Site icon Vistara News

ವಿಸ್ತಾರ ಸಂಪಾದಕೀಯ | ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆಯಾಗಲಿ

Vistara Editorial, Let the strengthening government schools

ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ, ಅದನ್ನು ಬೆಳೆಸುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಸಮಯವಿದು. ಕರ್ನಾಟಕದಲ್ಲಿ ಶೇ.50ಕ್ಕೂ ಅಧಿಕ ಮಕ್ಕಳಿಗೆ ಸರ್ಕಾರಿ ವಿದ್ಯಾಸಂಸ್ಥೆಗಳೇ ಪ್ರಾಥಮಿಕ ಶಿಕ್ಷಣದ ಮೂಲವಾಗಿವೆ ಎಂಬುದು ವಿಶ್ವಸಂಸ್ಥೆಯ ಉಲ್ಲೇಖ. ಬಡವರು, ಕೆಳಮಧ್ಯಮ ವರ್ಗದವರು ಒಂದರಿಂದ 12ನೇ ತರಗತಿಯವರೆಗೂ ಉಚಿತ ಶಿಕ್ಷಣ ನೀಡುವ ಅಥವಾ ನಾಮಮಾತ್ರ ಶುಲ್ಕ ಪಡೆಯುವ ಸರ್ಕಾರಿ ಶಾಲೆಗಳನ್ನೇ ನೆಚ್ಚಿಕೊಂಡಿದ್ದಾರೆ. ಎಲ್ಲ ಮಕ್ಕಳಿಗೂ ಶಿಕ್ಷಣ ದೊರೆಯಬೇಕು ಎಂಬುದು ವಿಶ್ವಸಂಸ್ಥೆಯ ಪ್ರಮುಖರೂ ಸೇರಿದಂತೆ ಎಲ್ಲ ಪ್ರಾಜ್ಞರ ಆಶಯ. ಇದಕ್ಕಾಗಿಯೇ ನಮ್ಮ ಒಕ್ಕೂಟ ಸರ್ಕಾರ 2009ರಲ್ಲಿ ʼಉಚಿತ ಹಾಗೂ ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ಕಾಯಿದೆʼಯನ್ನು ಕೂಡ ಜಾರಿಗೆ ತಂದಿದೆ. ಆರರಿಂದ ಹದಿನಾಲ್ಕು ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೆ ಶಿಕ್ಷಣ ಹಕ್ಕು; ಅದನ್ನು ಕೊಡಿಸುವುದು ಪೋಷಕರು- ಸರ್ಕಾರ- ಸಮಾಜದ ಹೊಣೆ. ಆದರೆ ಎಲ್ಲ ಮಕ್ಕಳಿಗೆ ಶಿಕ್ಷಣ ಸಿಗಬೇಕಾದರೆ ಎಲ್ಲ ಕಡೆ ಸರ್ಕಾರಿ ಶಾಲೆಗಳಿರಬೇಕು ಹಾಗೂ ಅವು ಸುವ್ಯವಸ್ಥೆಯಲ್ಲಿರಬೇಕು. ಆದರೆ ಈಗ ಏನಾಗಿದೆ?

