ಅಪ್ಪ ಅಮ್ಮನಾಗುವುದು ಪ್ರತಿಯೊಬ್ಬರ ಜೀವನದ ಬಹುಮುಖ್ಯ ಘಟ್ಟ. ಆಗಷ್ಟೇ ಹೊಟ್ಟೆಯಿಂದ ಹೊರಬಂದ ಮಗುವಿಗೆ ಹೇಗೆ ಈ ಜಗತ್ತು ಹೊಸದೋ ಹಾಗೆಯೇ ಅಪ್ಪ ಅಮ್ಮಂದಿರಿಗೂ ಈ ಜಗತ್ತು ಹೊಸದೇ. ಮಗುವಿನ ಹಾಗೆ ಅವರೂ ಮಕ್ಕಳ ಲೋಕವನ್ನು ಕಣ್ಣು ಬಿಟ್ಟು ನೋಡಲು ಶುರು ಮಾಡುವ ಹೊತ್ತಿದು. ಮಗು ಬಂದ ಮೇಲೆ ಹೇಗಿರಬಹುದು ಎಂದು ಕನಸು ಕಾಣುತ್ತಾ ಒಂಬತ್ತು ತಿಂಗಳು ಕಳೆದ ಜೋಡಿಗೆ ಮಗುವಿನ ಲೋಕದ ಬಗ್ಗೆ ಕಂಡಿದ್ದ ಕನಸುಗಳೆಲ್ಲವೂ ಒಮ್ಮೆಲೆ ವಾಸ್ತವದಿಂದ ದೂರ ಇದೆ ಅನಿಸಬಹುದು. ಯಾಕೆಂದರೆ, ಆ ಸಮಯ ಬದುಕಿನ ಅತ್ಯಂತ ಮುಖ್ಯವಾದ ನೆನಪಿನಲ್ಲಿಟ್ಟುಕೊಳ್ಳುವ ಖುಷಿಯ ಗಳಿಗೆ ಎಂಬುದು ನಿಜವೇ ಆದರೂ, ಹೊಸ ಅಪ್ಪ ಅಮ್ಮಂದಿರಿಗೆ (Parenting Tips) ಈ ಹೊಸ ಲೋಕದಲ್ಲಿ ಸಾಕಷ್ಟು ಸವಾಲುಗಳು ದಿಢೀರ್ ಎದುರಾಗುತ್ತವೆ. ನಿದ್ದೆಯಿಲ್ಲದ ರಾತ್ರಿಗಳು, ಬಿಡುವಿಲ್ಲದ ಕೆಲಸ, ರಚ್ಚೆ ಹಿಡಿದು ಅಳುವ ರಾತ್ರಿಗಳು ಹೀಗೆ ಪ್ರತಿದಿನವೂ ಒಂದಿಲ್ಲೊಂದು ಸಮಸ್ಯೆಗಳು. ಮನೆಯಲ್ಲಿ ಹಿರಿಯರ ಮಾರ್ಗದರ್ಶನ, ಸಹಾಯ ಇದ್ದರೆ ಇಂತಹ ತೊಂದರೆಗಳಲ್ಲಿ ಕೊಂಚ ಧೈರ್ಯ, ನೆಮ್ಮದಿ ಇರಬಹುದಾದರೂ ಈ ಸಂದರ್ಭ ಸವಾಲೂ ಹೌದು. ಒಂಟಿಯಾಗಿ ನಗರಗಳಲ್ಲಿ ಇರುವ ಸಣ್ಣ ವಯಸ್ಸಿನ ಅಪ್ಪ ಅಮ್ಮಂದಿರಿಗೆ ಈ ಹೊಸ ಬದುಕು ಆರಂಭದಲ್ಲಿ ಬಹು ಕಷ್ಟವೂ ಹೌದು. ಅಂಥ ಹೊಸ ಹೆತ್ತವರಿಗೆ (Parents) ಇಲ್ಲಿವೆ ಬಹುಮುಖ್ಯವಾದ ಟಿಪ್ಸ್.
