ದಿಲ್ಲಿಯಲ್ಲಿ ಶ್ರದ್ಧಾ ವಾಳ್ಕರ್‌ಳನ್ನು ಭೀಕರವಾಗಿ ಹತ್ಯೆಗೈದಿರುವ ವಿಕೃತ ಹಂತಕ ಅಫ್ತಾಬ್ ಪೂನಾವಾಲಾನನ್ನು ನಾರ್ಕೊ ಟೆಸ್ಟ್‌ಗೆ (ಮಂಪರು ಪರೀಕ್ಷೆ) ಒಳಪಡಿಸಲು ದಿಲ್ಲಿ ಪೊಲೀಸರು ಮಾಡಿದ ಮನವಿಗೆ ( Narco test) ನ್ಯಾಯಾಲಯ ಸಮ್ಮತಿಸಿದೆ.
ಕಳೆದ ಮೇ ತಿಂಗಳಲ್ಲಿಯೇ ಶ್ರದ್ಧಾಳನ್ನು ಹತ್ಯೆಗೈದು, ಶವವನ್ನು ಫ್ರಿಡ್ಜ್‌ನಲ್ಲಿ ಇಟ್ಟು, 35 ಭಾಗಗಳಾಗಿ ತುಂಡರಿಸಿ ದೆಹಲಿಯ ಹಲವೆಡೆ ಅವುಗಳನ್ನು ಎಸೆದ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಆದರೆ, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆಗೆ ಅಫ್ತಾಬ್ ಸಹಕಾರ ನೀಡುತ್ತಿಲ್ಲ. “ಅಫ್ತಾಬ್ ಹೇಳಿಕೆಗಳನ್ನು ಬದಲಾಯಿಸುತ್ತಿದ್ದು, ತನಿಖೆಗೆ ಸಹಕರಿಸುತ್ತಿಲ್ಲ. ಹಾಗಾಗಿ, ನಾರ್ಕೊ ಟೆಸ್ಟ್‌ಗೆ ಅನುಮತಿ ನೀಡಬೇಕು” ಎಂದು ದೆಹಲಿ ಪೊಲೀಸರು ಸಾಕೇತ್ ಕೋರ್ಟ್‌ಗೆ ಮನವಿ ಮಾಡಿದ್ದರು. ಇದಕ್ಕೆ ಕೋರ್ಟ್ ಒಪ್ಪಿಗೆ ಸೂಚಿಸಿದೆ.
ಏನಿದು ನಾರ್ಕೊ ಟೆಸ್ಟ್?
ಒಬ್ಬ ವ್ಯಕ್ತಿಯನ್ನು ಅರೆ ಪ್ರಜ್ಞಾವಸ್ಥೆಗೆ ತಲುಪಿಸಿ, ಆತನಿಂದ ಸತ್ಯ ಬಹಿರಂಗಪಡಿಸುವ ವಿಧಾನವೇ ನಾರ್ಕೊ ಟೆಸ್ಟ್ ಆಗಿದೆ. ವ್ಯಕ್ತಿಯಿಂದ ಸತ್ಯ ಬಾಯಿಬಿಡಿಸಲು ಸೋಡಿಯಂ ಪೆಂಟೋಥಾಲ್‌ಅನ್ನು ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ. ಆಗ, ವ್ಯಕ್ತಿಯ ಪ್ರಜ್ಞಾವಸ್ಥೆ ಕುಂಠಿತಗೊಂಡು, ಯಾವುದೇ ಸುಳ್ಳು ಹೇಳಲು ಆಗದಂತಾಗುತ್ತದೆ. ಆತ ಮುಕ್ತವಾಗಿ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ. ಪರೀಕ್ಷೆಗೆ ಒಳಗಾಗುವ ವ್ಯಕ್ತಿ ಆರೋಗ್ಯದಿಂದ ಇದ್ದಾಗ ಮಾತ್ರ ನಾರ್ಕೊ ಟೆಸ್ಟ್‌ಗೆ ಒಳಪಡಿಸಲಾಗುತ್ತದೆ.
ಈ ನಾರ್ಕೊ ಪರೀಕ್ಷೆ ನಡೆಸುವ ವೇಳೆ ಒಬ್ಬರು ಮನಃಶಾಸ್ತ್ರಜ್ಞರು, ತನಿಖಾಧಿಕಾರಿ ಅಥವಾ ಫೋರೆನ್ಸಿಕ್ ತಜ್ಞರು ಇರಬೇಕು. ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್ ಕೊಟ್ಟು ವಿಚಾರಣೆ ನಡೆಸುವುದಕ್ಕೆ ಇದು ಪರ್ಯಾಯ ವಿಧಾನ ಎನ್ನುತ್ತಾರೆ ತಜ್ಞರು.
ಪರೀಕ್ಷೆಯನ್ನು ಹೇಗೆ ನಡೆಸುತ್ತಾರೆ?
