Site icon Vistara News

Naveen Patnaik: ಒಡಿಶಾದ ನವೀನ್‌ ಪಟ್ನಾಯಕ್‌ ಕೂಡ ಎನ್‌ಡಿಎಗೆ ಘರ್‌ ವಾಪ್ಸಿ, ಮಾತುಕತೆ ಅಂತಿಮ

Narendra Modi And Naveen Patnaik

ಹೊಸದಿಲ್ಲಿ: ಒಡಿಶಾದ ನವೀನ್‌ ಪಟ್ನಾಯಕ್‌ (Naveen Patnaik) ನೇತೃತ್ವದ ಬಿಜು ಜನತಾ ದಳ (Biju Janata DAl- BJD- ಬಿಜೆಡಿ) ಮತ್ತು ಭಾರತೀಯ ಜನತಾ ಪಕ್ಷ (BJP) ಭುವನೇಶ್ವರ ಮತ್ತು ದೆಹಲಿಯಲ್ಲಿ ಏಕಕಾಲದಲ್ಲಿ ಸಭೆಗಳನ್ನು ನಡೆಸಿದ್ದು, ಇಬ್ಬರ ನಡುವೆ ಮೈತ್ರಿ ಮಾತುಕತೆ (Seat sharing) ನಡೆದಿರುವುದು ಖಚಿತವಾಗಿದೆ. ಲೋಕಸಭೆ ಚುನಾವಣೆಗೆ (Lok Sabha Election 2024) ಎರಡೂ ಪಕ್ಷಗಳು ಜೊತೆಯಾಗಿ ಹೋಗಲಿವೆ.

ಒಡಿಶಾದ ಜಾಜ್‌ಪುರ ಜಿಲ್ಲೆಯ ಚಂಡಿಖೋಲ್ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಬೃಹತ್ ಸಾರ್ವಜನಿಕ ಸಭೆಯ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಮಾತುಕತೆ ಅಂತಿಮ ಹಂತದಲ್ಲಿದ್ದು, ಕೇವಲ ಔಪಚಾರಿಕ ಪ್ರಕಟಣೆಗಾಗಿ ಕಾಯುತ್ತಿದೆ. ಮೈತ್ರಿ ಸಂಭವಿಸಿದಲ್ಲಿ, 2008ರ ಕಂಧಮಾಲ್ ಗಲಭೆಯ ನಂತರ 2009ರಲ್ಲಿ ಎನ್‌ಡಿಎ ಜತೆ ಮುರಿದುಕೊಂಡ ತನ್ನ ಸಂಬಂಧವನ್ನು 15 ವರ್ಷಗಳ ನಂತರ BJD ಮರುಸ್ಥಾಪಿಸಿದಂತಾಗಲಿದೆ.

ಎರಡೂ ಪಕ್ಷಗಳು 1998ರಿಂದ 2009ರವರೆಗೆ ಮಿತ್ರಪಕ್ಷಗಳಾಗಿದ್ದವು. ಮುಖ್ಯಮಂತ್ರಿಯಾಗುವ ಮೊದಲು ನವೀನ್ ಪಟ್ನಾಯಕ್ ಅವರು 1990ರ ದಶಕದಲ್ಲಿ ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajapayee) ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿದ್ದರು.

ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದ ದೊಡ್ಡ ಬೆಳವಣಿಗೆಯಲ್ಲಿ, ಮುಂಬರುವ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ಕಾರ್ಯತಂತ್ರದ ಕುರಿತು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದಲ್ಲಿ ಬಿಜೆಡಿ ಸಭೆ ಸೇರಿ ಚರ್ಚಿಸಿದೆ. ಸಭೆಯ ಬಳಿಕ, ತಮ್ಮ ಪಕ್ಷ ಮೈತ್ರಿಗೆ ಸಿದ್ಧವಾಗಿದೆ ಎಂದು ಬಿಜೆಡಿ ನಾಯಕರು ಸೂಚಿಸಿದ್ದಾರೆ.

