ನವದೆಹಲಿ: ರಸ್ತೆಗಳನ್ನು ಆರ್ಥಿಕತೆಯ ನರನಾಡಿ ಎಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ದೇಶಕ್ಕೆ ಇವು ನೀಡುವ ಕೊಡುಗೆ ಅಮೂಲ್ಯವಾದುದು. ಇದಕ್ಕಾಗಿಯೇ ಸರ್ಕಾರಗಳು ರಾಷ್ಟ್ರೀಯ ಹೆದ್ದಾರಿ (National Highways), ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡುತ್ತವೆ. ಭಾರತವು ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವನ್ನು ಹೊಂದಿದೆ. ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿಯ ಪ್ರಕಾರ, ಭಾರತವು 599 ರಾಷ್ಟ್ರೀಯ ಹೆದ್ದಾರಿಗಳ ಸಂಘಟಿತ ಜಾಲವನ್ನು ನಿರ್ವಹಿಸುತ್ತದೆ. ಈ ಪ್ರಮುಖ ಮಾರ್ಗಗಳು ದೇಶದ ಕೃಷಿ, ಕೈಗಾರಿಕಾ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಭಾರತದಲ್ಲಿನ ಟಾಪ್ 10 ರಾಷ್ಟ್ರೀಯ ಹೆದ್ದಾರಿಗಳ ವಿವರ ಇಲ್ಲಿದೆ.
ಎನ್‌ಎಚ್ 44
ಎನ್‌ಎಚ್ 44 ಬರೋಬ್ಬರಿ 3,745 ಕಿ.ಮೀ. ಉದ್ದಕ್ಕೆ ವ್ಯಾಪಿಸಿದೆ. ಈ ಮೂಲಕ ಇದು ದೇಶದ ಅತೀ ಉದ್ದದ ರಾಷ್ಟ್ರೀಯ ಹೆದ್ದಾರಿ ಎನಿಸಿಕೊಂಡಿದೆ. ಭಾರತದ ಉತ್ತರದ ತುದಿ ಜಮ್ಮು & ಕಾಶ್ಮೀರದ ಶ್ರೀನಗರದಿಂದ ದಕ್ಷಿಣದ ತುದಿ ಕನ್ಯಾಕುಮಾರಿಯವರೆಗೆ ಈ ರಸ್ತೆ ಹಾದು ಹೋಗಿದೆ.
ಹಾದು ಹೋಗುವ ರಾಜ್ಯಗಳು: ಜಮ್ಮು & ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು.
ಎನ್‌ಎಚ್ 27
ಎರಡನೇ ಅತೀ ದೊಡ್ಡ ರಾಷ್ಟ್ರೀಯ ಹೆದ್ದಾರಿ ಇದು. ಸುಮಾರು 3,507 ಕಿ.ಮೀ. ಉದ್ದದ ಈ ಹೈವೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ(MoRTH) ನಿರ್ವಹಿಸುತ್ತದೆ. ಇದು ಭಾರತದ ಪೂರ್ವ-ಪಶ್ಚಿಮವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಗುಜರಾತ್‌ನ ಪೋರ್‌ಬಂದರ್‌ನಿಂದ ಪ್ರಾರಂಭವಾಗಿ ಅಸ್ಸಾಂನ ಸಿಲ್ಚಾರ್‌ನಲ್ಲಿ ಕೊನೆಗೊಳ್ಳುತ್ತದೆ.
ಹಾದು ಹೋಗುವ ರಾಜ್ಯಗಳು: ಗುಜರಾತ್, ರಾಜಸ್ಥಾನ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ.
ಎನ್‌ಎಚ್ 48
ದಿಲ್ಲಿಯಿಂದ ಚೆನ್ನೈಯನ್ನು ಸಂಪರ್ಕಿಸುವ ಈ ಹೆದ್ದಾರಿ 2,807 ಕಿ.ಮೀ. ಉದ್ದವಿದೆ. ಇದು ಅತ್ಯಂತ ಜನ ನಿಬಿಡ ಹೆದ್ದಾರಿಗಳಲ್ಲಿ ಒಂದು.
