ಹೊಸದಿಲ್ಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಈ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿರುವ ತನ್ನ 12ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಪುಸ್ತಕದಿಂದ (NCERT text) ಬಾಬರಿ ಮಸೀದಿ (Babri Masjid), ಹಿಂದುತ್ವದ ರಾಜಕೀಯ (Hindutva politiics), 2002ರ ಗುಜರಾತ್ ಗಲಭೆ (Gujarat riots) ಮತ್ತು ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಕೆಲವು ಉಲ್ಲೇಖಗಳನ್ನು ಕೈಬಿಟ್ಟಿದೆ.
ಇತ್ತೀಚಿನ ವರ್ಷಗಳಲ್ಲಿ ಬೆಳೆಯುತ್ತಿರುವ ಪಠ್ಯಪುಸ್ತಕ ವಿಷಯ ಬದಲಾವಣೆ ಮತ್ತು ಸೂಕ್ಷ್ಮ ವಿಷಯಗಳ ಪರಿಷ್ಕರಣೆಯ ಪಟ್ಟಿಗೆ ಇದು ಸೇರ್ಪಡೆಯಾಗಿದೆ. ಈ ಬದಲಾವಣೆಗಳನ್ನು ಸಂಸ್ಥೆಯು ಗುರುವಾರ ತನ್ನ ವೆಬ್‌ಸೈಟ್‌ನಲ್ಲಿ ಸಾರ್ವಜನಿಕಗೊಳಿಸಿದೆ. NCERT ಪಠ್ಯಪುಸ್ತಕಗಳನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಅಡಿಯಲ್ಲಿ ಶಾಲೆಗಳಲ್ಲಿ ಕಲಿಸಲಾಗುತ್ತದೆ. ಭಾರತದಲ್ಲಿ ಸರಿಸುಮಾರು 30,000 ಶಾಲೆಗಳು ಇದರಡಿ ಸಂಯೋಜಿತವಾಗಿವೆ.
ರಾಜಕೀಯ ವಿಜ್ಞಾನ ಅಧ್ಯಾಯ 8 ʼಭಾರತೀಯ ರಾಜಕೀಯದಲ್ಲಿನ ಇತ್ತೀಚಿನ ಬೆಳವಣಿಗೆಗಳುʼ ಅಧ್ಯಾಯದಲ್ಲಿ, “ಅಯೋಧ್ಯೆ ಧ್ವಂಸ”ದ ಉಲ್ಲೇಖಗಳನ್ನು ಕೈಬಿಡಲಾಗಿದೆ. “ರಾಜಕೀಯ ಕ್ರೋಢೀಕರಣದ ಸ್ವರೂಪಕ್ಕಾಗಿ ರಾಮ ಜನ್ಮಭೂಮಿ ಚಳುವಳಿ ಮತ್ತು ಅಯೋಧ್ಯೆ ಧ್ವಂಸದ ಹಿನ್ನೆಲೆ ಏನು?” ಎಂದು ಇದ್ದುದನ್ನು “ರಾಮ ಜನ್ಮಭೂಮಿ ಚಳವಳಿಯ ಪರಂಪರೆ ಏನು?” ಎಂದು ಬದಲಾಯಿಸಲಾಗಿದೆ.
ಅದೇ ಅಧ್ಯಾಯದಲ್ಲಿ ಬಾಬರಿ ಮಸೀದಿ ಮತ್ತು ಹಿಂದುತ್ವದ ರಾಜಕೀಯದ ಉಲ್ಲೇಖವನ್ನು ಕೈಬಿಡಲಾಗಿದೆ. ಹಿಂದಿನ ಪ್ಯಾರಾಗ್ರಾಫ್ ಹೀಗಿತ್ತು- “ಡಿಸೆಂಬರ್ 1992ರಲ್ಲಿ ಅಯೋಧ್ಯೆಯಲ್ಲಿ (ಬಾಬರಿ ಮಸೀದಿ ಎಂದು ಕರೆಯಲ್ಪಡುವ) ವಿವಾದಿತ ರಚನೆಯ ಧ್ವಂಸದೊಂದಿಗೆ ಹಲವಾರು ಘಟನೆಗಳು ನಡೆದವು. ಈ ಘಟನೆಯು ದೇಶದ ರಾಜಕೀಯದಲ್ಲಿ ವಿವಿಧ ಬದಲಾವಣೆಗಳನ್ನು ಸಂಕೇತಿಸಿತು, ಪ್ರಚೋದಿಸಿತು. ಭಾರತೀಯ ರಾಷ್ಟ್ರೀಯತೆ ಮತ್ತು ಜಾತ್ಯತೀತತೆಯ ಸ್ವರೂಪ ಕುರಿತು ಚರ್ಚೆಗಳನ್ನು ತೀವ್ರಗೊಳಿಸಿತು. ಈ ಬೆಳವಣಿಗೆಗಳು ಬಿಜೆಪಿಯ ಉದಯ ಮತ್ತು ʼಹಿಂದುತ್ವ’ದ ರಾಜಕೀಯದೊಂದಿಗೆ ಸಂಬಂಧ ಹೊಂದಿವೆ.”