ಬಿಜೆಡಿಯ ಹಿರಿಯ ಉಪಾಧ್ಯಕ್ಷ ದೇಬಿ ಪ್ರಸಾದ್ ಮಿಶ್ರಾ ಮತ್ತು ಹಿರಿಯ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಸಾಹೂ ನೀಡಿದ ಹೇಳಿಕೆಯಲ್ಲಿ, “2036ರ ವೇಳೆಗೆ ಒಡಿಶಾ ತನ್ನ ರಾಜ್ಯತ್ವದ 100 ವರ್ಷಗಳನ್ನು ಪೂರ್ಣಗೊಳಿಸಲಿದೆ; ಅದಕ್ಕೂ ಮುನ್ನ ಸಾಧಿಸಬೇಕಾದ ಹಲವು ಮೈಲುಗಲ್ಲುಗಳ ಗುರಿಯನ್ನು ಬಿಜೆಡಿ ಮತ್ತು ಸಿಎಂ ಹೊಂದಿದ್ದಾರೆ. ಒಡಿಶಾ ಮತ್ತು ರಾಜ್ಯದ ಜನರ ಹೆಚ್ಚಿನ ಹಿತದೃಷ್ಟಿಯಿಂದ ಬಿಜು ಜನತಾ ದಳ ಈ ನಿಟ್ಟಿನಲ್ಲಿ ದುಡಿಯಲಿದೆ” ಎಂದಿದ್ದಾರೆ.

ಬಿಜೆಪಿಯ ರಾಜ್ಯಸಭಾ ಅಭ್ಯರ್ಥಿ ಅಶ್ವಿನಿ ವೈಶಾ ಅವರಿಗೆ ಬಿಜೆಡಿ ಬೆಂಬಲ ನೀಡಿದೆ. ಒಡಿಶಾದ ಆಡಳಿತ ಪಕ್ಷ ಬಿಜೆಡಿ ಇಬ್ಬರು ಅಭ್ಯರ್ಥಿಗಳನ್ನು ಮೇಲ್ಮನೆಗೆ ಕಳುಹಿಸಿದೆ ಮತ್ತು ಮೂರನೇ ಸ್ಥಾನಕ್ಕೆ ಕೇಸರಿ ಪಡೆಗೆ ಬೆಂಬಲ ನೀಡಿತು. ವೈಶಾ ಅವರಿಗೆ ಬಿಜೆಪಿ ಬೆಂಬಲ ನೀಡುತ್ತಿರುವುದು ಎರಡನೇ ಬಾರಿ. ಮೊದಲನೆಯದು 2019ರಲ್ಲಿ.

“ಒಡಿಶಾದಲ್ಲಿ ಬಿಜೆಪಿ ಏಕಾಂಗಿಯಾಗಿ ಹೋರಾಡಲು ಬಯಸಿದೆ ಎಂದು ರಾಜ್ಯ ಘಟಕವು ಕೇಂದ್ರ ನಾಯಕತ್ವಕ್ಕೆ ಸೂಚಿಸಿದೆ. ಆದರೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಕೇಂದ್ರ ನಾಯಕತ್ವದ ತೀರ್ಮಾನವೇ ಅಂತಿಮವಾಗಿರುತ್ತದೆ” ಎಂದು ಮಾಜಿ ಕೇಂದ್ರ ಸಚಿವ ಮತ್ತು ಸುಂದರ್‌ಗಢ ಸಂಸದ ಜುಯಲ್ ಓರಾಮ್ ಹೇಳಿದ್ದಾರೆ.

