ಬೆಂಗಳೂರು: ಎನ್ಡಿಎ ಮೈತ್ರಿಕೂಟದ ನೂತನ ಸರ್ಕಾರದಲ್ಲಿ ಪ್ರಧಾನಮಂತ್ರಿಯಾಗಿ (Narendra Modi 3.0) ನರೇಂದ್ರ ಮೋದಿ ಭಾನುವಾರ ಸಂಜೆಯ ವೇಳೆ ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಅವರ ಅಭಿಮಾನಿಗಳು ಭರ್ಜರಿ ಸಂಭ್ರಮಾಚರಣೆ ಮಾಡಿದ್ದಾರೆ. ರಾಜ್ಯದ ನಾನಾ ಭಾಗಗಳಲ್ಲಿ ಮೋದಿ ಅಭಿಮಾನಿಗಳು ಬೈಕ್ ರ್ಯಾಲಿ, ಮಾನವ ಸರಪಳಿ, ಮೆರವಣಿಗೆ ನಡೆಸಿದ ಮೋದಿ ಪರ ಜೈಕಾರ ಕೂಗಿದ್ದಾರೆ. ಇನ್ನೂ ಕೆಲವು ಕಡೆ ಮೋದಿಯ ಅಪ್ಪಟ ಅಭಿಮಾನಿಗಳು ಬಿರಿಯಾನಿ, ಹೋಳಿಗೆ ಊಟವನ್ನು ಸಾರ್ವಜನಿಕರಿಗೆ ಹಂಚಿ ಖುಷಿ ಪಟ್ಟಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲೂ ಸಂಭ್ರಮಾಚರಣೆ ನಡಸಲಾಗಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿಯಿಂದ ಬೃಹತ್ ಬೈಕ್ ರ್ಯಾಲಿ ನಡೆದಿದೆ. ಸಾವಿರಾರು ಬೈಕ್ಗಳ ಮೂಲಕ ಹೊಸಪೇಟೆಯ ಪ್ರಮುಖ ರಸ್ತೆಗಳಲ್ಲಿ ಸಾಗಿದ ಅಭಿಮಾನಿಗಳು ಮೋದಿ ಹಾಗೂ ಕೇಂದ್ರ ಸರ್ಕಾರದ ಪರ ಜೈಕಾರ ಕೂಗಿದ್ದಾರೆ. ನಗರದ ಭಟ್ರಳ್ಳಿ ಆಂಜನೇಯ ದೇಗುಲದಿಂದ ಆರಂಭಗೊಂಡ ಬೈಕ್ ರ್ಯಾಲಿ ಹೊಸಪೇಟೆ ತಾಲೂಕಿನ ವಿವಿಧ ಹಳ್ಳಿಗಳಿಗೆ ಸಾಗಿದೆ. ಹಂಪಿಗೆ ಹೋಗುವ ಬೈಪಾಸ್ ರಸ್ತೆ, ರಾಮಾ ಥಿಯೇಟರ್, ಪುನೀತ್ ಸರ್ಕಲ್, ಉದ್ಯೋಗ ಪೆಟ್ರೋಲ್ ಬಂಕ್, ಪಟೇಲ್ ನಗರ ಸೇರಿ ಹತ್ತಾರು ಸರ್ಕಲ್ ಗಳಲ್ಲಿ ಬೈಕ್ ರ್ಯಾಲಿ ಸಾಗಿತು. ಮಳೆಯನ್ನೂ ಲೆಕ್ಕಿಸದೇ ಅವರು ಬೈಕ್ ರ್ಯಾಲಿ ನಡೆಸಲಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಜೆಡಿಎಸ್ ಕಾರ್ಯಕರ್ತರು, ಯುವ ಬ್ರಿಗೇಡ್ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಸಾಥ್ ನೀಡಿದರು. ಇದೇ ವೇಳೆ ಪ್ರಮಾಣ ವಚನ ಸಮಾರಂಭ ನೋಡಲು ಬೃಹತ್ ಎಲ್ಇಡಿ ಪರದೆಯ ವ್ಯವಸ್ಥೆಯೂ ಮಾಡಲಾಗಿದೆ. ಹೊಸಪೇಟೆಯ ಬಿಜೆಪಿ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: Modi 3.0 Cabinet: ಮತ್ತೆ ಮಂತ್ರಿಯಾಗಿ ದಾಖಲೆ ಬರೆದ ಪ್ರಲ್ಹಾದ್ ಜೋಶಿ; ಬೆನ್ನು ತಟ್ಟಿ ಆಶೀರ್ವದಿಸಿದ ಬಿಎಸ್‌ವೈ
ರಾಮನಗರದಲ್ಲಿ ಕೇಕ್ ಕತ್ತರಿಸಿದ ಕಾರ್ಯಕರ್ತರು
ರಾಮನಗರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳು ಕೇಕ್ ಕತ್ತರಿಸಿ ಹಾಗೂ ಸಿಹಿ ಹಂಚಿ ಪರಸ್ಪರ ಶುಭ ಕೋರಿದ್ದಾರೆ. ರಾಮನಗರದ ಐಜೂರು ವೃತ್ತದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಕಾರ್ಯಕರ್ತರು ಕಾರ್ಯಕ್ರಮ ಆಯೋಜಿಸಿದ್ದರು. ಮೋದಿ 3.0 ಎಂಬ ಕೇಕ್ ಕತ್ತರಿಸಿ ಪರಸ್ಪರ ಸಂಭ್ರಮಿಸಿದ್ದಾರೆ
ಚಿತ್ರದುರ್ಗದಲ್ಲಿ ವಿಶೇಷ ಪೂಜೆ
ಮೂರನೇ ಬಾರಿಗೆ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಶುಭ ಕೋರಲು ಚಿತ್ರದುರ್ಗ ಬಿಜೆಪಿ ಘಟಕದಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ಮಾಜಿ ಶಾಸಕ ತಿಪ್ಪಾರೆಡ್ಡಿ ಹಾಗೂ ಕಾರ್ಯಕರ್ತರಿಂದ ಪೂಜೆ ಆಯೋಜನೆ ಮಾಡಲಾಗಿತ್ತು. ನಗರದ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ಕಾರ್ಯಕರ್ತರು ಸುಭದ್ರ ಸರ್ಕಾರಕ್ಕಾಗಿ ಪ್ರಾರ್ಥನೆ ಮಾಡಿದರು. ಈ ವೇಳೆ ಮೋದಿ ಭಾವಚಿತ್ರ ಹಿಡಿದು ಜೈಕಾರ ಕೂಗಿದರು.
