ನು ಗೌರವಿಸುವ ಸಲುವಾಗಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮೋದಿ ಅಭಿನಂದನೆ

ಸಾಂಪ್ರದಾಯಿಕ ಸಾಲಕ್ಕೆ ಸಾಮಾನ್ಯವಾಗಿ ಅನರ್ಹರಾಗಿರುವ ಉದ್ಯಮಿಗಳಿಗೆ ಕಿರು ಸಾಲಗಳನ್ನು ನೀಡಲು ಯೂನಸ್ 1983ರಲ್ಲಿ ಗ್ರಾಮೀಣ ಬ್ಯಾಂಕ್ ಅನ್ನು ಸ್ಥಾಪಿಸಿದರು. ಬಡತನವನ್ನು ನಿವಾರಿಸುವಲ್ಲಿ ಬ್ಯಾಂಕಿನ ಯಶಸ್ಸು ಜಾಗತಿಕವಾಗಿ ಇದೇ ರೀತಿಯ ಕಿರುಬಂಡವಾಳ ಉಪಕ್ರಮಗಳನ್ನು ಪ್ರೇರೇಪಿಸಿತು.

1940ರಲ್ಲಿ ಬಾಂಗ್ಲಾದೇಶದ ಬಂದರು ನಗರವಾದ ಚಿತ್ತಗಾಂಗ್‌ನಲ್ಲಿ ಜನಿಸಿದ ಯೂನಸ್ ಅವರು ಅಮೆರಿಕದ ವಂಡೆರ್‌ಬಿಲ್ಟ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಗಳಿಸಿದ್ದಾರೆ. ಅನಂತರ ಅವರು ಬಾಂಗ್ಲಾದೇಶಕ್ಕೆ ಮರಳಿದರು. ಬಿದಿರಿನ ಕುರ್ಚಿ ನೇಯುತ್ತಿದ್ದ ಬಡ ಮಹಿಳೆಯೊಬ್ಬರು ಪಡೆದ ಸಾಲವನ್ನು ಮರುಪಾವತಿಸಲು ಹೆಣಗಾಡುತ್ತಿದ್ದುದು ಯುನಸ್‌ ಅವರ ಗಮನ ಸೆಳೆದು ಅದು ಅವರಿಗೆ ಕಿರು ಸಾಲ ಯೋಜನೆ ರೂಪಿಸಲು ಪ್ರೇರೇಪಿಸಿತು. ಮುಂದೆ ಇದು ಗ್ರಾಮೀಣ ಬ್ಯಾಂಕ್ ಸ್ಥಾಪಿಸಬೇಕು ಎನ್ನುವ ಚಿಂತನೆ ಮೂಡಿಸಿತು ಎಂದು ಯೂನಸ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ: Bangladesh Unrest: ಬಾಂಗ್ಲಾ ಹಿಂಸಾಚಾರ; ಬಹುರಾಷ್ಟ್ರೀಯ ಕಂಪನಿಗಳು ತತ್ತರ; ಭಾರತದ ಉದ್ಯಮಗಳ ಮೇಲೇನು ಪರಿಣಾಮ?

Exit mobile version