ರಾಜಧಾನಿಯಲ್ಲಿ ಮೆಟ್ರೊ ಕಾಮಗಾರಿಗೆ ಸಂಬಂಧಿಸಿದ ನಿರ್ಲಕ್ಷ್ಯದಿಂದ ದುರಂತ ಸಂಭವಿಸಿದ್ದು, ಇಬ್ಬರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರಿನ ನಾಗವಾರದ ರಿಂಗ್ ರೋಡ್‌ನ ಎಚ್‌ಬಿಆರ್ ಲೇಔಟ್ ಬಳಿ ಮಂಗಳವಾರ ಮುಂಜಾನೆ ಈ ದುರ್ಘಟನೆ ನಡೆದಿದ್ದು, ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ನ ರಾಡುಗಳೇ ಕುಸಿದು ಬಿದ್ದಿವೆ. ಟನ್‌ಗಟ್ಟಲೆ ತೂಕದ ಮೆಟ್ರೋ ಪಿಲ್ಲರ್ ದಿಢೀರ್ ಮರದ ಮೇಲೆ ಉರುಳಿ, ಆ ಮರದ ಕೊಂಬೆ ಅದೇ ಹೊತ್ತಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮತ್ತು ಮಕ್ಕಳ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡ ತಾಯಿ-ಮಗು ದುರ್ಮರಣ ಹೊಂದಿ, ತಂದೆ – ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸಾವು ನ್ಯಾಯವೇ ಎಂಬಂಥ ಪ್ರಶ್ನೆಗಳನ್ನು ನಾವು ಈಗ ಯಾರಿಗೆ ಕೇಳಬೇಕು? ನಿರ್ಮಾಣ ಕಾಮಗಾರಿಯಲ್ಲಿ ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳದಿರುವ ಮೆಟ್ರೋ ವ್ಯವಸ್ಥೆಯನ್ನೋ, ಗುಣಮಟ್ಟ ನೋಡಿಕೊಳ್ಳದ ಗುತ್ತಿಗೆದಾರ ಮತ್ತು ಕಾಮಗಾರಿ ಎಂಜಿನಿಯರರನ್ನೋ, ಇಂಥ ದುರಂತದ ಸಾಧ್ಯತೆಯನ್ನು ನಿವಾರಿಸುವ ಸುರಕ್ಷತೆಯನ್ನು ಖಾತ್ರಿಪಡಿಸಬೇಕಿದ್ದ ಮೇಲಧಿಕಾರಿಗಳನ್ನೋ, ನಿರ್ಮಾಣದ ಸ್ಥಳದಲ್ಲಿ ಸುರಕ್ಷಿತ ಟ್ರಾಫಿಕ್ ಸಂಚಾರದ ಅವಕಾಶ ಖಾತ್ರಿಪಡಿಸಿಕೊಳ್ಳಬೇಕಿರುವ ಬಿಬಿಎಂಪಿಯನ್ನೋ, ಅಥವಾ ಇಂಥ ದುರಂತ ಸಂಭವಿಸಿದಾಗ ಕಿಂಚಿತ್ ಪರಿಹಾರ ಘೋಷಿಸಿ ಆ ಬಳಿಕ ಮರೆತುಬಿಡುವ ಸರ್ಕಾರವನ್ನೋ?
ಮೆಟ್ರೊ ಸಂಸ್ಥೆಯ ಮುಖ್ಯಸ್ಥ ಸ್ಥಾನದಲ್ಲಿರುವ ವ್ಯಕ್ತಿಗೆ ಕಿಂಚಿತ್ತಾದರೂ ಜವಾಬ್ದಾರಿ, ಸಂವೇದನೆ, ಸಮಯಪ್ರಜ್ಞೆ ಬೇಡವೇ? ದುರಂತ ನಡೆದು ಕೆಲವು ಗಂಟೆಗಳೇ ಕಳೆದರೂ ಮೆಟ್ರೊ ಸಂಸ್ಥೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಆ ಬಳಿಕ ಪ್ರತಿಕ್ರಿಯೆ ನೀಡಿರುವ ಬಿ ಎಂ ಆರ್ ಸಿ ಎಲ್ ಸಂಸ್ಥೆಯ ಎಂ.ಡಿ ಅಂಜುಮ್ ಫರ್ವೇಜ್, ಎರಡು ಜೀವ ಬಲಿ ಪಡೆದ ತಮ್ಮ ಸಂಸ್ಥೆಯ ಹೊಣೆಗೇಡಿತನಕ್ಕೆ ತಲೆ ತಗ್ಗಿಸಿ ಕ್ಷಮೆ ಕೇಳುವ ಬದಲು ತಮ್ಮದೇನೂ ತಪ್ಪೇ ಇಲ್ಲ ಎನ್ನುವಂತೆ ಮೊಂಡುವಾದ ಮಂಡಿಸಿದ್ದಾರೆ. ಅಧಿಕಾರದ ದರ್ಪ, ದೌಲತ್ತು ತಲೆಗೇರಿದ್ದರ ಫಲ ಇದು. ಜನಸಾಮಾನ್ಯರ ನೋವು, ಪ್ರೀತಿಯ ಹೆಂಡತಿ ಮತ್ತು ಮುದ್ದಿನ ಮಗುವನ್ನು ಕಳೆದುಕೊಂಡ ಆ ಅಮಾಯಕ ವ್ಯಕ್ತಿಯ ವೇದನೆ ಇಂಥ ಅವಿವೇಕಿ ಅಧಿಕಾರಿಗಳಿಗೆ ಹೇಗೆ ಅರ್ಥವಾಗಬೇಕು?
