Site icon Vistara News

Pavithra Gowda : ಜೈಲಿನಲ್ಲಿರುವ ಪವಿತ್ರಾ ಗೌಡಗೆ ಬ್ಯಾಗ್​ ತುಂಬಾ ಸಾಮಗ್ರಿ ತಂದು ಕೊಟ್ಟ ಸಹೋದರ

Pavitra Gowda

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಗರದ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ, ಮಾಡೆಲ್ ಹಾಗೂ ನಟ ದರ್ಶನ್ ಆಪ್ತೆ ಪವಿತ್ರಾ ಗೌಡ (Pavithra Gowda) ದಿನದಿಂದ ದಿನಕ್ಕೆ ಸೊರಗುತ್ತಿದ್ದಾರೆ ಎಂಬ ಮಾಹಿತಿಯನ ನಡುವೆಯೇ ಮಂಗಳವಾರ ಅವರ ಕುಟುಂಬ ಸದಸ್ಯರು ಬ್ಯಾಗ್ ತುಂಬಾ ಸಾಮಗ್ರಿಗಳನ್ನು ತಂದುಕೊಟ್ಟು ಹೋಗಿದ್ದಾರೆ. ಕಪ್ಪು ಬಣ್ಣದ ಬ್ಯಾಗ್​ನಲ್ಲಿ ಸಾಕಷ್ಟು ವಸ್ತುಗಳನ್ನು ಅವರಿಗೆ ತಲುಪಿಸಿರುವುದು ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಈ ವಿಡಿಯೊ ವೈರಲ್​ ಆಗುತ್ತಿದ್ದಂತೆ ಜೈಲು ಸೇರಿರುವ ವಸ್ತುಗಳು ಏನಿರಬಹುದು ಎಂಬು ಕುತೂಹಲ ಹೆಚ್ಚಾಗಿದೆ.

ಸುಖಕರವಾದ ಜೀವನ ಹಾಗೂ ಡಯೆಡ್ ಫುಡ್​ ಸೇರಿದಂತೆ ಬಗೆ ಬಗೆಯ ಭಕ್ಷ್ಯಗಳನ್ನು ತಿಂದು ಅಭ್ಯಾಸವಾಗಿದ್ದ ಪವಿತ್ರಾ ಗೌಡ ಅವರಿಗೆ ಜೈಲೂಟ ಹಿಡಿಸುತ್ತಿಲ್ಲ ಎಂಬುದು ಕೆಲವು ದಿನಗಳಿಂದ ನಡೆಯುತ್ತಿರುವ ಸುದ್ದಿ. ಮುದ್ದೆ ತಿನ್ನಲ್ಲ. ಚಪಾತಿ ಸರಿಯಲ್ಲ, ಸಾರು ಇಷ್ಟವಾಗಲ್ಲ ಎಂದು ಪವಿತ್ರಾ ಕಣ್ಣಿರು ಹಾಕುತ್ತಿರುವುದಾಗಿ ಮೂಲಗಳು ತಿಳಿಸಿದ್ದವು. ಈ ಎಲ್ಲ ಕಾರಣಕ್ಕೆ ಪವಿತ್ರಾ ಸೊರಗಿ ಹೋಗುತ್ತಾರೆ ಎಂಬ ಭಯ ಅವರ ಕುಟುಂಬಸ್ಥರಿಗೆ ಇತ್ತು. ಹೀಗಾಗಿ ಅವರಿಗೆ ಅಗತ್ಯ ವಸ್ತುಗಳನ್ನು ಕೊಟ್ಟು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮಂಗಳವಾರ ಪವಿತ್ರಾ ಅವರನ್ನು ಭೇಟಿಯಾಗಲು ಗುರುವಾರ ಮಗಳು ಖುಷಿ, ತಾಯಿ, ತಂದೆ ಹಾಗೂ ತಮ್ಮ ಬಂದಿದ್ದರು. ಅವರು ಪವಿತ್ರಾ ಅವರನ್ನು ಮಾತನಾಡಿಸಿ ಹೋಗಿದ್ದಾರೆ. ಅಂತೆಯೇ ಜೈಲಿನ ಪ್ರಮುಖ ಬೀದಿಯ ಮೂಲಕ ಎಲ್ಲರೂ ಹೋದ ಬಳಿಕ ವಾಪಸ್​ ಕಾರಿನ ಬಳಿಗೆ ಬಂದ ಪವಿತ್ರಾ ತಮ್ಮ, ಚೀಲವನ್ನು ಹಿಡಿದುಕೊಂಡು ಜೈಲಿನ ಆವರಣ ಪ್ರವೇಶಿಸಿದ್ದಾರೆ. ಅದರಲ್ಲಿ ಬಟ್ಟೆ ಮತ್ತು ಮೆಕಪ್ ಸೆಟ್ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ.

