Site icon Vistara News

PM Narendra Modi: ಉಗ್ರರನ್ನು ಅವರ ತಾಯ್ನೆಲದಲ್ಲೇ ಕೊಲ್ಲುತ್ತೇವೆ: ಗುಡುಗಿದ ಪಿಎಂ ನರೇಂದ್ರ ಮೋದಿ

pm Narendra Modi

ಹೊಸದಿಲ್ಲಿ: ಕೇಂದ್ರದದಲ್ಲಿದ್ದ ಹಿಂದಿನ ಕಾಂಗ್ರೆಸ್‌ ಸರ್ಕಾರಗಳ ವಿರುದ್ಧ ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ನವ ಭಾರತವು (India) ಇತರ ದೇಶಗಳಿಗೆ ಭಯೋತ್ಪಾದಕರ (terrorists) ಬಗ್ಗೆ ದಾಖಲೆಗಳನ್ನು (dossiers)‌ ಕಳುಹಿಸುವುದಿಲ್ಲ. ಬದಲಾಗಿ ಅವರಿಗೆ “ಡೋಸ್” ನೀಡಿ ಅವರ ತವರು ನೆಲದಲ್ಲೇ (Home turf) ಅವರನ್ನು ಕೊಲ್ಲುತ್ತದೆ ಎಂದು ಹೇಳಿದ್ದಾರೆ.

“ಹತ್ತು ವರ್ಷಗಳ ಹಿಂದೆ ದೇಶವು ಭಯೋತ್ಪಾದನೆಯಿಂದ ಬಳಲುತ್ತಿತ್ತು. ಆದರೆ ಕಾಂಗ್ರೆಸ್, ಭಯೋತ್ಪಾದನೆಯ ಮೂಲವನ್ನು ತಿಳಿದಿದ್ದರೂ, ಪಾಕಿಸ್ತಾನಕ್ಕೆ ದಸ್ತಾವೇಜನ್ನು ಕಳುಹಿಸುತ್ತಿತ್ತು” ಎಂದು ಗುಜರಾತ್‌ನ ಸಬರ್ಕಾಂತ ಜಿಲ್ಲೆಯ ಹಿಮತ್‌ನಗರ ನಗರದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಹೇಳಿದರು. “ಇಂದು, ಭಾರತವು ಭಯೋತ್ಪಾದನೆಯ ನೇತಾರರಿಗೆ ದಾಖಲೆಗಳನ್ನು ಕಳುಹಿಸುವುದಿಲ್ಲ. ಆದರೆ ಅವರಿಗೆ ಡೋಸ್ ನೀಡಿ ಅವರ ಮನೆಯ ಒಳಗೇ ಕೊಲ್ಲುತ್ತದೆ” ಎಂದಿದ್ದಾರೆ.

ತಮ್ಮ ಭಾಷಣದಲ್ಲಿ ಪ್ರಧಾನಿ ಕಾಂಗ್ರೆಸ್ ಅನ್ನು ಗುರಿಯಾಗಿಟ್ಟುಕೊಂಡು, ಭಾರತದಲ್ಲಿ ಮುಸ್ಲಿಂ ಮಹಿಳೆಯರು ವೋಟ್ ಬ್ಯಾಂಕ್ ರಾಜಕಾರಣದ ದೊಡ್ಡ ಬಲಿಪಶುಗಳು ಎಂದು ಹೇಳಿದರು. “ನಮ್ಮ ಮುಸ್ಲಿಂ ಸಹೋದರಿಯರು ವೋಟ್ ಬ್ಯಾಂಕ್ ರಾಜಕಾರಣದ ಅತಿ ದೊಡ್ಡ ಬಲಿಪಶುಗಳು. ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ ಕಾಂಗ್ರೆಸ್ ಮುಸ್ಲಿಂ ಸಹೋದರಿಯರಿಗೆ ಭದ್ರತೆಯನ್ನು ನೀಡಲಿಲ್ಲ. ತ್ರಿವಳಿ ತಲಾಖ್ ರದ್ದತಿಯು ಮಹಿಳೆಯರಿಗೆ ಮಾತ್ರವಲ್ಲದೆ ಕುಟುಂಬಗಳಿಗೆ ಭದ್ರತೆಯನ್ನು ಒದಗಿಸಿದೆ. ಅವರು (ಕಾಂಗ್ರೆಸ್) ವೋಟ್ ಬ್ಯಾಂಕ್‌ಗಾಗಿ ತ್ರಿವಳಿ ತಲಾಖ್ ಪದ್ಧತಿಯನ್ನು ನಿಲ್ಲಿಸಲಿಲ್ಲ…” ಎಂದು ಪ್ರಧಾನಿ ಪ್ರತಿಪಾದಿಸಿದರು.

