ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ನಮ್ಮ ಕ್ಲಿನಿಕ್ ಚಿಕಿತ್ಸಾಲಯ ಯೋಜನೆಗೆ ಮುಖ್ಯಮಂತ್ರಿ ಹುಬ್ಬಳ್ಳಿ ತಾಲೂಕಿನಲ್ಲಿ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಹೊಸದಾಗಿ 48 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯುವ, ಕಿಮೊಥೆರಪಿಗಾಗಿ 12 ಕ್ಯಾನ್ಸರ್ ಸೆಂಟರ್‌ಗಳನ್ನು ಆರಂಭಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಬಡವರ ಸಂಜೀವಿನಿ ಎಂದೇ ಗುರುತಿಸಲಾಗಿರುವ ನಮ್ಮ ಕ್ಲಿನಿಕ್ ಯೋಜನೆಯಡಿ ಸರ್ಕಾರ ರಾಜ್ಯಾದ್ಯಂತ 438 ಚಿಕಿತ್ಸಾಲಯಗಳನ್ನು ಆರಂಭಿಸಲು ಮುಂದಾಗಿದೆ. ಮೊದಲ ಹಂತದಲ್ಲಿ 114 ಕ್ಲಿನಿಕ್‌ಗಳಿಗೆ ಬುಧವಾರ ಚಾಲನೆ ನೀಡಲಾಗಿದೆ. ಈ ಯೋಜನೆಯನ್ನು ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಆರೋಗ್ಯ ಸೇವಾ ಕ್ಷೇತ್ರದ ಸುಧಾರಣೆಯತ್ತ ಸರ್ಕಾರ ಗಮನ ಹರಿಸಿರುವುದು, ಹಲವು ಹೊಸ ಯೋಜನೆಗಳ ಜಾರಿಗೆ ಮುಂದಾಗಿರುವುದು ಸ್ವಾಗತಾರ್ಹ.
ಜನವರಿ ತಿಂಗಳಿನಿಂದ 60 ವರ್ಷ ಮೇಲ್ಪಟ್ಟವರಿಗೆ ಕಣ್ಣಿನ ಕ್ಯಾಂಪ್, ಉಚಿತ ಕಣ್ಣಿನ ಸರ್ಜರಿ, ಹುಟ್ಟು ಕಿವುಡುತನ ಹೊಂದಿದವರಿಗೆ 500 ಕೋಟಿ ವೆಚ್ಚದಲ್ಲಿ ಉಚಿತ ಕೇಳುಯಂತ್ರಗಳು, ಹೆಣ್ಣು ಮಕ್ಕಳ ಆರೋಗ್ಯ ಚಿಕಿತ್ಸೆಗೆ ವಿಶೇಷ ಆಸ್ಪತ್ರೆ, ಹುಬ್ಬಳ್ಳಿಯಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಜಯದೇವ ಆಸ್ಪತ್ರೆ ಸ್ಥಾಪನೆ, ಕ್ಯಾನ್ಸರ್ ಆಸ್ಪತ್ರೆಗಳ ನಿರ್ಮಾಣಕ್ಕೆ 10 ಕೋಟಿ ರೂ. ಮಂಜೂರು ಇತ್ಯಾದಿಗಳು ಈ ಹೊಸ ಯೋಜನೆಗಳಲ್ಲಿವೆ. ಆರೋಗ್ಯಕ್ಕಾಗಿ ಈ ಬಾರಿ ಬಜೆಟ್‌ನಲ್ಲಿ 10,000 ಕೋಟಿ ರೂ. ಮೀಸಲಿಡಲಾಗಿದೆ. ಬಡವರಿಗೆ ಆರೋಗ್ಯ ಸಮಸ್ಯೆ ಬಂದಾಗ ಅದಕ್ಕೆ ಚಿಕಿತ್ಸೆ ಪಡೆಯಲು ಸಮಸ್ಯೆ ಆಗಬಾರದು ಎಂಬ ಆಶಯ ನಮ್ಮ ಕ್ಲಿನಿಕ್ ಯೋಜನೆಯ ಹಿಂದಿದೆ. ಆರೋಗ್ಯದ ವಿಚಾರದಲ್ಲಿ ಜನತೆ ಕಷ್ಟಪಡುತ್ತಿರುವುದು ಗೊತ್ತೇ ಇದೆ. ಕೊರೊನಾ ಕಾಲದಲ್ಲಿ ಆರೋಗ್ಯ ಸೇವೆಯ ಇತಿಮಿತಿ, ದೌರ್ಬಲ್ಯ ಕೂಡ ಗೊತ್ತಾಗಿದೆ. ಕೊರೊನೋತ್ತರ ಕಾಲದಲ್ಲಿ ನಾನಾ ಸಮಸ್ಯೆಗಳು ಆರೋಗ್ಯವಂತರನ್ನೂ ಬಾಧಿಸುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ತೆತ್ತು ಚಿಕಿತ್ಸೆ ಪಡೆದುಕೊಳ್ಳುವುದು ಕಷ್ಟಸಾಧ್ಯ. ಯಶಸ್ವಿನಿ, ಆಯುಷ್ಮಾನ್ ಭಾರತ್ ಮುಂತಾದ ಆರೋಗ್ಯ ವಿಮಾ ಯೋಜನೆಗಳೇನೋ ಬಡವರಿಗಾಗಿ ಇದ್ದರೂ ಅದರ ಫಲಾನುಭವಿಗಳಿಗೆ ಕೂಡ ಚಿಕಿತ್ಸೆ ಪಡೆಯುವುದು ಕಷ್ಟವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರಿಲ್ಲ, ಇತರ ಸಿಬ್ಬಂದಿ, ಮೂಲಸೌಕರ್ಯಗಳಿಲ್ಲ. ಹೀಗೆ ಕೊರತೆಗಳ ನಡುವೆ ನಲುಗುತ್ತಿರುವ ಆರೋಗ್ಯ ಕ್ಷೇತ್ರಕ್ಕೆ ಕಾಯಕಲ್ಪವಂತೂ ಆಗಬೇಕಿದೆ.
