ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok Sabha election 2024) ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ (NDA Government) ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. 290ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುವ ಮೂಲಕ ಮೂರನೇ ಬಾರಿ ಪ್ರಧಾನಿ ಮೋದಿ (Narendra Modi) ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಈ ಚುನಾವಣೆಯ ಫಲಿತಾಂಶದ (Election Results 2024) ಮೂಲಕ ಮೋದಿ ಪ್ರಭಾವ ದೇಶದಲ್ಲಿ ಕುಸಿದಿದೆಯೇ ಎಂಬ ಚರ್ಚೆ ಆರಂಭವಾಗಿದೆ. ಅದಕ್ಕಿಂತಲೂ ಎರಡು ಅವಧಿಗೆ ತಾವು ಪ್ರತಿನಿಧಿಸಿದ್ದ ವಾರಾಣಸಿ ಕ್ಷೇತ್ರದಲ್ಲಿಯೂ ಅವರ ಪ್ರಭಾವ ಬಹುತೇಕ ಮಸುಕಾಗಿದೆ ಎಂಬುದೇ ಚರ್ಚೆಯ ಪ್ರಮುಖ ವಸ್ತು.
ಪ್ರಧಾನಿ ಮೋದಿ ಅವರು 2014ರ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಅಜಯ್ ರಾಯ್ ವಿರುದ್ಧ 1.5 ಲಕ್ಷ ಮತಗಳ ಅಂತರದಿಂದ ಮಾತ್ರ ಗೆದ್ದಿದ್ದಾರೆ. ವಾಸ್ತವದಲ್ಲಿ ಅವರ ಪಾಲಿಗೆ ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ವಿಜಯ. ಹೀಗಾಗಿ ಅವರ ಅಭಿಮಾನಿಗಳು ಹಾಗೂ ವಾರಾಣಸಿ ಮತದಾರರ ಪಾಲಿಗೆ ಹೆಮ್ಮೆಯ ಸಂಗತಿ. ಪ್ರಧಾನಿ ಮೋದಿ 6,12,970 ಮತಗಳನ್ನು ಪಡೆದಿದ್ದರೆ ಅವರ ಸಮೀಪದ ಪ್ರತಿಸ್ಪರ್ಧಿ ಅಜಯ್ ರಾಯ್ 460457 ಮತಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು ಮತಗಳಲ್ಲಿ ಮೋದಿ ಪಾಲಿ ಶೇಕಡಾ 54. 24 ಹಾಗೂ ಪ್ರತಿಸ್ಪರ್ಧಿ ಪಡೆದ ಶೇಕಡಾವಾರು ಮತ 40.74. ಆದರೆ, ಸಾಮಾನ್ಯ ಅಭ್ಯರ್ಥಿಯೊಬ್ಬ ಇಷ್ಟೊಂದು ಅಂತರದಿಂದ ಗೆಲ್ಲುವುದು ಸಾಮಾನ್ಯ ವಿಷಯವಲ್ಲ. ಆದರೆ, ಪ್ರಧಾನಿ ಅಭ್ಯರ್ಥಿಯಾಗಿ ಅವರ ಪಡೆದ ಅಂತರ ಕಡಿಮೆ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: Election Results 2024: ಕಂಗನಾ, ಸುರೇಶ್ ಗೋಪಿ, ಶತ್ರುಘ್ನ ಸಿನ್ಹಾ ಸೇರಿ ಹಲವು ನಟ–ನಟಿಯರ ಗೆಲುವು
ಪ್ರಧಾನಿ ಮೋದಿ ಅವರು ಎರಡನೇ ಅವಧಿಗೆ (2019) ವಾರಾಣಸಿಯಲ್ಲಿ 4.79 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಆ ಅವಧಿಯಲ್ಲಿ ಅವರು ಸಮೀಪದ ಸ್ಪರ್ಧಿ ಶಾಲಿನಿ ಯಾದವ್ ಅವರನ್ನು ಮಣಿಸಿದ್ದರು. ಅಂತೆಯೇ 2014ರಲ್ಲಿ 3.72 ಲಕ್ಷ ಮತಗಳ ಅಂತರದಲ್ಲಿ ಹಾಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಗೆಲುವು ಕಂಡಿದ್ದರು. 2014ರಲ್ಲಿ ಭರ್ಜರಿ ಅಂತರದಿಂದಲೇ ಗೆದ್ದಿದ್ದ ಅವರು 2019ರಲ್ಲಿ ಭಾರೀ ಅಂತರದ ವಿಜಯ ದಾಖಲಿಸಿದ್ದರು. ಈ ಫಲಿತಾಂಶಗಳು ಮೋದಿಯ ಗೌರವ ಹಾಗೂ ಘನತೆಗೆ ಪೂರಕವಾಗಿತ್ತು. ಪ್ರಧಾನಿ ಮೋದಿ ಎರಡನೇ ಅವಧಿಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದರು. ಅಂತೆಯೇ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವೂ ಅಲ್ಲಿ ದೊಡ್ಡ ಸುಧಾರಣೆ ಮಾಡಿದೆ.
