ಬೆಂಗಳೂರು: ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ (CET Exam) ಪ್ರಶ್ನೆಪತ್ರಿಕೆ (Question Paper) ಕಂಡು ವಿದ್ಯಾರ್ಥಿಗಳು ಕಕ್ಕಾಬಿಕ್ಕಿಯಾಗಿದ್ದು, ಔಟ್ ಆಫ್ ಸಿಲೆಬಸ್ ಪ್ರಶ್ನೆಗಳನ್ನು ಕಂಡು ದಂಗಾಗಿದ್ದರು. ಈ ಪ್ರಮಾದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಹಾಗೂ ಪಿಯು ಮಂಡಳಿ (PU board) ನಡುವೆ ಆರೋಪ ಪ್ರತ್ಯಾರೋಪ ನಡೆದಿದ್ದು, ಗ್ರೇಸ್ ಮಾರ್ಕ್ಸ್ (Grace marks) ನೀಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಪಿಯು ಮಂಡಳಿ ನೀಡಿದ ಪಠ್ಯಪುಸ್ತಕವೇ ಒಂದಾಗಿದ್ದರೆ, ಕೆಇಎ ನೀಡಿದ ಪ್ರಶ್ನೆಪತ್ರಿಕೆಯೇ ಮತ್ತೊಂದಾಗಿದೆ. ಸಿಇಟಿ ಪರೀಕ್ಷೆಯಲ್ಲಿ ಔಟ್ ಆಫ್ ಸಿಲೆಬಸ್ ಪ್ರಶ್ನೆ ಕಂಡು ವಿದ್ಯಾರ್ಥಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಗಣಿತ, ಜೀವಶಾಸ್ತ್ರ, ರಸಾಯನವಿಜ್ಞಾನ ಹಾಗೂ ಭೌತವಿಜ್ಞಾನ ಪರೀಕ್ಷೆಯಲ್ಲಿ 50ಕ್ಕೂ ಅಧಿಕ ಔಟ್ ಆಫ್ ಸಿಲೆಬಸ್ ಪ್ರಶ್ನೆಗಳು ಕಂಡುಬಂದಿವೆ.
ಜೀವಶಾಸ್ತ್ರದ 60 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ ಪಠ್ಯಕ್ರಮದಲ್ಲಿ ಇಲ್ಲದ 10 ಪ್ರಶ್ನೆಗಳನ್ನು ಕೇಳಲಾಗಿದೆ. ಗಣಿತ ಪರೀಕ್ಷೆಯಲ್ಲಿ 9 ಪ್ರಶ್ನೆಗಳು, ರಾಸಾಯನಿಕ ಹಾಗೂ ಭೌತಶಾಸ್ತ್ರ ಪರೀಕ್ಷೆಯಲ್ಲಿ 30ಕ್ಕೂ ಅಧಿಕ ಔಟ್ ಆಫ್ ಸಿಲೆಬಸ್ ಪ್ರಶ್ನೆ ಕೇಳಲಾಗಿದೆ. ನಿಗದಿತ ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳಿಂದಾಗಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾದರು. ಹೀಗಾಗಿ ಮರು ಪರೀಕ್ಷೆ ಮಾಡುವಂತೆ ಅಥವಾ ಗ್ರೇಸ್ ಮಾರ್ಕ್ಸ್ ನೀಡುವಂತೆ ವಿದ್ಯಾರ್ಥಿಗಳಿಂದ ಒತ್ತಾಯ ಬಂದಿದೆ.
