Site icon Vistara News

Gautam Gambhir : ಭಾರತ ತಂಡಕ್ಕೆ ನೂತನ ಕೋಚ್ ಆಯ್ಕೆ; ಕಾದಿದೆ ಗಂಭೀರ್- ಕೊಹ್ಲಿ ಕೋಳಿ ಜಗಳ? ನೀವೇನಂತೀರಿ?

Gautam Gambhir

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ ಆಗಿ ಮಾಜಿ ಎಡಗೈ ಬ್ಯಾಟರ್ ಗೌತಮ್ ಗಂಭೀರ್ (Gautam Gambhir) ಆಯ್ಕೆಗೊಂಡಿದ್ದಾರೆ. ಅವರ ನೇಮಕವನ್ನು ಮಂಗಳವಾರ ಬಿಸಿಸಿಐ ಪ್ರಕಟಿಸಿದೆ. ಆದರೆ, ಈ ಘೋಷಣೆಯ ತಕ್ಷಣ ಭಾರತ ತಂಡದ ಸಾಮರಸ್ಯ ಕದಡುವುದೇ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಮೂಡಿದೆ. ಅದಕ್ಕೆ ಕಾರಣ ಭಾರತ ಏಕ ದಿನ ಹಾಗೂ ಟೆಸ್ಟ್​ ತಂಡದಲ್ಲಿ ಇನ್ನೂ ವಿರಾಟ್ ಕೊಹ್ಲಿ ಆಡುತ್ತಿರುವುದು. ಸದಾ ಹಾವು, ಮುಂಗುಸಿಯಂತೆ ವರ್ತಿಸುವ ಗಂಭೀರ್​ ಹಾಗೂ ಕೊಹ್ಲಿ ನಡುವೆ ಹೊಂದಾಣಿಕೆ ಮೂಡುವುದು ಕಷ್ಟ. ಹೀಗಾಗಿ ಟೀಮ್​ ಇಂಡಿಯಾದಲ್ಲಿ ಕೊಹ್ಲಿ ಮತ್ತು ಗಂಭೀರ್ ಕೋಳಿಜಗಳ ನಿಶ್ಚಿತ ಎನ್ನಲಾಗುತ್ತಿದೆ.

ಡೆಲ್ಲಿ ಮೂಲದ ಆಟಗಾರರಾದ ವಿರಾಟ್​ ಕೊಹ್ಲಿ ಹಾಗೂ ಗಂಭೀರ್ ನಡುವೆ ಹಲವು ವರ್ಷಗಳ ಶೀತಲ ಸಮರ ನಡೆದಿದೆ. ಕೊಹ್ಲಿ ಅಭಿಮಾನಿಗಳು ಆ ಬೆಂಕಿಗೆ ಸರಿಯಾಗಿ ತುಪ್ಪ ಸುರಿಯುತ್ತಿದ್ದಾರೆ. ಹೀಗಾಗಿ ಗಂಭೀರ್ ಕೋಚಿಂಗ್​ನಲ್ಲಿ ಕೊಹ್ಲಿ ಹೇಗೆ ವರ್ತಿಸುವರು ಎಂಬುದೇ ಈಗಿನ ಪ್ರಶ್ನೆ. ಕೊಹ್ಲಿ ತಂಡದಲ್ಲಿ ಯಾರ ಮಾತನ್ನೂ ಕೇಳುವುದಿಲ್ಲ ಎಂಬ ಗುಸುಗುಸು ಇದೆ. ಇದೇ ವೇಳೆ ಗಂಭೀರ್ ಕೂಡ ಅಕ್ಕಪಕ್ಕದವರನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ ಎಂಬುದೂ ಸತ್ಯ. ಹೆಡ್​ ಕೋಚ್ ಹೇಳುವ ಮಾತನ್ನು ಕೊಹ್ಲಿ ಎಷ್ಟರ ಮಟ್ಟಿಗೆ ಕೇಳುತ್ತಾರೆ ಎಂಬ ಪ್ರಶ್ನೆ ಎಲ್ಲರಿಗೂ ಮೂಡಿದೆ. ಇದೇ ವೇಳೆ ಕೊಹ್ಲಿಯ ಸ್ಟಾರ್​ಗಿರಿಯನ್ನು ಗಂಭೀರ್ ತಂಡದ ವಿಚಾರಕ್ಕೆ ಬಂದಾಗ ಲೆಕ್ಕಕ್ಕೆ ತೆಗೆದುಕೊಳ್ಳಲಾರರರು ಎಂಬುದು ಅವರನ್ನು ಹತ್ತಿರದಿಂದ ನೋಡಿದವರಿಗೆ ಗೊತ್ತಿರುವ ವಿಷಯ.

