Site icon Vistara News

Narendra Modi: ಹತ್ತು ವರ್ಷ ಪ್ರಧಾನಿಯಾಗಿರುವ ನರೇಂದ್ರ ಮೋದಿ ಆಸ್ತಿ ಎಷ್ಟಿದೆ? ಪ್ರಮಾಣಪತ್ರದಲ್ಲಿದೆ ಮಾಹಿತಿ

Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ವಾರಾಣಸಿ ಲೋಕ ಸಭಾ ಕ್ಷೇತ್ರದಲ್ಲಿ ಮೂರನೇ ಬಾರಿ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಲ್ಲಿಸಿದ್ದ ಅಫಿಡವಿಟ್​ನಲ್ಲಿ ಅವರು ತಮ್ಮ ಆಸ್ತಿ ವಿವರಗಳನ್ನು ನೀಡಿದ್ದಾರೆ. ಅದರ ಪ್ರಕಾರ ಅವರು ಒಟ್ಟು 3 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಎರಡು ಬಾರಿ ಪ್ರಧಾನಿ ಆಗಿರುವ ಬಳಿಕವೂ ಅವರು ಯಾವುದೇ ಭೂಮಿ, ಮನೆ ಅಥವಾ ಕಾರುಗಳನ್ನು ಹೊಂದಿಲ್ಲ. ಅವರು ತಮ್ಮ ಉಳಿಕೆಯ ಎಲ್ಲ ಮಾಹಿತಿಗಳನ್ನು ಚುನಾವಣಾ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ.

ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ಅಫಿಡವಿಟ್​ನಲ್ಲಿ ಅವರು ಒಟ್ಟು 3.02 ಕೋಟಿ ರೂ.ಗಳ ಆಸ್ತಿ ಪ್ರಕಟಿಸಿದ್ದಾರೆ. ಅದರಲ್ಲಿ ಬಹುಪಾಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದೆ. ಅಂದರೆ 2.86 ಕೋಟಿ ರೂ.ಗಳ ಸ್ಥಿರ ಠೇವಣಿ ಇಟ್ಟಿದ್ದಾರೆ. (Fixed Deposit) ಅವರ ಕೈಯಲ್ಲಿ ಒಟ್ಟು ₹ 52,920 ನಗದು ಗಾಂಧಿನಗರ ಮತ್ತು ವಾರಣಾಸಿಯ ಎರಡು ಬ್ಯಾಂಕ್ ಖಾತೆಗಳಲ್ಲಿ ಉಳಿದ ₹ 80,304 ಉಳಿಕೆಯಿದೆ.

ಪ್ರಧಾನಿ ಮೋದಿಯ ನಾಮಪತ್ರದ ​ ವಿವರ ಇಲ್ಲಿದೆ

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳಲ್ಲಿ ಪ್ರಧಾನಿ 9.12 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ ಮತ್ತು 2.68 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ. ಅವರ ಒಟ್ಟು ಆದಾಯ 2018-19ರಲ್ಲಿ ಇದ್ದ 11.14 ಲಕ್ಷ ರೂ.ಗಳಿಂದ 2022-23ರಲ್ಲಿ 23.56 ಲಕ್ಷ ರೂಪಾಯಿಗೆ ಏರಿದೆ.

ಶೈಕ್ಷಣಿಕ ಅರ್ಹತೆ

ಪ್ರಧಾನಿ ಮೋದಿ 1978 ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಮತ್ತು 1983ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಆರ್ಟ್ಸ್ ಪೂರ್ಣಗೊಳಿಸಿದ್ದೇನೆ ಎಂದು ಪ್ರಧಾನಿ ಘೋಷಿಸಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: PM Narendra Modi: ಪಿಎಂ ಮೋದಿ ನಾಮಪತ್ರ ಅನುಮೋದಿಸಿದ ನಾಲ್ವರ ಹಿನ್ನೆಲೆ ಏನು?

ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗುತ್ತಿರುವ ವಾರಾಣಸಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, “ನಾನು ಭಾವಪರವಶನಾಗಿದ್ದೇನೆ. ನಿಮ್ಮ ಪ್ರೀತಿಯ ನೆರಳಿನಲ್ಲಿ 10 ವರ್ಷಗಳು ಹೇಗೆ ಕಳೆದವು ಎಂದು ನನಗೆ ತಿಳಿದಿರಲಿಲ್ಲ. ‘ಆಜ್ ಮಾ ಗಂಗಾ ನೆ ಮುಜೆ ಗಾಡ್ ಲೇ ಲಿಯಾ ಹೈ’ (ಇಂದು, ತಾಯಿ ಗಂಗಾ ನನ್ನನ್ನು ದತ್ತು ತೆಗೆದುಕೊಂಡಿದ್ದಾಳೆ) ಎಂದು ಹೇಳಿದ್ದಾರೆ. ವಾರಣಾಸಿಯಲ್ಲಿ ಜೂನ್ 1 ರಂದು ಏಳನೇ ಹಂತದ ಮತದಾನ ನಡೆಯಲಿದೆ.

ನಾಮಪತ್ರ ಸಲ್ಲಿಕೆ ವೇಳೆ ಪಿಎಂ ಮೋದಿ ಪಕ್ಕದಲ್ಲಿ ಕುಳಿತಿದ್ದ ಸಾಧು ಯಾರು?

ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಮಂಗಳವಾರ ವಾರಾಣಾಸಿ ಲೋಕಸಭೆ ಕ್ಷೇತ್ರದಿಂದ ನಾಮಪತ್ರ (Narendra Modi nomination) ಸಲ್ಲಿಸಿದರು. ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರ ಜೊತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಸೇರಿದಂತೆ ಇನ್ನೂ ಹಲವರಿದ್ದರು. ಆದರೆ ಮುಖ್ಯವಾಗಿ ಒಂದು ಮುಖ ಎಲ್ಲರ ಗಮನ ಸೆಳೆಯಿತು. ಅದು ಮೋದಿಯವರ ಪಕ್ಕದಲ್ಲಿಯೇ ಕುಳಿತಿದ್ದ, ಗಡ್ಡಧಾರಿ ಸಾಧು. ಮೋದಿ ಹಾಗೂ ಈ ವ್ಯಕ್ತಿ ಆತ್ಮೀಯವಾಗಿ ಮಾತನಾಡಿಕೊಳ್ಳುತ್ತಿದ್ದುದು ಕ್ಯಾಮೆರಾದಲ್ಲಿ ಸೆರೆಯಾಯಿತು.

ಹಾಗಾದರೆ ಅವರು ಯಾರು? ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ಸಲ್ಲಿಸಿದ ನಾಮಪತ್ರವನ್ನು ಅನುಮೋದಿಸಿದ ನಾಲ್ವರಲ್ಲಿ ಈ ಸಾಧುವೂ ಒಬ್ಬರು. ಅವರ ಹೆಸರು ಪಂಡಿತ ಗಣೇಶ್ವರ ಶಾಸ್ತ್ರಿ (Pandit Ganeshwar Shastri). ಇತರ ಮೂವರೆಂದರೆ ಬೈಜನಾಥ್ ಪಟೇಲ್, ಲಾಲ್‌ಚಂದ್ ಕುಶ್ವಾಹಾ ಮತ್ತು ಸಂಜಯ್ ಸೋಂಕರ್.

