Site icon Vistara News

ವಿಸ್ತಾರ ಸಂಪಾದಕೀಯ: ಒಂದು ಕಡೆ ಸರಣಿ ಕೊಲೆ, ಇನ್ನೊಂದೆಡೆ ಪೊಲೀಸರ ಬೀದಿ ಸುಲಿಗೆ!

Karnataka police

ರಾಜಧಾನಿಯ ರಾಜಗೋಪಾಲನಗರದ ಪೊಲೀಸ್‌ ಸಿಬ್ಬಂದಿಗಳಿಬ್ಬರನ್ನು ಹಫ್ತಾ ವಸೂಲಿ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಈ ಸಿಬ್ಬಂದಿಯನ್ನು ಸಾರ್ವಜನಿಕರು ಅಟ್ಟಿಸಿಕೊಂಡು ಹೋದ ದೃಶ್ಯವೊಂದು ವೈರಲ್‌ ಆಗಿತ್ತು. ಹೊಯ್ಸಳ ಸಿಬ್ಬಂದಿಯಾಗಿದ್ದ ಇವರು ವಾಹನ ನಿಲ್ಲಿಸಿ ಹೋಟೆಲ್‌ನಿಂದ ಊಟ ಹಾಗೂ ನೀರಿನ ಬಾಟಲ್ ಪಡೆದಿದ್ದರು. ಅದಲ್ಲದೇ ಅಂಗಡಿಗಳಿಂದ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ಇದೇ ಆರೋಪದ ಮೇಲೆ ಸಾರ್ವಜನಿಕರು ವಿಡಿಯೋ ಮಾಡಿದ್ದು, ಇದನ್ನು ಕಂಡ ಪೊಲೀಸರು ಹೊಯ್ಸಳ ವಾಹನ ಹತ್ತಿ ವೇಗವಾಗಿ ಕಳ್ಳರಂತೆ ಆ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಹಿಂಬದಿಯಿಂದ ಜನರು ʼಪೊಲೀಸ್ ಕಳ್ಳ ಪೊಲೀಸ್ ಕಳ್ಳʼ ಎಂದು ಕೂಗುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದಲ್ಲದೆ, ಪೊಲೀಸ್‌ ಇಲಾಖೆಗೆ (Karnataka Police) ಮುಜುಗರಕ್ಕೆ ಕಾರಣವಾಗಿತ್ತು. ಸದ್ಯ ಇಬ್ಬರು ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿರುವ ಉತ್ತರ ವಿಭಾಗ ಡಿಸಿಪಿ, ಭ್ರಷ್ಟ ಸಿಬ್ಬಂದಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇಲಾಖಾ ತನಿಖೆ ನಡೆಯುತ್ತಿದೆ.

ಪೊಲೀಸ್‌ ಇಲಾಖೆಯಲ್ಲಿ ಭ್ರಷ್ಟಾಚಾರ ಇದೆ ಎಂಬುದು ಹೊಸ ವಿಚಾರವೇನಲ್ಲ. ಇದು ಪೊಲೀಸ್‌ ಪರೀಕ್ಷೆಯಿಂದ ಹಿಡಿದು, ದೊಡ್ಡ ಅಧಿಕಾರಿಗಳ ವರ್ಗಾವಣೆಯವರೆಗೆ ವ್ಯಾಪಿಸಿದೆ. ಕಾನ್‌ಸ್ಟೇಬಲ್‌ಗಳಿಂದ ಹಿಡಿದು ಐಪಿಎಸ್‌ ಮಟ್ಟದ ಅಧಿಕಾರಿಗಳವರೆಗೂ ಇದರ ಬೇರು ಕೊಂಬೆಗಳು ವ್ಯಾಪಿಸಿವೆ. ಪೊಲೀಸ್‌ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ವ್ಯಾಪಕ ಅವ್ಯವಹಾರ ನಡೆದುದರ ಬಗ್ಗೆ ನಾವು ಓದಿಯೇ ಇದ್ದೇವೆ. ಇನ್ನು ಹೀಗೆ ಪರೀಕ್ಷೆ ಬರೆಯುವಾಗಲೇ ಅವ್ಯವಹಾರ ನಡೆಸಿದವರು ಪೋಸ್ಟಿಂಗ್‌ ಆದ ಬಳಿಕ ಭ್ರಷ್ಟಾಚಾರ ನಡೆಸದೇ ಬಿಟ್ಟಾರೆಯೇ? ಅನುಕೂಲಕರ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುವುದಕ್ಕಾಗಿ ಐಪಿಎಸ್‌ ಅಧಿಕಾರಿಗಳಿಂದ ಹಿಡಿದು ಕಾನ್‌ಸ್ಟೇಬಲ್‌ಗಳವರೆಗೆ ಶಾಸಕಾಂಗದ ಆಯಕಟ್ಟಿನ ಸ್ಥಾನಗಳಲ್ಲಿರುವವರಿಗೆ ದೊಡ್ಡ ಮೊತ್ತದ ಕಾಣಿಕೆ ಸಲ್ಲಿಸುತ್ತಾರೆ ಎಂಬುದು ಬರಿಯ ಅರೋಪ ಇರಲಾರದು. ಹೀಗೆ ಹಣ ಚೆಲ್ಲಿದವರು ಆ ಹಣಕಾಸನ್ನು ವಸೂಲಿ ಮಾಡದೇ ಬಿಟ್ಟಾರೆಯೇ? ಹೀಗೆ ವಸೂಲಿಗೆ ಇಳಿಯುವವರಿಗೆ ಸಿಗುವವರೇ ಜನಸಾಮಾನ್ಯರು. ಪೊಲೀಸರ ಭಯದಿಂದಲೇ ಸುಲಿಗೆಗೊಳಗಾಗುವವರು ತುಟಿ ಪಿಟಕ್ಕೆನ್ನದೆ ಸುಮ್ಮನಿರುವುದು ಸಾಮಾನ್ಯ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಬಲರ ಎದುರು ದುರ್ಬಲ ಕಾನೂನು; ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲ

ಹೀಗೆಂದು ಪೊಲೀಸ್‌ ಇಲಾಖೆಯಲ್ಲಿರುವ ಎಲ್ಲರೂ ಹೀಗೆ ಎಂದು ಅರ್ಥೈಸಬೇಕಿಲ್ಲ. ಶಿಸ್ತು, ಗಾಂಭಿರ್ಯ, ಪ್ರಾಮಾಣಿಕತೆ, ದಕ್ಷತೆಗೆ ಹೆಸರಾದವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಚಿಲ್ಲರೆ ಕಾಸಿಗೆ ಕೈಚಾಚುವ ಖದೀಮರು, ಬೀದಿ ಬದಿ ವ್ಯಾಪಾರಿಗಳಿಂದ ಸುಲಿಗೆ ಮಾಡುವವರು, ಅಂಗಡಿಯವರನ್ನು ಬೆದರಿಸಿ ಕಾಸು ಕೀಳುವವರು, ನ್ಯಾಯಕ್ಕಾಗಿ ಠಾಣೆಗೆ ಬಂದಾಗ ಹಣ ತೆಗೆದುಕೊಂಡು ರಾಜಿ ಕಬೂಲಿ ಮಾಡಿ ಕಳಿಸುವವರು, ಸ್ಥಳೀಯ ಪುಢಾರಿಗಳನ್ನು ಅಡ್ಜಸ್ಟ್‌ಮೆಂಟ್‌ ಮಾಡಿಕೊಂಡು ಆಯಕಟ್ಟಿನ ಜಾಗಗಳಲ್ಲಿ ಸದಾ ಇರುವವರು, ಆಡಳಿತಗಾರರ ಮರ್ಜಿಗೆ ಸದಾ ಕಾಯುತ್ತ ಎಂಜಲು ಕಾಸಿಗೆ ಜೊಲ್ಲು ಸುರಿಸುವವರು- ಇಂಥವರಿಂದಾಗಿ ಪೊಲೀಸ್‌ ಇಲಾಖೆಗೆ ಅಪಖ್ಯಾತಿ ಬಂದಿದೆ. ಸದ್ಯ ಹೀಗೆ ಚಿಲ್ಲರೆ ಕಾಸಿಗಾಗಿ ಆಸೆಪಟ್ಟ ಇಬ್ಬರು ಸಿಕ್ಕಿಬಿದ್ದಿರಬಹುದು. ಆದರೆ ಇದರಿಂದ ಇಲಾಖೆಯ ಬೇರುಬೇರುಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರದ ಮೇಲೆ ಏನೂ ಪರಿಣಾಮವಾಗದು.

ಇದೆಲ್ಲ ಸರಿಹೋಗಲು ಪೊಲೀಸ್‌ ಇಲಾಖೆಯ ಆಮೂಲಾಗ್ರ ಸುಧಾರಣೆ ಅಗತ್ಯ. ಮೇಲಿನಿಂದ ಸುಧಾರಣೆಯಾಗದೇ ಕೆಳಗಿನ ಹಂತದಲ್ಲಿ ಏನೂ ಮಾಡಲಾಗದು. ಈ ಸುಧಾರಣೆಗೆ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳೂ, ಅದರ ಮೇಲೆ ಹಿಡಿತ ಸಾಧಿಸಿರುವ ರಾಜಕಾರಣಿಗಳೂ ಮನಸ್ಸು ಮಾಡಬೇಕು. ಒಂದೆಡೆ ಸರಣಿ ಕೊಲೆಗಳು ನಡೆಯುತ್ತಿವೆ, ಇನ್ನೊಂದೆಡೆ ಪೊಲೀಸರು ಬೀದಿ‌ ಸುಲಿಗೆಯಲ್ಲಿ ತೊಡಗಿದ್ದಾರೆ. ಇದು ರಾಜ್ಯ ಪೊಲೀಸ್ ಇಲಾಖೆಯ ಘನತೆಯನ್ನು ಕುಗ್ಗಿಸಿದೆ.

Exit mobile version