Site icon Vistara News

ವಿಸ್ತಾರ ಸಂಪಾದಕೀಯ: ಮಾನವ- ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಅಗತ್ಯ

Wild Life

ಕಳೆದ ಕೆಲ ದಿನಗಳಲ್ಲಿ ರಾಜ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಾರಕ ಸ್ಥಿತಿ ಮುಟ್ಟಿದೆ. ಕಳೆದ 15 ದಿನಗಳ ಅಂತರದಲ್ಲಿ ಇದರಿಂದಾಗಿ 11 ಜನರು ಸಾವಿಗೀಡಾಗಿದ್ದಾರೆ. ಇತ್ತೀಚೆಗೆ ಪುಂಡಾನೆ ಹಿಡಿಯುವ ಕಾರ್ಯಾಚರಣೆ ವೇಳೆ ಶಾರ್ಪ್ ಶೂಟರ್ ವೆಂಕಟೇಶ್ ಅವರು ಪ್ರಾಣ ತೆತ್ತುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅಮೂಲ್ಯ ಜೀವ ಹಾನಿ ತಪ್ಪಿಸಲು ಅಗತ್ಯ ಮತ್ತು ತುರ್ತು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆಯವರು ಹೇಳಿದ್ದಾರೆ. ಸಚಿವರು ಈ ಕುರಿತು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅರಣ್ಯ ಘಟಕದ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಆನೆಗಳು ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿ 500 ಕೋಟಿ ರೂ. ಅನುದಾನಕ್ಕೆ ಸಿಎಂಗೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದು ಅನುದಾನ ಪಡೆಯುವುದು ಮತ್ತು ಕೆಲವು ಕಡೆ ಕಾಡಂಚಿನಲ್ಲಿ ರೈಲ್ವೆ ಬ್ಯಾರಿಕೇಡ್‌ ಹಾಕಿ ಮುಗಿಸಿಬಿಡುವಷ್ಟಕ್ಕೆ ಸೀಮಿತವಾಗಬಾರದು. ಹಾಗೆ ಮಾಡಿದರೆ ಕಾಡಾನೆಗಳು ಇನ್ನೊಂದು ಕಡೆಯಿಂದ ನುಸುಳಿ ಒಳಬರುತ್ತವೆ. ರಾಜ್ಯಾದ್ಯಂತ ಆನೆ ಕಾರಿಡಾರ್‌ಗಳು ಒತ್ತುವರಿಯಾಗಿವೆ. ಆನೆ ಕಾರಿಡಾರ್‌ಗಳಲ್ಲಿ ರಸ್ತೆ, ರೈಲು, ವಿದ್ಯುತ್ ಕಂಬ, ನೀರಿನ ಕೊಳವೆ ಅಳವಡಿಕೆಗಾಗಿ ಕೆಲವು ಭಾಗ ಸರ್ಕಾರದಿಂದಲೇ ಬಳಕೆಯಾಗಿದೆ. ಖಾಸಗಿಯವರಿಂದ ಇನ್ನಷ್ಟು ಒತ್ತುವರಿಯಾಗಿದೆ. ರಾಜ್ಯದಲ್ಲಿ ಆನೆಗಳ ದಾಳಿಯಿಂದಲೇ ಅಧಿಕ ಸಾವು ಸಂಭವಿಸುತ್ತಿದೆ. ಕಳೆದ ಐದೂವರೆ ವರ್ಷದಲ್ಲಿ 148 ಜನರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಮನುಷ್ಯರು ಮಾತ್ರವಲ್ಲ, ರಾಜ್ಯದಲ್ಲಿ ಈ ವರ್ಷ 38 ಆನೆಗಳೂ ವಿದ್ಯುತ್ ಸ್ಪರ್ಶದಿಂದ, ಗುಂಡಿನೇಟಿನಿಂದ ಮತ್ತಿತರ ಕಾರಣಗಳಿಂದ ಮೃತಪಟ್ಟಿವೆ. ಆನೆ ಕಾರಿಡಾರ್‌ ರಕ್ಷಣೆ ಆಗಬೇಕು ಎಂಬುದು ಹಲವು ವರ್ಷದ ಕೂಗು. ಸರ್ಕಾರ ಇದನ್ನು ಹೇಗೆ ಆಗಮಾಡುವುದೋ ಗೊತ್ತಿಲ್ಲ. ಈಗಾಗಲೇ ಕೊಡಗಿನಲ್ಲಿ ಕೆಲವು ಕಾಫಿತೋಟಗಳನ್ನೇ ಕಾಡಾನೆಗಳು ತಮ್ಮ ಬಿಡಾರವಾಗಿಸಿಕೊಂಡಿವೆ. ಅವು ತೋಟದಿಂದ ತೋಟಕ್ಕೆ ತೆರಳುತ್ತಿವೆಯೇ ಹೊರತು ಕಾಡಿಗಲ್ಲ. ಇದೊಂದು ವಿಶಿಷ್ಟ ವಿದ್ಯಮಾನ. ಈ ಬಗ್ಗೆ ಸರಿಯಾದ ಅಧ್ಯಯನ ಆದಂತಿಲ್ಲ.

