Site icon Vistara News

Narendra Modi : ನಾನು ಬದುಕಿರುವವರೆಗೂ ಮುಸ್ಲಿಮರಿಗೆ ಧರ್ಮದ ಆಧಾರದ ಮೀಸಲಾತಿ ಇಲ್ಲ ಎಂದ ಮೋದಿ

Narendra modi

ನವದೆಹಲಿ: ನಾನು ಬದುಕಿರುವವರೆಗೂ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಸಿಗುತ್ತಿರುವ ಮೀಸಲಾತಿಯ ಪಾಲನ್ನು ಧರ್ಮದ ಆಧಾರದಲ್ಲಿ ಮುಸ್ಲಿಮರಿಗೆ ಕೊಡಲು ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಮಂಗಳವಾರ ಹೇಳಿದ್ದಾರೆ. ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್​ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದನ್ನು ಪ್ರೇರೇಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಅಲ್ಲದೆ, ತಮ್ಮ ಮೂರನೇ ಅವಧಿಯಲ್ಲಿ ಸಂವಿಧಾನದ 75 ನೇ ವರ್ಷವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತನೆ ಎಂದು ಹೇಳಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಪರೋಕ್ಷ ದಾಳಿ ನಡೆಸಿದ ಮೋದಿ, ರಾಜ್ಯದಲ್ಲಿ ಡಬಲ್ ಆರ್ (ಆರ್​ಆರ್​ಆರ್​​) ತೆರಿಗೆ ಮೂಲಕ ಸಂಗ್ರಹಿಸಿದ ಹಣವನ್ನು ದೆಹಲಿಗೆ ಹರಿಸಲಾಗುತ್ತಿದೆ ಎಂದು ಆರೋಪಿಸಿದರು. ಜಾಗತಿಕ ಮೆಚ್ಚುಗೆ ಪಡೆದ ಬ್ಲಾಕ್ಬಸ್ಟರ್ ತೆಲುಗು ಚಿತ್ರ ‘ಆರ್​ಆರ್​​ಆರ್​ ಅನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ನಕಲಿ ವೀಡಿಯೊ ಪ್ರಕರಣದ ಬಗ್ಗೆ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡ ಅವರು, ಜನರನ್ನು ದಾರಿತಪ್ಪಿಸಲು ಮತ್ತು ಸಮಾಜದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಕಾಂಗ್ರೆಸ್​ ಈ ರೀತಿ ಮಾಡುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತಿನ ಶೇಕಡಾ 55 ರಷ್ಟು ಆನುವಂಶಿಕ ತೆರಿಗೆಯನ್ನು ವಿಧಿಸುತ್ತದೆ ಎಂದು ಆರೋಪಿಸಿದ ಮೋದಿ, ಇಡೀ ಜಗತ್ತು ಆರ್ಥಿಕವಾಗಿ ಪ್ರಗತಿ ಹೊಂದುತ್ತಿರುವಾಗ ಹಿಂದಿನ ಯುಪಿಎ ಸರ್ಕಾರದ ಅಡಿಯಲ್ಲಿ ಭಾರತವು ನೀತಿ ನಿಷ್ಕ್ರಿಯತೆಯಿಂದ ಬಳಲುತ್ತಿತ್ತು ಎಂದು ಹೇಳಿದರು.

ಇದನ್ನೂ ಓದಿ: Fact Check : ಕರ್ನಾಟಕದವರು ಪಾಪಿಗಳು ಅಂಥ ಹೇಳಿದ್ರಾ ಮೋದಿ; ಕಾಂಗ್ರೆಸ್ ಮಾಡಿದ ಪೋಸ್ಟ್​ ಸುಳ್ಳಾ? ಇಲ್ಲಿದೆ ನಿಜಾಂಶ

“ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅವರು ಆನುವಂಶಿಕ ತೆರಿಗೆಯನ್ನು ತರುತ್ತಾರೆ. ಪಿತ್ರಾರ್ಜಿತ ಆಸ್ತಿಯ ಮೇಲೆ (ಪೋಷಕರಿಂದ ಪಡೆದ) ಅರ್ಧಕ್ಕಿಂತ ಹೆಚ್ಚು ತೆರಿಗೆ ಸಂಗ್ರಹಿಸಲು ಕಾಂಗ್ರೆಸ್ ಯೋಜಿಸುತ್ತಿದೆ” ಎಂದು ಅವರು ಹೇಳಿದ್ದಾರೆ.

ಸುಳ್ಳು ಭರವಸೆ

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೆಲ್ಲಾ ಅದು ಐದು ರಾಜಕೀಯ ಅಜೆಂಡಾಗಳನ್ನು ಹೊಂದಿತ್ತು. ಮೊದಲನೆಯದು, ಸುಳ್ಳು ಭರವಸೆಗಳು; ಎರಡನೆಯದು, ವೋಟ್ ಬ್ಯಾಂಕ್ ರಾಜಕಾರಣ, ಮೂರನೆಯದು, ಮಾಫಿಯಾ ಮತ್ತು ಅಪರಾಧಿಗಳನ್ನು ಬೆಂಬಲಿಸುವುದು, ನಾಲ್ಕನೆಯದು ವಂಶಪಾರಂಪರ್ಯ ರಾಜಕಾರಣ ಮತ್ತು ಐದನೆಯದು ಭ್ರಷ್ಟಾಚಾರ. ಮೊದಲು ತೆಲಂಗಾಣವನ್ನು ಲೂಟಿ ಮಾಡಿದ್ದು ಬಿಆರ್​ಎಸ್​. ಈಗ ಕಾಂಗ್ರೆಸ್ ಎಂದು ಮೋದಿ ಆರೋಪಿಸಿದರು.

Exit mobile version