Site icon Vistara News

Turbulence: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ; ಒಬ್ಬ ಪ್ರಯಾಣಿಕ ಸಾವು, 30 ಮಂದಿಗೆ ಗಾಯ, ಇಲ್ಲಿದೆ ಭೀಕರ ವಿಡಿಯೊ

Turbulence

One dead, 30 injured after massive turbulence hits Singapore Airlines flight

ಲಂಡನ್‌: ಬ್ರಿಟನ್‌ ರಾಜಧಾನಿ ಲಂಡನ್‌ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಕ್ಷುಬ್ಧತೆ (Turbulence) ಉಂಟಾಗಿದ್ದು, ಒಬ್ಬರು ಮೃತಪಟ್ಟರೆ 30 ಜನ ಗಾಯಗೊಂಡಿದ್ದಾರೆ. ಸಿಂಗಾಪುರ ಏರ್‌ಲೈನ್ಸ್‌ ವಿಮಾನವು (Singapore Airlines) ಹೀಥ್ರೂ ಏರ್‌ಪೋರ್ಟ್‌ನಿಂದ ಸಿಂಗಾಪುರಕ್ಕೆ ಹಾರಾಟ ಆರಂಭಿಸಿತ್ತು. ಆದರೆ, ಹಾರಾಟ ನಡೆಸಿದ ಕೆಲ ಹೊತ್ತಿನಲ್ಲಿಯೇ ಪ್ರಕ್ಷುಬ್ಧತೆ ಉಂಟಾದ ಕಾರಣ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಬ್ಯಾಂಕಾಕ್‌ನ ಸುವರ್ಣಭೂಮಿ ಏರ್‌ಪೋರ್ಟ್‌ನಲ್ಲಿ ತುರ್ತು ಲ್ಯಾಂಡ್‌ ಮಾಡಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಒಬ್ಬರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಸಿಂಗಾಪುರ ಏರ್‌ಲೈನ್ಸ್‌ನ ಎಸ್‌ಕ್ಯೂ 321 ವಿಮಾನದಲ್ಲಿದ್ದ 30 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಆದರೆ, ಗಾಯಾಳುಗಳ ಸಂಖ್ಯೆ ಕುರಿತು ವಿಮಾನಯಾನ ಸಂಸ್ಥೆಯು ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಟರ್ಬುಲೆನ್ಸ್‌ ಉಂಟಾಗಿರುವುದನ್ನು ಸಿಂಗಾಪುರ ಏರ್‌ಲೈನ್ಸ್‌ ದೃಢಪಡಿಸಿದ್ದು, ಪ್ರಯಾಣಿಕರಿಗೆ ಅಗತ್ಯ ನೆರವು ಒದಗಿಸಲಾಗುತ್ತಿದೆ ಎಂದಷ್ಟೇ ಮಾಹಿತಿ ನೀಡಿದೆ. ಒಬ್ಬರು ಮೃತಪಟ್ಟಿರುವುದನ್ನು ಕೂಡ ವಿಮಾನಯಾನ ಸಂಸ್ಥೆಯು ದೃಢಪಡಿಸಿದೆ.

ವಿಮಾನವನ್ನು ಏಕಾಏಕಿ 6 ಸಾವಿರ ಅಡಿ ಕೆಳಗಿಳಿಸಿದ ಪರಿಣಾಮವಾಗಿ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ವಿಮಾನವು ಸುಮಾರು 37 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ ದಿಢೀರನೆ 31 ಸಾವಿರ ಅಡಿಗೆ ಇಳಿಸಿದ ಕಾರಣ ಪ್ರಯಾಣಿಕರಿಗೆ ಭಾರಿ ಪ್ರಮಾಣದಲ್ಲಿ ಗಾಯಗಳಾಗಲು, ಒಬ್ಬ ವ್ಯಕ್ತಿ ಮೃತಪಡಲು ಕಾರಣವಾಗಿದೆ ಎಂದು ತಿಳಿದುಬಂದಿದೆ.

“ಮೇ 20ರಂದು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಆರಂಭಿಸಿದ ಬಳಿಕ ಟರ್ಬುಲೆನ್ಸ್‌ ಉಂಟಾಗಿದೆ. ಇದರಿಂದಾಗಿ ಬ್ಯಾಂಕಾಕ್‌ನಲ್ಲಿ ವಿಮಾನವನ್ನು ತುರ್ತು ಲ್ಯಾಂಡ್‌ ಮಾಡಲಾಯಿತು. ಒಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮೃತರ ಕುಟುಂಬಸ್ಥರಿಗೆ ಆದ ನಷ್ಟಕ್ಕೆ ಸಿಂಗಾಪುರ ಏರ್‌ಲೈನ್ಸ್‌ ವಿಷಾದ ವ್ಯಕ್ತಪಡಿಸುತ್ತದೆ.‌ ಉಳಿದ ಪ್ರಯಾಣಿಕರಿಗೆ ಅಗತ್ಯ ನೆರವು ನೀಡಲಾಗುತ್ತಿದೆ” ಎಂಬುದಾಗಿ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸಿಂಗಾಪುರ ಏರ್‌ಲೈನ್ಸ್ ಮಾಹಿತಿ ನೀಡಿದೆ.

ಏನಿದು ಟರ್ಬುಲೆನ್ಸ್?‌

ವಿಮಾನವು ಹಾರಾಟ ನಡೆಸುವಾಗ ಹವಾಮಾನ ವೈಪರೀತ್ಯದಿಂದಾಗಿ ಗಾಳಿಯ ಒತ್ತಡದಲ್ಲಿ ದಿಢೀರನೆ ಏರುಪೇರಾಗುತ್ತದೆ. ಇದರ ತೀವ್ರತೆಗೆ ವಿಮಾನವು ಹಾರಾಟ ನಡೆಸುವಾಗಲೇ ಏಕಾಏಕಿ ಅಲುಗಾಡುತ್ತದೆ. ಹೀಗೆ ದಿಢೀರನೆ ಅಲುಗಾಡುವುದನ್ನೇ ಟರ್ಬುಲೆನ್ಸ್‌ ಅಥವಾ ಪ್ರಕ್ಷುಬ್ಧತೆ ಎಂದು ಕರೆಯುತ್ತಾರೆ. ಸಣ್ಣಪುಟ್ಟ ಪ್ರಕ್ಷುಬ್ಧತೆ ಉಂಟಾದರೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ತೀವ್ರ ಪ್ರಮಾಣದಲ್ಲಿ ಉಂಟಾದರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಲಗೇಜ್‌ಗಳು ಪ್ರಯಾಣಿಕರ ಮೈಮೇಲೆ ಬೀಳುತ್ತವೆ. ಇನ್ನೂ ಹಲವು ತೊಂದರೆಗಳನ್ನು ಪ್ರಯಾಣಿಕರು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಟರ್ಬುಲೆನ್ಸ್‌ ಉಂಟಾದಾಗ ದಿಢೀರನೆ ವಿಮಾನ ಹಾರುವ ಎತ್ತರವನ್ನು ಕಡಿಮೆಗೊಳಿಸುವುದು ಕೂಡ ಅಪಾಯಕಾರಿ ಎನಿಸಿದೆ.

ಇದನ್ನೂ ಓದಿ: Japan Planes collide: ಜಪಾನ್‌ನಲ್ಲಿ ವಿಮಾನ ದುರಂತ; 6 ಕೋಸ್ಟ್ ಗಾರ್ಡ್ ಸಿಬ್ಬಂದಿ ಪೈಕಿ ಐವರು ಸಾವು

Exit mobile version