ಪುತ್ರಿಯನ್ನು ನೋಡಿ ಕಣ್ಣೀರು ಹಾಕಿದ ಪವಿತ್ರಾ

ಮಗಳು ಖುಷಿಯನ್ನ ನೋಡುತ್ತಿದ್ದಂತೆ ಜೈಲಿನಲ್ಲಿದ್ದ ಪವಿತ್ರಾ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಕಳೆದ ಕೆಲ ದಿನಗಳಿಂದ ಪವಿತ್ರಾಗೆ ಮಗಳ ಜೊತೆ ಮಾತನಾಡಲು ಸಾಧ್ಯವಾಗಿರಲಿಲ್ಲ. ಅಂತೆಯ ಮಂಗಳವಾರ ಅವರು ನೋಡಲು ಬಂದಾಗ ಪವಿತ್ರಾ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸೋ ಪೋಷಕರ ಜತೆ ಪವಿತ್ರಾ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: Suraj Revanna Case : ಸೂರಜ್ ವಿರುದ್ಧವೇ ತಿರುಗಿ ಬಿದ್ದು ದೂರು ದಾಖಲಿಸಿದ ಆಪ್ತ ಶಿವಕುಮಾರ್​ !

ಎಲ್ಲದ್ದಕ್ಕೂ ಕ್ಯಾತೆ

ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಅಲ್ಲಿನ ವ್ಯವಸ್ಥೆಗಳಿಗೆ ಕ್ಯಾತೆ ಎತ್ತುತ್ತಿದ್ದಾರೆ. ಜಿಮ್ ಮಾಡಲು ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ನಿತ್ಯ ಜಿಮ್​ಗೆ ಹೋಗಿ ಫಿಟ್ನೆಸ್​ ಕಾಪಾಡಿಕೊಂಡಿದ್ದ ನಟಿಗೆ ಇದೀಗ ಜೈಲಿನಲ್ಲಿ ಸಮಸ್ಯೆಯಾಗಿದೆ. ಈ ಬಗ್ಗೆ ಅವರ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ.

ಮಧ್ಯಾಹ್ನ ನೀಡಿದ್ದ ಅನ್ನ ಸಾಂಬಾರ್, ಚಪಾತಿ ಮತ್ತು ಮಜ್ಜಿಗೆಯನ್ನು ಜೈಲು ಸಿಬ್ಬಂದಿ ನೀಡಿದ್ದರು. ಆದರೆ ನನಗೆ ಜೈಲೂಟ ತಿನ್ನಲಾಗುತ್ತಿಲ್ಲ ಎಂದು ಪವಿತ್ರಾ ಹೇಳುತ್ತಿದ್ದಾರೆ. ರುಚಿ ಇಲ್ಲದೆ ಊಟ ಸೇವಿಸುವುದು ಹೇಗೆ ಎಂದು ಸಿಬ್ಬಂದಿ ಬಳಿ ಪ್ರಶ್ನೆ ಕೇಳುತ್ತಿದ್ದಾರೆ.

ದರ್ಶನ್ ಭೇಟಿಯಾಗಲು ಬಂದ ಪ್ರಶಾಂತ್ ಚಕ್ರವರ್ತಿ

ಕರ್ನಾಟಕ ಜನಸೇವಾ ಟ್ರಸ್ಟ್​​ನ ನಿರಾಶ್ರಿತರ ಆಶ್ರಮದ ಪ್ರಶಾಂತ್ ಚಕ್ರವರ್ತಿ ಅವರು ಮಂಗಳವಾರ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್​ ಅವರನ್ನು ಭೇಟಿಯಾಗಲು ಬಂದಿದ್ದರು. ಪ್ರಶಾಂತ್ ಚಕ್ರವರ್ತಿ ಸೇರಿ ಮತ್ತಿಬ್ಬರ ಆಗಮಿಸಿದ್ದರು. ದರ್ಶನ್ ಭೇಟಿಯಾಗಲು ಸಾಧ್ಯವಾಗದಿದ್ದರೆ ಆರೋಪಿ ನಾಗರಾಜ್ ಭೇಟಿಯಾಗುವುದಾಗಿ ಅವರು ಹೇಳಿದ್ದರು. ಆಶ್ರಮದ ವಿಚಾರವಾಗಿ ಸಮಸ್ಯೆಯಾದಾಗ ದರ್ಶನ್ ಅವರು ಬೆಂಬಲ ಕೊಟ್ಟಿದ್ದರು. ಅದರಿಂದಾಗಿ ಅವರನ್ನ ಭೇಟಿ ಮಾಡಿ ಹೋಗಲು ಬಂದಿದ್ದೇವೆಂದ ಪ್ರಶಾಂತ್ ಚಕ್ರವರ್ತಿ ಹೇಳಿದ್ದರು.

Exit mobile version