Site icon Vistara News

Women PG: ಬೆಂಗಳೂರಿನಲ್ಲಿ ಮಹಿಳಾ ಪಿಜಿಗಳಿಗೆ ಇನ್ನು ಮುಂದೆ ಕಟ್ಟುನಿಟ್ಟಿನ ರೂಲ್ಸ್! ಫಾಲೋ ಮಾಡದಿದ್ದರೆ ಕೇಸ್

women PG bangalore

ಬೆಂಗಳೂರು: ರಾಜಧಾನಿಯಲ್ಲಿರುವ ಮಹಿಳಾ ಪಿಜಿಗಳಿಗೆ (Women PG) ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲು ಬಿಬಿಎಂಪಿ (BBMP) ಹಾಗೂ ಪೊಲೀಸ್‌‍ ಇಲಾಖೆ (Bangalore Police) ನಿರ್ಧರಿಸಿವೆ. ಕೆಲ ದಿನಗಳ ಹಿಂದೆ ಕೋರಮಂಗಲದಲ್ಲಿರುವ ಮಹಿಳಾ ಪಿಜಿಗೆ ವ್ಯಕ್ತಿಯೊಬ್ಬ ನುಗ್ಗಿ ಯುವತಿಯೊಬ್ಬರನ್ನು ಕೊಲೆ (Murder in PG) ಮಾಡಿ ಪರಾರಿಯಾಗಿದ್ದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಈ ನಿರ್ಧಾರಕ್ಕೆ ಬರಲಾಗಿದೆ.

ಹೊಸ ನಿಯಮಗಳ ಪ್ರಕಾರ ನಗರದಲ್ಲಿರುವ ಪಿಜಿಗಳು ಇನ್ನು ಮುಂದೆ ಕಡ್ಡಾಯವಾಗಿ ಪಾಲಿಕೆ ಪರವಾನಗಿ ಪಡೆದುಕೊಳ್ಳಬೇಕು. ಪಿಜಿಗೆ ಬರುವ ಎಲ್ಲಾ ವ್ಯಕ್ತಿಗಳ ಗುರುತಿನ ಚೀಟಿ ಮತ್ತು ಇತ್ತೀಚಿನ ಭಾವಚಿತ್ರ ಪಡೆಯಬೇಕು. ರಕ್ತ ಸಂಬಂಧಿಕರು ಹಾಗೂ ಸ್ನೇಹಿತರ ವಿವರಗಳು ಹಾಗೂ ಮೊಬೈಲ್‌ ಸಂಖ್ಯೆಗಳನ್ನೂ ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಪಿಜಿಗೆ ಭೇಟಿ ನೀಡಲು ಬರುವ ಸಂಬಂಧಿಕರು, ಸ್ನೇಹಿತರು ಸೇರಿದಂತೆ ಯಾರೇ ಬಂದರು ಅವರ ಎಲ್ಲಾ ವಿವರಗಳನ್ನು ಪ್ರತ್ಯೇಕವಾಗಿ ಪಡೆಯಬೇಕು ಎಂದು ಸೂಚಿಸಲಾಗಿದೆ.

ಪಿಜಿಯಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಕೆ ಮಾಡಬೇಕು. ಅಗ್ನಿ ಅನಾಹುತದ ಕುರಿತಂತೆ ಅಗತ್ಯ ಸುರಕ್ಷತೆ ಕ್ರಮಗಳನ್ನು ಅನುಸರಿಸಬೇಕು. ಮಾದಕ ವಸ್ತುಗಳ ಸೇವನೆ ಮತ್ತು ಸಂಗ್ರಹಣೆ ಕಾನೂನು ಬಾಹಿರ. ಇಂತಹದಕ್ಕೆ ಪಿಜಿ ಒಳಗೆ ಅವಕಾಶ ನೀಡಬಾರದು. ಸ್ಥಳೀಯ ಪೊಲೀಸ್‌‍ ಠಾಣೆ, ತುರ್ತು ಸ್ಪಂದನೆಯ-112, ವೈದ್ಯಕೀಯ ಸೇವೆಯ-103, ಮತ್ತು ಸೈಬರ್‌ ಅಪರಾಧಕ್ಕೆ ಸಂಬಂಧಪಟ್ಟ – 1930 ಮುಂತಾದ ಅಗತ್ಯ ಸೇವೆಗಳ ದೂರವಾಣಿ ಸಂಖ್ಯೆಗಳನ್ನು ಎಲ್ಲರಿಗೂ ಕಾಣುವಂತೆ ಹಾಕಬೇಕು. ಪ್ರಥಮ ಚಿಕಿತ್ಸೆ ಸಲಕರಣೆಗಳನ್ನು ಇಟ್ಟುಕೊಳ್ಳಬೇಕು.