ಇನ್ನು ಚಿರತೆ- ಹುಲಿ- ಕರಡಿ- ಮನುಷ್ಯ ಮುಖಾಮುಖಿಗಳೂ ಹೆಚ್ಚಿವೆ. ಚಿರತೆಗಳ ಸಂಖ್ಯೆ ಹೆಚ್ಚಿದೆ. ಅವುಗಳಿಗೆ ತಕ್ಕ ಬಲಿಪ್ರಾಣಿಗಳು ಇದ್ದಂತಿಲ್ಲ. ಹೀಗಾಗಿ ಅವು ಗ್ರಾಮಗಳೊಳಕ್ಕೆ ನುಸುಳುತ್ತಿವೆ. ಸಾಮಾನ್ಯವಾಗಿ ಇವು ಮನುಷ್ಯನ ಸನಿಹಕ್ಕೆ ಬರದ ಅಂಜುಬುರುಕ ಪ್ರಾಣಿಗಳು. ಆದರೆ ಅನಿವಾರ್ಯ ಅವುಗಳನ್ನು ಮನುಷ್ಯನ ಸಮೀಪಕ್ಕೆ ಬರುವಂತೆ ಮಾಡಿದೆ. ಇನ್ನು ನಾಗರಹೊಳೆ ವಲಯದಲ್ಲಿ ಹೆಗ್ಗಡದೇವನ ಕೋಟೆ ಬಳಿ 7 ವರ್ಷದ ಬಾಲಕನನ್ನು ಹುಲಿ ಹಿಡಿದು ತಿಂದ ಆಘಾತಕಾರಿ ಘಟನೆ. ಸಾಮಾನ್ಯವಾಗಿ ಹುಲಿಗಳು ಜನವಸತಿಗಳ ಕಡೆ ಬರುವುದೇ ಇಲ್ಲ. ಮನುಷ್ಯನನ್ನು ಕಂಡರೆ ದೂರ ಓಡುವ ಹುಲಿಯೊಂದು ನರಭಕ್ಷಕನಾಗಲು ನಾನಾ ಕಾರಣಗಳಿರುತ್ತವೆ. ಹೀಗೆ ಪ್ರತಿಯೊಂದು ಮಾನವ- ವನ್ಯಜೀವಿ ಸಂಘರ್ಷದ ಹಿಂದೆಯೂ ಅದರದ್ದೇ ಆದ ಪ್ರತ್ಯೇಕ ಕಾರಣ- ಹಿನ್ನೆಲೆಗಳೆಲ್ಲ ಇರುತ್ತವೆ. ಇದನ್ನು ಸಮಗ್ರವಾಗಿ ಅಧ್ಯಯನ ಮಾಡಿ ಸ್ಥಳೀಯ ಮತ್ತು ಸಮಗ್ರ ಪರಿಹಾರ ಹುಡುಕುವ ಒಂದು ವ್ಯವಸ್ಥೆ ಅತ್ಯಗತ್ಯವಾಗಿದೆ.

