ನವದೆಹಲಿ: ಅತಿಸಾರ ಅಥವಾ ಇತರೆ ಯಾವುದೇ ಕಾರಣದಿಂದ ದೇಹ ನಿರ್ಜಲೀಕರಣಗೊಂಡಾಗ ನೀಡುವ ಓಆರ್‌ಎಸ್ (ORS) (ಓರಲ್ ರೀಹೈಡ್ರೇಷನ್ ಸೊಲ್ಯೂಷನ್) (Oral Rehydration Solution) ಚಿಕಿತ್ಸೆ ಸಂಶೋಧಿಸುವ ಮೂಲಕ ವಿಶ್ವಾದ್ಯಂತ ಲಕ್ಷಾಂತರ ಜೀವಗಳನ್ನು ಕಾಪಾಡಿದ್ದ ಖ್ಯಾತ ವೈದ್ಯ ಡಾ. ದಿಲೀಪ್ ಮಹಲ್ ನಬೀಸ್(dr. dilip mahalanabis) ಅವರಿಗೆ ಕೇಂದ್ರ ಸರಕಾರ 2023ರ ಸಾಲಿನ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿ(padma awards 2023) ನೀಡಿ ಗೌರವಿಸಿದೆ.
ಪ್ರತಿಷ್ಠಿತ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ನ ಸದಸ್ಯರೂ ಆಗಿದ್ದ ಡಾ. ದಿಲೀಪ್ ಅವರು 1971ರಲ್ಲಿ ಸಂಶೋಧಿಸಿದ ಒಆರ್‌ಎಸ್ ಥೆರಪಿ, ವೈದ್ಯಕೀಯ ಕ್ಷೇತ್ರದಲ್ಲಿ 20ನೇ ಶತಮಾನದ ಅತ್ಯಂತ ಮಹತ್ವದ ಸಂಶೋಧನೆ ಎಂದು ಲ್ಯಾನ್ಸೆಟ್ ತನ್ನ ವರದಿಯಲ್ಲಿ ತಿಳಿಸಿತ್ತು. ಈ ವೈದ್ಯರಿಗೆ ಭಾರತ ಸರ್ಕಾರ ಇದುವರೆಗೆ ಯಾವುದೇ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿರಲಿಲ್ಲ. ಇದೀಗ ಕೇಂದ್ರ ಸರಕಾರ 2023ರ ಸಾಲಿನಲ್ಲಿ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
1971ರಲ್ಲಿ ಬಾಂಗ್ಲಾದೇಶದ ವಿಮೋಚನಾ ಯುದ್ಧ ಆರಂಭವಾದಾಗ ಲಕ್ಷಾಂತರ ನಿರಾಶ್ರಿತರು ಪಶ್ಚಿಮ ಬಂಗಾಳದ ಶಿಬಿರಗಳಲ್ಲಿ ಆಶ್ರಯ ಪಡೆದರು. ಈ ವೇಳೆ ಶುಚಿತ್ವದ ಹಾಗೂ ಶುದ್ಧ ಕುಡಿಯುವ ನೀರಿನ ತೊಂದರೆಯಿಂದಾಗಿ ಕಾಲರಾ, ಅತಿಸಾರದಿಂದ ತೀವ್ರವಾಗಿ ರೋಗ ಹರಡಲು ಆರಂಭವಾಯಿತು. ಸೋಂಕಿಗೆ ಬಹಳಷ್ಟು ಮಕ್ಕಳು ಬಲಿಯಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಡಾ. ಮಹಲ್ ನಬೀಸ್ ಮೌಖಿಕ ಪುನರ್ಜಲೀಕರಣ ಚಿಕಿತ್ಸೆ (Oral Rehydration Therapy) (ಒಆರ್‌ಟಿ) (ORT) ಕಂಡುಹಿಡಿದಿದ್ದರು.
1980ರಿಂದ 1990ರ ದಶಕದಲ್ಲಿ ಮಹಲ್ ನಬೀಸ್ ಅವರು ಜಿನೇವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಅತಿಸಾರ ನಿಯಂತ್ರಣ ಕಾರ್ಯಕ್ರಮದ ವೈದ್ಯಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ಇದನ್ನೂ ಓದಿ | Padma Awards 2023: ಕರ್ನಾಟಕದ ರಾಣಿ ಮಾಚಯ್ಯ, ಮುನಿ ವೆಂಕಟಪ್ಪ ಸೇರಿ ಹಲವರಿಗೆ ಪದ್ಮ ಪ್ರಶಸ್ತಿ