ಮಡಿಕೇರಿ: ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗದ ಕಾಡಿನಂಚಿನ ಗ್ರಾಮದಲ್ಲಿ ಸಶಸ್ತ್ರ ನಕ್ಸಲೀಯರು (Naxals in Karnataka) ಪ್ರತ್ಯಕ್ಷರಾಗಿದ್ದಾರೆ. ಇದರಿಂದ ಊರಿನ ಹಾಗೂ ಜಿಲ್ಲೆಯ ಜನ ಆತಂಕಿತರಾಗಿದ್ದಾರೆ. ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ದುಷ್ಕೃತ್ಯ ಎಸಗಲು ಇವರು ತಯಾರಿ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗದ ಕಾಡಿನಂಚಿನ ಕೂಜಿಮಲೆ ಎಂಬಲ್ಲಿ ನಕ್ಸಲರು ಶನಿವಾರ ಸಂಜೆ ಪ್ರತ್ಯಕ್ಷರಾಗಿದ್ದಾರೆ. ಮಡಿಕೇರಿ ತಾಲೂಕು ಕಾಲೂರು ಗ್ರಾಮದ ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ಕಾಣಿಸಿಕೊಂಡ ಮಾವೋವಾದಿಗಳು, ಕೂಜಿಮಲೆಯ ದಿನಸಿ ಅಂಗಡಿಯೊಂದರಿಂದ 4 ಸಾವಿರ ರೂ.ಗಳಷ್ಟು ಬೆಲೆಯ ದಿನಸಿಯನ್ನು ಖರೀದಿಸಿದರು.
8 ಜನರಿದ್ದ ನಕ್ಸಲೀಯರ ತಂಡದವರು ನಗದು ನೀಡಿ ಸಾಮಗ್ರಿ ಖರೀದಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 6 ವರ್ಷದ ಬಳಿಕ ಮತ್ತೆ ಕೊಡಗಿನಲ್ಲಿ ಕೆಂಪು ಉಗ್ರರು ಪ್ರತ್ಯಕ್ಷಗೊಂಡಿದ್ದಾರೆ. 2012ರಲ್ಲಿ ಇದೇ ಕಾಲೂರು ಗ್ರಾಮದಲ್ಲಿ ನಕ್ಸಲೀಯರು ಕಾಣಿಸಿಕೊಂಡಿದ್ದರು. 2018ರ ಫೆಬ್ರವರಿ ತಿಂಗಳಿನಲ್ಲಿ ಇಲ್ಲಿಗೆ ಸಮೀಪದ ಸಂಪಾಜೆ ಗುಡ್ಡೆಗದ್ದೆಯಲ್ಲಿ ಒಂದು ತಂಡ ಕಾಣಿಸಿಕೊಂಡಿತ್ತು.
ಕೊಡಗಿಗೆ ಸೇರಿರುವ ಕೂಜಿಮಲೆಗೆ ಸಮೀಪದಲ್ಲಿ ದಕ್ಷಿಣ ಕನ್ನಡದ ಗುತ್ತಿಗಾರು, ಕೊಲ್ಲಮೊಗರು, ಕಲ್ಮಕಾರು ಗ್ರಾಮಗಳಿವೆ. ಇಲ್ಲಿ ಬಹು ವಿಸ್ತಾರವಾದ ಕೂಜಿಮಲೆ ರಬ್ಬರ್ ಎಸ್ಟೇಟ್ ಇದೆ. ಇಲ್ಲಿನ ಕಾಡಿನಲ್ಲಿ ಎರಡು ದಶಕಗಳಿಗೆ ಹಿಂದೆ ಕೆಂಪು ಬಣ್ಣದ ಖನಿಜಗಲ್ಲು ನೆಲದಲ್ಲಿ ಕಾಣಿಸಿಕೊಂಡಿತ್ತು. ಇದನ್ನು ಪಡೆಯಲು ಜನ ನಾಮುಂದು ತಾಮುಂದು ಎಂದು ನುಗ್ಗಿ ಅಕ್ರಮ ಗಣಿಗಾರಿಕೆ ನಡೆಸಿದ್ದರು. ಇಲ್ಲಿನ ಅನೇಕರು ರಾತ್ರೋರಾತ್ರಿ ಶ್ರೀಮಂತರಾಗಿದ್ದರೆ, ಅನೇಕ ಮಂದಿ ಹೇಳಹೆಸರಿಲ್ಲದೆ ನಾಪತ್ತೆಯಾಗಿದ್ದರು.
