‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎಂಬುದು ಸಾಮಾನ್ಯ ಘೋಷಣೆ. ಆದರೆ ಸ್ಮೋಕಿಂಗ್ ಬಿಡಿ ಎಂದರೆ ಜನ ಮುಖ ತಿರುಗಿಸುತ್ತಾರೆ. ಧೂಮಪಾನದಿಂದ ಉಂಟಾಗುವ ಸೈಡ್ ಎಫೆಕ್ಟ್ ಒಂದೆರಡಲ್ಲ. ಇದು ಜನರ ಲೈಂಗಿಕ ಜೀವನದ ಮೇಲೂ ದುಷ್ಪರಿಣಾಮ ಬೀರುತ್ತದೆ. ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ, ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನು (May 31, No Tobacco Day) ಆಚರಿಸಲಾಗುತ್ತದೆ. ತಂಬಾಕು ಸೇವನೆಯು ಬಹಳಷ್ಟು ಆರೋಗ್ಯ-ಅಪಾಯಕಾರಿ ಕಾಯಿಲೆಗಳನ್ನು ಉಂಟುಮಾಡುತ್ತದೆ ಎಂಬುದನ್ನು ಪ್ರತ್ಯೇಕ ಹೇಳಬೇಕಾಗಿಲ್ಲ, ಅದರ ಅತಿಯಾದ ಸೇವನೆಯಿಂದ ಈಗಾಗಲೇ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಬದುಕಿರುವವರೂ ನಾನಾ ಕಾಯಿಲೆಗಳಿಂದ, ಲೈಂಗಿಕ ಅಸಮರ್ಥತೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಧೂಮಪಾನವು ದೀರ್ಘಕಾಲದ ಕೆಮ್ಮು, ದೀರ್ಘಕಾಲದ ಲಾರಿಂಜೈಟಿಸ್, ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳು ಸೇರಿದಂತೆ ಬಹಳಷ್ಟು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಲೈಂಗಿಕ ಪ್ರಚೋದನೆಯ ಮೇಲೂ ತಂಬಾಕು ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಭಾರತದಲ್ಲಿ ಸಾಮಾನ್ಯವಾಗಿ ಸೆಕ್ಸ್ ಎಂದರೆ ಹೊರ ನೋಟಕ್ಕೆ ಮಡಿವಂತಿಕೆಯ ವಿಷಯ! ಹಾಗಾಗಿ ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಜನ ಸಾಮಾನ್ಯವಾಗಿ ಈ ವಿಷಯದ ಬಗ್ಗೆ ಹೇಳಿಕೊಳ್ಳುವುದಿಲ್ಲ. ಧೂಮಪಾನವು ಬೆಡ್ ರೂಮ್ ನಲ್ಲೂ ತಮಗೆ ಕಾಟ ಕೊಡುತ್ತದೆ ಎಂಬುದು ಅನೇಕ ಜನರಿಗೆ ತಿಳಿದಿಲ್ಲ!
ಇಂದಿನ ಪೀಳಿಗೆಯ ಸಾಕಷ್ಟು ಪುರುಷರು ಮತ್ತು ಮಹಿಳೆಯರು ಧೂಮಪಾನದ ಚಟ ಹೊಂದಿದ್ದಾರೆ. ಇದು ಅವರ ಲೈಂಗಿಕ ಜೀವನದ ಮೇಲೆ ಪರಿಣಾಮ ಪರೋಕ್ಷವಾಗಿ ಬೀರುತ್ತದೆ. ಸಂಶೋಧನೆಯ ಪ್ರಕಾರ, ನಿಕೋಟಿನ್, ಕಾರ್ಬನ್ ಮಾನಾಕ್ಸೈಡ್ ಅಥವಾ ಕೆಲವು ಸ್ವತಂತ್ರ ರಾಡಿಕಲ್‌ಗಳು ಸೇರಿದಂತೆ ಸಿಗರೇಟ್‌ಗಳಲ್ಲಿ ಇರುವ ವಸ್ತುಗಳು ರಕ್ತನಾಳಗಳು ಸಂಕುಚಿತಗೊಳ್ಳಲು ಕಾರಣವಾಗುತ್ತವೆ. ಇದರಿಂದಾಗಿ ಪುರುಷರು ಮತ್ತು ಮಹಿಳೆಯರು ಲೈಂಗಿಕತೆಯ ಸಮಸ್ಯೆ ಎದುರಿಸುವಂತಾಗುತ್ತದೆ.
