ಬೆಂಗಳೂರು: ನಾಲ್ಕು ಬಾರಿ ಶಾಸಕ ಮೋಹನ್ ಚರಣ್ ಮಾಝಿ ಅವರನ್ನು ಒಡಿಶಾದ ನೂತನ ಮುಖ್ಯಮಂತ್ರಿಯಾಗಿ (Odisha chief minister) ಬಿಜೆಪಿ ಮಂಗಳವಾರ ಆಯ್ಕೆ ಮಾಡಿದೆ. ಕೆ.ವಿ. ಸಿಂಗ್ ದೇವ್ ಮತ್ತು ಪಾರ್ವತಿ ಪರಿದಾ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾಝಿ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಘೋಷಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಮಾಝಿ ಕಿಯೋಂಜಾರ್ ವಿಧಾನಸಭಾ ಸ್ಥಾನವನ್ನು ಗೆದ್ದಿದ್ದಾರೆ. ಬಿಜು ಜನತಾ ದಳದ ಮಿನಾ ಮಾಝಿ ಅವರನ್ನು 11,577 ಮತಗಳಿಂದ ಸೋಲಿಸಿದ್ದರು. ಮೋಹನ್ ಚರಣ್ ಮಾಝಿ ಖನಿಜಗಳ ಗಣಿಗಳಿಂದ ಸಂಪದ್ಭರಿತವಾಗಿರ ಕೆಂದುಜಾರ್ ಜಿಲ್ಲೆಯ ಪ್ರಬಲ ಮತ್ತು ಫೈರ್ ಬ್ರಾಂಡ್ ಬುಡಕಟ್ಟು ನಾಯಕರಾಗಿದ್ದಾರೆ.
ಮಾಝಿ ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಆದಾಗ್ಯೂ ಅವರು ಒಡಿಶಾ ವಿಧಾನಸಭೆಯಲ್ಲಿ ತಮ್ಮ ಛಾಪು ಮೂಡಿಸಿದ್ದರು. ಮೋಹನ್ ಮಾಝಿ ಅವರನ್ನು ನಿಷ್ಠಾವಂತ ಬಿಜೆಪಿ ಸದಸ್ಯ ಮತ್ತು ಬಲವಾದ ನಾಯಕ ಎಂದು ಪರಿಗಣಿಸಲಾಗಿದೆ.
ಬಿಜೆಪಿ ಮೊದಲ ಸಿಎಂ
ಒಡಿಶಾದಲ್ಲಿ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿರುವ ಮಾಝಿ ಅವರಿಗೆ ಮೊದಲ ಬಾರಿಗೆ ಶಾಸಕಿ ಪ್ರಭಾತಿ ಪರಿದಾ ಮತ್ತು ಆರು ಬಾರಿ ಶಾಸಕ ಕೆ.ವಿ.ಸಿಂಗ್ ದೇವ್ ಎಂಬ ಇಬ್ಬರು ಉಪಮುಖ್ಯಮಂತ್ರಿಗಳು ಸಿಗಲಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಭೂಪೇಂದ್ರ ಯಾದವ್ ಅವರು ಎಲ್ಲಾ ಹಿರಿಯ ನಾಯಕರು ಮತ್ತು ಹೊಸದಾಗಿ ಆಯ್ಕೆಯಾದ ಸಂಸದರು ಮತ್ತು ಶಾಸಕರೊಂದಿಗೆ ಚರ್ಚಿಸಿದ ನಂತರ ಅವರ ಹೆಸರು ಅಂತಿಮಗೊಳಿಸಲಾಗಿದೆ. ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಒಂದು ವಾರದ ನಂತರ ಅವರನ್ನು ಆಯ್ಕೆ ಮಾಡುವ ಸಭೆ ನಡೆಯಿತು. 147 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 78 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತವನ್ನು ಪಡೆದುಕೊಂಡಿದೆ.
ಪಟ್ನಾಯಕ್ 24 ವರ್ಷಗಳ ಆಡಳಿತ ಅಂತ್ಯ
ಬಿಜೆಡಿಯ ನವೀನ್ ಪಟ್ನಾಯಕ್ ಅವರ 24 ವರ್ಷಗಳ ಆಡಳಿತದ ನಂತರ ಮಾಝಿ ಒಡಿಶಾವನ್ನು ಮುನ್ನಡೆಸಲಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಮೂರನೇ ಕೇಂದ್ರ ಸಚಿವ ಸಂಪುಟದಲ್ಲಿ ಸಂಬಲ್ಪುರ ಸಂಸದ ಧರ್ಮೇಂದ್ರ ಪ್ರಧಾನ್ ಸಚಿವರಾದ ನಂತರ ಸಿಎಂ ಹುದ್ದೆಗೆ ಹಲವಾರು ಹೆಸರುಗಳು ಸ್ಪರ್ಧೆಯಲ್ಲಿದ್ದವು. ಆದರೆ, ಎಂದಿನಂತೆ ಬಿಜೆಪಿ ನಾಯಕತ್ವ ಕೊನೆಯ ಕ್ಷಣದಲ್ಲಿ ಅಚ್ಚರಿ ಮೂಡಿಸಿದೆ.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಈ ಹಿಂದೆ ಪಕ್ಷವು ಇದೇ ರೀತಿಯ ಘೋಷಣೆ ಮಾಡಿದ್ದರಿಂದ ಪಕ್ಷದ ಹಲವಾರು ನಾಯಕರು ಇದನ್ನು ನಿರೀಕ್ಷಿಸಿದ್ದರು.
ಇದನ್ನೂ ಓದಿ: Ayodhya’s e-rickshaw : ಅಯೋಧ್ಯೆಯಲ್ಲಿ ಬಿಜೆಪಿಗೆ ಸೋಲು; ಪ್ರವಾಸಿಗರ ಸಂಖ್ಯೆ ಇಳಿಕೆ; ರಿಕ್ಷಾ ಚಾಲಕರಿಗೆ ಆದಾಯ ನಷ್ಟ!
ಬುಧವಾರ ಪ್ರಮಾಣವಚನ ಸ್ವೀಕರಿಸುವ ಮೊದಲು ಮಾಝಿ ಮೊದಲು ಪುರಿಯ ಶ್ರೀ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಜೂನ್ 12 ರಂದು ಮಧ್ಯಾಹ್ನ 2.30 ಕ್ಕೆ ಭುವನೇಶ್ವರಕ್ಕೆ ಪ್ರಧಾನಿ ಮೋದಿಯೂ ಆಗಮಿಸಲಿದ್ದಾರೆ. ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದ ಉದ್ದೇಶಿತ ಸ್ಥಳದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಒಡಿಶಾದ ನೂತನ ಮುಖ್ಯಮಂತ್ರಿ ಮತ್ತು ಇತರ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೇಂದ್ರ ಸಚಿವರು ಮತ್ತು ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.