ಉಜ್ಜಯಿನಿ ಮಠದ ಶ್ರೀಗಳಿಂದ ಶುಭಾಶಯ
ಕೊಟ್ಟೂರು ತಾಲೂಕಿನಲ್ಲಿ ಉಜ್ಜಯಿನಿ ಮಠದ ಶ್ರೀಗಳು ಮೋದಿಗೆ ಶುಭಾಶಯ ಕೋರಿದರು. ಭಾರತ ದೇಶದ ನೇತೃತ್ವವನ್ನು ಮೋದಿ ಅವರು ಮೂರನೇ ಬಾರಿಗೆ ಹಿಡಿಯುತ್ತಿದ್ದಾರೆ. ಭಾರತ ದೇಶಕ್ಕೆ ಸಾವಿರಾರು ವರ್ಷಗಳ ಸನಾತನ ಧರ್ಮದ ಹಿನ್ನೆಲೆ ಇದೆ. ವಿವಿಧತೆಯಲ್ಲಿ ಏಕತೆ ಕಾಣುವ ದೇಶ ಭಾರತ. ಭಾರತ ದೇಶಕ್ಕಾಗಿ ಪ್ರಧಾನಿ ಮೋದಿ ಅವರು ತಮ್ಮದೇ ಆದ ಕನಸು ಕಂಡಿದ್ದಾರೆ ಮೂರನೇ ಅವಧಿಯಲ್ಲಿ ಆ ಎಲ್ಲಾ ಕನಸುಗಳು ಈಡೇರಲಿ ಎಂದು ಅವರು ಆಶಯ ಕೋರಿದರು.
ಹಾವೇರಿಯಲ್ಲಿ ಹೋಳಿಗೆ ಊಟ
ನರೇಂದ್ರ ಮೋದಿ ಮೂರನೆ ಬಾರಿ ಪ್ರಧಾನಿಯಾಗುತ್ತಿರುವುದರ ಖುಷಿಗೆ ಅಭಿಮಾನಿಗಳು ಹೊಳಿಗೆ ಊಟ ವಿತರಿಸಿದರು. ಹಾವೇರಿ ಜಿಲ್ಲೆಯ ರಾಣಿಬೇನ್ನೂರು ತಾಲೂಕಿನ ಹಲಗೇರಿಯಲ್ಲಿ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಮೋದಿ ಟಿ ಸ್ಟಾಲ್ ಮಾಲೀಕರು ಮತ್ತು ಅಭಿಮಾನಿಗಳಿಂದ ಹೋಳಿಗೆ ಊಟ ವಿತರಣೆ ಮಾಡಲಾಯಿತು. ಬರೊಬ್ಬರಿ ನಾಲ್ಕು ಸಾವಿರ ಮಂದಿಗೆ ಹೋಳಿಗೆ ಊಟ ವಿತರಣೆ ಮಾಡಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಬಿರಿಯಾನಿ ವಿತರಣೆ
ಪ್ರಧಾನಿ ಮೋದಿ ಮೂರನೇ ಬಾರಿ ಅಧಿಕಾರಕ್ಕೆ ಏರಿದ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಬಿರಿಯಾನಿ ವಿತರಣೆ ಮಾಡಲಾಯಿತು. ಜತೆಗೆ ಸಿಹಿಯೂ ಹಂಚಲಾಯಿತು. ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಸಿಹಿ ಹಂಚಿ ಸಂಭ್ರಮಿಸಲಾಯಿತು. ಚಿಂತಾಮಣಿ ನಗರದ ಹೃದಯಭಾಗಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಗೆ ಇಂಧನ ಹಾಕಿಸಲು ಬಂದವರಿಗೆ ಪೆಟ್ರೋಲ್ ಬಂಕ್ ಮಾಲೀಕರಿಂದ ಸಿಹಿ ಹಂಚಿಕೆ ಮಾಡಿದರು. ಅನುಪಮಾರೆಡ್ಡಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮಾಲೀಕ ಬಿರಿಯಾನಿ ಹಂಚಿದ್ದರು.