ಪುರುಷರ ಲೈಂಗಿಕ ಆರೋಗ್ಯದ ಮೇಲೆ ಧೂಮಪಾನದ ಪರಿಣಾಮ ಏನು?|
ಧೂಮಪಾನವು ಮನುಷ್ಯನ ಲೈಂಗಿಕ ಜೀವನದ ಮೇಲೆ ಉಂಟುಮಾಡುವ ದೊಡ್ಡ ಪರಿಣಾಮವೆಂದರೆ ಪುರುಷ ಅಂಗದ ನಿಮಿರುವಿಕೆಯನ್ನು ತಗ್ಗಿಸುತ್ತದೆ. ಲೈಂಗಿಕ ಕ್ರಿಯೆ ಸರಿಯಾಗಿ ನಡೆಯಬೇಕಾದರೆ ಸೂಕ್ತ ಸಮಯದಲ್ಲಿ ಪುರುಷಾಂಗ ಉದ್ರೇಕಗೊಳ್ಳಬೇಕು ಮತ್ತು ಸ್ತ್ರೀ ಅಂಗದ ಒಳಗೆ ಪ್ರವೇಶಕ್ಕೆ ಸಜ್ಜಾಗಬೇಕು. ಪ್ರವೇಶದ ನಂತರ ವೀರ್ಯ ಸ್ಖಲನವೂ ಆಗಬೇಕು. ಆಗ ಮಾತ್ರ ಗಂಡು-ಹೆಣ್ಣು ಇಬ್ಬರಿಗೂ ಸರಿಯಾದ ತೃಪ್ತಿಯ ಭಾವನೆ ಉಂಟಾಗುತ್ತದೆ. ಸಿಗರೇಟ್ ಸೇವನೆ ಈ ಎಲ್ಲ ಪ್ರಕ್ರಿಯೆಗಳನ್ನು ಬುಡಮೇಲು ಮಾಡಿಬಿಡುತ್ತದೆ.
ದೇಹದಲ್ಲಿ ರಕ್ತ ಪರಿಚಲನೆಯ ಮೇಲೆ ಸಿಗರೇಟ್ ಪರಿಣಾಮ ಬೀರುತ್ತದೆ ಮತ್ತು ಪುರುಷ ಜನನಾಂಗವನ್ನು ಅಸಮರ್ಪಕ ರಕ್ತದ ಹರಿವಿನಿಂದ ನಿಷ್ಕ್ರಿಯಗೊಳಿಸಿ ಬಿಡುತ್ತದೆ!
ಅಲ್ಲದೆ, ಸಿಗರೇಟ್ ಹೊರಸೂಸುವ ಹೊಗೆ ಕಾಮಾಸಕ್ತಿ ಮತ್ತು ಬಯಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಿಗರೇಟಿನ ಹೊಗೆಯ ಪರಿಣಾಮ ಟೆಸ್ಟೋಸ್ಟೆರಾನ್ ಸ್ರವಿಸುವಿಕೆ ಕಡಿಮೆಯಾಗುತ್ತದೆ. ಲೈಂಗಿಕ ದೌರ್ಬಲ್ಯಗಳು ಕಾಣಿಸಿಕೊಳ್ಳಲು ಇದೇ ಮೂಲ ಕಾರಣವಾಗಿರುತ್ತದೆ. ಜನರು ಇದನ್ನು ಅರ್ಥ ಮಾಡಿಕೊಳ್ಳದೆ ಬೇರೆ ಸಮಸ್ಯೆಗಳಿರಬಹುದು ಎಂದು ಭಾವಿಸುತ್ತಾರೆ.
ಮಹಿಳೆಯರ ಲೈಂಗಿಕ ಆರೋಗ್ಯದ ಮೇಲೆ ಸ್ಮೋಕಿಂಗ್ ಎಫೆಕ್ಟ್ ಏನು?