- ಮಗುವಿನ ಆಗಮನವಾದಾಗ ಅಷ್ಟರವರೆಗೆ ಮನೆಯಲ್ಲಿದ್ದ ಬದುಕಿನ ಕ್ರಮ, ವೇಳಾಪಟ್ಟಿ ಎಲ್ಲವೂ ಅಲ್ಲೋಲ ಕಲ್ಲೋಲವಾಗುತ್ತದೆ. ಇಂಥ ಸಂದರ್ಭ ಗಂಡ ತನ್ನ ಹೆಂಡತಿಯ ಬದಲಾದ ಹೊಸ ಪ್ರಪಂಚವನ್ನು ಪರಿಪೂರ್ಣ ಮನಸ್ಸಿನಿಂದ ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಆಕೆಯ ದಿನಚರಿ ಸಂಪೂರ್ಣ ಬದಲಾಗಿರುತ್ತದೆಯಷ್ಟೇ ಅಲ್ಲ, ಆಕೆ, ಆಗಷ್ಟೇ ಹೆರಿಗೆಯಿಂದ ಮರುಜನ್ಮ ಪಡೆದಿರುತ್ತಾಳೆ. ಹೀಗಾಗಿ ಮಗುವಿಗೆ ಹೇಗೆ ಹೊಸ ಪ್ರಪಂಚವೋ ತಾಯಿಗೂ ಇದು ತಾಯಿಯಾಗಿ ಹೊಸ ಪ್ರಪಂಚ. ಹೊಸ ಜೀವದ ಪಾಲನೆ ಪೋಷಣೆ ಅಷ್ಟು ಸುಲಭದ ಕೆಲಸವಲ್ಲ. ಮಗುವಿನ ಪಾಲನೆಯಲ್ಲಿ ಆಕೆಗೆ ನೆರವಿನ ಹಸ್ತವಾಗಿ ಗಂಡ ಯಾವಾಗಲೂ ಜೊತೆಗಿರಬೇಕು.
- ಮಾನಸಿಕವಾಗಿ, ದೈಹಿಕವಾಗಿ ಆತನ ಸಪೋರ್ಟ್ ಅತ್ಯಂತ ಅಗತ್ಯ. ಮುಖ್ಯವಾಗಿ ಹೆಂಡತಿಯ ನಿದ್ದೆಗಾಗಿ ಗಂಡನಾದವನು ಕೊಂಚ ತನ್ನ ನಿದ್ದೆಯನ್ನೂ, ಕೆಲಸದ ಒತ್ತಡವನ್ನೂ ಬದಿಗಿಡಬೇಕಾಗುತ್ತದೆ. ಹೆಂಡತಿ ಇಡೀ ದಿನ ಮಗುವನ್ನು ನೋಡಿಕೊಂಡು ಸುಸ್ತಾಗಿರುತ್ತಾಳೆ ಎಂಬುದನ್ನು ಅರಿತುಕೊಂಡು, ಕೆಲ ಗಂಟೆಗಳ ಕಾಲ ತಾನು ಮಗುವನ್ನು ನೋಡಿಕೊಳ್ಳುವುದು, ಆ ಸಮಯದಲ್ಲಿ ಹೆಂಡತಿ ಮಲಗುವುದು ಮಾಡಿದರೆ ಆಕೆಗೂ ವಿಶ್ರಾಂತಿ ಸಿಗುತ್ತದೆ. ರಾತ್ರಿಯಲ್ಲಿ ನಾಲ್ಕಾರು ಬಾರಿ ಎದ್ದು ಮಗುವಿಗೆ ಹಾಲುಣಿಸುವ ಸಂದರ್ಭ ಮಗುವಿನ ಅಮ್ಮನಿಗೆ ನಿದ್ದೆ ಸರಿಯಾಗಿ ಆಗಿರುವುದಿಲ್ಲ ಎಂಬುದನ್ನು ಅರಿಯುವ ಗಂಡನಿದ್ದರೆ ಹೆಂಡತಿಗೆ ಅದೇ ದೊಡ್ಡ ಸಪೋರ್ಟ್. ಒಂದಿಷ್ಟು ಹೊತ್ತು ಮಗುವನ್ನು ನೋಡಿಕೊಳ್ಳುವ ಕೆಲಸವನ್ನು ಗಂಡನಾದವನು ಹಂಚಿಕೊಂಡರೆ, ಅದು ದೊಡ್ಡ ಸಹಾಯವಾಗುತ್ತದೆ. ಉದಾಹರಣೆಗೆ ವೀಕೆಂಡಿನಲ್ಲಿ ಅಥವಾ ರಜಾ ದಿನಗಳಲ್ಲಿ, ಅಥವಾ ನಿತ್ಯವೂ ಅಪ್ಪ ಆಫೀಸಿನಿಂದ ಬಂದ ಮೇಲಿನ ಸ್ವಲ್ಪ ಹೊತ್ತು ಅಪ್ಪನ ಜೊತೆಗಿನ ಸಮಯ ಎಂದು ನಿಗದಿ ಮಾಡಿದರೆ ಕೊಂಚ ಅಮ್ಮನಿಗೂ ಸಮಯ ಸಿಗುತ್ತದೆ.