ಹಾದು ಹೋಗುವ ರಾಜ್ಯಗಳು: ದೆಹಲಿ, ಹರಿಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು.
ಎನ್‌ಎಚ್ 52
2,317 ಕಿ.ಮೀ. ಉದ್ದದ ಈ ರಾಷ್ಟ್ರೀಯ ಹೆದ್ದಾರಿಯು ಕರ್ನಾಟಕದ ಅಂಕೋಲಾದಲ್ಲಿ ಆರಂಭವಾಗುತ್ತದೆ. ಭಾರತದಲ್ಲಿ ಅಸ್ತಿತ್ವದಲ್ಲಿರುವ ಅನೇಕ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಯೋಜಿಸುವ ಮೂಲಕ ಈ ಹೆದ್ದಾರಿ ಅಸ್ತಿತ್ವಕ್ಕೆ ಬಂದಿದೆ. ಇದುಅಂಕೋಲಾದಿಂದ ಪಂಜಾಬ್‌ನ ಸಂಗ್ರೂರ್ ಅನ್ನು ಸಂಪರ್ಕಿಸುತ್ತದೆ.
ಹಾದು ಹೋಗುವ ರಾಜ್ಯಗಳು: ಪಂಜಾಬ್, ಹರಿಯಾಣ, ರಾಜಸ್ಥಾನ, ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ.
ಎನ್‌ಎಚ್ 30
2,040 ಕಿ.ಮೀ. ಉದ್ದದ ಈ ರಾಷ್ಟ್ರೀಯ ಹೆದ್ದಾರಿ ಉತ್ತರಾಖಂಡದ ಸಿತ್ರಂಗಿಯಿಂದ ಆರಂಭವಾಗಿ ಆಂಧ್ರ ಪ್ರದೇಶದ ಇಬ್ರಾಹಿಂ ಪಟ್ಟಣಕ್ಕೆ ತಲುಪುತ್ತದೆ. ಇದು ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢದ ಹಲವು ಗ್ರಾಮೀಣ ಪ್ರದೇಶಗಳ ಮೂಲಕ ಹಾದು ಹೋಗುತ್ತದೆ.
ಹಾದು ಹೋಗುವ ರಾಜ್ಯಗಳು: ಉತ್ತರಾಖಂಡ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಛತ್ತೀಸ್‌ಗಢ, ಆಂಧ್ರ ಪ್ರದೇಶ ಮತ್ತು ತೆಲಂಗಾಣ.
ಎನ್‌ಎಚ್ 6
ಇದು ದೇಶದ 6ನೇ ಅತೀ ದೊಡ್ಡ ಹೆದ್ದಾರಿ ಎಂದು ಗುರುತಿಸಿಕೊಂಡಿದೆ. ಇದು ಸುಮಾರು 1,873 ಕಿ.ಮೀ. ವ್ಯಾಪಿಸಿದೆ. ಭಾರತದ ಈಶಾನ್ಯ ರಾಜ್ಯಗಳನ್ನು ಇದು ಸಂಪರ್ಕಿಸುತ್ತದೆ. ಮೇಘಾಲಯದ ಜೋರಬತ್‌ನಲ್ಲಿ ಆರಂಭವಾಗಿ ಮಿಜೋರಾಮ್‌ನ ಸೆಲ್ಲಿಂಗ್‌ನಲ್ಲಿ ಈ ರಸ್ತೆ ಕೊನೆಗೊಳ್ಳುತ್ತದೆ.