ಮಹಿಳೆಯರೂ ಧೂಮಪಾನದ ಸೈಡ್ ಎಫೆಕ್ಟ್ ಎದುರಿಸುತ್ತಾರೆ. ಏಕೆಂದರೆ ರಕ್ತ ಪರಿಚಲನೆ ಕಡಿಮೆಯಾಗಿ ಯೋನಿ ದ್ರವಿಸುವಿಕೆ ಕಡಿಮೆಯಾಗುತ್ತದೆ. ಶುಷ್ಕತೆಯನ್ನು ಉಂಟುಮಾಡುತ್ತದೆ. ಲೈಂಗಿಕ ಪ್ರಚೋದನೆಯನ್ನು ಸೀಮಿತಗೊಳಿಸುತ್ತದೆ. ಧೂಮಪಾನ ಮಾಡುವಾಗ ಗರ್ಭನಿರೋಧಕ ಮಾತ್ರೆಗಳಂತೂ ಬಳಸಲೇ ಬಾರದು. ಒಂದು ವೇಳೆ ಗರ್ಭ ನಿರೋಧಕಗಳನ್ನು ಬಳಸಿದರೆ ರಕ್ತ ಪರಿಚಲನೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಧೂಮಪಾನವು ಪುರುಷರು ಮತ್ತು ಮಹಿಳೆಯರ ಫಲವತ್ತತೆಯ ಮೇಲೂ ದುಷ್ಪರಿಣಾಮ ಉಂಟುಮಾಡುತ್ತದೆ. ಧೂಮಪಾನವು ಲೈಂಗಿಕ ಪ್ರಚೋದನೆ ಮಾತ್ರವಲ್ಲ, ಎರಡೂ ಲಿಂಗಗಳ ಫಲವತ್ತತೆಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಅಂದರೆ ಸಂತಾನೋತ್ಪತ್ತಿ ಶಕ್ತಿ ಕುಗ್ಗುತ್ತದೆ. ವೀರ್ಯಾಣು, ಅಂಡಾಣುಗಳು ಬೆರೆತು ಗರ್ಭ ಕಟ್ಟುವ ಶಕ್ತಿ ಕುಂದುತ್ತದೆ.
ಧೂಮಪಾನಿಗಳಲ್ಲದವರಿಗೆ ಹೋಲಿಸಿದರೆ ಹೆಚ್ಚಾಗಿ ಧೂಮಪಾನ ಮಾಡುವ ಜನರು ಬಂಜೆತನದ ಸಮಸ್ಯೆಗಳನ್ನು ಎದುರಿಸುತ್ತಾರೆ. ಧೂಮಪಾನ ಮಾಡುವ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುತ್ತದೆ ಎನ್ನುವುದು ಸಾಬೀತಾಗಿದೆ. ಆದರೆ ಮಹಿಳೆಯರಲ್ಲಿ ಧೂಮಪಾನವು ಅಂಡಾಣುಗಳು ನಷ್ಟವಾಗುವ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಬಂಜೆತನದ ತೀವ್ರತೆ ಹೆಚ್ಚಿಸುತ್ತದೆ.
ಧೂಮಪಾನವು ನಿಮ್ಮ ಶ್ವಾಸಕೋಶದ ಮೇಲೆ ಹೆಚ್ಚಾಗಿ ಪರಿಣಾಮ ಬೀರುವುದರಿಂದ, ಧೂಮಪಾನಿಗಳಿಗೆ ಹೆಚ್ಚು ಬೇಗನೆ ಉಸಿರುಗಟ್ಟಿದಂತಾಗುತ್ತದೆ. ಇದೆಲ್ಲದರ ಪರಿಣಾಮವಾಗಿ, ಹಾಸಿಗೆಯಲ್ಲಿ ನಿಮ್ಮ ಶಕ್ತಿ ಪ್ರದರ್ಶನವನ್ನು ಕಡಿಮೆ ಮಾಡುತ್ತದೆ.
ಇದಕ್ಕೇನು ಪರಿಹಾರ?
ಧೂಮಪಾನವನ್ನು ತ್ಯಜಿಸುವುದೇ ಎಲ್ಲದಕ್ಕೂ ಪರಿಹಾರ. ಆದರೆ ಒಮ್ಮೆ ಅದರ ಚಟ ಹತ್ತಿಸಿಕೊಂಡವರಿಗೆ ಏಕಾಏಕಿ ಧೂಮಪಾನವನ್ನು ಬಿಡಲಾಗುವುದಿಲ್ಲ. ಹಾಗಾಗಿ ಮೊದಲು ದೃಢ ನಿರ್ಧಾರ ಮಾಡಿಕೊಂಡು ಹಂತ ಹಂತವಾಗಿ ಧೂಮಪಾನವನ್ನು ತ್ಯಜಿಸಿ. ಇದರಿಂದ ಉಸಿರಾಟವಷ್ಟೇ ಅಲ್ಲ, ಲೈಂಗಿಕ ಶಕ್ತಿಯೂ ವರ್ಧನೆಯಾಗಿ ಮೈಮನಗಳ ಒತ್ತಡವನ್ನು ಕಳೆದುಕೊಂಡು ಸುಖಮಯ ಸಂಸಾರ ಜೀವನ ನಡೆಸಲು ಅನುಕೂಲವಾಗುತ್ತದೆ.
ಇದನ್ನೂ ಓದಿ | Menstrual Hygiene day: ಮುಟ್ಟು ಕಳಂಕವಲ್ಲ, ಕೊಳಕೂ ಅಲ್ಲ; ಮೌಢ್ಯ ಬಿಟ್ಟು ಸ್ವಚ್ಛತೆಯತ್ತ ಗಮನಕೊಡಿ