ಸದ್ಯಕ್ಕೆ ನಮ್ಮ ರಾಜ್ಯದಲ್ಲಿ 44615 ಸರ್ಕಾರಿ ಪ್ರಾಥಮಿಕ ಶಾಲೆಗಳು, 5240 ಸರ್ಕಾರಿ ಪ್ರೌಢಶಾಲೆಗಳು, 1229 ಸರ್ಕಾರಿ ಪಿಯು ಕಾಲೇಜುಗಳು, 6882 ಅನುದಾನಿತ ಶಾಲೆಗಳಿವೆ. ಮಕ್ಕಳ ಸಂಖ್ಯೆಯೇನೂ ಕಡಿಮೆಯಾಗುತ್ತಿಲ್ಲ; ಬದಲಾಗಿ ವರ್ಷದಿಂದ ವರ್ಷಕ್ಕೆ ಏರುತ್ತಿದೆ. 2021- 22ರ ಸಾಲಿನಲ್ಲಿ ಸರ್ಕಾರಿ ಶಾಲೆಗಳಿಗೆ ನೋಂದಣಿ ಮಾಡಿಸಿಕೊಂಡ ಮಕ್ಕಳ ಸಂಖ್ಯೆ 54,45,989. ಇದು ಹಿಂದಿನ ವರ್ಷಕ್ಕಿಂತ 4 ಲಕ್ಷಗಳಷ್ಟು ಅಧಿಕ. ಆದರೆ ಇಷ್ಟೊಂದು ಮಕ್ಕಳಿಗೆ ಸಾಕಷ್ಟು ಸೌಲಭ್ಯಗಳನ್ನು ಹೊಂದಿರುವ ಶಾಲೆಗಳನ್ನು ನಾವು ಕೊಟ್ಟಿದ್ದೇವೆಯೇ? ನಮ್ಮೂರ ಶಾಲೆಗಳು ಹೇಗಿವೆ? ಹೆಚ್ಚಿನ ಶಾಲೆಗಳಿಗೆ ವಿದ್ಯುತ್‌ ಹಾಗೂ ನೀರಿನ ಸಂಪರ್ಕವಿದ್ದರೂ ಇನ್ನೂ 3%ದಷ್ಟು ಶಾಲೆಗಳಿಗೆ ನೀರು- ವಿದ್ಯುತ್‌ ಸಂಪರ್ಕವಿಲ್ಲ. ಗ್ರಾಮೀಣ ಪ್ರಾಂತ್ಯಗಳಲ್ಲಿರುವ ಸುಮಾರು 12,000 ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಬ್ಬರೇ ಅಧ್ಯಾಪಕರು ಎಲ್ಲವನ್ನೂ ನಿಭಾಯಿಸಬೇಕಿದೆ. ಅನೇಕ ಕಡೆಗಳಲ್ಲಿ ಶಾಲೆಗೆ ಸ್ವಂತ ಕಟ್ಟಡವಿಲ್ಲ. ಕಟ್ಟಡವಿದ್ದ ಹಲವು ಕಡೆ ಕೋಣೆಗಳು ಶಿಥಿಲವಾಗಿ ಉದುರಿಬೀಳುವಂತಿವೆ. ಕೋಣೆಗಳಿದ್ದಲ್ಲಿ ಪೀಠೋಪಕರಣಗಳಿಲ್ಲ. ಎಲ್ಲವೂ ಇದ್ದಲ್ಲಿ ಆಧುನಿಕ ಕಲಿಕೆಗೆ ಅನಿವಾರ್ಯವಾದ ಕಂಪ್ಯೂಟರ್‌ಗಳಿಲ್ಲ. ಶಿಕ್ಷಕರಿಗೆ ಬೋಧನೆಯ ಜತೆಗೆ ಇತರ ಅನೇಕ ಕೆಲಸಗಳನ್ನೂ ಹಚ್ಚಲಾಗಿದೆ. ಹೀಗೆ ಇಲ್ಲಗಳನ್ನೇ ಪಟ್ಟಿ ಮಾಡುತ್ತಾ ಕಾಲ ಕಳೆಯುವುದಕ್ಕಿಂತಲೂ ಇವುಗಳ ಸುಧಾರಣೆಗಾಗಿ ನಾವು ಏನು ಮಾಡಬಹುದು ಎಂಬುದನ್ನು ನೋಡಬೇಕಿದೆ.

ನಮ್ಮ ರಾಜ್ಯದ ಖಾಸಗಿ ಶಾಲೆಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಗಣನೀಯ ಸೇವೆ ಸಲ್ಲಿಸುತ್ತಿವೆ. ಆದರೆ ಸರ್ಕಾರಿ ಶಾಲೆಗಳನ್ನು ಗಣನೀಯ ಪ್ರಮಾಣದ ಮಕ್ಕಳು, ಮುಖ್ಯವಾಗಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಮಕ್ಕಳು ಅವಲಂಬಿಸಿದ್ದಾರೆ. ಹಾಗಾಗಿ ನಮ್ಮ ಸರ್ಕಾರಿ ಶಾಲೆಗಳು ದೇಶದಲ್ಲೇ ಮಾದರಿಯಾಗಬೇಕು ಎಂಬ ಕನಸಿಗೆ ಜೀವ ತುಂಬುವ ಸಮಯವಿದು. ಶಾಲೆಗೆ ಅತ್ಯುತ್ತಮ ಸ್ವಂತ ಕಟ್ಟಡವಿರಬೇಕು. ಉದ್ಯಾನ, ಉತ್ತಮ ಶೌಚಾಲಯ, ವಿದ್ಯುತ್‌ ಹಾಗೂ ಶುದ್ಧೀಕೃತ ಕುಡಿಯುವ ನೀರು, ತರಗತಿಗೆ ಹಾಗೂ ವಿಷಯಕ್ಕೆ ಒಬ್ಬ ಶಿಕ್ಷಕ, ಬಿಸಿಯೂಟಕ್ಕೆ ಪ್ರತ್ಯೇಕ ಸಿಬ್ಬಂದಿ, ಚಿತ್ರಕಲೆ- ದೈಹಿಕ ಶಿಕ್ಷಣ, ಸಂಗೀತ, ಕಂಪ್ಯೂಟರ್‌ ಶಿಕ್ಷಕರು, ಕಲಿಕೋಪಕರಣಗಳು, ಸುಸಜ್ಜಿತ ಲ್ಯಾಬ್‌ ಹಾಗೂ ಸಾಕಷ್ಟು ಗ್ರಂಥಗಳುಳ್ಳ ಲೈಬ್ರರಿ, ಸ್ಮಾರ್ಟ್‌ ಕ್ಲಾಸ್‌, ಕಂಪ್ಯೂಟರ್‌ ಲ್ಯಾಬ್‌ಗಳೆಲ್ಲವೂ ಇರಬೇಕು. ಆಗ ಮಾತ್ರ ನಾವು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಸರಿಗಟ್ಟಲು ಸಾಧ್ಯ. ವಿಸ್ತಾರ ನ್ಯೂಸ್‌ ವಾಹಿನಿ ಇದಕ್ಕಾಗಿಯೇ ಇಂದಿನಿಂದ ʼನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆʼ ಎಂಬ ಅಭಿಯಾನವನ್ನು ಆರಂಭಿಸುತ್ತಿದೆ. ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿಯುವುದು ಮಾತ್ರ ಇದರ ಗುರಿಯಲ್ಲ. ಈ ಶಾಲೆಗಳು ಇನ್ನಷ್ಟು ಉತ್ತಮಗೊಳ್ಳಲು ಏನಾಗಬೇಕಿದೆ, ಇಲ್ಲಿನ ಮೂಲಸೌಕರ್ಯಗಳಲ್ಲಿ ಯಾವ ಕೊರತೆಯಿದೆ, ಅದನ್ನು ಹೇಗೆ ತುಂಬಬಹುದು, ಆ ಶಾಲೆಗಳನ್ನು ಯಾರಾದರೂ ದತ್ತು ತೆಗೆದುಕೊಂಡಿದ್ದಾರೆಯೇ, ದಾನಿಗಳು ಹೇಗೆ ನೆರವಾಗಿದ್ದಾರೆ, ಹೇಗೆ ಸಹಾಯ ಮಾಡಬಹುದು ಎಂಬುದೆಲ್ಲದರ ಕುರಿತು ಕ್ಷಕಿರಣ ಬೀರುವ ಕಾರ್ಯಕ್ರಮವಿದು.

