ಸೋಮಾಲಿಯಾದ ಕಡಲ್ಗಳ್ಳರಿಂದ ಬಲ್ಗೇರಿಯಾದ ನೌಕೆಯನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ತಮ್ಮ ದೇಶದ ಹಡಗು ಮತ್ತು ಸಿಬ್ಬಂದಿಯನ್ನು ರಕ್ಷಿಸಿದ್ದಕ್ಕಾಗಿ ಭಾರತೀಯ ನೌಕಾಪಡೆಗೆ (Indian Navy) ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರಿಗೆ ಬಲ್ಗೇರಿಯಾದ ಅಧ್ಯಕ್ಷ (Bulgarian President) ರುಮೆನ್ ರಾದೇವ್ (Rumen Radev) ಅವರು ಧನ್ಯವಾದ ಸಲ್ಲಿಸಿದ್ದಾರೆ. “ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಮುದ್ರಯಾನದ ಸ್ವಾತಂತ್ರ್ಯವನ್ನು ರಕ್ಷಿಸಲು, ಕಡಲ್ಗಳ್ಳತನ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಭಾರತ ಬದ್ಧವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತ್ಯುತ್ತರ ನೀಡಿದ್ದಾರೆ. ಕಳೆದ ವರ್ಷ ಡಿಸೆಂಬರ್ 14ರಂದು ಸೊಮಾಲಿ ಕಡಲ್ಗಳ್ಳರು ವಶಪಡಿಸಿಕೊಂಡಿದ್ದ ಬಲ್ಗೇರಿಯದ ನೌಕೆ ಎಂವಿ ರುಯೆನ್ ಅನ್ನು ಭಾರತೀಯ ನೌಕಾಪಡೆ ಶನಿವಾರ ಯಶಸ್ವಿಯಾಗಿ ರಕ್ಷಿಸಿತು. 35 ಕಡಲ್ಗಳ್ಳರನ್ನು ಶರಣಾಗುವಂತೆ ಮಾಡಿತು. ಎಲ್ಲಾ ಸಿಬ್ಬಂದಿಯನ್ನು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ರಕ್ಷಿಸಲಾಗಿದೆ. ನಮ್ಮ ಸೈನ್ಯದ ಮುಂಚೂಣಿ ಹಡಗುಗಳಾದ ಐಎನ್‌ಎಸ್ ಕೋಲ್ಕತ್ತಾ, INS ಸುಭದ್ರ, P-8I ಕಡಲ ಗಸ್ತು ವಿಮಾನ, ವಾಯುಪಡೆಯ C-17 ವಿಮಾನಗಳನ್ನು ಬಳಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ.