ಈಗಾಗಲೇ ತಿಳಿಸಿರುವಂತೆ, ವೈದ್ಯಕೀಯವಾಗಿ ಆರೋಗ್ಯ ಸ್ಥಿತಿಯಲ್ಲಿದ್ದಾಗ ಮಾತ್ರ ವ್ಯಕ್ತಿಯನ್ನು ನಾರ್ಕೊ ಟೆಸ್ಟ್‌ಗೆ ಒಳಪಡಿಸಲಾಗುತ್ತದೆ. ವ್ಯಕ್ತಿಯ ವಯಸ್ಸು, ಲಿಂಗ, ವೈದ್ಯಕೀಯ ಪರಿಸ್ಥಿತಿಯನ್ನು ಆಧರಿಸಿ, ಸೋಡಿಯಂ ಪೆಂಟೋಥಾಲ್‌ನ ಡೋಸೇಜ್ ಅನ್ನು ನಿರ್ಧರಿಸಲಾಗುತ್ತದೆ. ಈ ಡೋಸೇಜ್ ಮಹತ್ವದ್ದು. ಏಕೆಂದರೆ ಅಸಮರ್ಪಕ ಪ್ರಮಾಣದಲ್ಲಿ ಕೊಟ್ಟರೆ, ವ್ಯಕ್ತಿ ಸಾವಿಗೀಡಾಗಬಹುದು ಅಥವಾ ಕೋಮಾ ಸ್ಥಿತಿಗೆ ತಲುಪಬಹುದು. ಇತರ ಮುಂಜಾಗರೂಕತಾ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ. ಔಷಧವನ್ನು ಕೊಟ್ಟ ಬಳಿಕ, ನಿರ್ದಿಷ್ಟ ಪ್ರಶ್ನೆಗಳಿಗೆ ಮಾತ್ರ ಉತ್ತರಿಸುವ ಸಾಮರ್ಥ್ಯ ವ್ಯಕ್ತಿಯಲ್ಲಿರುತ್ತದೆ.
ನಾರ್ಕೊ ಟೆಸ್ಟ್ ಸಂಪೂರ್ಣ ನಿಖರವಾಗಿರುತ್ತದೆಯೇ?
ನಾರ್ಕೊ ಟೆಸ್ಟ್ ಸಂಪೂರ್ಣ ನಿಖರವಾಗಿರುವುದಿಲ್ಲ. ಕೆಲವೊಮ್ಮೆ ಹೇಳಿಕೆಗಳು ಸುಳ್ಳಾಗಿರುತ್ತವೆ. ಹೀಗಾಗಿ ತನಿಖೆಯ ದೃಷ್ಟಿಯಿಂದ ಈ ಪರೀಕ್ಷೆ ಅವೈಜ್ಞಾನಿಕ ಎನ್ನುವ ವಾದವೂ ಇದೆ.
ಭಾರತದಲ್ಲಿ ನಾರ್ಕೊ ಟೆಸ್ಟ್
ಭಾರತದಲ್ಲಿ ಮೊದಲ ಬಾರಿಗೆ 2002ರಲ್ಲಿ ಗೋಧ್ರಾ ಪ್ರಕರಣಕ್ಕೆ ಸಂಬಂಧಿಸಿ ನಾರ್ಕೊ ಟೆಸ್ಟ್ ಅನ್ನು ನಡೆಸಲಾಯಿತು. ತೆಲಗಿ ಸ್ಟಾಂಪ್ ಪೇಪರ್ ಹಗರಣ ಕುರಿತು ಅಬ್ದುಲ್ ಕರೀಮ್ ಲಾಲ್ ತೆಲಗಿಯನ್ನು 2003ರಲ್ಲಿ ಇದೇ ಪರೀಕ್ಷೆಗೆ ಒಳಪಡಿಸಲಾಯಿತು. ನಿಠಾರಿ ಹತ್ಯಾಕಾಂಡಕ್ಕೆ ಸಂಬಂಧಿಸಿ ಇಬ್ಬರು ಶಂಕಿತರನ್ನು ಗುಜರಾತ್‌ನಲ್ಲಿ ನಾರ್ಕೊ ಟೆಸ್ಟ್‌ಗೆ ಒಳಪಡಿಸಲಾಗಿತ್ತು.
ನಾರ್ಕೊ ಟೆಸ್ಟ್ ಕುರಿತ ಟೀಕೆಗಳೇನು?
