ಮುಂಬಯಿ: ಮಂಗಳವಾರ ಮುಂಜಾನೆ ಮುಂಬಯಿಯಲ್ಲಿ ಬೃಹತ್ ಹೋರ್ಡಿಂಗ್ ಕುಸಿದ (Mumbai Hoarding Collapse) ಪರಿಣಾಮ ಅದರಡಿಗೆ ಸಿಕ್ಕಿ ಸತ್ತವರ ಸಂಖ್ಯೆ (Death toll) 14ಕ್ಕೆ ಏರಿದೆ. ಸಿಕ್ಕಿಬಿದ್ದವರಿಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ (Rescue Operation) ನಡೆಸುತ್ತಿದೆ. ಘಟನೆಯಲ್ಲಿ ಕನಿಷ್ಠ 74 ಜನರು ಗಾಯಗೊಂಡಿದ್ದಾರೆ.
ಕುಸಿದ ಜಾಹೀರಾತು ಫಲಕದ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ತೀವ್ರ ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ ಎಂಟು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ನಾಲ್ಕು ಶವಗಳು ಅವಶೇಷಗಳೊಳಗೆ ಇವೆ ಎಂದು NDRF ಇನ್ಸ್‌ಪೆಕ್ಟರ್ ಗೌರವ್ ಚೌಹಾಣ್ ತಿಳಿಸಿದ್ದಾರೆ. “ನಾವು ಶವಗಳನ್ನು ಪತ್ತೆ ಮಾಡಿದ್ದೇವೆ. ಆದರೆ ಅಡಿಯಲ್ಲಿ ಪೆಟ್ರೋಲ್ ಬಂಕ್ ಇರುವುದರಿಂದ ಕಾರ್ಯಾಚರಣೆ ಕಷ್ಟವಾಗುತ್ತಿದೆ. ಪರಿಸ್ಥಿತಿ ಅಪಾಯಕಾರಿಯಾಗಬಹುದು” ಎಂದು ಅವರು ಹೇಳಿದರು.
ಮುಂಬೈನ ಘಾಟ್‌ಕೋಪರ್‌ನಲ್ಲಿ ನಡೆದ ಘಟನೆಯಲ್ಲಿ ಸಾವನ್ನಪ್ಪಿದವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಸಂತಾಪ ಸೂಚಿಸಿದ್ದು, ಹೋರ್ಡಿಂಗ್ ಕುಸಿತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಮುಂಬಯಿಯಲ್ಲಿ ಏನಾಯಿತು?
ಮುಂಬೈನ ಘಾಟ್‌ಕೋಪರ್‌ನಲ್ಲಿ ಸೋಮವಾರ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಿಂದಾಗಿ 70 ಮೀಟರ್ ಎತ್ತರದ ಜಾಹೀರಾತು ಫಲಕ ಕುಸಿದಿದೆ. ಘಾಟ್‌ಕೋಪರ್‌ನ ಚೆಡ್ಡಾನಗರ ಜಂಕ್ಷನ್‌ನಲ್ಲಿರುವ ಪೆಟ್ರೋಲ್ ಪಂಪ್‌ನಲ್ಲಿ ಅಕ್ರಮ ಹೋರ್ಡಿಂಗ್ ಬಿದ್ದಿದೆ. ಸೋಮವಾರ ಸಂಜೆ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, 64 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಶೇಷಗಳಲ್ಲಿ ಇನ್ನೂ ಸಿಲುಕಿರುವ ದೇಹಗಳನ್ನು ಹೊರತೆಗೆಯಲು ಎನ್‌ಡಿಆರ್‌ಎಫ್ ರಾತ್ರಿ ರಕ್ಷಣಾ ಕಾರ್ಯಾಚರಣೆಯನ್ನು ಅಗೆಯುವ ಯಂತ್ರಗಳೊಂದಿಗೆ ನಡೆಸಿತು.
ಇನ್ನೂ 20ರಿಂದ 30 ಜನರು ಅವಶೇಷಗಳೊಳಗೆ ಸಿಲುಕಿಕೊಂಡಿದ್ದಾರೆ ಎಂದು ಬಿಎಂಸಿ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಪೆಟ್ರೋಲ್ ಪಂಪ್‌ನಲ್ಲಿ ಸಂಭವಿಸಿದ ಕುಸಿತದಿಂದಾಗಿ ಅವಶೇಷಗಳನ್ನು ತೆಗೆದುಹಾಕುವಲ್ಲಿ NDRF ಸಮಸ್ಯೆಗಳನ್ನು ಎದುರಿಸುತ್ತಿದೆ, ಇದು ಅಪಾಯಕಾರಿ ಪರಿಸ್ಥಿತಿಗೆ ಕಾರಣವಾಗಬಹುದು.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೋಮವಾರ ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಮೃತರ ಕುಟುಂಬಗಳಿಗೆ ₹ 5 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ ಚಿಕಿತ್ಸೆ ನೀಡುವುದಾಗಿ ಘೋಷಿಸಿದರು. ಪಾಲಿಕೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಅಕ್ರಮವಾಗಿ ಜಾಹೀರಾತು ಫಲಕ ಹಾಕಲಾಗಿದೆ ಎಂದು ಬಿಎಂಸಿ ಹೇಳಿದೆ. ಮುಂಬೈ ಪೊಲೀಸರು ಐಪಿಸಿ 304, 338, 337, ಮತ್ತು 34ರ ಅಡಿಯಲ್ಲಿ ಮಾಲೀಕ ಭವೇಶ್ ಭಿಡೆ ಮತ್ತು ಇತರರ ವಿರುದ್ಧ ಪಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜೀವಹಾನಿಗೆ ಸಂತಾಪ ಸೂಚಿಸಿರುವ ರಾಷ್ಟ್ರಪತಿ ಮುರ್ಮು, “ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ಹೋರ್ಡಿಂಗ್ ಕುಸಿದು ಹಲವಾರು ಸಾವುನೋವುಗಳ ಸುದ್ದಿ ಅತ್ಯಂತ ದುಃಖಕರವಾಗಿದೆ. ನಾನು ದುಃಖಿತ ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ. ಗಾಯಗೊಂಡವರ ಮತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಯಶಸ್ಸಿಗೆ ಹಾರೈಸುತ್ತೇನೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Dust Storm : ಧೂಳು ಗಾಳಿಗೆ ಹೋರ್ಡಿಂಗ್ ಕುಸಿದು ಮೂವರ ಸಾವು, 59 ಮಂದಿಗೆ ಗಾಯ