ಭಾರತೀಯ ನೌಕಾದಳದ ಸಾಹಸ ಇದೊಂದೇ ಅಲ್ಲ. ಇದೇ ವರ್ಷ ಜನವರಿಯಲ್ಲಿ ಇಂಥದೇ ಇನ್ನೊಂದು ಸಾಹಸದಲ್ಲಿ, ಇರಾನಿನ ವರ್ತಕ ಹಡಗೊಂದನ್ನು ಕೂಡ ಸೊಮಾಲಿ ಕಡಲ್ಗಳ್ಳರಿಂದ ಕಾಪಾಡಿ, ಅದರಲ್ಲಿದ್ದ 19 ಮಂದಿ ಪಾಕಿಸ್ತಾನಿ ಮೀನುಗಾರರನ್ನು ರಕ್ಷಿಸಿತ್ತು. ಅರಬಿ ಸಮುದ್ರ ಎಂಬುದು ವರ್ತಕ ಹಡಗುಗಳ ಪಾಲಿಗೆ ಸದಾ ದುಃಸ್ವಪ್ನ. ಅದಕ್ಕೆ ಕಾರಣ ಇಲ್ಲಿ ಕಾಡುವ ಸೋಮಾಲಿಯಾದ ಕಡಲುಗಳ್ಳರು. ಇಂಥವರಿಂದ ನಾನಾ ದೇಶಗಳ ನೌಕೆಗಳು ಪಾಡುಪಡುತ್ತಿವೆ. ಇಂಥ ಸಂದರ್ಭದಲ್ಲಿ ಅವರಿಗೆಲ್ಲಾ ಮಿತ್ರನಾಗಿ ಒದಗುತ್ತಿರುವುದು ಭಾರತೀಯ ನೌಕಾಪಡೆ. ಸುಸಜ್ಜಿತವಾದ ನಮ್ಮ ನೌಕಾದಳ, ಸಂಕಷ್ಟದಲ್ಲಿರುವವರನ್ನು ಪಾರು ಮಾಡುವ ಆಪದ್ಬಾಂಧವನಾಗಿ ಕೆಲಸ ಮಾಡುತ್ತಿದೆ. ಇನ್ನೊಂದು ಕಡೆ ಶ್ರೀಲಂಕಾದಂಥ ಮಿತ್ರ ರಾಷ್ಟ್ರ ಸಾಕಷ್ಟು ನೌಕಾಬಲವನ್ನು ಹೊಂದಿಲ್ಲ. ಶ್ರೀಲಂಕೆಯ ಕಡಲಿನ ಪರಿಸರವನ್ನು ರಕ್ಷಿಸುವ ಕೆಲಸವನ್ನೂ ಭಾರತವೇ ಮಾಡುತ್ತಿದೆ. ಇತ್ತ ಪೆಸಿಫಿಕ್ ಸಾಗರ ಪ್ರದೇಶದಲ್ಲಿರುವ ಮಾಲ್ಡೀವ್ಸ್ ಅಂತೂ ಇತ್ತೀಚಿನವರೆಗೂ ಭಾರತೀಯ ನೌಕಾದಳದ ಒಂದು ಕೇಂದ್ರವೇ ಆಗಿತ್ತು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಬೆಂಗಳೂರು ರೌಡಿಗಳ ಸಾಮ್ರಾಜ್ಯ ಆಗದಿರಲಿ
ಇತ್ತೀಚೆಗೆ ಬಂಗಾಳ ಕೊಲ್ಲಿಯಲ್ಲಿ ನಮ್ಮ ಸ್ವಾಮ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ನೆಲೆಯಿಂದ ಲಕ್ಷದ್ವೀಪದಲ್ಲಿ ನೌಕಾಪಡೆಯು ʼಐಎನ್‌ಎಸ್ ಜಟಾಯುʼ ಹೆಸರಿನ ಮತ್ತೊಂದು ನೆಲೆಯನ್ನು ನಿರ್ಮಿಸುವ ಮೂಲಕ ಭಾರತ ವ್ಯೂಹಾತ್ಮಕ ಹಾಗೂ ರಕ್ಷಣಾತ್ಮಕ ಹೆಜ್ಜೆ ಇರಿಸಿದೆ. ಈಗಾಗಲೇ ಅಂಡಮಾನ್‌ನಲ್ಲಿ ಐಎನ್‌ಎಸ್ ಬಾಜ್ ಎಂಬ ನೌಕಾನೆಲೆ ಇದೆ. ಲಕ್ಷದ್ವೀಪದ ಕವರಟ್ಟಿಯಲ್ಲೇ ದ್ವೀಪ್ರಕಾಶಕ ಎಂಬ ನೌಕಾನೆಲೆ ಇದೆ. ಇದರ ಬೆನ್ನಲ್ಲೇ, ಇನ್ನೊಂದು ನೌಕಾನೆಲೆ ತಲೆಯೆತ್ತುತ್ತಿದೆ. ಇದು ಅತಿ ಅಗತ್ಯವಾದುದು. ಏಕೆಂದರೆ, ಮಾಲ್ಡೀವ್ಸ್‌ನಲ್ಲಿ ಚೀನಾ ಇಷ್ಟರಲ್ಲಿಯೇ ತನ್ನ ಸೇನಾನೆಲೆಯನ್ನು ಸ್ಥಾಪಿಸಬಹುದು. ಈ ಸಾಗರ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇರಿಸುವುದು ಸೇರಿ ಹಲವು ಕಾರಣಗಳಿಂದಾಗಿ ʼಐಎನ್‌ಎಸ್ ಜಟಾಯುʼ ಪ್ರಾಮುಖ್ಯತೆ ಪಡೆದಿದೆ. ಇಲ್ಲಿಂದ ಪಶ್ಚಿಮ ಅರಬ್ಬೀ ಸಮುದ್ರದಲ್ಲಿ ವೈರಿಗಳ ಮೇಲೆ ಹೆಚ್ಚಿನ ನಿಗಾ ಇರಿಸುವುದು, ಸಾಗರ ಪ್ರದೇಶದಲ್ಲಿ ಭಯೋತ್ಪಾದನೆ- ಅಪರಾಧ ತಡೆಗಟ್ಟುವುದು, ಸಮುದ್ರ ಪ್ರದೇಶದಲ್ಲಿ ಮಾದಕವಸ್ತು ಅಕ್ರಮ ಸಾಗಣೆ ನಿಯಂತ್ರಣ ಸಾಧ್ಯ. ಕ್ಷಿಪ್ರವಾಗಿ ಡ್ರೋನ್, ಕ್ಷಿಪಣಿ ನಿಗ್ರಹ ಕಾರ್ಯಾಚರಣೆ ಕೈಗೊಳ್ಳಲು ಇದು ಸಹಕಾರಿ. ಸಾಗರ ಪ್ರದೇಶದಲ್ಲಿ ಯಾವುದೇ ದುರಂತ ನಡೆದರೆ ರಕ್ಷಣೆ, ದಾಳಿ ನಡೆದರೆ ವೇಗವಾಗಿ ತಿರುಗೇಟು ನೀಡಬಹುದು. ಸಮುದ್ರ ಪ್ರದೇಶದಲ್ಲಿ ಅಕ್ರಮ ಸಾಗಣೆ, ಹಡಗುಗಳ ಸಂಚಾರದ ಮೇಲೆ ಹದ್ದಿನ ಕಣ್ಣಿಡಬಹುದು. ಚೀನಾದ ಸಂಶೋಧನಾ ಹಡಗುಗಳ ಸಂಚಾರದ ಮೇಲೆ ನಿಗಾ ಇರಿಸಿ, ಕ್ರಮ ತೆಗೆದುಕೊಳ್ಳುವುದು ಸಾಧ್ಯ.
ಭಾರತದ ನೌಕಾಪಡೆ ಈಗ ಸಾಕಷ್ಟು ಯುದ್ಧನೌಕೆಗಳು, ಐಎನ್‌ಎಸ್ ವಿಕ್ರಮಾದಿತ್ಯದಂಥ ಜೆಟ್ ಫೈಟರ್ ಕ್ಯಾರಿಯರ್‌ಗಳು, ಅರಿಹಂತ್‌ನಂತ ಸಬ್‌ಮರೀನ್‌ಗಳನ್ನು ಹೊಂದಿದೆ. ಪ್ರಸ್ತುತ ಇದು ಜಗತ್ತಿನ 7ನೇ ಅತಿ ಪ್ರಬಲ ನೌಕಾಪಡೆಯೆನಿಸಿದೆ. ಈ ಪ್ರಾಬಲ್ಯ ಭಾರತವನ್ನು ಸುತ್ತುವರಿದ ಸಾಗರ ಪ್ರದೇಶವನ್ನು ರಕ್ಷಿಸುವುದಷ್ಟೇ ಅಲ್ಲ, ಇಲ್ಲ ಓಡಾಡುವ ಮಿತ್ರದೇಶಗಳ ನೌಕೆಗಳ ರಕ್ಷಣೆಗೂ ನೆರವಾಗಿದೆ ಎನ್ನುವುದು ನಮ್ಮ ಹೆಮ್ಮೆ.