ಎಲ್ಲರೂ ಈ ದುರಂತಕ್ಕೆ ಹೊಣೆಗಾರರು. ಹಾಗೆಂದುಕೊಂಡು ಯಾರೂ ಇನ್ನೊಬ್ಬರನ್ನು ಇಲ್ಲಿ ಬೊಟ್ಟು ಮಾಡುವಂತಿಲ್ಲ. ಪ್ರತಿಯೊಬ್ಬರಿಗೂ ಅವರವರದೇ ಕರ್ತವ್ಯಗಳಿವೆ. ಮುಖ್ಯವಾಗಿ ಕಾಮಗಾರಿಯ ಗುಣಮಟ್ಟ ಖಾತ್ರಿಪಡಿಸಿಕೊಳ್ಳಬೇಕಿದ್ದುದು ನಿರ್ಮಾಣ ಸಂಸ್ಥೆಯ ಯೋಜನಾಕರ್ತೃಗಳು, ಗುತ್ತಿಗೆದಾರರು, ಎಂಜಿನಿಯರ್‌ಗಳ ಹೊಣೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಗುತ್ತಿಗೆದಾರ, ಅಧಿಕಾರಿಗೆ ಬಿಎಂಆರ್‌ಸಿಎಲ್ ನೋಟಿಸ್ ನೀಡಿದ್ದು, ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಐಐಎಸ್ಸಿಗೆ ಮನವಿ ಮಾಡಲಾಗಿದೆ. ಆಂತರಿಕ ತಾಂತ್ರಿಕ ತಂಡದಿಂದಲೂ ಘಟನೆ ಬಗ್ಗೆ ತನಿಖೆ ನಡೆಸಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಹೇಳಿದೆ. ಮೃತರ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಬಿಎಂಆರ್‌ಸಿಎಲ್ ಸಹ ತಲಾ 10 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಆದರೆ ಹಣಕಾಸಿನ ಪರಿಹಾರಗಳು ಹೋದ ಜೀವಗಳನ್ನು ಮರಳಿ ತಂದು ಕೊಡುತ್ತವೆಯೇ? ಸಾರ್ವಜನಿಕ ಕಾಮಗಾರಿಯಲ್ಲಿ ಆದ ನಿರ್ಲಕ್ಷ್ಯಕ್ಕೆ ಅಮಾಯಕ ಕುಟುಂಬ ಬೆಲೆ ತೆರಬೇಕಿತ್ತೇ? ಈ ದುರಂತ ಆ ಕುಟುಂಬದ ಬಾಳಿನಲ್ಲಿ ಸೃಷ್ಟಿಸುವ ಶೂನ್ಯತೆಗೆ ಯಾವ ಪರಿಹಾರ?
ಇಂಥ ದುರಂತಗಳು ನಡೆದಾಗ ಕೆಳಮಟ್ಟದ ಅಧಿಕಾರಿಗಳನ್ನೋ, ಎಂಜಿನಯರ್‌ಗಳನ್ನೋ ಹೊಣೆ ಮಾಡಲಾಗುತ್ತದೆ; ವಜಾ ಮಾಡಲಾಗುತ್ತದೆ. ಕೆಲವು ಕಾಲ ತನಿಖೆಯ ನಾಟಕ ನಡೆಯುತ್ತದೆ. ಆದರೆ ಇವುಗಳು ಯಾವಾಗ ತಾರ್ಕಿಕ ಅಂತ್ಯ ಮುಟ್ಟುತ್ತದೆ ಎಂದು ಯಾರಿಗೂ ಗೊತ್ತಾಗುವುದೇ ಇಲ್ಲ. ಇದರಿಂದ ಯಾರಿಗೇನು ಪ್ರಯೋಜನ? ನಿಜವಾಗಿಯೂ ಹೊಣೆಗಾರರಾದ ಉನ್ನತ ಮಟ್ಟದಲ್ಲಿರುವವರು ಕೂದಲೂ ಕೊಂಕದಂತೆ ಇರುತ್ತಾರೆ. ತಳಹಂತದ ಅಧಿಕಾರಿಯ ಬದಲು ಮೆಟ್ರೋ ಆಡಳಿತ ನಿರ್ದೇಶಕರ, ಗುತ್ತಿಗೆದಾರರ ತಲೆದಂಡ ಯಾಕಾಗುವುದಿಲ್ಲ? ಸರ್ಕಾರ ಇಂಥ ಉಳ್ಳವರ ರಕ್ಷಣೆಗೆ ಯಾಕೆ ನಿಂತುಬಿಡುತ್ತದೆ? ಇಂಥ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಲೇಬೇಕಿದೆ. ಮೆಟ್ರೋ ಕಾಮಗಾರಿ ನಡೆಯುವ ನಿರ್ದಿಷ್ಟ ಮೀಟರ್ ವ್ಯಾಪ್ತಿಯಲ್ಲಿ ವಾಹನ- ಜನಸಂಚಾರ ಇರಲೇಬಾರದು. ಟ್ರಾಫಿಕ್ ವ್ಯವಸ್ಥೆಯನ್ನೂ ಬದಲಿಸಬೇಕು. ಹೀಗೆ ಇದರಲ್ಲಿ ಹಲವು ಇಲಾಖೆಗಳ ಹೊಣೆಯಿದೆ. ಎಲ್ಲರನ್ನೂ ಉತ್ತರದಾಯಿತ್ವಕ್ಕೆ ತರಲೇಬೇಕಿದೆ. ʼಹುತ್ತವ ಬಡಿದರೆ ಹಾವು ಸಾಯಬಲ್ಲದೇ?