Site icon Vistara News

Online Order Tragedy: ಆನ್‌ಲೈನ್‌ನಿಂದ ತರಿಸಿದ ಐಸ್‌ಕ್ರೀಂನಲ್ಲಿತ್ತು ಮನುಷ್ಯರ ಬೆರಳು!

Online Order Tragedy

ಮುಂಬೈ: ಇತ್ತೀಚಿನ ದಿನಗಳಲ್ಲಿ ಜನರು ಬೆಳಗ್ಗಿನ ತಿಂಡಿಯಿಂದ ಹಿಡಿದು ರಾತ್ರಿಯ ಊಟದವರೆಗೂ ಆನ್‌ಲೈನ್‌ನಲ್ಲಿಯೇ ಆರ್ಡರ್‌ ಮಾಡುತ್ತಾರೆ. ಇನ್ನು ಆನ್‌ಲೈನ್‌ ಸರ್ವಿಸ್‌ಗಳು ಒಂದಕ್ಕಿಂತ ಒಂದು ಸ್ಪೀಡ್‌ ಆಗಿದ್ದು ಆರ್ಡರ್‌ ಕೊಟ್ಟು ಕಣ್ಣುಮುಚ್ಚುವುದರೊಳಗೆ ಮನೆಯ ಕಾಲಿಂಗ್‌ ಬೆಲ್‌ ಸದ್ದಾಗುತ್ತದೆ. ಇದರಿಂದ ಜನರಿಗೆ ಮಾರುಕಟ್ಟೆಗೆ ಹೋಗಿ ಬಿಸಿಲು, ಮಳೆಯಲ್ಲಿ ಸುತ್ತಾಡುವುದು ತಪ್ಪುತ್ತದೆ .ಆರಾಮಾಗಿ ಮನೆಯಲ್ಲಿಯೇ ಕುಳಿತು ತಮಗೆ ಏನು ಬೇಕೋ ಅದನ್ನು ಆರ್ಡರ್‌ ಮಾಡಬಹುದು. ಆದರೆ ಈ ಆನ್‌ಲೈನ್‌ ಸರ್ವಿಸ್‌ನಿಂದ ತೊಂದರೆಯಾದ ಘಟನೆ ಕೂಡ ಸಾಕಷ್ಟಿದೆ. ಇತ್ತೀಚೆಗಷ್ಟೇ ಬಾಲಕಿಯೊಬ್ಬಳು ಆನ್‌ಲೈನ್‌ನಲ್ಲಿ ಆರ್ಡರ್‌ (Online Order Tragedy) ಮಾಡಿದ ಕೇಕ್‌ ತಿಂದು ಮರಣಹೊಂದಿದ ಘಟನೆ ಇನ್ನೂ ಮಾಸಿಲ್ಲ, ಅದರ ಬೆನ್ನಲ್ಲೇ ಈಗ ಮಹಿಳೆಯೊಬ್ಬರು ಆನ್‌ಲೈನ್ ನಲ್ಲಿ ಆರ್ಡರ್ ಮಾಡಿದ ಐಸ್ ಕ್ರೀಂನಲ್ಲಿ ಮನುಷ್ಯನ ಕೈಬೆರಳು ಇರುವುದು ಪತ್ತೆಯಾಗಿದೆ.

ಮುಂಬೈನ ಮಲಾಡ್ ಪ್ರದೇಶದ ಮಹಿಳೆಯೊಬ್ಬಳು ದಿನಸಿ ವಸ್ತುಗಳ ಜೊತೆಗೆ ತನ್ನ ಸಹೋದರನಿಗಾಗಿ ಯುಮ್ಮೋ ಐಸ್ ಕ್ರೀಂ ಕಂಪೆನಿಯ ಮೂರು ಬಟರ್ ಸ್ಕಾಚ್ ಕೋನ್ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಾಳೆ. ಮನೆಗೆ ಬಂದ ಐಸ್ ಕ್ರೀಂ ಅನ್ನು ಸಹೋದರ ಬಿಚ್ಚಿ ತಿನ್ನುವಾಗ ನಾಲಿಗೆಗೆ ಏನೋ ತಗುಲಿದ ಹಾಗೆ ಆಗಿದೆ. ಆಗ ಆತ ಅದನ್ನು ಹೊರತೆಗೆದಾಗ ಅದು ಮನುಷ್ಯನ ಕೈಬೆರಳಾಗಿದ್ದು ಸುಮಾರು 2 ಸೆಂಟಿಮೀಟರ್ ಉದ್ದವಿತ್ತು ಎಂಬುದಾಗಿ ತಿಳಿದುಬಂದಿದೆ. ಮಹಿಳೆಯ ಸಹೋದರ ವೈದ್ಯನಾಗಿದ್ದ ಕಾರಣ ಆತ ಅದು ಮನುಷ್ಯನ ಕೈ ಬೆರಳು ಎಂದು ಕೂಡಲೇ ಪತ್ತೆ ಹಚ್ಚಿದ್ದಾನೆ.

ಈ ಬಗ್ಗೆ ಮಹಿಳೆ ಮಲಾಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಯುಮ್ಮೋ ಐಸ್ ಕ್ರೀಂ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಾಗೇ ಐಸ್ ಕ್ರೀಂನಲ್ಲಿ ಪತ್ತೆಯಾದ ಮಾನವನ ಕೈಬೆರಳನ್ನು ಫೊರೆನ್ಸಿಕ್‌ಗೆ ಕಳುಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಪೊಲೀಸರು ಐಸ್ ಕ್ರೀಂ ಕಂಪನಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 272, 271 ಮತ್ತು 336 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Kangana Ranaut: ಸಂಸದೆಯಾಗಿರುವ ನಟಿ ಕಂಗನಾ ರಣಾವತ್‌ಗೆ ಸಿಗುವ ಸಂಬಳ, ಇತರ ಸವಲತ್ತುಗಳು ಏನೇನು?

ಈ ಹಿಂದೆ ಕೂಡ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಕಿತ್ತಳೆ ಹಣ್ಣು ಆರ್ಡರ್ ಮಾಡಿ ಅದರಲ್ಲಿ ಜೀವಂತ ಹುಳಗಳು ಹರಿದಾಡುತ್ತಿರುವುದನ್ನು ನೋಡಿದ್ದಾರೆ. ಹಾಗಾಗಿ ಆನ್ಲೈನ್ನಲ್ಲಿ ಯಾವುದೇ ವಸ್ತುಗಳನ್ನು ಆರ್ಡರ್ ಮಾಡಿ ಬಳಸುವ ಮುನ್ನ ಜನರು ಎಚ್ಚರಿಕೆಯಿಂದರಬೇಕು. ಇಲ್ಲವಾದರೆ ಇದರಿಂದ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ.

Exit mobile version