ಮಾನವ ಮತ್ತು ವನ್ಯಜೀವಿ ಸಂಘರ್ಷ ಇಂದು ನಿನ್ನೆಯದಲ್ಲ. ಆದರೆ ಈಗ ಅರಣ್ಯ ಪ್ರದೇಶ ಕಡಿಮೆ ಆಗುತ್ತಿದ್ದು, ಸಂರಕ್ಷಣೆಯ ಕಾರಣದಿಂದ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಂಘರ್ಷಗಳು ಹೆಚ್ಚಾಗುತ್ತಿವೆ. ಈ ಬಾರಿ ವಾಡಿಕೆಗಿಂತ ಬಹಳ ಕಡಿಮೆ ಮಳೆ ಆಗಿದ್ದು, ಕಾಡಿನಲ್ಲಿ ಕುಡಿಯುವ ನೀರು ಮತ್ತು ಆಹಾರದ ಸಮಸ್ಯೆಯಿಂದಾಗಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯದೊಳಗೆ ವನ್ಯಜೀವಿಗಳಿಗೆ ಸೂಕ್ತ ಆಹಾರ ದೊರಕುವಂತೆ ಮಾಡುವ ಮಾರ್ಗೋಪಾಯಗಳನ್ನು ಕಂಡುಹಿಡಿಯಬೇಕಿದೆ. ಕಾಡಿನಂಚಿನಲ್ಲಿ ನಡೆಯುವ ಒತ್ತುವರಿ, ಕಲ್ಲು ಗಣಿಗಾರಿಕೆ, ಮೀಸಲು ಅರಣ್ಯದಲ್ಲಿ ಮನುಷ್ಯ ಚಟುವಟಿಕೆಗಳು ವನ್ಯಮೃಗಗಳ ನೆಮ್ಮದಿಯ ಬದುಕಿಗೆ ಕೊಳ್ಳಿಯಾಗಿವೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ʼಭಾರತʼ ಕೇವಲ ಹೆಸರಲ್ಲ, ಅದೊಂದು ಭಾವನೆ, ಅನನ್ಯ ಪರಂಪರೆ

ಇದೀಗ ವನ್ಯ ಮೃಗಗಳ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 15 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಆದರೆ ಪರಿಹಾರದಿಂದ ಜೀವ ಮರಳಿ ತರಲು ಸಾಧ್ಯವಿಲ್ಲ. ಹಾಗೆಯೇ ಆನೆಗಳು ಮಾಡುವ ಬೆಳೆಹಾನಿಯ ಪ್ರಮಾಣ ಅಳೆಯಲು ಸಾಧ್ಯವಿಲ್ಲ. ಅರಣ್ಯ ಇಲಾಖೆ ವತಿಯಿಂದ ರೈಲ್ವೆ ಬ್ಯಾರಿಕೇಡ್, ಕಂದಕ ನಿರ್ಮಾಣ ಮತ್ತು ಸೌರ ವಿದ್ಯುತ್ ಬೇಲಿ ಹಾಕುವುದು ಇವೆಲ್ಲ ತಾತ್ಕಾಲಿಕ ಪರಿಹಾರಗಳು. ಮಾನವ- ವನ್ಯಜೀವಿ ಮುಖಾಮುಖಿಯಾದರೆ ಅಲ್ಲಿ ಪ್ರಾಣಿಗಳ ಜೀವವೂ ಮುಖ್ಯ; ಮನುಷ್ಯರ ಜೀವವೂ ಮುಖ್ಯ. ಸಾವುಗಳ ಸಂಭವಿಸದಂತೆ, ಚಕಮಕಿ ಕಡಿಮೆ ಪ್ರಮಾಣದಲ್ಲಿ ಇರುವಂತೆ ಏನೆಲ್ಲ ಮಾಡಬೇಕೋ ಅದನ್ನೆಲ್ಲ ಸರ್ಕಾರ ಮಾಡಬೇಕಿದೆ. ಮುಖ್ಯವಾಗಿ ಮೀಸಲು ಅರಣ್ಯಗಳನ್ನು ಹಾಗೆಯೇ ಇರಗೊಡುವುದು, ಮನುಷ್ಯರ ಅತಿಕ್ರಮಣವನ್ನು ಹಂತಹಂತವಾಗಿ ತಗ್ಗಿಸುವುದು ಆಗಬೇಕಿದೆ. ಆಗ ಮಾತ್ರ ಈ ಮುಖಾಮುಖಿ ತಪ್ಪಬಹುದು.

Exit mobile version