ಈ ವರ್ಷ ಪಠ್ಯದಲ್ಲಿ ಇಲ್ಲದ ವಿಷಯಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಪ್ರಾಧಿಕಾರ ಪ್ರಶ್ನೆ ಕೇಳಿದೆ. ಪಿಯು ಮಂಡಳಿ ನಿಗದಿ ಪಡಿಸಿರುವ ಪಿಯು ಪಠ್ಯಪುಸ್ತಕದ ಆಧಾರದ ಮೇಲೆ ಸಿಇಟಿ ಪರೀಕ್ಷೆ ನಡೆಸಬೇಕು. ಆದರೆ ಪಿಯು ಮಂಡಳಿ ನಿಗದಿ ಮಾಡದ ಪಠ್ಯ ಪುಸ್ತಕದ ಪ್ರಶ್ನೆ ಕೇಳಿ ಕೆಇಎ ಗೊಂದಲ ಸೃಷ್ಟಿಸಿದೆ. ಕೆಇಎ ಎಡವಟ್ಟಿಗೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 27ರವರೆಗೆ ಕಾಲಾವಕಾಶವನ್ನು ಕೆಇಎ ನೀಡಿದೆ.
ಈ ಬಗ್ಗೆ ಪರೀಕ್ಷಾ ಪ್ರಾಧಿಕಾರ ಹಾಗೂ ಪಿಯು ಮಂಡಳಿ ನಡುವೆ ಆರೋಪ ಪ್ರತ್ಯಾರೋಪ ನಡೆದಿದೆ. ಪಿಯು ಮಂಡಳಿ ನೀಡಿದ ಪಠ್ಯ ಪುಸ್ತಕದ ಆಧಾರದ ಮೇಲೆಯೇ ಸಿಇಟಿ ಪ್ರಶ್ನೆ ಪತ್ರಿಕೆ ತಯಾರಿಸಲಾಗಿದೆ ಎಂದು ಕೆಇಎ ಹೇಳಿದೆ. ತಾವು ನೀಡಿದ ಪರಿಷ್ಕೃತ ಪಠ್ಯಪುಸ್ತಕ ಕೆಇಎ ಅನುಸರಿಸಿಲ್ಲ ಎಂದು ಪಿಯು ಮಂಡಳಿ ಆರೋಪಿಸಿದೆ. ಎರಡು ಇಲಾಖೆ ನಡುವೆ ಪತ್ರವ್ಯವಹಾರ ನಡೆದಿದೆ. ಪಠ್ಯಪುಸ್ತಕ ಪರಿಷ್ಕರಣೆ ಆಧಾರದ ಮೇಲೆ ಸಿಇಟಿ ಪರೀಕ್ಷೆ ನಡೆಸುವಂತೆ ಪಿಯು ಬೋರ್ಡ್ ಮೊದಲೇ ಪತ್ರ ಬರೆದಿತ್ತು. ಪಿಯು ಬೋರ್ಡ್ ಪತ್ರಕ್ಕೆ ಉತ್ತರವನ್ನೂ ಕೆಇಎ ನೀಡಿತ್ತು. ಪರಿಷ್ಕೃತ ಪಠ್ಯಪುಸ್ತಕ ಅನುಸರಿಸಲಾಗಿದೆ ಎಂದಿದೆ. ಕೊನೆಗೆ ಪಿಯು ಬೋರ್ಡ್ ನೀಡಿದ ಪರಿಷ್ಕೃತ ಪಠ್ಯಪುಸ್ತಕವನ್ನು ಕೆಇಎ ನಿರ್ಲಕ್ಷ್ಯ ಮಾಡಿದೆ.
ಇಂದು ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕೆಇಎ ಸೂಚನೆ ನೀಡಿದೆ. ಆಕ್ಷೇಪಣೆಗಳ ಆಧಾರದ ಮೇಲೆ ಪರಿಶೀಲನೆಗೆ ಸಮಿತಿ ರಚಿಸುವ ಭರವಸೆಯನ್ನು ಕೆಇಎ ನೀಡಿದ್ದು, ಸಮಿತಿ ನೀಡುವ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆಇಎ ನಿರ್ದೇಶಕಿ ರಮ್ಯಾ ಹೇಳಿದ್ದಾರೆ.
ಇದನ್ನೂ ಓದಿ: CET Exam: ಸಿಇಟಿ ಪರೀಕ್ಷೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್; ಕೊನೇ ಅವಕಾಶ ಕೊಟ್ಟ KEA!