Site icon Vistara News

Pennar River Dispute: ಪೆನ್ನಾರ್ ನದಿ ನೀರು ಹಂಚಿಕೆ ವಿವಾದ; 8 ವಾರದಲ್ಲಿ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

Pennar River Dispute

ಬೆಂಗಳೂರು: ಪೆನ್ನಾರ್ ನದಿ ನೀರು ಹಂಚಿಕೆ ವಿವಾದಕ್ಕೆ (Pennar River Dispute) ಸಂಬಂಧಿಸಿ 8 ವಾರಗಳಲ್ಲಿ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ನೀರು ಹಂಚಿಕೆ ಸಂಬಂಧ ತಮಿಳುನಾಡು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ನ ನ್ಯಾ.ಹಿಮಾ ಕೊಯ್ಲಿ ನೇತೃತ್ವದ ಪೀಠ, ವಾಸ್ತವವಾಗಿ ಏನಾಗಿದೆ ಎಂಬುದನ್ನು ತಿಳಿಸುವಂತೆ ಕೇಂದ್ರ ಜಲಶಕ್ತಿ ಮಂತ್ರಾಲಯಕ್ಕೆ ನಿರ್ದೇಶನ ನೀಡಿದೆ.

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಯರಗೋಳ ಬಳಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತ್ತು. ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಅಂತಾರಾಜ್ಯ ವಿವಾದವಾಗಿದ್ದರಿಂದ ನ್ಯಾಯಾಧೀಕರಣ ಸ್ಥಾಪನೆಗೆ ಆಗ್ರಹಿಸಿತ್ತು. ಆದರೆ ಮಾತುಕತೆಯಲ್ಲಿ ಇತ್ಯರ್ಥ ಮಾಡಿಕೊಳ್ಳುವ ಇರಾದೆಯನ್ನು ಕರ್ನಾಟಕ ವ್ಯಕ್ತಪಡಿಸಿತ್ತು. ಹಾಗಾಗಿ ವಾಸ್ತವವಾಗಿ ಏನಾಗಿದೆ ಎಂಬುದನ್ನು ತಿಳಿಸಲು 8 ವಾರಗಳಲ್ಲಿ ವರದಿ ನೀಡುವಂತೆ ಕೇಂದ್ರ ಜಲಶಕ್ತಿ ಮಂತ್ರಾಲಯಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

2022ರ ಡಿಸೆಂಬರ್‌ನಲ್ಲಿ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್‌ ನದಿ (ದಕ್ಷಿಣ ಪಿನಾಕಿನಿ) ನೀರು ಬಳಕೆ ವಿವಾದ ಬಗೆಹರಿಸಲು ಮೂರು ತಿಂಗಳೊಳಗೆ ನ್ಯಾಯಾಧಿಕರಣ ರಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಇದರಿಂದಾಗಿ, ಮಾತುಕತೆ ಮೂಲಕ ಜಲವಿವಾದ ಬಗೆಹರಿಸಿಕೊಳ್ಳುವ ಉದ್ದೇಶ ಹೊಂದಿದ್ದ ಕರ್ನಾಟಕಕ್ಕೆ ಹಿನ್ನಡೆಯಾಗಿತ್ತು.

ಏನಿದು ಪ್ರಕರಣ?

ದಕ್ಷಿಣ ಪಿನಾಕಿನಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಯರಗೋಳ ಗ್ರಾಮದ ಬಳಿ ಅಣೆಕಟ್ಟು ನಿರ್ಮಿಸಲು ಮುಂದಾಗಿದೆ. ಕೋಲಾರ, ಮಾಲೂರು, ಬಂಗಾರಪೇಟೆಯ ಹಲವು ಹಳ್ಳಿಗಳು ಹಾಗೂ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ಸುಮಾರು 240 ಕೋಟಿ ರೂ. ವೆಚ್ಚದ ಅಣೆಕಟ್ಟು ಯೋಜನೆಗೆ ಕೇಂದ್ರ ಜಲಶಕ್ತಿ ಸಚಿವಾಲಯದ ಅನುಮತಿಯನ್ನೂ ಪಡೆದಿದೆ. ಆದರೆ, ಇದಕ್ಕೆ ತಮಿಳುನಾಡು ಸರ್ಕಾರ ತಕರಾರು ತೆಗೆದಿದ್ದು, ಸುಪ್ರೀಂ ಕೋರ್ಟ್‌ ಮೊರೆಹೋಗಿದೆ.

ತಮಿಳುನಾಡು ತಕರಾರು ಏನು?

ಪೆನ್ನಾರ್‌ ನದಿಯ ನೀರಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವುದು ಅಂತಾರಾಜ್ಯ ಜಲವಿವಾದ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂಬುದು ತಮಿಳುನಾಡಿನ ತಕರಾರಾಗಿದೆ. ಮಾರ್ಕಂಡೇಯ ನದಿಯು ಪೆನ್ನಾರ್‌ನ ಉಪನದಿಯಾದ ಕಾರಣ ಅಣೆಕಟ್ಟು ನಿರ್ಮಿಸಿದರೆ ನದಿ ನೀರಿನ ಹರಿವಿಗೆ ತೊಂದರೆಯಾಗುತ್ತದೆ. ತಮಿಳುನಾಡಿನ ಜನರು ಕೃಷಿ ಹಾಗೂ ಕುಡಿಯಲು ಪೆನ್ನಾರ್‌ ನದಿ ನೀರನ್ನು ಅವಲಂಬಿಸಿದ್ದಾರೆ. ಹಾಗಾಗಿ, ಅಣೆಕಟ್ಟು ನಿರ್ಮಿಸಲು ಅವಕಾಶ ನೀಡಬಾರದು ಎಂದು ತಕರಾರು ತೆಗೆದಿದೆ.

ಇದನ್ನೂ ಓದಿ | Assembly Session: ವಾಲ್ಮೀಕಿ ನಿಗಮ ಅಕ್ರಮ ದಲಿತರಿಗೆ ಮಾಡಿರೋ ಅನ್ಯಾಯ: ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

ಕರ್ನಾಟಕದ ವಾದವೇನು?

ಅಣೆಕಟ್ಟು ನಿರ್ಮಾಣ ಯೋಜನೆ ವೈಜ್ಞಾನಿಕವಾಗಿದ್ದು, ಕೇಂದ್ರ ಜಲಶಕ್ತಿ ಸಚಿವಾಲಯವೇ ಅನುಮತಿ ನೀಡಿದೆ ಎಂದು ಕರ್ನಾಟಕ ವಾದ ಮಂಡಿಸಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬುದು ಕರ್ನಾಟಕದ ಉದ್ದೇಶವಾಗಿತ್ತು. ಇದನ್ನು ರಾಜ್ಯ ಸರ್ಕಾರವು ಕೇಂದ್ರಕ್ಕೂ ಮನವರಿಕೆ ಮಾಡಿತ್ತು. ನ್ಯಾಯಾಧಿಕರಣದ ರಚನೆಯು ಬಿಕ್ಕಟ್ಟು ಬಗೆಹರಿಸಲು ಸಮಯ ತೆಗೆದುಕೊಳ್ಳುವುದರಿಂದ ಮಾತುಕತೆಗೆ ಕರ್ನಾಟಕ ಆದ್ಯತೆ ನೀಡಿತ್ತು.

Exit mobile version