ನಾಗ್ಪುರ: ಇಂದಿನ ಕಾಲದಲ್ಲಿ ಆಸ್ತಿ, ಹಣಕ್ಕೆ ಇದ್ದ ಬೆಲೆ ಮನುಷ್ಯನ ಪ್ರಾಣಕ್ಕಿಲ್ಲದಂತಾಗಿದೆ. ಆಸ್ತಿ, ಹಣಕ್ಕಾಗಿ ಜನರು ತಮ್ಮವರನ್ನೇ ಕೊಲೆ (Murder Case) ಮಾಡುತ್ತಿದ್ದಾರೆ. ಮಾನವೀಯತೆ, ಸಂಬಂಧದ ಮೇಲಿನ ಕಾಳಜಿಯನ್ನು ಬಿಟ್ಟು ಹಣ, ಆಸ್ತಿ ಹಿಂದೆ ಜನರು ಹೋಗುತ್ತಿದ್ದಾರೆ. ಇಂತಹ ಘೋರ ಕೃತ್ಯಗಳು ಈ ಕಲಿಯುಗದಲ್ಲಿ ಅಲ್ಲಲ್ಲಿ ನಡೆಯುತ್ತಿರುತ್ತದೆ. ಅಂತದೊಂದು ಘಟನೆ ಇತ್ತೀಚಿಗೆ ನಾಗ್ಪುರದಲ್ಲಿ ನಡೆದಿದೆ.
ಮಾವ-ಸೊಸೆಯೆಂದರೆ, ತಂದೆ-ಮಗಳ ಹಾಗೇ ಇರುವ ಕಾಲವಿಲ್ಲ ಈಗ. ಒಂದು ಸಂಸಾರದಲ್ಲಿ ಎಲ್ಲರೂ ಇದ್ದಾಗ ಇರುವ ಖುಷಿಯೇ ಬೇರೆ ಇರುತ್ತದೆ. ನಮಗೆ ಸಂಬಂಧಗಳು ಬೇಡ, ಆಸ್ತಿ ಮಾತ್ರ ಸಾಕು ಎನ್ನುವವರೇ ಹೆಚ್ಚು ಈಗ. ಸೊಸೆಯೊಬ್ಬಳು ತನ್ನ ಮಾವನ 300 ಕೋಟಿ ಆಸ್ತಿ ಮೇಲೆ ಕಣ್ಣಿಟ್ಟಿದ್ದು, ಅದನ್ನು ಪಡೆಯಲು ಮಾವನ ಕೊಲೆಗಾಗಿ ಸುಪಾರಿ ನೀಡಿದ್ದಾಳೆ. ಮಾವನ ಕೊಲೆ ಮಾಡಲು ಹಂತಕರಿಗೆ ಒಂದು ಕೋಟಿ ರೂ ನೀಡಿರುವುದಾಗಿ ತಿಳಿದುಬಂದಿದೆ.
ಪುರುಷೋತ್ತಮ್ ಪುಟ್ಟೇವಾರ್ (82 ವರ್ಷ) ಮಹಿಳೆಯ ಸಂಚಿಗೆ ಬಲಿಯಾದ ವ್ಯಕ್ತಿ. ಅವರು ಮೇ22ರಂದು ನಾಗ್ಪುರದ ಬಾಲಾಜಿ ನಗರಿಯಲ್ಲಿ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದು ಸಾವನಪ್ಪಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣದ ಆರಂಭದಲ್ಲಿ ಕಾರು ಚಾಲಕನಿಗೆ ಜಾಮೀನು ನೀಡಿ ಬಿಟ್ಟುಬಿಡಲಾಗಿತ್ತು. ಆದರೆ ತನಿಖೆಯ ವೇಳೆ ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳಿಂದ ಇದು ಕೊಲೆ ಪ್ರಕರಣ ಎಂಬುದು ತಿಳಿದುಬಂದಿದೆ. ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 6 ರಂದು ಆರೋಪಿ ಅರ್ಚನಾ ಮನೀಶ್ ಪುಟ್ಟೇವಾರ್(53) ಹಾಗೂ ಆಕೆಯ ಸಹಚರರಾದ ಸಾರ್ಥಕ್ ಬಾಗ್ಡೆ ಮತ್ತು ಧರ್ಮಿಕ್ ಅವರನ್ನು ಬಂಧಿಸಲಾಗಿದೆ.
ಈ ಕೊಲೆ ಮಾಡಲು ಆರೋಪಿ ಅರ್ಚನಾ ಸಹ ಆರೋಪಿ ಧರ್ಮಿಕ್ ಅವರಿಗೆ 40000 ರೂಪಾಯಿ ಖರ್ಚು ಮಾಡಿದ್ದು ಮತ್ತು ಅಪಫಾತ ಮಾಡಲು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಲು ಸಾರ್ಥಕ್ ಬಾಗ್ಡೆ ಗೆ 1.20 ಲಕ್ಷ ರೂಪಾಯಿ ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಅಲ್ಲದೇ ಈಗಾಗಲೇ ಧರ್ಮಿಕ್ 3ಲಕ್ಷ ರೂಪಾಯಿ ಹಾಗೂ ಕೆಲಸ ಪೂರ್ಣಗೊಳಿಸಲು ಸ್ವಲ್ಪ ಚಿನ್ನವನ್ನು ಆರೋಪಿ ಅರ್ಚನಾಳಿಂದ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ.
ಈಗಾಗಲೇ ಪೊಲೀಸರು ಧರ್ಮಿಕ್ ನಿವಾಸದಲ್ಲಿ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹಾಗೇ ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಕೊಲೆ ಮತ್ತು ಇತರ ಅಪರಾಧಗಳ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Fraud Case: 300 ರೂ. ಬೆಲೆಯ ನಕಲಿ ಆಭರಣವನ್ನು ವಿದೇಶಿ ಮಹಿಳೆಗೆ 6 ಕೋಟಿ ರೂ.ಗೆ ಮಾರಿದರು!
ಹಾಗೇ ಆರೋಪಿ ಅರ್ಚನಾ ಅವರು ಗಡ್ಚಿರೋಲಿ ಮತ್ತು ಚಂದಾಪುರದಲ್ಲಿ ನಗರ ಯೋಜನೆ ಸಹಾಯಕ ನಿರ್ದೇಶಕಿಯಾಗಿದ್ದರು ಎಂಬುದಾಗಿ ತಿಳಿದುಬಂದಿದೆ. ಹಾಗೇ ಸಹ ಆರೋಪಿ ಸಾರ್ಥಕ್ ಬಾಗ್ಡೆ ಆರೋಪಿ ಅರ್ಚನಾಳ ಪತಿಯ ಕಾರು ಚಾಲಕ ಎಂಬುದಾಗಿ ತಿಳಿದುಬಂದಿದೆ.