ಇದನ್ನು ಹೀಗೆ ಬದಲಾಯಿಸಲಾಗಿದೆ: “ಅಯೋಧ್ಯೆಯ ರಾಮ ಜನ್ಮಭೂಮಿ ಮಂದಿರದ ಕುರಿತಾದ ಶತಮಾನಗಳಷ್ಟು ಹಳೆಯ ಕಾನೂನು ಮತ್ತು ರಾಜಕೀಯ ವಿವಾದವು ವಿವಿಧ ರಾಜಕೀಯ ಬದಲಾವಣೆಗಳಿಗೆ ಜನ್ಮ ನೀಡಿ, ಭಾರತದ ರಾಜಕೀಯದ ಮೇಲೆ ಪ್ರಭಾವ ಬೀರಲು ಪ್ರಾರಂಭಿಸಿತು. ರಾಮ ಜನ್ಮಭೂಮಿ ದೇವಾಲಯ ಆಂದೋಲನವು ಕೇಂದ್ರ ವಿಷಯವಾಗಿ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಕುರಿತಾದ ಚರ್ಚೆಯ ದಿಕ್ಕನ್ನು ಬದಲಿಸಿತು. ಈ ಬದಲಾವಣೆಗಳು 2019ರ ನವೆಂಬರ್ 9ರ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ತೀರ್ಪಿನ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಲ್ಲಿ ಉತ್ತುಂಗಕ್ಕೇರಿತು.”
ಈ ಬದಲಾವಣೆಗೆ ಕಾರಣ “ರಾಜಕೀಯದಲ್ಲಿನ ಇತ್ತೀಚಿನ ಬೆಳವಣಿಗೆ ಪ್ರಕಾರ ವಿಷಯವನ್ನು ನವೀಕರಿಸಲಾಗಿದೆ” ಎಂದು ಎನ್‌ಸಿಇಆರ್‌ಟಿ ದಾಖಲೆಯಲ್ಲಿ ಹೇಳಿದೆ.
ಅಧ್ಯಾಯ 5ರಲ್ಲಿ, ಗುಜರಾತ್ ಗಲಭೆಯ ಉಲ್ಲೇಖವಾದ ʼಡೆಮಾಕ್ರಟಿಕ್ ರೈಟ್ಸ್ʼ ಅನ್ನು ಶೀರ್ಷಿಕೆಯಲ್ಲಿ ಕೈಬಿಡಲಾಗಿದೆ. ಹಿಂದಿನ ಆವೃತ್ತಿ ಹೀಗಿತ್ತು- “ಈ ಪುಟದಲ್ಲಿನ ಸುದ್ದಿ ಕೊಲಾಜ್‌ನಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (NHRC) ಉಲ್ಲೇಖಗಳನ್ನು ನೀವು ಗಮನಿಸಿದ್ದೀರಾ? ಈ ಉಲ್ಲೇಖಗಳು ಮಾನವ ಹಕ್ಕುಗಳ ಅರಿವು ಮತ್ತು ಮಾನವ ಘನತೆಗಾಗಿ ಹೋರಾಟಗಳನ್ನು ಪ್ರತಿಬಿಂಬಿಸುತ್ತವೆ. ವಿವಿಧ ಕ್ಷೇತ್ರಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಅನೇಕ ಪ್ರಕರಣಗಳು, ಉದಾಹರಣೆಗೆ, ಗುಜರಾತ್ ಗಲಭೆಗಳಲ್ಲಿ, ಭಾರತದಾದ್ಯಂತ ಸಾರ್ವಜನಿಕ ಗಮನಕ್ಕೆ ತರಲಾಗುತ್ತಿದೆ.”
