ಮಂಗನ ಕಾಯಿಲೆ ಎಂದೇ ಕರೆಸಿಕೊಳ್ಳುವ ಕ್ಯಾಸನೂರು ಕಾಡಿನ ಕಾಯಿಲೆಯ (ಕೆಎಫ್‌ಡಿ) ಪ್ರಕರಣಗಳು ಮತ್ತೆ ಮಲೆನಾಡಿನಲ್ಲಿ ಕಾಣಿಸಿಕೊಳ್ಳುತ್ತಿವೆ. ಇದು ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಕಾರ್ಯಪ್ರವೃತ್ತವಾಗುವ ಆರೋಗ್ಯ ಇಲಾಖೆ ಒಂದು ಪುರಾತನ ಲಸಿಕೆಯನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಈಗ ಪತ್ತೆಯಾಗಿರುವ ವಿಚಾರವೆಂದರೆ, ಈ ಲಸಿಕೆಗೆ ಔಷಧ ಗುಣಮಟ್ಟ ನಿಯಂತ್ರಕರ ಕೇಂದ್ರೀಯ ಸಂಘಟನೆ (Central Drugs Standard Control Organisation-CDSCO) ಅನುಮತಿಯನ್ನೇ ನೀಡಿಲ್ಲ ಎಂಬುದು. ಔಷಧ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ ನೀಡಿದ್ದ ಅನುಮತಿ 2001ಕ್ಕೇ ಅಂತ್ಯಗೊಂಡಿದೆ.
ಕಳೆದ 21 ವರ್ಷಗಳಿಂದ ಅನುಮತಿ ನವೀಕರಿಸದೆ ಈ ಲಸಿಕೆಯನ್ನು ನೀಡಲಾಗುತ್ತಿದೆ. ಅನುಮತಿ ಸಿಗದಿರಲು ಕಾರಣ ಇದರ ಗುಣಮಟ್ಟ ಸಮರ್ಪಕವಾಗಿಲ್ಲದಿರುವುದು. 1984ರಲ್ಲಿ ಪುಣೆಯ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ವೈರಾಲಜಿಯು ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿತ್ತು. ನಂತರ ಇದನ್ನು ಶಿವಮೊಗ್ಗದಲ್ಲಿಯೇ ತಯಾರಿಸಿ, ಜನರಿಗೆ ನೀಡಲಾಗುತ್ತಿತ್ತು. 2000ರ ವೇಳೆಗೆ ಕಾಯಿಲೆಯ ತೀವ್ರತೆ ಕಡಿಮೆಯಾಗಿದ್ದರಿಂದ ಈ ಲಸಿಕಾ ಕೇಂದ್ರ ಮುಚ್ಚಿತು. ಈಗ ಬೆಂಗಳೂರಿನ ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ತಯಾರಿಸಿ ನೀಡಲಾಗುತ್ತಿದೆ. ಅಂದರೆ ಪ್ರಾಣಿಗಳಿಗೆ ಲಸಿಕೆ ಉತ್ಪಾದಿಸುವ ಘಟಕದಲ್ಲಿ ಮನುಷ್ಯರ ಈ ಲಸಿಕೆಯನ್ನು ತಯಾರಿಸಲಾಗುತ್ತಿದೆ.
ಮಂಗನ ಕಾಯಿಲೆ ಬೇಸಿಗೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತದೆ. ಪ್ರತಿವರ್ಷ ಹತ್ತಾರು ಮಂದಿ ಸಾಯುತ್ತಾರೆ. 1957ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ಕಾಯಿಲೆಗೆ ಇದುವರೆಗೂ ಯಾವುದೇ ಔಷಧ ಆವಿಷ್ಕಾರವಾಗಿಲ್ಲದಿರುವುದರಿಂದ ಲಸಿಕೆಯೇ ಗತಿಯಾಗಿದೆ. ಈ ಲಸಿಕೆ ಬಹಳ ವರ್ಷಗಳ ಹಿಂದೆಯೇ ದುರ್ಬಲಗೊಂಡಿದೆ. ಲಸಿಕೆ ಪಡೆದರೂ ಮಂಗನ ಕಾಯಿಲೆ ಬರುತ್ತಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬಂದಿತ್ತು. ಆರೋಗ್ಯ ಇಲಾಖೆ 2013-14ರಲ್ಲಿ ಒಮ್ಮೆ ಮಾತ್ರ ಇದರ ಸಾಮರ್ಥ್ಯ ಪರೀಕ್ಷೆಗೆ ಒಳಪಡಿಸಿದೆ. ಈ ಕುರಿತು ಹೆಚ್ಚಿನ ಸಂಶೋಧನೆಯಾಗಬೇಕು, ಲಸಿಕೆಗೆ ಬಲ ತುಂಬಬೇಕು, ಕಾಯಿಲೆಗೆ ಔಷಧ ಪತ್ತೆಹಚ್ಚುವ ಉಪಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು ಎಂಬುದು ಈ ವಲಯದ ಸಾರ್ವಜನಿಕರ ಕೂಗು. ಆದರೆ ಸರ್ಕಾರ ಇದನ್ನು ಈವರೆಗೆ ಗಂಭೀರವಾಗಿ ಪರಿಗಣಿಸಿಲ್ಲ.
