ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಅವರ ಮೊಮ್ಮಗ ಏಕಾಗ್ರ ರೋಹನ್ ಕೇವಲ ಐದು ತಿಂಗಳ ವಯಸ್ಸಿನಲ್ಲಿ ಇನ್ಫೋಸಿಸ್ ಸಂಸ್ಥೆಯಿಂದ 4.2 ಕೋಟಿ ರೂ.ಗಳ ಲಾಭಾಂಶವನ್ನು ಪಡೆದುಕೊಂಡಿದ್ದಾರೆ. ನಾರಾಯಣ ಮೂರ್ತಿ ಅವರು ಕಳೆದ ತಿಂಗಳು ಇನ್ಫೋಸಿಸ್ನ 240 ಕೋಟಿ ಮೌಲ್ಯದ 15 ಲಕ್ಷ ಷೇರುಗಳನ್ನು (0.04% ಪಾಲನ್ನು ಪುಟ್ಟ ಬಾಲಕನಿಗೆ ನೀಡಿದ್ದರು. ಆ ಷೇರುಗಳಿಗೆ ಈಗ ದೊಡ್ಡ ಮೊತ್ತದ ಡಿವಿಡೆಂಡ್ ಸಿಕ್ಕಿದೆ.
ಎಕ್ಸ್ಚೇಂಜ್ ಫೈಲಿಂಗ್ ಪ್ರಕಾರ, ಏಕಾಗ್ರ ಇನ್ಫೋಸಿಸ್ನ 15,00,000 ಷೇರುಗಳನ್ನು ಹೊಂದಿದ್ದಾನೆ. ಈ ವ್ಯವಹಾರವನ್ನು “ಆಫ್-ಮಾರ್ಕೆಟ್” ನಡೆಸಲಾಯಿತು ಎಂದು ಫೈಲಿಂಗ್ ಬಹಿರಂಗಪಡಿಸಿದೆ.
ಕಳೆದ ವರ್ಷ ನವೆಂಬರ್ 10ರಂದು ಬೆಂಗಳೂರಿನಲ್ಲಿ ಜನಿಸಿದ ಏಕಾಗ್ರ ರೋಹನ್ ಮೂರ್ತಿ, ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮೂರನೇ ಮೊಮ್ಮಗಳು. ಏಕಾಗ್ರಹ ರೋಹನ್ ಮೂರ್ತಿ ಮತ್ತು ಅಪರ್ಣಾ ಕೃಷ್ಣನ್ ಅವರ ಪುತ್ರ. ಕೃಷ್ಣ ಮತ್ತು ಅನೌಷ್ಕಾ, ಅಕ್ಷತಾ ಮೂರ್ತಿ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪುತ್ರಿಯರಾಗಿದ್ದಾರೆ.
ಶೇಕಡಾ 30ರಷ್ಟು ಲಾಭ ಹೆಚ್ಚಳ
ಇನ್ಫೋಸಿಸ್ ನಾಲ್ಕನೇ ತ್ರೈಮಾಸಿಕದಲ್ಲಿ ಲಾಭದಲ್ಲಿ 30% ಹೆಚ್ಚಳವನ್ನು ಘೋಷಿಸಿದೆ. ಕಳೆದ ವರ್ಷದ 6,128 ಕೋಟಿ ರೂ.ಗೆ ಹೋಲಿಸಿದರೆ 7,969 ಕೋಟಿ ರೂ.ಗೆ ತಲುಪಿದೆ. ಆದಾಯವು 37,923 ಕೋಟಿ ರೂ.ಗೆ ಸ್ವಲ್ಪ ಏರಿಕೆ ಕಂಡಿದೆ. ಮಾರ್ಚ್ 2024 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ, ಒಟ್ಟು ಲಾಭವು 8.9% ರಷ್ಟು ಏರಿಕೆಯಾಗಿ 26,233 ಕೋಟಿ ರೂ.ಗೆ ತಲುಪಿದೆ/ ಕಾರ್ಯಾಚರಣೆಗಳಿಂದ ವಾರ್ಷಿಕ ಆದಾಯವು 4.7% ರಷ್ಟು ಏರಿಕೆಯಾಗಿ 1,53,670 ಕೋಟಿ ರೂ.ಗೆ ತಲುಪಿದೆ. ಇನ್ಫೋಸಿಸ್ ಮಂಡಳಿಯು 2024ರ ಹಣಕಾಸು ವರ್ಷದಲ್ಲಿ ಪ್ರತಿ ಷೇರಿಗೆ 20 ರೂ.ಗಳ ಅಂತಿಮ ಲಾಭಾಂಶ ಶಿಫಾರಸು ಮಾಡಿದೆ. ಜೊತೆಗೆ ಪ್ರತಿ ಷೇರಿಗೆ 8 ರೂ.ಗಳ ವಿಶೇಷ ಲಾಭಾಂಶವನ್ನು ಶಿಫಾರಸು ಮಾಡಿದೆ. ಹೆಚ್ಚುವರಿಯಾಗಿ, ಇನ್ಫೋಸಿಸ್ ಜರ್ಮನಿಯ ಇನ್-ಟೆಕ್ ಸಂಸ್ಥೆಯನ್ನು 450 ಮಿಲಿಯನ್ ಯುರೋಗಳ ಒಪ್ಪಂದದಲ್ಲಿ ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದೆ.
ಮುಂದಿನ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ 1-3% ಆದಾಯದ ಬೆಳವಣಿಗೆಯನ್ನು ನಿರೀಕ್ಷಿಸುತ್ತದೆ. ಸಂಶೋಧನಾ ಸಂಸ್ಥೆ ಮೋತಿಲಾಲ್ ಓಸ್ವಾಲ್ ಪ್ರಕಾರ, 2025ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಆದಾಯ ನಿರೀಕ್ಷೆಗಿಂತ ಕಡಿಮೆಯಾಗಿದೆ. ಆದರೆ ಇನ್ಫೋಸಿಸ್ ಮಧ್ಯಮಾವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂದು ಅವರು ಊಹೆ ಮಾಡಿದ್ದಾರೆ. ಇನ್ಫೋಸಿಸ್ 2025 ರ ಹಣಕಾಸು ವರ್ಷದ ನಂತರ ವೇಗವಾಗಿ ಬೆಳೆಯಲು ಪ್ರಾರಂಭಿಸಬಹುದು ಎಂದು ಹೇಳಿದೆ. ಟಿಸಿಎಸ್ನಂತ ಕಂಪನಿಗಳಿಗೆ ಹೋಲಿಸಿದರೆ ಇನ್ಪೋಸಿಸ್ ಷೇರುಗಳು ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಬಿಸಿನೆಸ್ ಟುಡೇ ವರದಿ ಮಾಡಿದೆ.