ವಾಷಿಂಗ್ಟನ್: ಅಮೆರಿಕದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 World Cup 2024) ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ (India vs Pakistan Match) ನಡುವಿನ ರೋಚಕ ಪಂದ್ಯವನ್ನು ವೀಕ್ಷಿಸಲು ಅಮೆರಿಕಕ್ಕೆ ತೆರಳಿದ್ದ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ಅಧ್ಯಕ್ಷ ಅಮೋಲ್ ಕಾಳೆ (Amol Kale) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆದ ಭಾನುವಾರವೇ (ಜೂನ್ 9) ಅಮೋಲ್ ಕಾಳೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ರೋಚಕ ಪಂದ್ಯವನ್ನು ವೀಕ್ಷಿಸಲು ಅಮೋಲ್ ಕಾಳೆ ಅವರು ನ್ಯೂಯಾರ್ಕ್‌ಗೆ ತೆರಳಿದ್ದರು. ಪಂದ್ಯ ವೀಕ್ಷಿಸಿದ ಬಳಿಕ ಅವರು ಸಹೋದ್ಯೋಗಿಗಳೊಂದಿಗೆ ಕ್ರೀಡಾಂಗಣದಿಂದ ವಾಪಸಾಗುವಾಗ ಹೃದಯ ಸ್ತಂಭನದಿಂದ (Cardiac Arrest) ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮೋಲ್ ಕಾಳೆ ಅವರ ನಿಧನವನ್ನು ಮಹಾರಾಷ್ಟ್ರ ಪ್ರತಿಪಕ್ಷದ ಉಪ ನಾಯಕ ಜಿತೇಂದ್ರ ಅಹ್ವಾದ್ ಅವರು ಖಚಿತಪಡಿಸಿದ್ದಾರೆ. “ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಅವರು ಉತ್ತಮ ಸಂಘಟಕರಾಗಿದ್ದರು. ಅವರ ಅಗಲಿಕೆಯಿಂದ ನನಗೆ ವೈಯಕ್ತಿಕ ನಷ್ಟವಾಗಿದೆ” ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಮೋಲ್ ಕಾಳೆ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.
Heard the sad news of the demise of #AmolKale President of Mumbai Cricket Association.
— Dr.Jitendra Awhad (@Awhadspeaks) June 10, 2024
Good Organiser and a Cricket lover.
Amol this was not ur age to say good bye to the world
It’s a personal loss to me #RIP pic.twitter.com/W1IdzjJImF
47 ವರ್ಷದ ಅಮೋಲ್ ಕಾಳೆ ಅವರು 2022ರ ಅಕ್ಟೋಬರ್‌ನಿಂದಲೂ ಎಂಸಿಎ ಅಧ್ಯಕ್ಷರಾಗಿದ್ದರು. 2022ರ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಕಾಳೆ ಅವರು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಂದೀಪ್ ಪಾಟೀಲ್ ಅವರನ್ನು ಸೋಲಿಸಿದ್ದರು. ನಾಗ್ಪುರ ಮೂಲದವರಾದ ಅಮೋಲ್ ಕಾಳೆ ಅವರು ಉದ್ಯಮಿಯೂ ಆಗಿದ್ದಾರೆ. ಇವರು ಜೆ ಕೆ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಅರ್ಪಿತಾ ಎಂಟರ್‌ಪ್ರೈಸಸ್‌ನ ಸಂಸ್ಥಾಪಕರೂ ಆಗಿದ್ದಾರೆ.
ಭಾರತ ಹಾಗೂ ಪಾಕಿಸ್ತಾನದ ಪಂದ್ಯವು ಕಡಿಮೆ ಸ್ಕೋರಿಂಗ್ ಥ್ರಿಲ್ಲರ್ ಆಗಿತ್ತು. 2 ನೇ ಇನ್ನಿಂಗ್ಸ್ ನ ಅಂತಿಮ ಎಸೆತದವರೆಗೂ ಸಂಪೂರ್ಣವಾಗಿ ಸಾಗಿತು. ಪಾಕಿಸ್ತಾನಕ್ಕೆ 120 ಎಸೆತಗಳಲ್ಲಿ ಕೇವಲ 120 ರನ್ಗಳ ಅಗತ್ಯವಿತ್ತು. ಈ ಸಮೀಕರಣ ಬರೆಯಲು ಸರಳವಾಗಿ ಕಂಡರೂ, ಅನುಷ್ಠಾನವು ಅತ್ಯಂತ ಕಳಪೆಯಾಗಿತ್ತು. ಕೊನೆಯಲ್ಲಿ ಗ್ರೀನ್ ಆರ್ಮಿ 6 ರನ್ಗಳಿಂದ ಸೋತಿತು.
ಸದ್ಯ ‘ಎ’ ಗುಂಪಿನಲ್ಲಿ ಭಾರತ ಮತ್ತು ಆತಿಥೇಯ ಅಮೆರಿಕ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ತಲಾ 4 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿದೆ. ಒಂದು ಪಂದ್ಯ ಗೆದ್ದ ಕೆನಾಡ ಮೂರನೇ ಸ್ಥಾನದಲ್ಲಿದೆ. ಗೆಲುವೇ ಕಾಣದ ಪಾಕಿಸ್ತಾನ 4ನೇ ಸ್ಥಾನಿಯಾಗಿದೆ. ಪಾಕ್ ಮುಂದಿನ ಪಂದ್ಯದಲ್ಲಿ ಐರ್ಲೆಂಡ್ ಮತ್ತು ಕೆನಡಾ ವಿರುದ್ಧ ಆಡಲಿದೆ. ಒಂದು ಗುಂಪಿನಿಂದ ಎರಡು ತಂಡಗಳು ಮಾತ್ರ ಸೂಪರ್ 8ಗೆ ಪ್ರವೇಶ ಪಡೆಯಲಿದೆ.
ಇದನ್ನೂ ಓದಿ: T20 World Cup 2024: ಪಾಕ್ಗೆ ಇನ್ನೂ ಇದೆ ಸೂಪರ್-8 ಅವಕಾಶ? ಇಲ್ಲಿದೆ ಲೆಕ್ಕಾಚಾರ