ಮೈಸೂರು: ರಾಜ್ಯದಲ್ಲಿಯೇ ಅತಿ ಹೆಚ್ಚು ಅಲ್ಪಸಂಖ್ಯಾತ (ಮುಸ್ಲಿಂ) ಮತಗಳನ್ನು ಹೊಂದಿರುವ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ತನ್ವೀರ್‌ಸೇಠ್ (82893) ಜಯ ಸಾಧಿಸಿದ್ದಾರೆ. ಅವರು ಬಿಜೆಪಿಯ ಸಂದೇಶ್ ಸ್ವಾಮಿ (51802) ವಿರುದ್ಧ ಜಯ ಸಾಧಿಸಿದರು. 2018ರಲ್ಲಿ ತನ್ವೀರ್ ಸೇಠ್ 62,268 ಮತಗಳನ್ನು ಪಡೆದು ಜಯಭೇರಿ ದಾಖಲಿಸಿದ್ದರೆ, ಬಿಜೆಪಿಯ ಸಂದೇಶ್ ಸ್ವಾಮಿ ಎರಡನೇ ಸ್ಥಾನ ಪಡೆದುಕೊಂಡಿದ್ದರು.
2,53,051 ಮತದಾರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಪು 1,27,720 ಮಹಿಳಾ ಹಾಗೂ 1,25,331 ಪುರುಷ ಮತದಾರರಿದ್ದಾರೆ. ಕ್ಷೇತ್ರದಲ್ಲಿ 1.15 ಲಕ್ಷ ಮಂದಿ ಮುಸ್ಲಿಂ, ಪರಿಶಿಷ್ಟ ಜಾತಿ 25 ಸಾವಿರ ಮತಗಳು, ಒಕ್ಕಲಿಗರು 15 ಸಾವಿರ, ನಾಯಕ ಸಮುದಾಯದ 14 ಸಾವಿರ, ಲಿಂಗಾಯತ ಪಂಗಡದ 12 ಸಾವಿರ, ಕ್ರಿಶ್ಚಿಯನ್ನರ 12 ಸಾವಿರ, ಕುರುಬರು 9 ಸಾವಿರ, ಮರಾಠರು 9 ಸಾವಿರ, ಬ್ರಾಹ್ಮಣರು 5 ಸಾವಿರ ಇತರದ ಸಮುದಾಯದ ಮತಗಳಿವೆ.
ಈ ಕ್ಷೇತ್ರದಲ್ಲಿ ಇದುವರೆಗೆ 12 ಚುನಾವಣೆಗಳು ನಡೆದಿವೆ. ಅದರಲ್ಲಿ ಅಜೀಜ್ ಸೇಠ್ ಹಾಗೂ ಅವರ ಮಗ ತನ್ವೀರ್ ಸೇಠ್ ಈ ಕ್ಷೇತ್ರದಲ್ಲಿ 11 ಬಾರಿ ಗೆದ್ದಿದ್ದಾರೆ. ಅಪ್ಪ 6 ಹಾಗೂ ಮಗ 5 ಬಾರಿ ಗೆಲುವು ದಾಖಲಿಸಿದ್ದಾರೆ. ಮುಸಲ್ಮಾನ ಪ್ರಾಬಲ್ಯದ ಎನ್ ಆರ್ ಕ್ಷೇತ್ರದಲ್ಲಿ ಇ ಮಾರುತಿರಾವ್ ಪವಾರ್ ಗೆಲುವಿನೊಂದಿಗೆ ಬಿಜೆಪಿ ಪಕ್ಷವೂ ಒಮ್ಮೆ ಖಾತೆ ತೆರೆದಿತ್ತು.