ಕೋಚಿಂಗ್​ನಲ್ಲಿ ಗಂಭೀರ್​ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಅನುಭವ ಇಲ್ಲ. ಆದರೆ, ಐಪಿಎಲ್​ನಲ್ಲಿ ಅವರು ಮಾಡಿದ ಸಾಧನೆ ಅಪಾರ. 2022 ಹಾಗೂ 2023ರಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದ ಅವರು ಎರಡೂ ಅವಧಿಯಲ್ಲಿ ತಂಡವನ್ನು ಪ್ಲೇಆಫ್​ ಹಂತಕ್ಕೆ ಕೊಂಡೊಯ್ದಿದ್ದರು. 2024ರಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದರು. ಹೀಗಾಗಿ ಬಿಸಿಸಿಐ ಅವರ ಬಗ್ಗೆ ವಿಶ್ವಾಸ ಇಟ್ಟಿದೆ. ಹೀಗಾಗಿ ಅವರಿಗೆ ಸಾಕಷ್ಟು ಸ್ವಾತಂತ್ರ್ಯ ನೀಡಿದೆ. ಇದೇ ಕಾರಣಕ್ಕೆ ಕೊಹ್ಲಿ ಆಕ್ರಮಣಕಾರಿ ವರ್ತನೆ ಗಂಭೀರ್ ಮುಂದೆ ನಡೆಯುವುದಿಲ್ಲ ಎಂಬುದು ಖಾತರಿ. ಗಂಭೀರ್ ಕೋಚ್​ ಆಗಲು ಬಿಸಿಸಿಐ ಮುಂದೆ ಒಪ್ಪುವ ಮೊದಲು ಕೊಹ್ಲಿಯ ಅಟಾಟೋಪಗಳನ್ನು ನಿಲ್ಲಿಸಲು ಖಂಡಿತವಾಗಿಯೂ ಅನುಮತಿ ಕೋರಿರುತ್ತಾರೆ.

ಐಪಿಎಲ್​ನಲ್ಲಿ ಜಗಳ ಆರಂಭ

ವಿರಾಟ್​ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಐಪಿಎಲ್ ಆಡುವ ಕಾಲದಿಂದಲೂ ಜಗಳವಿದೆ. ಆರ್​ಸಿಬಿ ಮತ್ತು ಕೋಲ್ಕೊತಾ ನೈಟ್​ ರೈಡರ್ಸ್​ ತಂಡಗಳ ನಡುವಿನ 2015ರ ಆವೃತ್ತಿಯ ಪಂದ್ಯದಲ್ಲಿ ಗಂಭೀರ್​ ಹಾಗೂ ಕೊಹ್ಲಿ ನಡುವೆ ಮೊದಲ ಬಾರಿಗೆ ಜಗಳವಾಗಿತ್ತು. ಕೊಹ್ಲಿ ಔಟಾದಾಗ ಮಿತಿ ಮೀರಿ ಸಂಭ್ರಮಿಸಿದ್ದ ಗಂಭೀರ್ ವಿರುದ್ಧ ಕೊಹ್ಲಿ ತಮ್ಮ ಆಕ್ರಮಣಕಾರಿ ಭಾವ ತೋರಿದ್ದರು. 2023ರಲ್ಲಿ ಕೊಹ್ಲಿ ಲಕ್ನೊ ಮೆಂಟರ್ ಆಗಿದ್ದಾಗ ಎರಡು ಎರಡೆರಡು ಬಾರಿ ಪುನರಾವರ್ತನೆಗೊಂಡಿತು. ಬೆಂಗಳೂರಿ ಚರಣ ಹಾಗೂ ಲಕ್ನೊ ಚರಣದ ಪಂದ್ಯದ ವೇಳೆ ಇಬ್ಬರೂ ಒಬ್ಬರ ಮೇಲೆ ಒಬ್ಬರು ಎಗರಿ ಬಿದ್ದಿದ್ದರು. ಇದು ದೊಡ್ಡ ಚರ್ಚೆಗೆ ಕಾರಣವಾಯಿತು. ಇದಕ್ಕೆ ಲಕ್ನೊ ಬೌಲರ್ ಅಪಘಾನಿಸ್ತಾನ ಮೂಲದ ನವಿನ್ ಉಲ್​ ಹಕ್ ಕೂಡ ಕಿಡಿ ಹಚ್ಚಿದ್ದರು. ಹೀಗಾಗಿ ಕೊಹ್ಲಿ ಮತ್ತು ಗಂಭಿರ್ ನಡುವಿನ ನಿರಂತರ ಎನ್ನಲಾಗುತ್ತಿದೆ.

ರಾಜಿ ಮಾಡಿದ್ದು ಕೆಲಸ ಮಾಡಬಹುದೇ?