ಈ ಹಿನ್ನೆಲೆಯಲ್ಲಿ ಹೊಸ ಯೋಜನೆಗಳನ್ನು ಘೋಷಿಸಿದರೆ ಸಾಲದು, ಅವು ಸಮರ್ಪಕವಾಗಿ ಕಾರ್ಯಾಚರಿಸುವಂತಾಗುವುದೂ ಮುಖ್ಯ. ರಾಜ್ಯದ ಹಲವೆಡೆ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿರುವುದರಿಂದ ಜನರಿಗೆ ನೆರವಾಗಲಿದೆ. ಹೊಸ ಆಸ್ಪತ್ರೆಗಳಿಗಾಗಿ ಕೇವಲ ಕಟ್ಟಡ ಕಟ್ಟಿದರೆ ಸಾಲದು, ಅಗತ್ಯ ಪ್ರಮಾಣದಲ್ಲಿ ವೈದ್ಯರು, ಸಿಬ್ಬಂದಿ ಮತ್ತು ಮೂಲಸೌಕರ್ಯ ಇರುವುದು ಮುಖ್ಯ. ಆರೋಗ್ಯ ವಿಮಾ ಕಾರ್ಡ್‌ಗಳ ಸದ್ಬಳಕೆ ಫಲಾನುಭವಿಗಳಿಗೆ ಆಗುವಂತಿರಬೇಕು. ಹೊಸ ಆಸ್ಪತ್ರೆಗಳು ಮತ್ತು ಕೀಮೊಥೆರಪಿ ಕೇಂದ್ರಗಳ ಸದುಪಯೋಗ ಆಗಬೇಕು. ಕ್ಯಾನ್ಸರ್‌ನಂಥ ಮಾರಕ ರೋಗಗಳು ಬಂದಾಗ ಅದರ ದುಬಾರಿ ಚಿಕಿತ್ಸಾ ವೆಚ್ಚವನ್ನು ಬಡವರು ಭರಿಸಲಾರರು. ಇಂಥ ಸನ್ನಿವೇಶದಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತವೆ.
ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಿರುವುದೇ ಬಡವರಿಗಾಗಿ ಎಂಬಂತಿದ್ದರೂ, ಖಾಸಗಿ ಆಸ್ಪತ್ರೆಗಳ ಚಿಕಿತ್ಸೆ ದುಬಾರಿಯಾಗಿರುವುದರಿಂದ ಮಧ್ಯಮ, ಮೇಲ್ಮಧ್ಯಮ ವರ್ಗದವರೂ ಮರಳಿ ಈ ಕೇಂದ್ರಗಳಿಗೆ ಬರುವಂತಾಗಿದೆ. ಕೊರೊನಾ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ತೀವ್ರ ಆತಂಕದಿಂದ ಕಾರ್ಯ ನಿರ್ವಹಿಸುತ್ತಿದ್ದಾಗಲಂತೂ ಸರ್ಕಾರಿ ನಿಯಂತ್ರಣದ ಈ ಆರೋಗ್ಯ ಕೇಂದ್ರಗಳು ವಹಿಸಿದ ಮಹತ್ವದ ಪಾತ್ರವನ್ನು ಇಲ್ಲಿ ನೆನೆಯಲೇಬೇಕು. ಅದರಲ್ಲಿ ಲೋಪ ದೋಷಗಳು ಇದ್ದಿರಬಹುದು. ಆದರೆ ಸರ್ಕಾರಿ ಆರೋಗ್ಯ ಕೇಂದ್ರಗಳು ಸಾರ್ವಜನಿಕ ಆರೋಗ್ಯ ಪೋಷಣೆಯ ಮಹತ್ವದ ಕಾರ್ಯವನ್ನು ಮಾಡುತ್ತಿವೆ. ಇದನ್ನು ಇನ್ನಷ್ಟು ಮೂಲಸೌಕರ್ಯಭರಿತವಾಗಿ, ಜವಾಬ್ದಾರಿಯುತವಾಗಿ ರೂಪಿಸಬೇಕಿದೆ. ಹೊಸ ಯೋಜನೆಗಳು ವಿಳಂಬವಿಲ್ಲದೆ, ಪರಿಣಾಮಕಾರಿಯಾಗಿ ಜಾರಿಯಾಗಲಿ.
ವಿಸ್ತಾರ ಸಂಪಾದಕೀಯ: ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪಬ್ಲಿಕ್ ಪರೀಕ್ಷೆ ಪೂರಕ