Site icon Vistara News

Chikkodi News : ಒಮ್ಮೆ ಶಾಸಕರಿಂದ ಮತ್ತೊಮ್ಮೆ ಸಂಸದರಿಂದ; ಒಂದೇ ಗ್ರಾಮ ಪಂಚಾಯಿತಿ ಕಟ್ಟಡ ಎರಡೆರಡು ಬಾರಿ ಉದ್ಘಾಟನೆ!

Chikkodi News

ಚಿಕ್ಕೋಡಿ : ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಜಿದ್ದಿನ ಕಾರಣಕ್ಕೆ ಒಂದು ಗ್ರಾಮ ಪಂಚಾಯಿತಿ ಕಟ್ಟಡ ಎರಡೆರಡು ಬಾರಿ ಸಿಂಗಾರಗೊಂಡು ಉದ್ಘಾಟನೆಗೊಂಡಿದೆ (Chikkodi News). ಬಿಜೆಪಿಯ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಸಂಸದೆ ಪ್ರಿಯಾಂಕ ಜಾರಕಿಹೊಳಿ ನಡುವಿನ ಫೈಟ್​ನಿಂದಾಗಿ ಗ್ರಾಮಸ್ಥರು ಎರಡೆರಡು ಬಾರಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯರನಾಳ ಗ್ರಾಮ ಪಂಚಾಯಿತಿ ಕಟ್ಟಡವನ್ನು ಇಬ್ಬರು ರಾಜಕೀಯ ನಾಯಕರು ತಮ್ಮ ಪ್ರತಿಷ್ಠೆಯ ಕಣವನ್ನಾಗಿಸಿಕೊಂಡು ಉದ್ಘಾಟನೆ ಮಾಡಿದ್ದಾರೆ. ನಾಲ್ಕು ದಿನಗಳ ಹಿಂದೆ ಸ್ಥಳೀಯ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಉದ್ಘಾಟನೆ ಮಾಡಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಸ್ಥಳದಲ್ಲಿ ದೊಡ್ಡ ರಂಪವೇ ನಡೆದಿತ್ತು. ವಿರೋಧವನ್ನು ಲೆಕ್ಕಿಸದೇ ಶಶಿಕಲಾ ಜೊಲ್ಲೆ ಉದ್ಘಾಟನೆ ಮಾಡಿ ಹೋಗಿದ್ದರು.

ಪ್ರತಿಯಾಗಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಜಾರಕಿಹೊಳಿ‌ ಶನಿವಾರ ಕಟ್ಟಡವನ್ನು ಉದ್ಘಾಟನೆ ಮಾಡಿದ್ದಾರೆ. ಪೊಲೀಸರ ಬಂದೋಬಸ್ತ್ ನಲ್ಲಿ ಸಂಸದೆ ಕಟ್ಟಡ ಉದ್ಘಾಟನೆ ಮಾಡಿದ್ದಾರೆ. ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಒ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಉದ್ಘಾಟನೆ ಬಳಿಕ ಮಾತನಾಡಿದ ಪ್ರಿಯಾಂಕ ಜಾರಕಿಹೊಳಿ, ಬಿಜೆಪಿಯ ಶಾಸಕಿಯವರು ಸ್ಥಳೀಯ ಪಂಚಾಯಿತಿ ಅಧ್ಯಕ್ಷರನ್ನು ನಿರ್ಲಕ್ಷ್ಯ ಮಾಡಿ ಪಂಚಾಯಿತಿ ಕಟ್ಟಡ ಉದ್ಘಾಟನೆ ಮಾಡಿದ್ದರು. ಹೀಗಾಗಿ ಅವರ ಬೇಡಿಕೆಯ ಪ್ರಕಾರ ನಾನು ಚಾಲನೆ ಕೊಟ್ಟಿದ್ದೇನೆ ಎಮದು ಹೇಳಿದರು. ನಮ್ಮ ಯಾರ ಗಮನಕ್ಕೂ ತಾರದೇ ಕಟ್ಟಡ ಉದ್ಘಾಟನೆ ಕಾರ್ಯಕ್ರಮವನ್ನು ಅವರು ಆಯೋಜಿಸಿದ್ದರು. ಶಿಷ್ಟಾಚಾರ ಪ್ರಕಾರ ಅದು ಸರಿಯಲ್ಲ. ಹೀಗಾಗಿ ನಾವು ಮಾಡಿರುವ ಉದ್ಘಾಟನಾ ಕಾರ್ಯಕ್ರಮವೇ ಅಧಿಕೃತ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Nandi Hills : ಬೆಂಗಳೂರಿಗರ ವಾರಾಂತ್ಯದ ವಿನೋದಕ್ಕೆ ಅಡಚಣೆ; ಮರದ ಟೊಂಗೆ ಬಿದ್ದು ನಂದಿ ಹಿಲ್ಸ್​ನಲ್ಲಿ 5 ಕಿ.ಮೀ ಟ್ರಾಫಿಕ್ ಜಾಮ್​

ಏತನ್ಮಧ್ಯೆ, ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಸಂಪೂರ್ಣವಾಗಿ ಮರಾಠಿಯಲ್ಲೇ ಇದ್ದಿದ್ದು ಕನ್ನಡ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗವಂತೆ ಮಾಡಿದೆ. ಕರ್ನಾಟಕದ ಪ್ರದೇಶವಾಗಿದ್ದೂ ಕರ್ನಾಟಕವನ್ನು ಪ್ರತಿನಿಧಿಸುವ ಸಂಸದೆಯೇ ಕಾರ್ಯಕ್ರಮದ ಮುಖ್ಯವೇದಿಕೆಯಲ್ಲಿ ಇದ್ದರೂ ಕನ್ನಡವನ್ನು ಮರೆತಿರುವುದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಸಂಸದರ ಕನ್ನಡ ತಾರತಮ್ಯ ಧೋರಣೆಯನ್ನು ಖಂಡಿಸಿದ್ದಾರೆ.

Exit mobile version