ಕರ್ನಾಟಕದಲ್ಲಿ ಮರಾಠಿ ಭಾಷಿಕರು ಇರುವ ಎಲ್ಲ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಅಲ್ಲಿಯ ಅಸೆಂಬ್ಲಿಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಮಹಾರಾಷ್ಟ್ರ ವಿಧಾನಸಭೆ ಚಳಿಗಾಲದ ಅಧಿವೇಶನದ ಕಲಾಪ ಶುರುವಾಗುತ್ತಿದ್ದಂತೆ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿ ಕರ್ನಾಟಕದ ಭಾಗದಲ್ಲಿರುವ ಮರಾಠಿ ಭಾಷಿಕರ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಹೋರಾಟವನ್ನು ಕಾನೂನು ಬದ್ಧವಾಗಿ ಮುಂದುವರಿಸುವ ಕುರಿತ ನಿರ್ಣಯವನ್ನು ಮಂಡಿಸಿದರು. ಈ ದುರುಳ ನಿರ್ಣಯಕ್ಕೇ ಕಾಯುತ್ತಿದ್ದ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಸೇರಿ ಎಲ್ಲ ವಿಪಕ್ಷಗಳೂ ಒಮ್ಮತದಿಂದ ಒಪ್ಪಿಕೊಂಡಿವೆ. ಅಲ್ಲಿನ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ಬೆಳಗಾವಿಯನ್ನು “ಕರ್ನಾಟಕ ಆಕ್ರಮಿತ ಮಹಾರಾಷ್ಟ್ರʼ ಎಂದು ಕರೆದು, ಈ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಅಸಂಬದ್ಧ ನುಡಿದಿದ್ದಾರೆ. ಇದು ಅಲ್ಲಿಯ ರಾಜಕೀಯ ಪಕ್ಷಗಳ ಮುಖಂಡರ ಉದ್ಧಟತನ ಮತ್ತು ಮೂರ್ಖತನಕ್ಕೆ ಸಾಕ್ಷಿ. ಬೆಳಗಾವಿಯ ಗಡಿ ವಿಚಾರ ಯಾವಾಗಲೋ ಮುಗಿದುಹೋದ ಸಂಗತಿ, ಅಲ್ಲಿ ಗಡಿ ವಿವಾದ ಎಂಬುದೇ ಇಲ್ಲ ಎಂಬುದು ಗೊತ್ತಿದ್ದರೂ ಮರಾಠಿ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಇದನ್ನು ಕೆದಕಲು ಯತ್ನಿಸುತ್ತಲೇ ಇವೆ.
ಪ್ರಸ್ತುತ ಮಹಾರಾಷ್ಟ್ರ ವಿಧಾನಸಭೆಯ ಈ ನಿರ್ಣಯವನ್ನು ಕರ್ನಾಟಕ ವಿಧಾನಸಭೆಯಲ್ಲಿ ಎಲ್ಲ ಮುಖಂಡರೂ ಪಕ್ಷಾತೀತವಾಗಿ ಖಂಡಿಸಿದ್ದಾರೆ. ಬೆಳಗಾವಿ ವಿಚಾರದಲ್ಲಿ ಮಹಾಜನ್ ಆಯೋಗದ ವರದಿಯೇ ಅಂತಿಮ ಎಂಬುದನ್ನು ಒತ್ತಿ ಹೇಳಿದ್ದಾರೆ. ಕರ್ನಾಟಕದ ಒಂದು ಹಳ್ಳಿಯನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡೆವು ಎಂದು ಸಾರಿದ್ದಾರೆ. ಗಡಿ ವಿಚಾರದಲ್ಲಿ ಪಕ್ಷಗಳು ಒಂದಾಗಿರುವುದು ಸ್ವಾಗತಾರ್ಹ. ಗಡಿ ತಗಾದೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರೂ ಈಗಾಗಲೇ ಮಧ್ಯಸ್ಥಿಕೆ ವಹಿಸಿದ್ದಾರೆ. 15 ದಿನಗಳ ಕೆಳಗೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದ್ದ ಗೃಹ ಸಚಿವರು, ಸುಪ್ರೀಂ ಕೋರ್ಟ್ನಲ್ಲಿರುವ ಗಡಿ ವಿಚಾರ ಇತ್ಯರ್ಥವಾಗುವವರೆಗೂ ಕಾಯಬೇಕು ಎಂದು ಸೂಚಿಸಿದ್ದರು. ಎರಡೂ ರಾಜ್ಯಗಳ ನಾಯಕರು ಪರಸ್ಪರ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಸೂಚಿಸಿದ್ದರು. ಆದರೆ ಮರಾಠಿ ನಾಯಕರು ಜನಸಾಮಾನ್ಯರ ನಿತ್ಯ ಬದುಕಿಗೆ ತೊಂದರೆಯನ್ನೊಡ್ಡಬಲ್ಲ ತಗಾದೆಗಳನ್ನು ಎತ್ತುತ್ತಲೇ ಇದ್ದಾರೆ.