ಮೂಲಗಳ ಪ್ರಕಾರ, ಸೀಟು ಹಂಚಿಕೆ ಮಾತುಕತೆ ನಡೆದಿದೆ. ಒಡಿಶಾದ 21 ಲೋಕಸಭಾ ಕ್ಷೇತ್ರಗಳಲ್ಲಿ 14 ಕ್ಷೇತ್ರಗಳನ್ನು ಬಿಜೆಪಿ ಕೇಳುತ್ತಿದೆ. ಅಂತಿಮವಾಗಿ ಬಿಜೆಪಿಗೆ 11 ಮತ್ತು ಬಿಜೆಡಿಗೆ 9 ಸಿಗಬಹುದು. ಪ್ರಸ್ತುತ ಬಿಜೆಪಿ 8 ಮತ್ತು ಬಿಜೆಡಿ 12, ಕಾಂಗ್ರೆಸ್ 1 ಸೀಟನ್ನು ಹೊಂದಿವೆ. ವಿಧಾನಸಭೆಗೆ ಸಂಬಂಧಿಸಿದಂತೆ, ಒಟ್ಟು 147 ಸ್ಥಾನಗಳಲ್ಲಿ ಬಿಜೆಡಿ 112 ಮತ್ತು ಬಿಜೆಪಿ ಕೇವಲ 23 ಸ್ಥಾನಗಳನ್ನು ಹೊಂದಿವೆ. ಬಿಜೆಡಿ 100+ ಸ್ಥಾನಗಳಲ್ಲಿ ಹೋರಾಡಬಹುದು, 40 ಅಥವಾ ಸುಮಾರು ಮೂರನೇ ಒಂದು ಭಾಗವನ್ನು ಬಿಜೆಪಿಗೆ ಬಿಟ್ಟುಬಿಡಬಹುದು. ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್ ಕೇವಲ ಒಂಬತ್ತು ಶಾಸಕರನ್ನು ಹೊಂದಿದೆ.

ಐದು ಬಾರಿ ಮುಖ್ಯಮಂತ್ರಿಯಾಗಿರುವ ನವೀನ್ ಪಟ್ನಾಯಕ್ ಅವರು ದಾಖಲೆಯ ಆರನೇ ಅವಧಿಗೆ ಗುರಿಯಿಟ್ಟಿದ್ದಾರೆ. ಮುಂಬರುವ ಚುನಾವಣೆಯಲ್ಲಿ 147 ಸ್ಥಾನಗಳಲ್ಲಿ 128 ಸ್ಥಾನಗಳನ್ನು ನಿರೀಕ್ಷಿಸುವುದಾಗಿ ಬಿಜೆಡಿ ಹೇಳಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ವಿಧಾನಸಭೆಯಲ್ಲಿ ಬಿಜೆಡಿ ಸಿಂಹಪಾಲು ಪಡೆಯಲಿದೆ ಎಂದು ಹೇಳಲಾಗಿದೆ.

ಒಡಿಶಾ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ 108ನೇ ಜನ್ಮದಿನವಾದ ಮಾರ್ಚ್ 5ರಂದು ಒಡಿಶಾಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ರಾಜ್ಯ ಮತ್ತು ದೇಶಕ್ಕೆ ಬಿಜು ಅವರ ಕೊಡುಗೆಗಳನ್ನು ಶ್ಲಾಘಿಸಿದ್ದರು. ನವೀನ್ ಪಟ್ನಾಯಕ್ ಜೊತೆ ವೇದಿಕೆಯನ್ನು ಹಂಚಿಕೊಂಡದ್ದಲ್ಲದೆ, ಪಿಎಂ ಮೋದಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಅನ್ನು ಟೀಕಿಸಿದ್ದರು. ಆದರೆ ರಾಜ್ಯ ಸರ್ಕಾರ ಅಥವಾ ಬಿಜೆಡಿ ಆಡಳಿತದ ಬಗ್ಗೆ ಏನೂ ಹೇಳಿರಲಿಲ್ಲ. 25 ವರ್ಷಗಳಿಂದ ಇಲ್ಲಿ ಬಿಜೆಡಿ ಆಡಳಿತದಲ್ಲಿದೆ.

ಇದನ್ನೂ ಓದಿ: Narendra Modi: ತೆಲಂಗಾಣ, ಒಡಿಶಾಕ್ಕೆ ಮೋದಿ ಭೇಟಿ; 26,000 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ

Exit mobile version