Site icon Vistara News

Drug Mafia : ಸಮುದ್ರ ದಾರಿಯಲ್ಲಿ ಪಾಕ್​ನಿಂದ ಭಾರತಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 400 ಕೋಟಿಯ ಮಾದಕ ವಸ್ತು ವಶಕ್ಕೆ

Drug Mafia

ನವದೆಹಲಿ: ಗುಜರಾತ್​​ನ ಪೋರ್​ಬಂದರ್​​ ಬಳಿ ಪಾಕಿಸ್ತಾನಕ್ಕೆ ಸೇರಿದ ದೋಣಿಯೊಂದನ್ನು ವಶಕ್ಕೆ ಪಡೆದ ಭಾರತೀಯ ಅಧಿಕಾರಿಗಳು 400 ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದೋಣಿಯಲ್ಲಿದ್ದ ಆರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ), ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಸೋಮವಾರ ರಾತ್ರಿ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದಾರೆ.

ಗುಜರಾತ್ ಎಟಿಎಸ್ ಪ್ರಕಾರ, ಆರು ಜನರು ಪಾಕಿಸ್ತಾನಿಯರು ಭಾರತೀಯ ದೋಣಿಯನ್ನು ಬಳಸಿಕೊಂಡು ದೆಹಲಿ ಮತ್ತು ಪಂಜಾಬ್​​ಗೆ ನಿಷೇಧಿತ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಎಟಿಎಸ್ ಕಾರ್ಯಾಚರಣೆಯನ್ನು ಅಭಿನಂದಿಸಿದ್ದಾರೆ ಮತ್ತು ಅಧಿಕಾರಿಗಳಿಗೆ 10 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದಾರೆ. ಕಳೆದ 30 ದಿನಗಳಲ್ಲಿ ಗುಜರಾತ್ ಕರಾವಳಿಯಲ್ಲಿ ವಶಪಡಿಸಿಕೊಳ್ಳಲಾದ ಎರಡನೇ ದೊಡ್ಡ ಮಾದಕವಸ್ತು ರವಾನೆ ಇದಾಗಿದೆ. ಈ ಮೂಲಕ ಪಾಕಿಸ್ತಾನದ ಯೋಜನೆಗಳನ್ನು ವಿಫಲಗೊಳಿಸಲಾಗಿದೆ.

ಫೆಬ್ರವರಿ 28 ರಂದು ಗುಜರಾತ್ ಕರಾವಳಿಯಲ್ಲಿ ಶಂಕಿತ ಪಾಕಿಸ್ತಾನಿ ಸಿಬ್ಬಂದಿ ನಿರ್ವಹಿಸುತ್ತಿದ್ದ ದೋಣಿಯಿಂದ ಕನಿಷ್ಠ 3,300 ಕೆ.ಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಮಾದಕ ದ್ರವ್ಯಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯವು 2,000 ಕೋಟಿ ರೂ.ಗಿಂತ ಹೆಚ್ಚಾಗಿದೆ. ಇದು ಭಾರತೀಯ ಉಪಖಂಡದಲ್ಲಿ ಪತ್ತೆಯಾದ ಅತಿ ದೊಡ್ಡ ಮಾದಕ ವಸ್ತು ರ್ಯಾಕೆಟ್​ ಆಗಿದೆ.

ಇದನ್ನೂ ಓದಿ : ರಕ್ಷಣಾ ಸಚಿವಾಲಯದ ವಿಮಾನ ಪತನ; 15 ಮಂದಿಯ ದಾರುಣ ಸಾವು

ಭಾರತೀಯ ಕೋಸ್ಟ್ ಗಾರ್ಡ್ ಈ ಹಿಂದೆ ಸಮುದ್ರದಲ್ಲಿ ನಡೆದ ಹಲವಾರು ಕಾರ್ಯಾಚರಣೆಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿತ್ತು

Exit mobile version