ಇದುವರೆಗೆ ಮುಕ್ತವಾಗಿದ್ದ ಭಾರತ ಹಾಗೂ ಮ್ಯಾನ್ಮಾರ್ ನಡುವಿನ ಗಡಿಯ ಸಂಚಾರವನ್ನು ಶೀಘ್ರ ಕೊನೆಗೊಳಿಸಲಾಗುವುದು ಹಾಗೂ ಎರಡೂ ದೇಶಗಳ ನಡುವೆ ಬೇಲಿ ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Shah) ಹೇಳಿದ್ದಾರೆ. ಈ ಘೋಷಣೆಯೊಂದಿಗೆ, ಭಾರತ- ಮ್ಯಾನ್ಮಾರ್ ಗಡಿಗೆ ಹತ್ತಿರದಲ್ಲಿ ವಾಸಿಸುವ ಜನರಿಗೆ ವೀಸಾ ಇಲ್ಲದೆ ಪರಸ್ಪರರ ಭೂಪ್ರದೇಶದೊಳಗೆ 16 ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಅನುವು ಮಾಡಿಕೊಟ್ಟಿದ್ದ ಫ್ರೀ ಮೂವ್ಮೆಂಟ್ ರೆಜಿಮ್ (ಎಫ್ಎಂಆರ್) ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಬಾಂಗ್ಲಾ ದೇಶದೊಂದಿಗೆ ಗಡಿಗೆ ಬೇಲಿ ಹಾಕಿದಂತೆಯೇ ಮ್ಯಾನ್ಮಾರ್- ಭಾರತದ ಮುಕ್ತ ಗಡಿಗೆ ಬೇಲಿ ಹಾಕಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಸದ್ಯ ನಿವಾರಣೆಯಾಗದ ರೋಹಿಂಗ್ಯಾ ವಲಸೆ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇದೇ ಉತ್ತಮವಾದ ನಡೆ.
ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದಂತಹ ರಾಜ್ಯಗಳ ಮೂಲಕ ಹಾದುಹೋಗುವ ಮ್ಯಾನ್ಮಾರ್ನೊಂದಿಗೆ ಭಾರತವು 1,643 ಕಿ.ಮೀ ಉದ್ದದ ಗಡಿ ಹಂಚಿಕೊಂಡಿದೆ. ಈ ಎಲ್ಲಾ ರಾಜ್ಯಗಳು ಪ್ರಸ್ತುತ ಎಫ್ಎಂಆರ್ ಅನ್ನು ಹೊಂದಿವೆ. ಇದನ್ನು ಭಾರತದ ಆಕ್ಟ್ ಈಸ್ಟ್ ನೀತಿಯ ಭಾಗವಾಗಿ 2018ರಲ್ಲಿ ಜಾರಿಗೆ ತರಲಾಯಿತು. ಆದರೆ, ಮ್ಯಾನ್ಮಾರ್ ತನ್ನೊಳಗಿನ ಭಾರಿ ಅಂತರ್ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸುತ್ತಿಲ್ಲ ಹಾಗೂ ಆ ದಿಕ್ಕಿನಲ್ಲಿ ಕಾರ್ಯಪ್ರವೃತ್ತವಾಗಿಲ್ಲ. ಅಲ್ಲಿನ ಬಹುಸಂಖ್ಯಾತ ಬೌದ್ಧರ ಸರ್ಕಾರ, ಅಲ್ಲಿರುವ ಅಲ್ಪಸಂಖ್ಯಾತ ರೋಹಿಂಗ್ಯಾ ಮುಸ್ಲಿಮರನ್ನು ಹಣಿಯುವಲ್ಲಿ ನಿರತವಾಗಿದೆ. ರೋಹಿಂಗ್ಯಾಗಳು ಲಕ್ಷಾಂತರ ಸಂಖ್ಯೆಯಲ್ಲಿ ಭಾರತದತ್ತ ದೌಡಾಯಿಸುತ್ತಿದ್ದಾರೆ. ಬೌದ್ಧ ಧರ್ಮ ಅಹಿಂಸೆಯನ್ನೇ ಪ್ರತಿಪಾದಿಸಿದರೂ, ರೋಹಿಂಗ್ಯಾಗಳ ವಿಷಯದಲ್ಲಿ ಮಾತ್ರ ಅಲ್ಲಿನ ಸರ್ಕಾರ ಕ್ರೂರಿಯಾಗಿದೆ. ಅದೆಷ್ಟೋ ಮಾನವ ಹಕ್ಕು ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಲೇ ಇವೆ. ವಿಶ್ವಸಂಸ್ಥೆ ಆಗಾಗ ಈ ಬಗ್ಗೆ ಎಚ್ಚರಿಸುತ್ತಲೇ ಇದೆ. ಆದರೆ ಮ್ಯಾನ್ಮಾರ್ ಪಾಠ ಕಲಿತಿಲ್ಲ.