ಇದನ್ನು “ವಿವಿಧ ಕ್ಷೇತ್ರಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಅನೇಕ ಪ್ರಕರಣಗಳನ್ನು ಭಾರತದಾದ್ಯಂತ ಸಾರ್ವಜನಿಕ ಗಮನಕ್ಕೆ ತರಲಾಗುತ್ತಿದೆ” ಎಂದು ಬದಲಾಯಿಸಲಾಗಿದೆ. “ಸುದ್ದಿ ಕೊಲಾಜ್ ಮತ್ತು ವಿಷಯವು 20 ವರ್ಷಗಳ ಹಿಂದಿನ ಘಟನೆಯನ್ನು ಉಲ್ಲೇಖಿಸುತ್ತದೆ ಮತ್ತು ಇದನ್ನು ನ್ಯಾಯಾಂಗ ಪ್ರಕ್ರಿಯೆಯ ಮೂಲಕ ಪರಿಹರಿಸಲಾಗಿದೆ” ಎಂಬುದು ಈ ಬದಲಾವಣೆಗೆ ಎನ್‌ಸಿಇಆರ್‌ಟಿ ನೀಡಿದ ತಾರ್ಕಿಕ ವಿವರಣೆ.
ಈ ಹಿಂದೆ ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಿದ ಕೆಲವು ಉಲ್ಲೇಖಗಳನ್ನು ಸಹ ಬದಲಾಯಿಸಲಾಗಿದೆ. ಅಧ್ಯಾಯ 5 “ಅಂಚಿನಲ್ಲಿರುವವರನ್ನು ಅರ್ಥ ಮಾಡಿಕೊಳ್ಳುವುದು” ಇದರಲ್ಲಿ “ಮುಸ್ಲಿಮರು ಅಭಿವೃದ್ಧಿಯ ಪ್ರಯೋಜನಗಳಿಂದ ವಂಚಿತರಾಗಿದ್ದಾರೆ” ಎಂಬ ಉಲ್ಲೇಖವನ್ನು ಕೈಬಿಡಲಾಗಿದೆ.
ಹಿಂದಿನ ಆವೃತ್ತಿಯಲ್ಲಿ, “2011ರ ಜನಗಣತಿಯ ಪ್ರಕಾರ, ಮುಸ್ಲಿಮರು ಭಾರತದ ಜನಸಂಖ್ಯೆಯ 14.2% ರಷ್ಟಿದ್ದಾರೆ ಮತ್ತು ಇಂದು ಭಾರತದಲ್ಲಿ ಅಂಚಿನಲ್ಲಿರುವ ಸಮುದಾಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಇತರ ಸಮುದಾಯಗಳಿಗೆ ಹೋಲಿಸಿದರೆ ಅವರು ವರ್ಷಗಳಿಂದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಪ್ರಯೋಜನಗಳಿಂದ ವಂಚಿತರಾಗಿದ್ದಾರೆ.”
ನವೀಕರಿಸಿದ ಆವೃತ್ತಿ- “2011ರ ಜನಗಣತಿಯ ಪ್ರಕಾರ, ಮುಸ್ಲಿಮರು ಭಾರತದ ಜನಸಂಖ್ಯೆಯ 14.2% ರಷ್ಟಿದ್ದಾರೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ತುಲನಾತ್ಮಕವಾಗಿ ಕಡಿಮೆ ಸ್ಥಾನಮಾನವನ್ನು ಹೊಂದಿರುವ ಕಾರಣ ಅವರನ್ನು ಅಂಚಿನಲ್ಲಿರುವ ಸಮುದಾಯವೆಂದು ಪರಿಗಣಿಸಲಾಗಿದೆ.”
ಅದೇ ಅಧ್ಯಾಯದಲ್ಲಿ, ಹಳೆಯ ಪುಸ್ತಕದಲ್ಲಿ ಹೀಗೆ ಹೇಳಿದೆ, “ಸಾಮಾನ್ಯವಾಗಿ ಇದು ಅವರನ್ನು ಅನ್ಯಾಯಯುಕ್ತವಾಗಿ ಪರಿಗಣಿಸಲು ಮತ್ತು ಅವರ ವಿರುದ್ಧ ತಾರತಮ್ಯ ಮಾಡಲು ಒಂದು ಕಾರಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಮುಸ್ಲಿಮರನ್ನು ಈ ಸಾಮಾಜಿಕವಾಗಿ ಕಡೆಗಣಿಸುವುದರಿಂದ ಅವರು ವಾಸಿಸುತ್ತಿದ್ದ ಸ್ಥಳಗಳಿಂದ ವಲಸೆ ಹೋಗುತ್ತಾರೆ. ಇದು ಸಮುದಾಯದ ಘೆಟ್ಟೋಲೈಸೇಶನ್‌ಗೆ ಕಾರಣವಾಗುತ್ತದೆ. ಕೆಲವೊಮ್ಮೆ, ಈ ಪೂರ್ವಾಗ್ರಹವು ದ್ವೇಷ ಮತ್ತು ಹಿಂಸೆಗೆ ಕಾರಣವಾಗುತ್ತದೆ.”