ನಮ್ಮ ಊರಿನ ಶಾಲೆಯನ್ನು ಮಾದರಿ ಶಾಲೆಯಾಗಿಸುವುದು ಹೇಗೆ ಎಂಬ ಚಿಂತನೆ ಆಯಾ ಊರಿನ, ಆಯಾ ಸಮಾಜದ ಜನತೆಯದ್ದಾಗಿರಬೇಕು. ಅದನ್ನು ಬರಿಯ ಸರ್ಕಾರ ಮಾಡಲಿ ಎಂದುಕೊಂಡು ಸುಮ್ಮನಿರುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸರ್ಕಾರದಿಂದ ಶಾಲೆಗಳ ಪೂರ್ಣ ಸುಧಾರಣೆ ಸಾಧ್ಯವಿಲ್ಲ. ಸರ್ಕಾರದ ಜತೆ ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ಕೈಜೋಡಿಸಿದಾಗ ಮಾತ್ರ ಸರ್ವಾಂಗೀಣ ಸುಧಾರಣೆ ಸಾಧ್ಯ. ಯಾಕೆಂದರೆ ತಮ್ಮೂರ ಶಾಲೆ ಹೇಗಿರಬೇಕೆಂಬುದೂ, ಅದನ್ನು ಹೇಗೆ ಸಾಧ್ಯವಾಗಿಸಬಹುದು ಎಂಬುದೂ ಆಯಾ ಊರಿನವರಿಗೇ ಗೊತ್ತಿರಲು ಸಾಧ್ಯ. ಹಣದ ರೂಪದಲ್ಲಿ ಅಥವಾ ಅಗತ್ಯ ವಸ್ತುಗಳನ್ನು ಕೊಡುಗೆ ನೀಡುವ ರೂಪದಲ್ಲಿ ಸಾರ್ವಜನಿಕರು ಈ ಅಭಿಯಾನದಲ್ಲಿ ಕೈ ಜೋಡಿಸಬಹುದಾಗಿದೆ. ʼವಿಸ್ತಾರ ನ್ಯೂಸ್‌ʼನದು ಈ ವಿಚಾರದಲ್ಲಿ ಪ್ರೇರಣೆ ನೀಡುವ, ಹುಮ್ಮಸ್ಸು ತುಂಬುವ, ನಡೆದ ಪ್ರಯತ್ನಗಳನ್ನು ದಾಖಲೀಕರಿಸುವ ಕೆಲಸ ಮಾತ್ರ. ಶಿಕ್ಷಣ ಸಚಿವರು ಉದ್ಘಾಟಿಸಲಿರುವ ಈ ಅಭಿಯಾನ ಪ್ರತಿದಿನ ನಡೆಯಲಿದೆ. ನಾಡಿನ ಜವಾಬ್ದಾರಿಯುತ ಪ್ರಜೆಗಳಾಗಿ ನಾವೆಲ್ಲರೂ ಇದರಲ್ಲಿ ಕೈಜೋಡಿಸಿದಾಗ ʼಮಾದರಿ ಶಾಲೆʼಯ ಕನಸು ನನಸಾಗುತ್ತದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಮಂಗನ ಕಾಯಿಲೆ ಲಸಿಕೆಯ ಕಾರ್ಯಕ್ಷಮತೆ ಪರೀಕ್ಷೆ ನಡೆಯಲಿ

Exit mobile version