ಕೆಎಫ್‌ಡಿ ಬಗ್ಗೆ ಸಂಶೋಧನೆಗಾಗಿ ಜೆಡಿಎಸ್ – ಕಾಂಗ್ರೆಸ್ ನಾಲ್ಕು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಸಂಶೋಧನಾ ಕೇಂದ್ರ ಆರಂಭಿಸಲು 10 ಕೋಟಿ ರೂ. ಅನುದಾನ ಘೋಷಿಸಿತ್ತು. ಸಂಶೋಧನಾ ಕೇಂದ್ರವನ್ನು ಸಾಗರದಲ್ಲೇ ಮಾಡಬೇಕು ಎಂಬ ಬಗ್ಗೆ ಹೋರಾಟಗಳು ನಡೆದವು. ಆದರೆ, ಅಧಿಕಾರಿಗಳು ಮತ್ತು ವಿಜ್ಞಾನಿಗಳು ಶಿವಮೊಗ್ಗದಲ್ಲೇ ಮಾಡುವುದರ ಪರವಾಗಿದ್ದರು. ಹೀಗಾಗಿ ಕೇಂದ್ರ ಘೋಷಣೆಯಾಗಿ ನಾಲ್ಕು ವರ್ಷವಾದರೂ ಸಂಶೋಧನಾ ಕೇಂದ್ರ ಆರಂಭವಾಗಲಿಲ್ಲ. ಇತ್ತೀಚೆಗೆ ಮಂಗನ ಕಾಯಿಲೆಯಿಂದ ಸಾಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕೆಲವೊಮ್ಮೆ ಈ ಕಾಯಿಲೆ ಮಲೆನಾಡಿನಲ್ಲಿ ರೌದ್ರಾವತಾರವನ್ನೇ ತೋರಿಸಿ ಹತ್ತಾರು ಮಂದಿಯನ್ನು ಬಲಿ ತೆಗೆದುಕೊಂಡಿದ್ದೂ ಇದೆ. ಇಂಥದ್ದು ಆದಾಗ ಮಾತ್ರ ಎದ್ದು ಕೂರುವ ಸರ್ಕಾರ, ಕ್ರಮ ಕೈಗೊಳ್ಳುವುದಾಗಿ ಹೇಳಿ ಮತ್ತೆ ನಿದ್ರೆ ಜಾರಿಬಿಡುತ್ತದೆ. ಸಂತ್ರಸ್ತರು ಹಾಗೆಯೇ ಇರುತ್ತಾರೆ.
ಈ ಪರಿಸ್ಥಿತಿ ಬದಲಾಗಬೇಕು. ಇದು ಯಾವುದೋ ಕಾಡಿನ ಮೂಲೆಯಲ್ಲಿ ಯಾರಿಗೋ ಬಂದುಹೋಗುವ ಕಾಯಿಲೆ ಎಂಬ ಉಡಾಫೆ ಸಲ್ಲದು. ಒಂದು ಸಣ್ಣ ಕಿಡಿಯೇ ಕಾಳ್ಗಿಚ್ಚಾದಂತೆ ಹಬ್ಬಿದ ಕೋವಿಡ್ ವೈರಸ್ಸನ್ನು ಕಳೆದ ಮೂರು ವರ್ಷಗಳಲ್ಲಿ ನಾವು ಕಂಡಿದ್ದೇವೆ. ಮಂಗನಕಾಯಿಲೆ ಮಾರಕ ಎಂಬುದು ಈಗಾಗಲೇ ಸಿದ್ಧವಾಗಿದೆ. ಹೀಗಾಗಿ ಈ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಈಗ ಬಳಸಲಾಗುತ್ತಿರುವ ಲಸಿಕೆಯ ಕಾರ್ಯಕ್ಷಮತೆಯ ಪರೀಕ್ಷೆ ನಡೆಸಬೇಕು. ಲಸಿಕೆ ದುರ್ಬಲವಾಗಿದ್ದರೆ ಅದಕ್ಕೆ ಬಲ ತುಂಬುವ ಕೆಲಸವಾಗಬೇಕು. ಪೋಲಿಯೋ ಮಾದರಿಯಲ್ಲಿ ಲೈವ್ ವ್ಯಾಕ್ಸಿನ್ ಸಿದ್ಧಪಡಿಸಲು ನೆರವಾಗಬೇಕು. ಔಷಧ ಕಂಡುಹಿಡಿಯಲು ಹೂಡಿಕೆ ಮಾಡುವಂತೆ ಖಾಸಗಿ ಸಂಸ್ಥೆಗಳನ್ನು ಪ್ರೋತ್ಸಾಹಿಸಬೇಕು. ಕೊರೊನಾಗೆ ಒಂದು ನೀತಿ, ರೈತರನ್ನು ಬಾಧಿಸುವ ಕೆಎಫ್‌ಡಿಗೆ ಇನ್ನೊಂದು ನೀತಿ ಎಂಬುದು ಸಲ್ಲದು. ಮಲೆನಾಡನ್ನು ಕೆಎಫ್‌ಡಿ ಮುಕ್ತ ಮಾಡಲು ಸರ್ಕಾರ ಮುಂದಾಗಬೇಕು.
ಇದನ್ನೂ ಓದಿ | KFD vaccine | ಮಂಗನ ಕಾಯಿಲೆ ತಡೆ ಲಸಿಕೆಗೆ ಅನುಮತಿಯೇ ಇಲ್ಲ; ಆದರೂ ಜನರಿಗೆ ನೀಡುತ್ತಿದೆ ಸರ್ಕಾರ!