ʼ ಎಂದಂತೆ, ಯಾರೋ ತಳಮಟ್ಟದ ಅಧಿಕಾರಿಯನ್ನು ಹಿಡಿದು ಶಿಕ್ಷಿಸಿದಂತೆ ತೋರಿಸಿಕೊಂಡರೆ ನಿಜಕ್ಕೂ ಇಂಥ ಘಟನೆಯ ಕಾರಣಕರ್ತರಿಗೆ ಶಿಕ್ಷೆಯಾಗುವುದಿಲ್ಲ. ಮತ್ತು ಇಂಥ ಘಟನೆಗಳು ಮುಂದುವರಿಯುತ್ತವೆ.
ನಮ್ಮಲ್ಲಿರುವ ಬ್ರಿಟಿಷ್ ವಸಾಹತುಶಾಹಿ ಕಾಲದ ಐಎಎಸ್ ವ್ಯವಸ್ಥೆಯೂ ಇಂಥ ದುರಂತಗಳು ನಡೆಯಲು ಇನ್ನೊಂದು ಕಾರಣ. ಈ ಅಧಿಕಾರಶಾಹಿಯ ಒಳಗೆ ನಡೆಯುತ್ತಿರುವುದೆಲ್ಲವೂ ಕ್ರಮಬದ್ಧವಾಗಿ ನಡೆಯುತ್ತಿದೆ ಎಂದು ಅದು ತೋರಿಸಿಕೊಳ್ಳುತ್ತದೆ. ಆದರೆ ಅದರ ಲೋಪದೋಷಗಳು ಶ್ರೀಸಾಮಾನ್ಯನಿಗೂ, ಜನಪ್ರತಿನಿಧಿಗಳಿಗೂ ಏನೇನೂ ತಿಳಿಯದಂತೆ ನೋಡಿಕೊಂಡು ಮುಂದುವರಿಯುತ್ತದೆ. ಹೀಗಾಗಿ ದುರಂತಗಳು ಸಂಭವಿಸಿದಾಗಲೂ ಮೇಲ್ಮಟ್ಟದ ಅಧಿಕಾರಶಾಹಿ ತಾನು ಹೊಣೆ ಹೊರದಂತೆ ಜಾರಿಕೊಳ್ಳುತ್ತದೆ. ಇದಕ್ಕೆ ತಡೆ ಹಾಕಲೇಬೇಕು. ಅದಕ್ಕೆ ತಕ್ಕ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು. ಸರ್ಕಾರ ನಡೆಸುವವರು ತಮ್ಮದೇ ಲೋಕದಲ್ಲಿ ಮುಳುಗಿದರೆ ಅಧಿಕಾರಿಗಳು ಸಹಜವಾಗಿಯೇ ತೂಕಡಿಸಲು ಶುರು ಮಾಡುತ್ತಾರೆ. ಅದರ ಫಲವೇ ಇಂತಹ ದುರಂತಗಳು. ಇಂಥ ಅವಘಡಗಳು ನಡೆದಾಗ ಕಾಟಾಚಾರಕ್ಕೆ ಕೆಳ ಹಂತದ ಸಿಬ್ಬಂದಿಯನ್ನು ವಜಾ ಮಾಡಿ ಜನರ ಕಣ್ಣಿಗೆ ಮಣ್ಣೆರೆಚುವುದಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಜಕ್ಕೂ ಎತ್ತಂಗಡಿ ಮಾಡಬೇಕಿರುವುದು ಬಿ ಎಂ ಆರ್ ಸಿ ಎಲ್ ಎಂ.ಡಿ ಅಂಜುಮ್ ಫರ್ವೇಜ್ ರನ್ನು. ಮುಖ್ಯಮಂತ್ರಿಯವರು ತಕ್ಷಣ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಹೊಣೆಗೇಡಿ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ನಿವಾರಿಸಬೇಕು.
ಇದನ್ನೂ ಓದಿ ’ವಿಸ್ತಾರ ಸಂಪಾದಕೀಯ | ಮಕ್ಕಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಮೌಲ್ಯ ಶಿಕ್ಷಣ ಅಡಿಪಾಯ