ಸಾಕಷ್ಟು ಅಭಿವೃದ್ಧಿ ಕಾರ್ಯಗಳು
ನರೇಂದ್ರ ಮೋದಿ ಕಳೆದ ಎರಡು ಅವಧಿಗಳಲ್ಲಿ ವಾರಾಣಸಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ವಾಸ್ತವಾಗಿ ಇವೆಲ್ಲವೂ ಮೋದಿಗೆ ನೆರವಾಗಬೇಕಾಗಿತ್ತು. ಪ್ರಧಾನಿಯಾಗಿ ಅವರು ತಾವು ಪ್ರತಿನಿಧಿಸುವ ಕ್ಷೇತ್ರವನ್ನು ಜೋಪಾನವಾಗಿ ನೋಡಿಕೊಂಡಿದ್ದರು. ಆದರೂ ಅವರು ದೊಡ್ಡ ಅಂತರದ ಗೆಲುವನ್ನು ಮತ್ತೊಂದು ದಾಖಲಿಸಲು ವಿಫಲಗೊಂಡಿದ್ದಾರೆ.
ಆರಂಭದಲ್ಲಿ ಹಿನ್ನಡೆ
2014ರ ಮತ ಎಣಿಕೆ ವೇಳೆ ನರೇಂದ್ರ ಮೋದಿ ಆರಂಭಿಕ ಹಂತದಲ್ಲಿ ಹಿನ್ನಡೆಗೆ ಒಳಗಾಗಿದ್ದರು. ಆರಂಭಿಕ ಸುತ್ತಿನ ವೇಳೆ ಅವರು 6000 ಮತಗಳ ಹಿನ್ನಡೆಯನ್ನೂ ಅನುಭವಿಸಿದ್ದರು. ಇದು ಮತ ಎಣಿಕೆಯನ್ನು ಕುತೂಹಲದಿಂದ ನೋಡುತ್ತಿದ್ದ ಜನರಿಗೆ ಅಚ್ಚರಿಯ ಸಂಗತಿಯಾಗಿತ್ತು. ಆದರೆ, ಮತ್ತೆ ಸುಧಾರಿಸಿಕೊಂಡು ಮುನ್ನಡೆದ ನರೇಂದ್ರ ಮೋದಿ ಗೆಲುವು ಸಾಧಿಸಿದ್ದಾರೆ.
ಯಾರಿವರು ಮೋದಿ ಪ್ರತಿಸ್ಪರ್ಧಿ ಅಜಯ್ ರಾಯ್?
ಮೋದಿಯ ಪ್ರತಿಸ್ಪರ್ಧಿ ಅಜಯ್ ರಾಯ್ ಮೂಲದಲ್ಲಿ ಎಬಿವಿಪಿ ಹಾಗೂ ಆರ್ಎಸ್ಎಸ್ನವರು. ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದವರು. ಅವರು ಉತ್ತರ ಪ್ರದೇಶ ಬಿಜೆಪಿಯ ರಾಜ್ಯಾಧ್ಯಕ್ಷರೂ ಆಗಿದ್ದರು. ಅಲ್ಲದೆ, ಉತ್ತರ ಪ್ರದೇಶ ವಿಧಾನಸಭೆಗೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ, 2008ರಲ್ಲಿ ಅವರಿಗೆ ಬಿಜೆಪಿ ಮತ್ತೆ ಟಿಕೆಟ್ ನಿರಾಕರಿಸಿತ್ತು. ಈ ವೇಳೆ ಮೂಲ ಪಕ್ಷವನ್ನು ತೊರೆದು ಕೈ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
ಅಜಯ್ ರಾಯ್ 2014ರಲ್ಲಿ ಮತ್ತು 2019ರಲ್ಲಿ ವಾರಾಣಸಿಯಿಂದಲೇ ಸ್ಪರ್ಧಿಸಿದ್ದರು. ಆದರೆ ಎರಡೂ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದೀಗ ಮೂರನೇ ಬಾರಿಗೂ ಸೋತಿದ್ದಾರೆ. ಆದರೆ ಈ ಬಾರಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಜತೆಗೆ ಒಂದು ಹಂತರದಲ್ಲಿ ಮೋದಿಗೆ ಆತಂಕ ಹುಟ್ಟಿಸಿದ್ದರು