ಬೆಂಗಳೂರು: ನರೇಂದ್ರ ಮೋದಿ ಮತ್ತೊಂದು ಅವಧಿಗೆ ಭಾರತದ ಪ್ರಧಾನಿಯಾಗುವುದು (Narendra Modi 3.0) ಪಾಕಿಸ್ತಾನದ ಸರ್ಕಾರಕ್ಕೆ ಇಷ್ಟವಿರಲಿಲ್ಲ. ಹಿಂದೂಸ್ತಾನದಲ್ಲೀಗ ಮೋದಿ ಯುಗ, ‘ಮೋದಿಯ ಭಾರತ’ ಎಂದು ಆಗಾಗ ಕರೆಯುತ್ತಿದ್ದರು. ಚುನಾವಣೆಯಲ್ಲಿ ಅವರು ಮತ್ತೊಂದು ಬಾರಿ ಆರಿಸಿ ಬರದಿರಲಿ ಎಂದು ಆಶಿಸಿದ್ದರು. ಅದರೆ, ಪಾಕ್ನ ಲೆಕ್ಕಾಚಾರ ಉಲ್ಟಾ ಆಗಿದೆ. ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನೀಗ ಶುಭಾಶಯ ಹೇಳದೆ ವಿಧಿಯಿಲ್ಲ. ಹೀಗಾಗಿ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅಭಿನಂದನೆ ಸಲ್ಲಿಸಿದ್ದಾರೆ. “ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ @narendramodi ಅವರಿಗೆ ಅಭಿನಂದನೆಗಳು” ಎಂದು ಷರೀಫ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.
Felicitations to @narendramodi on taking oath as the Prime Minister of India.
— Shehbaz Sharif (@CMShehbaz) June 10, 2024
ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್ ಅವರು ಶನಿವಾರ ಪ್ರಧಾನಿ ಮೋದಿಯವರನ್ನು ಅಭಿನಂದಿಸುವ ಬಗ್ಗೆ ಕೇಳಿದಾಗ, “ಅವರ ಚುನಾವಣಾ ಪ್ರಕ್ರಿಯೆಯ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆಗಳನ್ನು ಹೊಂದಿಲ್ಲ” ಎಂದು ಹೇಳಿದ್ದರು. ಹೊಸ ಭಾರತ ಸರ್ಕಾರ ಅಧಿಕೃತವಾಗಿ ಪ್ರಮಾಣವಚನದ ಪ್ರಕಟಣೆ ಹೊರಡಿಸದ ಕಾರಣ, ಅಭಿನಂದನಾ ಸಂದೇಶಗಳನ್ನು ಚರ್ಚಿಸಲು ಕಾಲ ಪಕ್ವವಾಗಿಲ್ಲ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ, ಲೋಕಸಭೆ ಚುನಾವಣೆಯಲ್ಲಿ 543 ಸ್ಥಾನಗಳಲ್ಲಿ 293 ಸ್ಥಾನಗಳನ್ನು ಗೆಲ್ಲುವ ಮೂಲಕ ನಿರ್ಣಾಯಕ ಗೆಲುವು ಸಾಧಿಸಿದೆ.
“ಪಾಕಿಸ್ತಾನವು ಯಾವಾಗಲೂ ಭಾರತ ಸೇರಿದಂತೆ ತನ್ನ ಎಲ್ಲಾ ನೆರೆಹೊರೆಯವರೊಂದಿಗೆ ಸಹಕಾರ ಸಂಬಂಧವನ್ನು ಬಯಸುತ್ತದೆ. ಜಮ್ಮು ಮತ್ತು ಕಾಶ್ಮೀರದ ಪ್ರಮುಖ ವಿವಾದ ಸೇರಿದಂತೆ ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ರಚನಾತ್ಮಕ ಮಾತುಕತೆ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ನಾವು ನಿರಂತರವಾಗಿ ಪ್ರತಿಪಾದಿಸಿದ್ದೇವೆ” ಎಂದು ಬಲೂಚ್ ಹೇಳಿದ್ದರು.
ಇದನ್ನೂ ಓದಿ: Narendra Modi 3.0 : ಮೋದಿ ಅಧಿಕಾರಕ್ಕೆ ಬಾರದಿರಲಿ ಎಂದು ಕಾದು ಕೂತು, ಕೊನೆಗೂ ಅಭಿನಂದನೆ ತಿಳಿಸಿದ ಪಾಕಿಸ್ತಾನ!
ಪಾಕಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಬಯಸುವುದಾಗಿ ಭಾರತ ಸಮರ್ಥಿಸಿಕೊಂಡಿದೆ, ಇಸ್ಲಾಮಾಬಾದ್ ಮೊದಲು ಭಯೋತ್ಪಾದನೆ ಮತ್ತು ಹಗೆತನ ಮುಕ್ತ ವಾತಾವರಣವನ್ನು ಸೃಷ್ಟಿಸಬೇಕು ಎಂದು ಒತ್ತಿಹೇಳಿದೆ.