ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ, ದೇಶದ ಅತಿ ಉದ್ದದ ಸಮುದ್ರ ಸೇತುವೆ ಎನಿಸಿರುವ, ಅಟಲ್ ಸೇತು (Atal Setu) ಎಂದು ಕರೆಯಲಾಗುವ ‘ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್’ (Mumbai Trans Harbour Link-MTHL) ಈಗ ವೇಗದ ಸಂಚಾರಕ್ಕಿಂತ ಹೆಚ್ಚಾಗಿ ಆತ್ಮಹತ್ಯೆ ಪ್ರಕರಣಗಳಿಗೆ ಜಾಸ್ತಿ ಸುದ್ದಿಯಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಅಟಲ್ ಸೇತು ಮೇಲೆ ಕಾರಿನಲ್ಲಿ ಬಂದ ಟೆಕ್ಕಿಯೊಬ್ಬರು, ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ದೊಂಬಿವಿಲಿ ನಿವಾಸಿಯಾಗಿರುವ, ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ 38 ವರ್ಷದ ವ್ಯಕ್ತಿಯು ಸೇತುವೆ ಮೇಲೆ ಕಾರಿನಲ್ಲಿ ನಿಧಾನವಾಗಿ ಬರುತ್ತಾರೆ. ಕಾರಿನಿಂದ ಇಳಿದವರೇ ಸೇತುವೆ ಮೇಲಿನಿಂದ ಅವರು ಕೆಳಗೆ ಹಾರುತ್ತಾರೆ. ಈ ವಿಡಿಯೊ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನ್ಹಾವಾ ಶೇವಾ ಎಂಡ್ ಬಳಿಯಲ್ಲಿ ವ್ಯಕ್ತಿಯು ನದಿಗೆ ಹಾರಿದ್ದಾರೆ.
He came, stopped the car and jumped into the sea water from Atal Setu#MumbaiRains pic.twitter.com/5kpad2qP6U
— Kedar (@shintre_kedar) July 25, 2024
ಹಣಕಾಸು ಬಿಕ್ಕಟ್ಟಿನಿಂದ ಇಂತಹ ತೀರ್ಮಾನ?
ವ್ಯಕ್ತಿಯು ಹಣಕಾಸು ಸಮಸ್ಯೆಯಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು. ಅವರು ಸಾಲ ಮಾಡಿದ್ದರು. ಅದರನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನವಿ ಮುಂಬೈ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ವ್ಯಕ್ತಿಯ ಶವದ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಹಾಗೆಯೇ, ಶವ ಸಿಕ್ಕರೆ ಮಾಹಿತಿ ನೀಡುವಂತೆ ಕರಾವಳಿ ಪೊಲೀಸರು, ಮೀನುಗಾರರಿಗೆ ಸೂಚನೆ ನೀಡಿದ್ದಾರೆ.
ಟೆಕ್ಕಿಯಾಗಿರುವ ವ್ಯಕ್ತಿಯು ಇದಕ್ಕೂ ಮೊದಲು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು 2023ರಲ್ಲಿ ಕೂಡ ಫ್ಲೋರ್ ಕ್ಲೀನರ್ ಲಿಕ್ವಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಇನ್ನು ಅಟಲ್ ಸೇತುವೆ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಎರಡನೇ ಪ್ರಕರಣ ಇದಾಗಿದೆ. ಕಳೆದ ಮಾರ್ಚ್‌ನಲ್ಲಿ ವೈದ್ಯೆಯೊಬ್ಬರು ಅಟಲ್ ಸೇತು ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನೂ ಓದಿ: Self Harming: ಸಾಮೂಹಿಕ ಅತ್ಯಾಚಾರ; ಕ್ರಮ ಕೈಗೊಳ್ಳದ ಪೊಲೀಸರು; ಮನ ನೊಂದು ಬಾಲಕಿ ಆತ್ಮಹತ್ಯೆ