ದಶಕಗಳಿಂದ ರೋಹಿಂಗ್ಯಾಗಳು ಮ್ಯಾನ್ಮಾರ್‌ನಲ್ಲಿ ಹಿಂಸೆ, ತಾರತಮ್ಯ ಮತ್ತು ಕಿರುಕುಳವನ್ನು ಅನುಭವಿಸಿದ್ದಾರೆ. ಮ್ಯಾನ್ಮಾರ್‌ನ ರಾಖೈನ್ ರಾಜ್ಯದಲ್ಲಿ ಹಿಂಸಾಚಾರದ ಬೃಹತ್ ಅಲೆಯು ಭುಗಿಲೆದ್ದ ನಂತರ ಇವರ ಅತಿದೊಡ್ಡ ವಲಸೆ ಆಗಸ್ಟ್ 2017ರಲ್ಲಿ ಪ್ರಾರಂಭವಾಯಿತು. 7,00,000ಕ್ಕೂ ಹೆಚ್ಚು ಮಂದಿ ಬಾಂಗ್ಲಾದೇಶಕ್ಕೆ ಓಡಿಬಂದರು. ಅಲ್ಲಿಂದ ಭಾರತಕ್ಕೂ ಬಂದರು. ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ (UNHCR) ಪ್ರಕಾರ, ಭಾರತದಲ್ಲಿ ಸುಮಾರು 16,000 UNHCR ಪ್ರಮಾಣೀಕೃತ ರೋಹಿಂಗ್ಯಾ ನಿರಾಶ್ರಿತರು ಇದ್ದಾರೆ. ಆದರೆ ಇದು ಕಡಿಮೆ ಅಂದಾಜು. ಸರ್ಕಾರದ ಅಂದಾಜಿನ ಪ್ರಕಾರ ಭಾರತದಲ್ಲಿ 40,000ಕ್ಕೂ ಮೀರಿ ರೋಹಿಂಗ್ಯಾ ನಿರಾಶ್ರಿತರು ಇದ್ದಾರೆ. ಜಮ್ಮು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗರಿಷ್ಠ ಸಾಂದ್ರತೆಯನ್ನು ಹೊಂದಿದ್ದಾರೆ. ಭಾರತ ಸರ್ಕಾರ ರೋಹಿಂಗ್ಯಾಗಳನ್ನು ವಾಪಸ್ ಕಳುಹಿಸಲು ಪ್ರಯತ್ನಿಸುತ್ತಿದೆ. ಕಳೆದ ವರ್ಷ ಸುಮಾರು 150 ರೊಹಿಂಗ್ಯಾ ಮುಸ್ಲಿಮರನ್ನು ಪೊಲೀಸರು ಬಂಧಿಸಿ ಮ್ಯಾನ್ಮಾರ್‌ಗೆ ಗಡೀಪಾರು ಮಾಡಲು ಮುಂದಾದಾಗ, ಸರ್ಕಾರವನ್ನು ತಡೆಯಬೇಕು ಎಂಬ ಮನವಿ ಮಾಡಲಾಗಿತ್ತು. ಆ ಮನವಿಯನ್ನು ಸುಪ್ರೀಂ ಕೋರ್ಟ್ ಕೂಡ ತಿರಸ್ಕರಿಸಿತು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ವೈಮಾನಿಕ ಉದ್ಯಮದಲ್ಲಿ ಭಾರತದ ದಾಪುಗಾಲು
ನಿರಾಶ್ರಿತರಿಗೆ ಮಾನವೀಯ ನೆಲೆಯಲ್ಲಿ ಆಶ್ರಯ ನೀಡಬೇಕು ಎಂಬುದೇನೋ ನಿಜ. ಭಾರತ ಮೊದಲಿನಿಂದಲೂ ಈ ತತ್ವವನ್ನು ಪಾಲಿಸುತ್ತ ಬಂದಿದೆ. ದೊಡ್ಡ ಸಂಖ್ಯೆಯ ಬಾಂಗ್ಲಾ, ಯಹೂದಿ, ಮ್ಯಾನ್ಮಾರ್, ಸಿಂಹಳಿ ನಿರಾಶ್ರಿತರು ನಮ್ಮಲ್ಲಿ ನೆಲೆ ಪಡೆದಿದ್ದಾರೆ. ಆದರೆ ನಿರಾಶ್ರಿತರ ಸಂಖ್ಯೆ ಹೆಚ್ಚಾಗುತ್ತ ಹೋದಂತೆ ಸ್ಥಳೀಯ ಸಮುದಾಯಗಳು ಭೀತಿ ಆತಂಕಗಳಿಗೆ ಒಳಗಾಗುತ್ತವೆ. ಉದ್ಯೋಗ ಮತ್ತಿತರ ವಿಚಾರಗಳಲ್ಲಿ ಸಂಘರ್ಷಗಳು ಹುಟ್ಟಿಕೊಳ್ಳುತ್ತವೆ. ದೇಶದ ಭದ್ರತೆಗೂ ಅಪಾಯಕಾರಿ ಎನ್ನಿಸುವ ಸನ್ನವೇಶಗಳು ಉಂಟಾಗಬಹುದು. ಈ ಎಲ್ಲ ಹಿನ್ನೆಲೆಯಲ್ಲಿ, ಮ್ಯಾನ್ಮಾರ್ ನಿರಾಶ್ರಿತರಿಗೆ ಬಾಗಿಲು ಮುಚ್ಚುವುದೇ ಸೂಕ್ತ.