ತನಿಖೆಯ ವಿಚಾರದಲ್ಲಿ ನಾರ್ಕೊ ಅನಾಲಿಸಿಸ್ ಟೆಸ್ಟ್ ವೈಜ್ಞಾನಿಕ ಸಾಕ್ಷ್ಯ ಆಗಬಹುದೇ ಎಂದು ಇದರ ಟೀಕಾಕಾರರು ಪ್ರಶ್ನಿಸುತ್ತಾರೆ. ಸೋಕಾಲ್ಡ್ (biscuit) ಬಿಸ್ಕತ್ ಟೀಮ್‌ಗಳು (Behavioural science consultation teams) ನಾರ್ಕೊ ಟೆಸ್ಟ್‌ಗಳನ್ನು ಸಮರ್ಥಿಸುತ್ತವೆ. ವಿಶ್ವಾದ್ಯಂತ ತನಿಖಾ ಸಂಸ್ಥೆಗಳು ನಾರ್ಕೊ ಟೆಸ್ಟ್‌ಗೆ ಶಿಫಾರಸು ನೀಡುತ್ತಿವೆಯಾದರೂ, ಅಸಮರ್ಪಕ ಫಲಿತಾಂಶಗಳು ಬಂದಾಗ, ಇದರ ವಸ್ತುನಿಷ್ಠತೆಗೆ ಸವಾಲಾಗುತ್ತದೆ.
ಸುಳ್ಳು ಪತ್ತೆ ಪರೀಕ್ಷೆ (Lie detector test) ಎಂದರೇನು?
ಸುಳ್ಳು ಪತ್ತೆ ಪರೀಕ್ಷೆಯನ್ನು ಪಾಲಿಗ್ರಾಫ್ (Polygraph) ಎಂದೂ ಕರೆಯಲಾಗುತ್ತದೆ. ಇದೊಂದು ಮೆಶೀನ್ ಅಥವಾ ಸಾಧನವಾಗಿದ್ದು, (device) ಪರೀಕ್ಷೆಗೆ ಒಳಪಡುವ ವ್ಯಕ್ತಿಯ ರಕ್ತದೊತ್ತಡ, ನಾಡಿಮಿಡಿತ, ಉಸಿರಾಟದ ವ್ಯತ್ಯಾಸಗಳನ್ನು ಗುರುತಿಸಿ ದಾಖಲಿಸುತ್ತದೆ. ವಿಚಾರಣೆಯ ವೇಳೆ, ಪ್ರಶ್ನೆಗಳಿಗೆ ಉತ್ತರಿಸುವಾಗ ವ್ಯಕ್ತಿ ಸುಳ್ಳು ಹೇಳಿ ತಡಬಡಿಸುವುದರಿಂದ ಉಂಟಾಗುವ ವ್ಯತ್ಯಾಸಗಳನ್ನು ಈ ಸಾಧನ ಗುರುತಿಸುತ್ತದೆ ಎನ್ನುತ್ತಾರೆ ತಜ್ಞರು. 1924ರಿಂದ ಈ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಆದರೆ ಈಗಲೂ ಇದು ವಿವಾದಾತ್ಮಕವಾಗಿದೆ.
ಪಾಲಿಗ್ರಾಫ್ ನಡೆಸುವುದು ಹೇಗೆ?
ಹೌಸ್ಟಫ್ ವರ್ಕ್ಸ್ ವರದಿಯ ಪ್ರಕಾರ, ನಾಲ್ಕರಿಂದ ಆರು ಸೆನ್ಸರ್‌ಗಳನ್ನು ಪಾಲಿಗ್ರಾಫ್ ಟೆಸ್ಟ್‌ಗೆ ಒಳಪಡುವ ವ್ಯಕ್ತಿಗೆ ಅಳವಡಿಸುತ್ತಾರೆ. ಪಾಲಿಗ್ರಾಫ್ ಮೆಶೀನ್ ಈ ಸೆನ್ಸರ್‌ಗಳು ಕಳಿಸುವ ಸಿಗ್ನಲ್‌ಗಳನ್ನು ದಾಖಲಿಸಿಕೊಳ್ಳುತ್ತದೆ.
ಪರೀಕ್ಷೆಗೆ ಒಳಪಡುವ ವ್ಯಕ್ತಿಯ ಉಸಿರಾಟದ ಏರಿಳಿತ, ನಾಡಿ ಮಿಡಿತ, ರಕ್ತದೊತ್ತಡ, ಬೆವರು, ಕೈ ಕಾಲುಗಳ ಚಲನವಲನಗಳನ್ನು ಗುರುತಿಸಬಹುದು.
ಪರೀಕ್ಷೆ ನಡೆಸುವವರು ಆರಂಭದಲ್ಲಿ ಮೂರು-ನಾಲ್ಕು ಸರಳ ಪ್ರಶ್ನೆಗಳನ್ನು ಕೇಳುತ್ತಾರೆ. ಬಳಿಕ ನಿಜವಾದ ಪ್ರಶ್ನೆಗಳನ್ನು ಕೇಳುತ್ತಾರೆ. ಉತ್ತರಿಸುವಾಗ ವ್ಯಕ್ತಿ ನೀಡುವ ಸಿಗ್ನಲ್‌ಗಳನ್ನು ಸಾಧನ ದಾಖಲಿಸುತ್ತದೆ.