ಈ ಹಿಂದೆ ಮೂರು ಆಯೋಗಗಳು ಬೆಳಗಾವಿಯ ವಿಚಾರದಲ್ಲಿ ಹೇಳಿರುವ ಮಾತು ಒಂದೇ ಆಗಿದೆ. ಬೆಳಗಾವಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ ಎಂಬುದನ್ನು ಸುಪ್ರೀಂ ಕೋರ್ಟ್ ತುಂಬಾ ಹಿಂದೆಯೇ ಹೇಳಿದೆ. ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಬೇಕೇ ಬೇಡವೇ ಎಂಬುದನ್ನೂ ಸುಪ್ರೀಂ ಕೋರ್ಟ್ ಇನ್ನೂ ತೀರ್ಮಾನಿಸಿಲ್ಲ. ಅಂದರೆ ಇದು ಮಹತ್ವದ ಸಂಗತಿಯೇ ಅಲ್ಲ ಎಂದೇ ಸುಪ್ರೀಂ ಕೋರ್ಟ್ ಭಾವಿಸಿದಂತಿದೆ. ತುರ್ತು ವಿಚಾರಣೆಗೂ ಅದು ಒಪ್ಪಿಲ್ಲ. ಇಷ್ಟಾದರೂ ಮಹಾರಾಷ್ಟ್ರದ ರಾಜಕಾರಣಿಗಳು ಬುದ್ಧಿಗೇಡಿಗಳಂತೆ ವರ್ತಿಸುತ್ತಿದ್ದಾರೆ.
ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡುವಂತೆ ಒತ್ತಡ ಹಾಕಲು ಹೊರಟಿರುವ ಮರಾಠಿ ಮುಖಂಡರಿಗೆ ತಕ್ಕ ಉತ್ತರವೆಂದರೆ, ಕೇಂದ್ರಾಡಳಿತ ಪ್ರದೇಶವಾಗಿಸಲು ಮುಂಬಯಿಯೇ ಸೂಕ್ತ ಎಂಬುದಾಗಿದೆ. ಏಕೆಂದರೆ, ಮುಂಬಯಿ ಮಹಾನಗರಿಯಲ್ಲಿ ಈಗ ಮರಾಠಿ ಭಾಷಿಕರಿಗಿಂತ ಇತರ ಭಾಷಿಕರೇ ಹೆಚ್ಚಿದ್ದಾರೆ. ಉತ್ತರ ಪ್ರದೇಶ, ಬಿಹಾರಿ, ಬೆಂಗಾಲಿಗಳು, ಕನ್ನಡಿಗರು ಭಾರೀ ಸಂಖ್ಯೆಯಲ್ಲಿದ್ದಾರೆ. 2011ರ ಜನಗಣತಿಯ ಪ್ರಕಾರ ಅಲ್ಲಿನ ಜನಸಂಖ್ಯೆ 1.8 ಕೋಟಿಯಷ್ಟಿದ್ದರೆ, ಅದರಲ್ಲಿ ವಲಸಿಗರ ಸಂಖ್ಯೆಯೇ 99 ಲಕ್ಷದಷ್ಟಿತ್ತು. ಅಂದರೆ 60%ಕ್ಕಿಂತಲೂ ಅಧಿಕ. ಇದರಲ್ಲಿ ಉತ್ತರಪ್ರದೇಶದಿಂದ ಬಂದವರು 18 ಲಕ್ಷ, ಗುಜರಾತಿಗಳು 6 ಲಕ್ಷ, ಕನ್ನಡಿಗರು 4 ಲಕ್ಷದಷ್ಟಿದ್ದರು. ಇತ್ತೀಚಿನ ನಿಖರ ಅಂಕಿಸಂಖ್ಯೆಗಳು ಲಭ್ಯವಿಲ್ಲ. ಆದರೆ ಮುಂಬಯಿ ಇನ್ನೂ ದೊಡ್ಡ ಮೆಟ್ರೊಪಾಲಿಟನ್ ನಗರವಾಗಿ ಬೆಳೆದಿದ್ದು, ಇಲ್ಲಿಗೆ ವಲಸಿಗರ ಕೊಡುಗೆಯೇ ಅಗಾಧವಾಗಿದೆ. ಹೀಗಾಗಿ ಮುಂಬಯಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡುವುದು ತಾರ್ಕಿಕವಾಗಿ ಸರಿ. ಆದರೆ ಇದನ್ನು ಮಹಾರಾಷ್ಟ್ರ ರಾಜಕಾರಣಿಗಳು ಒಪ್ಪುತ್ತಾರೆಯೆ?!
ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶಿವಸೇನೆ ಮುಂತಾದ ಮಹಾರಾಷ್ಟ್ರದ ರಾಜಕೀಯ ಪಕ್ಷಗಳು ಗಡಿ ವಿವಾದವನ್ನು ಎಳೆದಾಡುತ್ತಿವೆ. ಸದ್ಯ ಕರ್ನಾಟಕ ಅಸೆಂಬ್ಲಿಯಲ್ಲಿ ಮಹಾರಾಷ್ಟ್ರಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗಿದ್ದು, ಈ ಒಮ್ಮತ ಮುಂದುವರಿಯಲಿ. ಸುಪ್ರೀಂ ಕೋರ್ಟ್‌ನಲ್ಲೂ ಕೂಡ ಕರ್ನಾಟಕ ಖಡಕ್ ಉತ್ತರ ನೀಡಲು ಸೂಕ್ತ ತಯಾರಿ ಮಾಡಿಕೊಳ್ಳಬೇಕಿದೆ. ಬೆಳಗಾವಿ ಮತ್ತಿತರ ಪ್ರದೇಶಗಳು ಎಂದೆಂದಿಗೂ ಕರ್ನಾಟಕದ ಭಾಗವಾಗಿಯೇ ಇರುತ್ತವೆ. ಇಲ್ಲಿ ಅಶಾಂತಿ ಎಬ್ಬಿಸುವ ಮರಾಠಿ ಶಕ್ತಿಗಳ ಕೈವಾಡವನ್ನೂ ಇಲ್ಲಿನ ಕನ್ನಡಿಗರು, ಕನ್ನಡಪರ ಹೋರಾಟಗಾರರು ಹಾಗೂ ಸರ್ಕಾರ ಒಗ್ಗೂಡಿ ಎದುರಿಸುವಂತಾಗಲಿ.