ಸದ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಕ್ಸಲರು ಆಕ್ಟಿವ್ ಆಗಿದ್ದಾರೆ ಎಂದು ಶಂಕಿಸಲಾಗಿದೆ. ನಿರ್ದಿಷ್ಟ ಪಕ್ಷದ ಕುರಿತ ಕಾರ್ಯಾಚರಣೆ ನಡೆಸಲು ಉದ್ದೇಶಿಸಿರಬಹುದು ಎಂದು ಭಾವಿಸಲಾಗಿದೆ. ಉಭಯ ಜಿಲ್ಲೆಗಳ ಗಡಿಯಲ್ಲಿ ಪೊಲೀಸರು ನಿಗಾ ಇಟ್ಟಿದ್ದಾರೆ. ಇಲ್ಲಿ ಓಡಾಡುವ ಅಪರಿಚಿತ ವಾಹನಗಳ ಮೇಲೂ ನಿಗಾ ಇಡಲಾಗಿದೆ. ಚುನಾವಣಾ ನೀತಿ ಸಂಹಿತೆಯ ಭಾಗವಾಗಿ ಚೆಕ್‌ಪೋಸ್ಟ್‌ಗಳನ್ನೂ ಇದೀಗ ನಿರ್ಮಿಸಲಾಗುತ್ತಿದೆ.
ಉಡುಪಿಯಲ್ಲೂ ಕಾಣಿಸಿಕೊಂಡಿದ್ದರು
ಸಾಕೇತ್ ರಾಜನ್ (Saketh Rajan) ಮುಂತಾದವರ ಎನ್‌ಕೌಂಟರ್ (Encounter) ಮೂಲಕ ತಣ್ಣಗಾಗಿದ್ದ ನಕ್ಸಲೀಯ ಚಟುವಟಿಕೆ (Naxalism in western Ghats) ಪಶ್ಚಿಮ ಘಟ್ಟದಲ್ಲಿ ಮತ್ತೆ ಬಿರುಸಾಗಿರುವುದು ಕಂಡುಬಂದಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ವ್ಯಾಪ್ತಿಯ ಉದಯನಗರ ಪ್ರದೇಶದಲ್ಲೂ ಇತ್ತೀಚೆಗೆ ನಕ್ಸಲರು ಕಾಣಿಸಿಕೊಂಡಿದ್ದರು. ಕೊಲ್ಲೂರು ವ್ಯಾಪ್ತಿಯಲ್ಲೂ ನಕ್ಸಲರ ಓಡಾಟ ಕಂಡುಬಂದಿದೆ ಎನ್ನಲಾಗಿದ್ದು, ಕೊಲ್ಲೂರಿನ ಹಲವೆಡೆ ಎಎನ್ಎಫ್ ಬಿಗಿ ಭದ್ರತೆ ಮಾಡಿದೆ.
ಇತ್ತೀಚೆಗೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಡಿನ ಒಳಗೆ ನಕ್ಸಲರಿಂದ ಲಾಲ್ ಸಲಾಂ (Lal salaam) ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ. ನಕ್ಸಲ್ ನಾಯಕ ಸಾಕೇತ್ ರಾಜನ್ ಎನ್‌ಕೌಂಟರ್ ನಡೆದು 19 ವರ್ಷ ಆದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆದಿದೆ.
ಇದನ್ನೂ ಓದಿ: Naxalism: ಪಶ್ಚಿಮ ಘಟ್ಟದಲ್ಲಿ ಮತ್ತೆ ನಕ್ಸಲ್ ಓಡಾಟ ಬಿರುಸು, ಮತ್ತೆ ಕೆಂಪು ದುಃಸ್ವಪ್ನ?