- ತಾಯಿಯಾದವಳು ಆರಂಭದಲ್ಲಿ ಮಗು ಮಲಗುವಾಗ ನಿದ್ದೆ ಮಾಡಿಬಿಡಬೇಕು. ಇದು ಹಿರಿಯರಾದಿಯಾಗಿ ಎಲ್ಲರೂ ನೀಡುವ ಬೆಸ್ಟ್ ಸಲಹೆ. ಯಾಕೆಂದರೆ, ಮಗು ಎದ್ದರೆ, ಆಕೆಗೆ ನಿದ್ದೆ ಸಿಗದು. ಮಗುವಿಗೆ ಒಂದು ನಿಗದಿತ ಸಮಯದಲ್ಲಿ ಮಲಗುವ ಅಭ್ಯಾಸ ಮಾಡಿಸಿದರೆ ಒಳ್ಳೆಯದು. ಅದೇ ಸಮಯದಲ್ಲಿ ಬೇರೆ ಕೆಲಸಗಳಿಗೆ ಕೈ ಹಾಕದೆ, ನಿದ್ದೆಯ ಮೇಲೆ ಗಮನ ಕೊಡುವುದು ಹೊಸ ತಾಯಂದಿರಿಗೆ ಅತ್ಯಂತ ಸೂಕ್ತ.
- ಬಾಟಲಿ ಹಾಲೂ ಅಭ್ಯಾಸ ಮಾಡಿ. ಎದೆ ಹಾಲು ಕುಡಿಸುವುದು ಒಂದು ದಿವ್ಯ ಅನುಭವ ಹೌದಾದರೂ ಅದು ಬೆಳೆಯುತ್ತಾ ಹೋದ ಮೇಲೆ ಕಷ್ಟ. ಆರಂಭದ ಆರು ತಿಂಗಳಲ್ಲಿ ಎದೆ ಹಾಲೇ ಹೆಚ್ಚು ಕುಡಿಸಿದರೂ ನಂತರ ನಿಧಾನವಾಗಿ ಬಾಟಲಿಯನ್ನು ಮಧ್ಯೆ ಮಧ್ಯೆ ಅಭ್ಯಾಸ ಮಾಡಿಸಿದರೆ, ಅಮ್ಮ ಹೊರಗೆ ಹೋಗಬೇಕಾದಾಗ ಸುಲಭವಾಗುತ್ತದೆ. ಮಗು ಬೇಗನೆ ಪರಿಸ್ಥಿತಿಗೆ ಹೊಂದಿಕೊಳ್ಳುತ್ತದೆ.
- ತೂಗುವ ತೊಟ್ಟಿಲನ್ನು ಮಗುವಿಗೆ ಬಳಸಿ. ಮಗುವನ್ನು ತೂಗಿ ಮಲಗಿಸುವುದನ್ನು ಅಭ್ಯಾಸ ಮಾಡಿ. ಕೈಯಲ್ಲಿ ಹಿಡಿದೇ ಮಲಗಿಸುವುದನ್ನು ಅಭ್ಯಾಸ ಮಾಡಿಸಿ ಬಿಟ್ಟರೆ ಮಗು ಬೇಗನೆ ಅಮ್ಮನ ಬೆಚ್ಚನೆಯ ಸ್ಪರ್ಶಕ್ಕೇ ಹೊಂದಿಕೊಂಡು ಬಿಡುತ್ತದೆ. ಅಮ್ಮ ಇಲ್ಲದಿದ್ದರೆ, ಸ್ಪರ್ಶ ಸಿಗದಿದ್ದರೆ ನಿದ್ದೆ ಮಾಡುವುದೇ ಇಲ್ಲ.
- ಮಗುವಿಗೆ ಹಾಲುಣಿಸುವ ಸಂದರ್ಭ ಆಗಾಗ ಏಳುವ ಕಾರಣ ಅಮ್ಮಂದಿರಿಗೆ ಹಸಿವಾಗುತ್ತದೆ. ಇಂತಹ ಸಂದರ್ಭಕ್ಕಾಗಿ, ಒಂದಿಷ್ಟು ಆರೋಗ್ಯಕರ ಹಣ್ಣು, ಒಣಹಣ್ಣು- ಬೀಜಗಳು ಇತ್ಯಾದಿಗಳನ್ನು ಜೊತೆಗಿಡಿ. ಇಲ್ಲವಾದರೆ ಹಾಲುಣಿಸುವ ತಾಯಿಗೇ ನಿಶ್ಯಕ್ತಿಯ ಸಮಸ್ಯೆ ಆರಂಭವಾಗುತ್ತದೆ.
ಇದನ್ನೂ ಓದಿ | Health Tips: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