ಪಿಜಿಯಲ್ಲಿ ಕೆಲಸ ಮಾಡುವ ಅಡುಗೆಯವರು, ಸೆಕ್ಯೂರಿಟಿ ಗಾರ್ಡ್‌ ಹಾಗೂ ಇನ್ನಿತರೇ ವ್ಯಕ್ತಿಗಳ ಪೂರ್ವಾಪರಗಳ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ವಿದೇಶಿ ಪ್ರಜೆಗಳು ಪಿ.ಜಿ ಯಲ್ಲಿ ನೆಲೆಸಿದ್ದಲ್ಲಿ, ಅವರ ಮಾಹಿತಿಯನ್ನು ಸ್ಥಳೀಯ ಪೊಲೀಸ್‌‍ ಠಾಣೆಗೆ ನೀಡುವುದು. ಪಿಜಿಯಲ್ಲಿ ವಾಸಕ್ಕೆ ಪ್ರವೇಶ ಪಡೆದಿರುವವರನ್ನು ಹೊರತು ಪಡಿಸಿ ಇತರೇ ಯಾರಿಗೂ ವಾಸ್ತವ್ಯಕ್ಕೆ ಅವಕಾಶ ನೀಡಲೇಬಾರದು.

ಸರ್ವೋಚ್ಚ ನ್ಯಾಯಾಲಯದ ಆದೇಶದ ಅನುಸಾರ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಯಾವುದೇ ಧ್ವನಿವರ್ಧಕಗಳನ್ನು ನಿಷೇಧಿಸಬೇಕು. ಆಹಾರ ಗುಣಮಟ್ಟದ ಬಗ್ಗೆ ಪಿಜಿ ಮಾಲೀಕರು ನಿಗಾ ವಹಿಸಬೇಕು. ತಿಂಗಳಲ್ಲಿ ಒಂದು ದಿನ ಸ್ಥಳೀಯ ಪೊಲೀಸರು ಪಿಜಿಯನ್ನೂ ಪರಿಶೀಲನೆ ನಡೆಸಬೇಕು. ಒಂದು ವೇಳೆ ಸುರಕ್ಷತಾ ಕ್ರಮ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಅಹಿತಕರ ಘಟನೆ ಸಂಭವಿಸಿದರೆ ಸಂಬಂಧಪಟ್ಟ ಪಿಜಿ ಮಾಲೀಕರು ಅಥವಾ ಅದರ ವ್ಯವಸ್ಥಾಪಕರ ವಿರುದ್ಧ ಪೊಲೀಸರಿಗೆ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕೆಲವು ದಿನಗಳ ಹಿಂದೆ ಕೋರಮಂಗಲದ ಪಿಜಿಯೊಂದಕ್ಕೆ ನುಗ್ಗಿದ ವ್ಯಕ್ತಿ ಅಲ್ಲಿದ್ದ ಯುವತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಆತನನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿತ್ತು. ಆ ಪಿಜಿಯಲ್ಲಿದ್ದ ಸಿಸಿಟಿವಿ ಫೂಟೇಜ್‌ನ ಮೂಲಕ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಿತ್ತು.

ಇದನ್ನೂ ಓದಿ: Murder in PG: ಪಿಜಿಯಲ್ಲಿ ಯುವತಿ ಕೊಲೆ ಮಾಡಿದ ಪಾತಕಿ ಮಧ್ಯಪ್ರದೇಶದಲ್ಲಿ ಸೆರೆ

Exit mobile version