ಯಾರು ಈ ಗಣೇಶ್ವರ ಶಾಸ್ತ್ರಿ? ಇವರು ಇತ್ತೀಚೆಗೆ ನಡೆದ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಸಿದ್ಧ ವಿದ್ವಾಂಸರು. ವಿದ್ವಾಂಸ ರಾಜೇಶ್ವರ ಶಾಸ್ತ್ರಿಯವರ ಎರಡನೇ ಮಗ. ವಿದ್ವಾನ್‌ ಗಣೇಶ್ವರ ಶಾಸ್ತ್ರಿ ಅವರು ಕಾಶಿಯಲ್ಲಿ ನೆಲೆಸಿದ್ದು, ಧರ್ಮ ಪ್ರಚಾರ ಮತ್ತು ಬೋಧನೆಗೆ ಜೀವನವನ್ನು ಸಮರ್ಪಿಸಿಕೊಂಡಿದ್ದಾರೆ. ಅವರು ಸಾಂಗ್ವೇದ ವಿದ್ಯಾಲಯದಲ್ಲಿ ಗೀರ್ವಾಣವಾಗ್‌ವರ್ಧಿನಿ ಸಭೆಯ ನಿರ್ಧಾರಗಳನ್ನು ಶ್ರದ್ಧೆಯಿಂದ ಅನುಸರಿಸುತ್ತಾರೆ ಮತ್ತು ಜ್ಯೋತಿಷ್ಯ, ಆಯುರ್ವೇದ ಮತ್ತು ಆಚರಣೆಗಳಲ್ಲಿ ತಮ್ಮ ಪರಿಣತಿಯ ಮೂಲಕ ಜನರಿಗೆ ಸಹಾಯ ಮಾಡುತ್ತಿರುತ್ತಾರೆ.

ಜನವರಿ 22ರಂದು ನಡೆದ ಅಯೋಧ್ಯೆ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭವು ಪಂಡಿತ ಗಣೇಶ್ವರ ಶಾಸ್ತ್ರಿ ದ್ರಾವಿಡ ಅವರು ನಿರ್ಧರಿಸಿದ 84 ಸೆಕೆಂಡುಗಳ ಕಾಲ ಶುಭ ಮುಹೂರ್ತದಲ್ಲಿ ನಡೆದಿತ್ತು. ಈ ಸಮಯವನ್ನು ರಾಮ ಮಂದಿರದ ಅಡಿಪಾಯ ಹಾಕಲು ಸಹ ಬಳಸಲಾಗಿತ್ತು. ಇದು ಈ ಮಂದಿರ ಯೋಜನೆಯಲ್ಲಿ ಈ ವಿದ್ವಾಂಸರು ಎಷ್ಟು ಆಳವಾಗಿ ತೊಡಗಿಕೊಂಡಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತದೆ.

ಗಣೇಶ್ವರ ಶಾಸ್ತ್ರಿ ಅವರ ಪೂರ್ವಜರು ಗಂಗಾನದಿಯ ದಡದ ಕಾಶಿಯ ರಾಮಘಾಟ್ ಪ್ರದೇಶದಲ್ಲಿ ನೆಲೆಸಿದ್ದಾರೆ. ಗಣೇಶ್ವರ ಶಾಸ್ತ್ರಿ ಹುಟ್ಟಿದ್ದು ಇಲ್ಲೇ. ಇವರ ಕುಟುಂಬ ದಕ್ಷಿಣ ಭಾರತದಿಂದ ಬಂದು ಕಾಶಿಯಲ್ಲಿ ನೆಲೆಸಿದೆ. ಅವರ ಹಿರಿಯ ಸಹೋದರ, ಗೌರವಾನ್ವಿತ ವಿದ್ವಾಂಸರಾದ ಪಂಡಿತ ವಿಶ್ವೇಶ್ವರ ಶಾಸ್ತ್ರಿ ಅವರು ಕಾಶಿಯಲ್ಲಿ ವಾಸಿಸುತ್ತಿದ್ದಾರೆ. ಶೈಕ್ಷಣಿಕ ಶ್ರೇಷ್ಠತೆ ಈ ಕುಟುಂಬದ ಪರಂಪರೆಯಾಗಿದೆ.

ಮೋದಿ ನಾಮಪತ್ರ ಅನುಮೋದಿಸಿದ ಇನ್ನು ಮೂವರೆಂದರೆ ಬೈಜನಾಥ್ ಪಟೇಲ್, ಹಿರಿಯ RSS ಸ್ವಯಂಸೇವಕ, OBC ಸಮುದಾಯಕ್ಕೆ ಸೇರಿದವರು. ಲಾಲ್‌ಚಂದ್ ಕುಶ್ವಾಹಾ, ಇವರು ಕೂಡ ಒಬಿಸಿ ಸಮುದಾಯದವರು. ಸಂಜಯ್ ಸೋಂಕರ್, ಇವರು ದಲಿತ ಸಮುದಾಯದಿಂದ ಬಂದವರು

Exit mobile version