ಹಾದು ಹೋಗುವ ರಾಜ್ಯಗಳು: ಅಸ್ಸಾಂ, ಮೇಘಾಲಯ ಮತ್ತು ಮಿಜೋರಾಮ್
ಎನ್‌ಎಚ್ 53
ಭಾರತದ 7ನೇ ಅತೀ ದೊಡ್ಡ ಹೆದ್ದಾರಿ ಎಂದು ಎನ್‌ಎಚ್ 53 ಅನ್ನು ಪರಿಗಣಿಸಲಾಗುತ್ತದೆ. 1,781 ಕಿ.ಮೀ. ಉದ್ದದ ಇದು ಗುಜರಾತ್‌ನ ಹಾಝಿರಾದಿಂದ ಆರಂಭವಾಗಿ ಒಡಿಶಾದ ಪ್ರದೀಪ್ ಪೋರ್ಟ್‌ನಲ್ಲಿ ಕೊನೆಗೊಳ್ಳುತ್ತದೆ.
ಹಾದು ಹೋಗುವ ರಾಜ್ಯಗಳು: ಗುಜರಾತ್, ಮಹಾರಾಷ್ಟ್ರ, ಛತ್ತೀಸ್‌ಗಢ ಮತ್ತು ಒಡಿಶಾ.
ಎನ್‌ಎಚ್ 16
1,711 ಕಿ.ಮೀ. ಉದ್ದದ ಈ ಹೆದ್ದಾರಿ ಪಶ್ಚಿಮ ಬಂಗಾಳದಲ್ಲಿ ಆರಂಭವಾಗಿ ತಮಿಳುನಾಡಿನ ಚೆನ್ನೈಯನ್ನು ಸಂಪರ್ಕಿಸುತ್ತದೆ. ಇದು ಎಂಟನೇ ಅತೀ ದೊಡ್ಡ ಹೆದ್ದಾರಿ.
ಹಾದು ಹೋಗುವ ರಾಜ್ಯಗಳು: ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರ ಪ್ರದೇಶ ಮತ್ತು ತಮಿಳುನಾಡು.
ಎನ್‌ಎಚ್ 66
1,622 ಕಿ.ಮೀ. ಹಾದು ಹೋಗುವ ಈ ಹೆದ್ದಾರಿ ಸದಾ ವಾಹನಗಳಿಂದ ಕೂಡಿರುತ್ತದೆ. ಬೆಟ್ಟ, ಕಾಡು, ನದಿ, ತೊರೆಗಳ ಮೂಲಕ ಹಾದು ಹೋಗುವ ಈ ಹೆದ್ದಾರಿ ಪ್ರಯಾಣಿಕರಿಗೆ ನಿಸರ್ಗ ಸೌಂದರ್ಯವನ್ನು ತೆರೆದಿಡುತ್ತದೆ.
ಹಾದು ಹೋಗುವ ರಾಜ್ಯಗಳು: ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು.
ಎನ್‌ಎಚ್ 19
ದಿಲ್ಲಿಯಿಂದ ಕೋಲ್ಕತ್ತಾ ಸಂಪರ್ಕಿಸುವ ಈ ಹೆದ್ದಾರಿ 1,435 ಕಿ.ಮೀ. ಉದ್ದವಿದೆ. ಈ ಹೆದ್ದಾರಿಯು ಐತಿಹಾಸಿಕ ಗ್ರ್ಯಾಂಡ್ ಟ್ರಂಕ್ ರಸ್ತೆಯ ಪ್ರಮುಖ ಭಾಗವನ್ನು ಒಳಗೊಂಡಿದೆ.
ಹಾದು ಹೋಗುವ ರಾಜ್ಯಗಳು: ಉತ್ತರ ಪ್ರದೇಶ, ಬಿಹಾರ, ಝಾರ್ಖಂಡ್ ಮತ್ತು ಪಶ್ಚಿಮ ಬಂಗಾಳ.
ಇದನ್ನೂ ಓದಿ: Narendra Modi: ಯೋಧರ ಜತೆ ಮೋದಿ ದೀಪಾವಳಿ ಸಂಭ್ರಮ ಹೇಗಿತ್ತು? ಹೀಗಿವೆ ಫೋಟೊಗಳು
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