ಹೊಸ ಪುಸ್ತಕದಲ್ಲಿ, “ಅನ್ಯಾಯ” ಎಂಬ ಪದವನ್ನು “ವಿಭಿನ್ನವಾಗಿ” ಎಂದು ಬದಲಾಯಿಸಲಾಗಿದೆ. ಕೊನೆಯ ಸಾಲು “ಕೆಲವೊಮ್ಮೆ, ಈ ಪೂರ್ವಾಗ್ರಹವು ದ್ವೇಷ ಮತ್ತು ಹಿಂಸಾಚಾರಕ್ಕೆ ಕಾರಣವಾಗಿದೆ” ಎಂದಿದೆ.
ಲಿಂಗ, ಧರ್ಮ ಮತ್ತು ಜಾತಿ ಎಂಬ ಶೀರ್ಷಿಕೆಯ ಅಧ್ಯಾಯದಲ್ಲಿ, “ನಮ್ಮ ದೇಶದ ಮಾನವ ಹಕ್ಕುಗಳ ಗುಂಪುಗಳು ನಮ್ಮ ದೇಶದಲ್ಲಿ ನಡೆದ ಕೋಮು ಗಲಭೆಗೆ ಬಲಿಯಾದವರಲ್ಲಿ ಹೆಚ್ಚಿನವರು ಧಾರ್ಮಿಕ ಅಲ್ಪಸಂಖ್ಯಾತರು ಎಂದು ಒಪ್ಪಿಕೊಂಡಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆಗೆ ಸರ್ಕಾರ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ” ಇದನ್ನು “ನಮ್ಮ ದೇಶದ ಮಾನವ ಹಕ್ಕುಗಳ ಗುಂಪುಗಳು ಕೋಮು ಗಲಭೆಗಳನ್ನು ತಡೆಗಟ್ಟಲು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸಲು ಸರ್ಕಾರ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿವೆ” ಎಂದು ಬದಲಿಸಲಾಗಿದೆ.
“ಸೆಕ್ಯುಲರಿಸಂ” ಎಂಬ ಶೀರ್ಷಿಕೆಯ ಮತ್ತೊಂದು ಅಧ್ಯಾಯದಲ್ಲಿ, ಹೊಸ ಪುಸ್ತಕವು 2002ರ ಗಲಭೆ ಸಂತ್ರಸ್ತರನ್ನು ವಿವರಿಸುವ ವಾಕ್ಯದ ಪದಗುಚ್ಛವನ್ನು ಬದಲಾಯಿಸಿದೆ. “2002ರಲ್ಲಿ ಗುಜರಾತ್‌ನಲ್ಲಿ ನಡೆದ ಗೋಧ್ರಾ ನಂತರದ ಗಲಭೆಯ ಸಮಯದಲ್ಲಿ 1,000ಕ್ಕೂ ಹೆಚ್ಚು ಜನರು, ಹೆಚ್ಚಾಗಿ ಮುಸ್ಲಿಮರು ಕಗ್ಗೊಲೆಯಾದರು” ಎಂದು ಇದ್ದುದನ್ನು, “2002ರಲ್ಲಿ ಗುಜರಾತ್‌ನಲ್ಲಿ ಗೋಧ್ರಾ ನಂತರದ ಗಲಭೆಗಳ ಸಮಯದಲ್ಲಿ 1,000ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು.” ಎಂದು ಬದಲಿಸಲಾಗಿದೆ.
“ಗಲಭೆಗಳಲ್ಲಿ ಎಲ್ಲ ಸಮುದಾಯದ ಜನರು ಬಳಲುತ್ತಾರೆ. ಅದು ಕೇವಲ ಒಂದು ಸಮುದಾಯವಾಗಿರಲು ಸಾಧ್ಯವಿಲ್ಲ,” ಎಂಬುದು ಎನ್‌ಸಿಇಆರ್‌ಟಿ ನೀಡಿದ ಕಾರಣವಾಗಿದೆ.