ಕೊಹ್ಲಿ ಹಾಗೂ ಗಂಭೀರ್​ 2024ನೇ ಆವೃತ್ತಿಯ ಐಪಿಎಲ್ ವೇಳೆ ರಾಜಿ ಮಾಡಿಕೊಂಡಿದ್ದಾರೆ. ಆರ್​ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದ ವೇಳೆ ಅರ್ಧ ಶತಕ ಬಾರಿಸಿದ್ದ ಕೊಹ್ಲಿಯನ್ನು ಡ್ರಿಂಕ್ಸ್ ಬ್ರೇಕ್ ವೇಳೆ ಗಂಭೀರ್​ ಅಭಿನಂದಿಸಿದ್ದರು. ಇಬ್ಬರೂ ಹಸ್ತಲಾಘವ ಮಾಡಿ ಅಪ್ಪಿಕೊಂಡಿದ್ದರು. ಆದರೆ ಈ ರಾಜಿಗೆ ಎಷ್ಟು ದಿನದ ಗ್ಯಾರಂಟಿ ಗೊತ್ತಿಲ್ಲ ಒಂದು ಮಾತಿಗೆ ತಿರುಗಿ ಬೀಳುವ ಅವರಿಬ್ಬರೂ ಈ ಸಂಬಂಧವನ್ನು ಎಷ್ಟು ದಿನ ಮುಂದುವರಿಸಬಹುದು?

ಇದನ್ನೂ ಓದಿ:Gautam Gambhir : ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ನೇಮಕ

ಕುಂಬ್ಳೆ ರಾಜೀನಾಮೆ ನೀಡುವಂತೆ ಮಾಡಿದ್ದ ಕೊಹ್ಲಿ

ಭಾರತ ತಂಡದ ಕೋಚ್ ಆಗಿದ್ದ ಮಾಜಿ ಲೆಜೆಂಡ್​ ಸ್ಪಿನ್ನರ್ ಅನಿಲ್ ಕುಂಬ್ಳೆ ತಮ್ಮ ಹುದ್ದೆಗೆ ಏಕಾಏಕಿ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಯಾಕೆಂದರೆ ಆ ವೇಳೆ ಕೊಹ್ಲಿ ಭಾರತ ತಂಡ ನಾಯಕರಾಗಿದ್ದರು. ಅದು ಕೊಹ್ಲಿಯ ಆಕ್ರಮಣಶೀಲತೆಯ ಉತ್ತುಂಗದ ಸಮಯವಾಗಿತ್ತು. ಕುಂಬ್ಳೆ ಹೇಳಿದ ಮಾತುಗಳನ್ನು ಕೊಹ್ಲಿ ಕೇಳುತ್ತಿರಲಿಲ್ಲ ಎಂಬ ಆರೋಪ ಆ ವೇಳೆ ಕೇಳಿ ಬಂದಿತ್ತು. ಇದಕ್ಕೆ ಬೇಸತ್ತು ಅವರು ಏಕಾಏಕಿ ರಾಜೀನಾಮೆ ನೀಡಿದ್ದ ಗುಟ್ಟಾಗಿ ಉಳಿದಿಲ್ಲ.

ಕೊಹ್ಲಿಗೆ ಕಷ್ಟ

ಹಾಲಿ ಕ್ರಿಕೆಟ್ ತಂಡದಲ್ಲಿ ಕೊಹ್ಲಿಗೆ ಹಿಂದಿನಷ್ಟು ಕಿಮ್ಮತ್ತಿಲ್ಲ. ಅವರ ಆಟ ಮುಗಿದಿಲ್ಲವಾದರೂ ಬಿಸಿಸಿಐ ಅವರು ಹೇಳಿದಂತೆ ಕೇಳುವ ಸ್ಥಿತಿಯಲ್ಲಿ ಇಲ್ಲ. ಇನ್ನು ಗಂಭೀರ್ ಜತೆ ಒಪ್ಪಂದ ಮಾಡುವಾಗ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಮೊದಲೇ ಕಂಡು ಹಿಡಿದಿರುತ್ತಾರೆ. ಒಂದು ವೇಳೆ ಕೊಹ್ಲಿ ‘ಕಿಮಕ್​’ ಅಂದರೆ ಅವರಿಗೆ ಜಾಗ ಖಾಲಿ ಮಾಡಲು ಹೇಳುವುದು ಖಾತರಿ. ವಿರಾಟ್​ ಈಗಾಗಲೇ ಟಿ20 ಮಾದರಿಗೆ ವಿದಾಯ ಹೇಳಿದ್ದಾರೆ. ಇನ್ನು ಏಕದಿನ ಮತ್ತು ಟೆಸ್ಟ್​ ಇದೆ. ಕೊಹ್ಲಿ 2025ರ ಚಾಂಪಿಯನ್ಸ್ ಟ್ರೋಫಿ ತನಕ ಏಕ ದಿನ ಮಾದರಿಯಲ್ಲಿ ಆಡಬಹುದು ಎಂದು ಹೇಳಲಾಗಿದೆ. ಅಲ್ಲಿಂದ ಮತ್ತೆ ಉಳಿದಿರುವುದು ಟೆಸ್ಟ್ ಮಾತ್ರ. ಹೀಗಾಗಿ ಕೊಹ್ಲಿ ಮತ್ತು ಗಂಭೀರ್ ಮುಖಾಮುಖಿಯ ಸಮಯ ಕಡಿಮೆಯಾಗಬಹುದು. ಆದಾಗ್ಯೂ ಇಬ್ಬರ ಸಂಯಮ ಮಾತ್ರ ಅವರ ಗೌರವ ಕಾಪಾಡಬಹುದು.

Exit mobile version