“ನಾನು ಮತ ಬ್ಯಾಂಕ್ ಬಗ್ಗೆ ಚಿಂತಿಸುವುದಿಲ್ಲ. ನಾನು ಚುನಾವಣೆಯಲ್ಲಿ ಗೆಲ್ಲಲು ಕೆಲಸ ಮಾಡುವುದಿಲ್ಲ. ನಾವು ಮುಸ್ಲಿಂ ಮಹಿಳೆಯರ ಜೀವನವನ್ನು ಸುಲಭಗೊಳಿಸಲು ಬಯಸಿದ್ದು, ತ್ರಿವಳಿ ತಲಾಖ್ ಅನ್ನು ಕಾನೂನುಬಾಹಿರಗೊಳಿಸಿದ್ದೇವೆ…” ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಪುನರಾಯ್ಕೆಯಾದರೆ ದೇಶದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಕಾಂಗ್ರೆಸ್ ನಾಯಕರು ಎಚ್ಚರಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ (Rahul Gandhi) ವಿರುದ್ಧ ವ್ಯಂಗ್ಯವಾಡಿದರು. “ಕಾಂಗ್ರೆಸ್‌ನ ʻಶೆಹಜಾದಾʼ ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ ದೇಶದಲ್ಲಿ ಬೆಂಕಿ ಬೀಳುತ್ತದೆ ಎಂದು ಹೇಳುತ್ತಿದ್ದಾರೆ. ವಾಸ್ತವ ಏನೆಂದರೆ, ಕಾಂಗ್ರೆಸ್‌ನ ಕನಸುಗಳು ಸುಟ್ಟು ಬೂದಿಯಾಗಿವೆ…” ಎಂದು ಮೋದಿ ಹೇಳಿದರು.

“ಕಾಂಗ್ರೆಸ್ ನಾಯಕರು ಈಗ ಸಂವಿಧಾನವು ಅಪಾಯದಲ್ಲಿದೆ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲಾಗುವುದು ಎಂದು ಹೇಳುತ್ತಿದ್ದಾರೆ. ವಾಸ್ತವದಲ್ಲಿ, ಕಾಂಗ್ರೆಸ್ ತನ್ನ 70 ವರ್ಷಗಳ ಆಡಳಿತದಲ್ಲಿ ಇಡೀ ದೇಶದಲ್ಲಿ ಸಂವಿಧಾನವನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ. ನಮ್ಮ ಸಂವಿಧಾನವನ್ನು ಕಾಶ್ಮೀರದಲ್ಲಿ ಜಾರಿಗೊಳಿಸಿರಲಿಲ್ಲ. ನಾನು ಸಂವಿಧಾನಕ್ಕೆ ಬದ್ಧನಾಗಿರುವ ಕಾರಣ ಅದನ್ನು ಮಾಡಿದೆ” ಎಂದು ಅವರು ಒತ್ತಿ ಹೇಳಿದರು.

ಇದನ್ನೂ ಓದಿ: Shyam Rangeela: ಮೋದಿಯನ್ನು ಮಿಮಿಕ್ರಿ ಮಾಡಿ ಖ್ಯಾತಿಯಾದ ಕಲಾವಿದ ಈಗ ಪ್ರಧಾನಿ ವಿರುದ್ಧವೇ ಕಣಕ್ಕೆ!

Exit mobile version