ಪಠ್ಯದಲ್ಲಿ ಕೆಲವು ಬದಲಾವಣೆಗಳು ಚೀನಾದ ಬಗ್ಗೆ ಹೆಚ್ಚು ಸ್ಪಷ್ಟವಾದ ಉಲ್ಲೇಖಗಳನ್ನು ಮಾಡಿವೆ. “ಸಮಕಾಲೀನ ಶಕ್ತಿ ಕೇಂದ್ರಗಳು” ಎಂಬ ಅಧ್ಯಾಯದಲ್ಲಿ, “…ಎರಡು ದೇಶಗಳ ನಡುವಿನ ಗಡಿ ವಿವಾದದ ಪರಿಹಾರದ ಭರವಸೆಯನ್ನು ಮಿಲಿಟರಿ ಸಂಘರ್ಷವು ಹಾಳುಮಾಡಿದೆ” ಎಂಬ ಸಾಲನ್ನು “…ಭಾರತದ ಗಡಿಯಲ್ಲಿನ ಚೀನಾದ ಆಕ್ರಮಣವು ಆ ಭರವಸೆಯನ್ನು ಹಾಳುಮಾಡಿದೆ” ಎಂದು ಬದಲಾಯಿಸಲಾಗಿದೆ.
ಇತಿಹಾಸ ಮತ್ತು ಸಮಾಜಶಾಸ್ತ್ರದ ಪಠ್ಯಪುಸ್ತಕಗಳನ್ನು ಸಹ ನವೀಕರಿಸಲಾಗಿದೆ. ಹರಪ್ಪ ನಾಗರಿಕತೆ, ಬುಡಕಟ್ಟು ಮತ್ತು ಜನರ ಚಳುವಳಿಗಳ ಇತಿಹಾಸದಲ್ಲಿ ಬದಲಾಯಿಸಲಾಗಿದೆ. 12ನೇ ತರಗತಿಯ ಸಮಾಜಶಾಸ್ತ್ರ ಪಠ್ಯಪುಸ್ತಕದಲ್ಲಿ ಕೋಮುಗಲಭೆಗಳ ಕೆಲವು ಚಿತ್ರಗಳನ್ನು ತೆಗೆದುಹಾಕಲಾಗಿದೆ. “ಈ ಫೋಟೋಗಳು ಈ ಸಮಯದಲ್ಲಿ ಪ್ರಸ್ತುತವಲ್ಲ” ಎಂದು ಮಂಡಳಿ ತಿಳಿಸಿದೆ.
ಸರ್ದಾರ್ ಸರೋವರ ಅಣೆಕಟ್ಟಿನ ಸುತ್ತಲಿನ ಚಳವಳಿಗೆ ಸಂಬಂಧಿಸಿದ ಮತ್ತೊಂದು ಬದಲಾವಣೆ. “ಭೂಮಿಯಲ್ಲಿ ಖಾಸಗಿ ಆಸ್ತಿಯ ಬರುವಿಕೆಯು ಬುಡಕಟ್ಟು ಜನಾಂಗದವರ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಅವರ ಸಮುದಾಯ ಆಧಾರಿತ ಸಾಮೂಹಿಕ ಮಾಲೀಕತ್ವ ಪದ್ಧತಿಯು ಹೊಸ ವ್ಯವಸ್ಥೆಯಲ್ಲಿ ಅನನುಕೂಲ ಹೊಂದಿದೆ. ಅಂತಹ ಇತ್ತೀಚಿನ ಉದಾಹರಣೆಯೆಂದರೆ ನರ್ಮದೆಯ ಮೇಲೆ ಅಣೆಕಟ್ಟುಗಳ ಸರಣಿ. ಅಲ್ಲಿ ಹೆಚ್ಚಿನ ವೆಚ್ಚಗಳು ಮತ್ತು ಪ್ರಯೋಜನಗಳು ವಿವಿಧ ಸಮುದಾಯಗಳು ಮತ್ತು ಪ್ರದೇಶಗಳಿಗೆ ಅಸಮಾನವಾಗಿ ಹರಿಯುವಂತೆ ತೋರುತ್ತಿದೆ.” ಇದನ್ನು ಹೀಗೆ ಬದಲಾಯಿಸಲಾಗಿದೆ: “ಭೂಮಿಯಲ್ಲಿ ಖಾಸಗಿ ಆಸ್ತಿ ಬರುವಿಕೆ ಕೂಡ ಪ್ರತಿಕೂಲ ಪರಿಣಾಮ ಬೀರಿದೆ. ಬುಡಕಟ್ಟು ಜನಾಂಗದವರು, ಅವರ ಸಮುದಾಯ-ಆಧಾರಿತ ಸಾಮೂಹಿಕ ಮಾಲೀಕತ್ವ ಅನನುಕೂಲತೆ ಅನುಭವಿಸಿದೆ.”
ಇದನ್ನೂ ಓದಿ: CBSE Syllabus : 2024-25ಕ್ಕೆ ಸಿಬಿಎಸ್ಇ 3ರಿಂದ 6ನೇ ತರಗತಿಗೆ ಹೊಸ ಪಠ್ಯಕ್ರಮ